ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯಗಳ ಸೇವನೆಯಿಂದ ಸ್ವಸ್ಥ ಸಮಾಜ

ಉಪನ್ಯಾಸ ಸಮಾರಂಭದಲ್ಲಿ ಆಹಾರ ತಜ್ಞ ಡಾ.ಖಾದರ್‌
Last Updated 14 ಮಾರ್ಚ್ 2017, 5:48 IST
ಅಕ್ಷರ ಗಾತ್ರ

ದಾವಣಗೆರೆ: ನಾನಾ ರೋಗಗಳಿಗೆ ಕಾರಣವಾಗುವ ಸಕ್ಕರೆ, ಅಕ್ಕಿ, ಗೋಧಿ, ಮಾಂಸದ ಸೇವನೆ ಕಡಿಮೆ ಮಾಡಬೇಕು. ಇವುಗಳಿಗೆ ಹೋಲಿಸಿ ದರೆ, ಆರೋಗ್ಯ ರಕ್ಷಣೆಗೆ ನೆರವಾಗುವ, ಅತಿ ಕಡಿಮೆ ನೀರನ್ನು ಬೇಡುವ ಸಿರಿಧಾನ್ಯಗಳ ಸೇವನೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಮೈಸೂರಿನ ಆಹಾರ ತಜ್ಞ ಡಾ.ಖಾದರ್‌ ಅಭಿಪ್ರಾಯಪಟ್ಟರು.

ನಗರದ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ನೆಮ್ಮದಿಯ ಬದುಕಿಗೆ ಸಿರಿಧಾನ್ಯಗಳೇ ವರದಾನ’ ವಿಷಯದ ಮೇಲೆ ಅವರು ವಿವರವಾದ ಉಪನ್ಯಾಸ ನೀಡಿದರು.

‘ಕೃತಕವಾಗಿ ಬೆಳೆಸಿದ ಯಾವ ಪದಾರ್ಥವೂ ಆಹಾರವಾಗುವುದಿಲ್ಲ. ಆದರೆ, ಸಿರಿಧಾನ್ಯಗಳು ಪೌಷ್ಟಿಕಾಂಶದ ಆಗರ, ಅವು ರಕ್ತದಲ್ಲಿ ಸಮತೋಲನ ಇಟ್ಟುಕೊಂಡು ಗ್ಲೂಕೋಸ್‌ ಬಿಡುಗಡೆ ಮಾಡುತ್ತವೆ. ಇದು ರೋಗ ಬಾರದಂತೆ ತಡೆಯಲು ನೆರವಾಗುತ್ತದೆ’ ಎಂದರು.

ಕಡಿಮೆ ನೀರು ಸಾಕು: ರಾಜ್ಯದಲ್ಲಿ ಲಕ್ಷಾಂತರ ಎಕರೆ ಭೂಮಿ ಪಾಳುಬಿದ್ದಿದೆ. ಇದರಲ್ಲಿ ಸಿರಿಧಾನ್ಯ ಬೆಳೆಸಬಹುದು. ಭತ್ತ, ಕಬ್ಬು, ಗೋಧಿ, ಮಾಂಸಕ್ಕೆ ಹೇರಳ ಪ್ರಮಾಣದಲ್ಲಿ ನೀರಿನ ಅಗತ್ಯವಿದೆ. ಆದರೆ ಸಿರಿಧಾನ್ಯ ಬೆಳೆಸಲು ನಾಲ್ಕು ಮಳೆಯಷ್ಟೇ ಸಾಕು’ ಎಂದು ಖಾದರ್‌ ವಿವರಿಸಿದರು.

‘ನಾವು ಬೆಳೆಯುವ ಬೆಳೆಗೆ ಬೆಲೆ ಇಲ್ಲದಂತೆ ಮಾಡಿರುವುದು ಕಂಪೆನಿಗಳು. ನೀರಾವರಿ ಬೆಳೆಗಳಿಗೆ ಮೇಲಿಂದ ಮೇಲೆ ದುಡ್ಡು ಸುರಿದರೂ ರೈತರ ಆತ್ಮಹತ್ಯೆ ನಿಲುವುದಿಲ್ಲ. ಸಬ್ಸಿಡಿ ಕೊಟ್ಟರೆ ಯಾವ ರೈತನೂ ಉದ್ಧಾರ ಆಗುವುದಿಲ್ಲ. ಬದಲು ಕಡಿಮೆ ಖರ್ಚಿನಲ್ಲಿ ಬೆಳೆಯುವ ಊದಲು, ಸಜ್ಜೆ, ಹಾರಕ, ಸಾಮೆ, ನವಣೆ ಮೊದಲಾದ ಸಿರಿಧಾನ್ಯಗಳನ್ನು ಕೊಂಡರೆ ರೈತನಿಗೇ ಹಣ ಹೋಗುತ್ತದೆ’ ಎಂದರು.

‘ನಾವೆಲ್ಲ ನಮ್ಮ ನಮ್ಮ ಲೋಕದಲ್ಲೇ ಮುಳುಗಿ ಹೋಗಿದ್ದೇವೆ. ಭೂಮಿ ತಾಯಿಗೆ ಏನಾಗಿದೆ ಎಂಬುದನ್ನು ಗಮನಿಸುತ್ತಿಲ್ಲ. ಭೂಮಿ ಹಾಳಾಗಿ ಹೋಗುತ್ತಿದೆ. ಕಳೆದ 15 ವರ್ಷಗಳಲ್ಲಿ ಪ್ರತಿ 100 ಎಕರೆ ಕೃಷಿಭೂಮಿಯಲ್ಲಿ  36 ಎಕರೆ ಮರಳುಗಾಡಾಗಿದೆ’ ಎಂದರು.

ಶೀತಲೀಕರಿಸಿದ, ಪಾಶ್ಚಿರೀಕರಣ ಪ್ಯಾಕೆಟ್‌ ಹಾಲಿನಿಂದ ಪುಟ್ಟ ಮಕ್ಕಳ ಆರೋಗ್ಯದ ಮೇಲೆ ನಾನಾ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಉಚಿತವಾಗಿ ಸಿಗಬೇಕಾಗಿದ್ದ ನೀರು ಪ್ಲಾಸ್ಟಿಕ್‌ ಬಾಟಲುಗಳಲ್ಲಿ ಮಾರಾಟವಾಗುತ್ತಿದೆ. ಪಾಶ್ಚಾತ್ಯ ಆಹಾರ ಪದ್ಧತಿಯ ಅನುಕರಣೆ ಅನಾಹುತಕ್ಕೆ ಎಡೆಮಾಡಿದೆ. ಇದರ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ’ ಎಂದು ವಿಷಾದಿಸಿದರು.

‘ಕಳೆದ 40 ವರ್ಷಗಳಿಂದ ಆಹಾರ ಪದಾರ್ಥಗಳು ಜೀವಕುಲದ ಮೇಲೆ ದುಷ್ಪರಿಣಾಮ ಬೀರಿವೆ. ಮಲಬದ್ಧತೆ ಸಮಸ್ಯೆ, ನಿದ್ರಾಹೀನತೆ, ಮಧುಮೇಹ, ರಕ್ತದೊತ್ತಡ ರೋಗಿಗಳ ಸಂಖ್ಯೆ ಹೆಚ್ಚಿ ಮಾತ್ರೆಗಳ ಮೊರೆಹೋಗುವವರು ಹೆಚ್ಚಾಗುತ್ತಿದ್ದಾರೆ. ಪ್ರತಿ ಕಿ.ಮೀ.ಗೆ 25 ಔಷಧಿ ಅಂಗಡಿಗಳು ತಲೆಯೆತ್ತಿವೆ’ ಎಂದು ಅವರು ವಿವರಿಸಿದರು.

‘ನಮ್ಮ ರಕ್ತಕ್ಕೆ ಬೇಕಾಗಿರುವ ಗ್ಲುಕೋಸ್‌ ಪ್ರಮಾಣ 5 ಗ್ರಾಂ ಮಾತ್ರ. ಆದರೆ 100 ಗ್ರಾಂ ಅಕ್ಕಿ ತಿಂದರೆ 10 ಗ್ರಾಂ ಗ್ಲೂಕೋಸ್‌ ದೇಹಕ್ಕೆ ಸೇರುತ್ತದೆ. 100 ಮಿ.ಗ್ರಾಂ. ಕೋಲಾದಲ್ಲಿ 45 ಗ್ರಾಂ ಸಕ್ಕರೆ ಇದೆ, ಆಲೂಚಿಪ್ಸ್‌ನಲ್ಲಿ 25 ಗ್ರಾಂ ಸಕ್ಕರೆ ಇದೆ. 5 ಗ್ರಾಂ ಗ್ಲೂಕೋಸ್‌ ಸುಡಲು 15 ನಿಮಿಷ ನಡೆಯಬೇಕಾ ಗುತ್ತದೆ. ಅಂದರೆ ನಮ್ಮ ದೇಹ ಸೇರುವ ಸಕ್ಕರೆ ಪ್ರಮಾಣ ಊಹಿಸಬಹುದು’ ಎಂದರು.

ಆಹಾರ ಹತೋಟಿಯಲ್ಲಿರಲಿ: ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿ, ‘ಯಾವುದೇ ಆಹಾರ ಪದಾರ್ಥ ತಿನ್ನಬಹುದು. ಆದರೆ ಅದು ನಮ್ಮ ಹತೋಟಿಯಲ್ಲಿದ್ದರೆ ಆರೋಗ್ಯ ಉತ್ತಮ ವಾಗಿರುತ್ತದೆ. ಅರ್ಥಶಾಸ್ತ್ರಜ್ಞ ಚಾಣಕ್ಯ ಅವರಿಗೆ ವಿಷದ ಅರ್ಥ ಕೇಳಿದಾಗ, ನಮಗೆ ಅಗತ್ಯವಿರುವುದಕ್ಕಿಂತ ಜಾಸ್ತಿ ಯಾವುದಿದೆಯೋ ಅದು ವಿಷ ಎಂದಿದ್ದರು. ಆಹಾರಕ್ಕೂ ಇದು ಅನ್ವಯ ವಾಗುತ್ತದೆ’ ಎಂದರು.

ತಿನ್ನುವ ಆಹಾರ, ನಮ್ಮ ಮನೋಭಾವ, ಸ್ವಭಾವ ಬದಲಾಯಿಸ ಬಲ್ಲದು ಎಂದರು. ಮಠದ ಆಡಳಿತ ಮಂಡಳಿ ಕಾರ್ಯ ದರ್ಶಿ ಡಾ.ಸ್ವಾಮಿ ತ್ರಿಭುವನಾನಂದ ಅಧ್ಯಕ್ಷತೆ ವಹಿಸಿದ್ದರು. ರೇಣುಕಾ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT