ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕೆ ವೇದಿಕೆಯಾದ ಗೋಗಿ ಠಾಣೆ

ಹಿಂದೂ–ಮಸ್ಲಿಂ ಜಂಟಿಯಾಗಿ ಹೋಳಿಹಬ್ಬ ಆಚರಣೆ
Last Updated 14 ಮಾರ್ಚ್ 2017, 6:15 IST
ಅಕ್ಷರ ಗಾತ್ರ

ಶಹಾಪುರ: ಸಾಮಾಜಿಕ ಜಾಲತಾಣ ಹಾಗೂ ಫೇಸ್‌ಬುಕ್ ಬಳಕೆಯಿಂದ  ಯುವ ಸಮುದಾಯ ತಪ್ಪು ದಾರಿಗೆ ಇಳಿಯುತ್ತಿದೆ. ಇದರಿಂದ ಕೋಮುದ್ವೇಷ ಬೆಳೆದು ಸಮಾಜದಲ್ಲಿ ಶಾಂತಿ ಕದಡುತ್ತಲಿದೆ ಎಂದು ಎಎಸ್‌ಪಿ ಶಿವಪ್ರಕಾಶ ದೇವರಾಜ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೋಗಿ ಠಾಣೆಯಲ್ಲಿ ಸೋಮವಾರ ಹಿಂದೂ–ಮುಸ್ಲಿಂ ಸಮುದಾಯವು ಜಂಟಿಯಾಗಿ ಹಮ್ಮಿಕೊಂಡಿದ್ದ ಹೋಳಿಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಸಾಮಾಜಿಕ ಜಾಲತಾಣಗಳಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಚಲವಲನದ ಬಗ್ಗೆ ಸದಾ ಗಮನಹರಿಸಬೇಕು. ಸಮಾಜದ ಶಾಂತಿಗೆ ಧಕ್ಕೆ ತರದಂತೆ ನಾವು ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ ಮಾತನಾಡಿ, ಸೂಫಿ ಸಂತರ ನಾಡಿನಲ್ಲಿ ಕೋಮು ಭಾವನೆಗಳಿಗೆ ಆಸ್ಪದವಿಲ್ಲ. ಗೋಗಿ ಚಂದಾಹುಸೇನಿಯ ದರ್ಗಾ ಇತಿಹಾಸದ ಹಲವು ಕೌತುಕಗಳನ್ನು ಅಡಗಿಸಿಕೊಂಡಿದೆ.  ಚಂದಾಹುಸೇನ್‌ ಅವರು ಜಾತಿ, ಧರ್ಮವನ್ನು ಮೀರಿ ಮನುಕುಲಕ್ಕೆ ಮಾರ್ಗದರ್ಶಕರಾಗಿದ್ದಾರೆ. ಜಾತಿಯ ಬಣ್ಣ ಲೇಪನದಿಂದ ಸಂಕುಚಿತ ಭಾವನೆಗಳಿಗೆ ಅವಕಾಶ ನೀಡಬಾರದು ಎಂದರು.

‘ಹಿಂದಿನ ದಿನಗಳಲ್ಲಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ ಇಂದು ಭಯದ ಭೀತಿಯಲ್ಲಿ ಆಚರಿಸುವ ದುಸ್ಥಿತಿ ಬಂದಿದೆ. ಹಬ್ಬ ತನ್ನ ಗಾಂಭೀರತೆಯನ್ನು ಕಳೆದುಕೊಂಡು ಜಾತಿ, ಧರ್ಮದ ನೆಲೆಯಲ್ಲಿ ಬಂದು ನಿಂತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಚಂದಾ ಹುಸೇನಿ ದರ್ಗಾದ ಗುರುಗಳಾದ ಮಹ್ಮದ ಹುಸೇನಿ ಸಜ್ಜದ ಎ–ನಶಿನ್ ಚಂದಾಹುಸೇನಿ  ಮಾತನಾಡಿ, ಯಾವುದೇ ಹಬ್ಬ ನಮ್ಮ ಸಂಭ್ರಮವನ್ನು ಹೆಚ್ಚಿಸಬೇಕು.  ಮುಸ್ಲಿಮರು ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರೆ, ಹಿಂದೂಗಳು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.  ಆದರೆ ಹೋಳಿಹಬ್ಬದಲ್ಲಿ ಎರಡು ಸಮುದಾಯದವರು ಕೂಡಿಕೊಂಡು  ಠಾಣೆಯಲ್ಲಿ ಹೋಳಿ ಹಬ್ಬ ಆಚರಿಸುತ್ತಿರುವುದು ಖುಷಿ ಎನಿಸುತ್ತಿದೆ. ಠಾಣೆ ದೇಗುಲವಾಗುವಂತೆ  ನಮ್ಮ ಮನಸ್ಸು ಪರಿವರ್ತನೆ ಆಗಬೇಕು. ಕೆಲ ವ್ಯಕ್ತಿಗಳು ಕೋಮು ಭಾವನೆಯ ಬೀಜವನ್ನು ಬಿತ್ತಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ನಾವು ಸದಾ ಜಾಗೃತರಾಗಿರಬೇಕು ಎಂದರು.

ನಂತರ ಹಿಂದೂ–ಮುಸ್ಲಿಂ  ನಾಯಕರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಸಿಪಿಐ ವೀರಣ್ಣ ದೊಡ್ಮನಿ, ಗೋಗಿ ಠಾಣೆಯ ಪ್ರಬಾರಿ ಪಿಎಸ್ಐ ಕೃಷ್ಣಾ ಸುಬೇದಾರ, ಹಬೀದ ಹುಸೇನಿ ಸಾಹುಕಾರ, ರಾಜಗೋಪಾಲ, ಮಾಳಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT