ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗೆ ಹಬ್ಬ: ಮೆರವಣಿಗೆ ನಾಳೆ

ಉತ್ಸವಕ್ಕೆ ಮೆರಗು ನೀಡಲಿರುವ ಜಗ್ಗಲಿಗೆ ಮೇಳ, ಜಾನಪದ ಕಲೆ ಪರಿಚಯ
Last Updated 14 ಮಾರ್ಚ್ 2017, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೋಳಿ ಹುಣ್ಣಿಮೆ ಅಂಗವಾಗಿ ಈ ಬಾರಿಯ ಹಲಗಿ ಹಬ್ಬ ರಂಗು ಪಡೆಯಲಿದ್ದು, ಇದೇ 14ರಂದು ಮಧ್ಯಾಹ್ನ 3ಕ್ಕೆ ಮೂರುಸಾವಿರ­ಮಠ­ದಿಂದ ಜಗ್ಗಲಿಗೆ ಮೇಳದ ಸದ್ದಿನೊಂದಿಗೆ ಮೆರವಣಿಗೆ ಹೊರಡಲಿದೆ.

ಮಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಹಲಗಿ ಹಬ್ಬದ ಸಂಘಟಕ ಮಹೇಶ ಟೆಂಗಿನಕಾಯಿ, ‘20ಕ್ಕೂ ಹೆಚ್ಚು ಜಗ್ಗಲಿಗೆ ತಂಡಗಳು 200ಕ್ಕೂ ಹೆಚ್ಚು ಜಗ್ಗಲಿಗೆಗಳೊಂದಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಲಿವೆ. ಹುಬ್ಬಳ್ಳಿ ಸುತ್ತಮುತ್ತಲಿನ ಗ್ರಾಮಗಳಾದ ಛಬ್ಬಿ, ಸುಳ್ಳ, ಪಾಳೆ, ತಾರಿಹಾಳ, ಬ್ಯಾಹಟ್ಟಿ, ಶಿವಳ್ಳಿ, ಸೂರಶೆಟ್ಟಿಕೊಪ್ಪ, ಬೋಗೇನಾಗರಕೊಪ್ಪ ಮತ್ತು ನಗರದ ವಿವಿದ ಓಣಿಗಳಿಂದ ತಂಡಗಳು ಭಾಗವಹಿಸಲಿವೆ’ ಎಂದು ಹೇಳಿದರು.

‘ವಿಶೇಷವಾಗಿ ಬಾಗಲಕೋಟೆಯ ಜನಪ್ರಿಯ ಜಗ್ಗಲಿಗೆ ಮೇಳ ಹಾಗೂ ಸುಳ್ಳ ಗ್ರಾಮದ ಚರ್ಮ ವಾದ್ಯಗಳನ್ನೊಳಗೊಂಡ ಮಹಿಳೆಯರ ತಂಡಗಳು ಈ ಹಬ್ಬದಲ್ಲಿ ಭಾಗವಹಿಸಿ ಪ್ರದರ್ಶನ ನೀಡಲಿವೆ. ಪಾಶ್ಚಿಮಾತ್ಯ ಸಂಸ್ಕೃತಿಯ ಸಂಗೀತಕ್ಕೆ ತಲೆದೂಗಿ­ಸುತ್ತಿದ್ದ ನಗರದ ಜನತೆಗೆ ನಮ್ಮ ಸಿರಿವಂತ ಜನಪದ ಕಲೆಯನ್ನು ಪರಿಚಯಿಸುವ ಸಲುವಾಗಿ ಹಾಗೂ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುವು­ದಕ್ಕಾಗಿ ಜನಪದ ಕಲಾ ತಂಡಗಳಿಗೆ ಅವಕಾಶ ನೀಡಲಾಗಿದ್ದು, ಜನಪದ ಕಲಾವಿದ ಡಾ. ರಾಮೂ ಮೂಲಗಿ ಅವರು ಸೂಕ್ತ ಘೋಷಣೆಗಳನ್ನು ಬರೆದುಕೊಟ್ಟಿದ್ದು, ಕಲಾ ತಂಡಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ’ ಎಂದು ಹೇಳಿದರು.

ಅಂದು ಮಧ್ಯಾಹ್ನ ಹೊರಡುವ ಮೆರವಣಿಗೆಯ ಸಾನ್ನಿಧ್ಯವನ್ನು ಮೂರು­ಸಾವಿರಮಠದ ಗುರುಸಿದ್ಧ ರಾಜ­ಯೋಗೀಂದ್ರ ಸ್ವಾಮೀಜಿ ವಹಿಸುವರು. ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಚಾಲನೆ ನೀಡುವರು. ಸಂಸದ ಪ್ರಹ್ಲಾದ ಜೋಶಿ, ಮೇಯರ್‌ ಡಿ.ಕೆ. ಚವ್ಹಾಣ, ಉಪಮೇಯರ್‌ ಲಕ್ಷ್ಮಿಬಾಯಿ ಬಿಜವಾಡ, ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ, ಪೊಲೀಸ್ ಕಮಿಷನರ್‌ ಪಾಂಡುರಂಗ ರಾಣೆ ಭಾಗವಹಿಸುವರು. ಇದು ಪಕ್ಷಾತೀತ ಹಬ್ಬವಾಗಿದ್ದು, ಬಿಜೆಪಿಯವರಲ್ಲದೇ ಕಾಂಗ್ರೆಸ್‌ನ ರಾಜಶೇಖರ ಮೆಣಸಿನಕಾಯಿ, ಜೆಡಿಎಸ್‌ನ ರಾಜಣ್ಣ ಕೊರವಿ, ವಸಂತ ಹೊರಟ್ಟಿ ಅವರೂ ಹಬ್ಬದ ಭಾಗವಾಗಿರಲಿದ್ದಾರೆ ಎಂದರು.

ಮೂರುಸಾವಿರಮಠದಿಂದ ಎಸ್‌.ಟಿ. ಭಂಡಾರಿ ರಸ್ತೆ, ದಾಜೀಬಾನಪೇಟ ವೃತ್ತ, ಬೆಳಗಾಂವ ಗಲ್ಲಿ, ಸರಾಫಗಟ್ಟಿ ವೃತ್ತ, ಹಿರೇಪೇಟ, ಬಮ್ಮಾಪುರ ಓಣಿ, ನ್ಯೂ ಇಂಗ್ಲಿಷ್‌ ಸ್ಕೂಲ್‌ ರಸ್ತೆ, ವೀರಭದ್ರೇಶ್ವರ ದೇವಸ್ಥಾನದ ಮೂಲಕ ಹಳೆಹುಬ್ಬಳ್ಳಿಯ ದುರ್ಗದ ಬೈಲ್‌ ತಲುಪಲಿದೆ. ಅಲ್ಲಲ್ಲಿ, ಸ್ವಯಂ ಸೇವಕರು ಲಘು ಪಾನೀಯ ಮತ್ತು ಉಪಾಹಾರವನ್ನೂ ಸ್ವಯಂ­ಪ್ರೇರಿತವಾಗಿ ಮಾಡಿರುತ್ತಾರೆ ಎಂದು ಟೆಂಗಿನಕಾಯಿ ಹೇಳಿದರು.
ಮೇಯರ್‌ ಡಿ.ಕೆ. ಚವ್ಹಾಣ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಹನುಮಂತಪ್ಪ ದೊಡ್ಡಮನಿ ಹಾಗೂ ಹಲವು ಬಿಜೆಪಿ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT