ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮ ದಹನ; ಓಕುಳಿಯಲ್ಲಿ ಮಿಂದೆದ್ದ ಜನ

ಬಣ್ಣ ಎರಚಿದರು...ಕುಣಿದು...ಕುಪ್ಪಳಿಸಿದರು...
Last Updated 14 ಮಾರ್ಚ್ 2017, 6:30 IST
ಅಕ್ಷರ ಗಾತ್ರ

ವಿಜಯಪುರ: ಬಣ್ಣದ ಹಬ್ಬ ಹೋಳಿ ಯನ್ನು ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಯುವಕ, ಯವತಿಯರು, ಮಕ್ಕಳು ಹಲಗೆಯನ್ನು ಬಾರಿಸುತ್ತಾ, ಬಣ್ಣದ ಓಕುಳಿಯನ್ನು ಪರಸ್ಪರ ಎರಚುವ ಮೂಲಕ ಸಂಭ್ರಮಿಸಿದರು.

ಭಾನುವಾರ ರಾತ್ರಿ ಕಾಮಣ್ಣನ ಪ್ರತಿಕೃತಿಯನ್ನು ಸುಡುವ ಮೂಲಕ ಹೋಳಿ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನಗರದ ಪ್ರಮುಖ ಗಲ್ಲಿಗಳಲ್ಲಿ ಯುವಕರು ಕಟ್ಟಿಗೆ, ಸಗಣಿ ಕುಳ್ಳನ್ನು ಸಂಗ್ರಹಿಸಿ, ಕಾಮನ ಪ್ರತಿಕೃತಿಯನ್ನು ದಹಿಸಿ ಬೊಬ್ಬೆ ಹಾಕುವ ಮೂಲಕ ಹೋಳಿ ರಂಗನ್ನು ಹೆಚ್ಚಿಸಿದರು.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಹುತೇಕ ಅಂಗಡಿ, ಹೋಟೆಲ್‌, ಖಾನಾವಳಿಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕರ ಮತ್ತು ವಾಹನಗಳ ಸಂಚಾರ ವಿರಳವಾಗಿತ್ತು. ಒಂದು ರೀತಿ ಅಘೋಷಿತ ಬಂದ್‌ ವಾತಾವರಣ ಕಂಡುಬಂದಿತು.

ಪಿಚಕಾರಿಗಳಲ್ಲಿ ಬಣ್ಣದ ನೀರನ್ನು ತುಂಬಿಕೊಂಡು ಎದುರಾಳಿಗಳ ಮೈಗೆ ಎರಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಖಕ್ಕೆ, ಮೈಗೆ ಬಣ್ಣ ಹಚ್ಚಿಕೊಂಡು ಗುಂಪು, ಗುಂಪಾಗಿ ಓಡಾಡುತ್ತಿದ್ದ ಯುವಕರ ಗುಂಪು ಅಪರಿಚಿತರಂತೆ ಕಾಣುತ್ತಿದ್ದರು. ಬಣ್ಣ ಹಚ್ಚಿಸಿಕೊಳ್ಳಲು ಒಪ್ಪದವರನ್ನು ಓಡಿಸಿಕೊಂಡು ಹೋಗಿ ಮೈತುಂಬ ಓಕುಳಿಯನ್ನು ಸುರಿಯುತ್ತಿದ್ದ ಹಾಗೂ ತಲೆ ಮೇಲೆ ತತ್ತಿಯನ್ನು ಒಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಪರಿಚಿತರಿಗೆ ಬಣ್ಣ ಹಚ್ಚಲು ಯತ್ನಿಸಿ, ಸಣ್ಣಪುಟ್ಟ ವಾಗ್ವಾದಗಳು ನಡೆದ ಘಟನೆಗಳು ಅಲ್ಲಲ್ಲಿ ನಡೆದವು.

ಯುವಕರ ಗುಂಪು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು, ಓಕುಳಿಯನ್ನು ಉಗ್ಗುವ ಹಾಗೂ ಹಣವನ್ನು ಸಂಗ್ರಹಿ ಸುತ್ತಿದ್ದ ದೃಶ್ಯ ಕಂಡುಬಂದಿತು.
ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ನಗರದ ವಿವಿಧ ಹಾಸ್ಟೆಲ್‌ ಗಳಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ದಿನವಿಡೀ ಹಬ್ಬವನ್ನು ರಂಗುರಂಗಾಗಿ ಆಚರಿಸಿದರು.

ಅಹಿತಕರ ಘಟನೆಗಳು ನಡೆಯ ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಾಹನಗಳಲ್ಲಿ ಹಾಗೂ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಂದೋಬಸ್ತ್‌ ಏರ್ಪಡಿಸಿದ್ದರು.

ಸಂಭ್ರಮಿಸಿದ ಚಿಣ್ಣರು
ತಾಂಬಾ:
ಗ್ರಾಮದಲ್ಲಿ ವಿವಿಧೆಡೆ ಭಾನುವಾರ ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ನಡೆಯಿತು. ಕಾಮದಹನ ಮಾಡಿ ಸಾಮೂಹಿಕವಾಗಿ ಬೊಬ್ಬೆ ಹಾಕಿದ ಜನರು, ಹಲಿಗೆ ಬಾರಿಸಿ ಸಂಭ್ರಮಿಸಿದರು.

ಗಮನ ಸೆಳೆದ ‘ರಂಗೋಲಿಕ್‌’
ವಿಜಯಪುರ:
ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎಂಜನಿಯರಿಂಗ್‌ ಕಾಲೇಜ್‌ ಆವರಣದಲ್ಲಿ ಇನ್ಫಾಯ್‌ ನೈಟ್‌ ಇವೆಂಟ್ಸ್‌ ನೇತೃತ್ವದಲ್ಲಿ ಹೋಳಿ ಹಬ್ಬದ ಅಂಗವಾಗಿ ಸೋಮವಾರ ಹಮ್ಮಿಕೊಂಡ ‘ರಂಗೋಲಿಕ್‌’  ವಿಶೇಷ ಕಾರ್ಯಕ್ರಮದಲ್ಲಿ ಯುವಕರು ಬಣ್ಣವಾಡಿದರು.

ಡಿಜೆ ಅಬ್ಬರ, ರೈನಿಂಗ್ ಡ್ಯಾನ್ಸ್ ನಡುವೆ ಬಣ್ಣದಾಟಕ್ಕೆ ಹೊಸ ಮೆರಗು ನೀಡಲಾಯಿತು. ಮಳೆಯ ಸಿಂಚನ ದಂತೆ ಬಿಳುವ ಬಣ್ಣದಾಟದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿದರು. 

ಯುವ ಭಾರತ ಸಂಸ್ಥೆಯ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಹಬ್ಬಗಳು ಭಾವೈಕ್ಯತೆಯ ಸಂಕೇತ,  ಹಬ್ಬಗಳಲ್ಲಿ ತೊಡಗಿಸಿಕೊಳ್ಳುವು ದರಿಂದ ಧಾರ್ಮಿಕ ಮನೋಭಾವನೆ ವೃದ್ಧಿಯಾಗುತ್ತದೆ. ಬಣ್ಣಗಳ ಹಬ್ಬ ಹೋಳಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು. ವಿನೋದ ಕುಮಾರ ಮಣೂರ, ಶರತ್ ಬಿರಾದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT