ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಮಟ್ಟದಲ್ಲಿ ಆದಾಲತ್‌ಗೆ ಆಗ್ರಹ

Last Updated 14 ಮಾರ್ಚ್ 2017, 6:32 IST
ಅಕ್ಷರ ಗಾತ್ರ

ಮಡಿಕೇರಿ: ನಿವೇಶನ ಹಾಗೂ ಕೃಷಿ ಭೂಮಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಆದಿವಾಸಿಗಳ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಬುಡಕಟ್ಟು ಜನರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಆದಿವಾಸಿಗಳು ಹಲವು ವರ್ಷಗಳಿಂದ ಬದುಕ್ಕಿದ್ದರೂ ಇರುವಿಕೆಯನ್ನು ಸಾಬೀತು ಪಡಿಸಲು ಗುರುತಿನ ಚೀಟಿ ಸಿಗುತ್ತಿಲ್ಲ. ಜನಾಂಗದ ಹೆಚ್ಚಿನವರು ತೋಟ ಮಾಲೀಕರ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿರುವ ಕಾರಣ ವಾಸಸ್ಥಳ ದೃಢೀ ಕರಣ ಪತ್ರ ಸಿಗುತ್ತಿಲ್ಲ. ಈ ಕಾರಣಗಳಿಂದ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ಅಧಿಕಾರಿಗಳು ಗುರುತಿನ ಚೀಟಿ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಆದಿವಾಸಿಗಳಿಗೆ ಗುರುತಿನ ಚೀಟಿಗಳನ್ನು ಕೊಡುವಲ್ಲಿ ಪಂಚಾಯಿತಿ ಮಟ್ಟದಲ್ಲಿ ಆದಾಲತ್ ನಡೆಸಬೇಕು. ಆದಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಆದಿವಾಸಿ ಹಕ್ಕುಗಳು ಸಮನ್ವಯ ಸಮಿತಿ ಸಭೆ ಕರೆದು ಜಿಲ್ಲಾಡಳಿತ ಮೂಲಕ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಗ್ರ ಆದಿವಾಸಿ ಬುಡಕಟ್ಟು ಜನಾಂಗದ ಸಂಚಾಲಕ ವೈ.ಕೆ. ಗಣೇಶ್ ಮಾತನಾಡಿ, ಜನಾಂಗದ ಹೆಚ್ಚಿನ ಜನರು ವಾಸಿಸಲು ಮನೆ ಇಲ್ಲ; ಪೈಸಾರಿಯಲ್ಲಿ ಕಟ್ಟಿಕೊಂಡಿರುವ ಗುಡಿಸಲುಗಳಿಗೆ ಹಕ್ಕುಪತ್ರ ಕೊಡುತ್ತಿಲ್ಲ. ಕೆಲವು ಸ್ಥಳಗಳಲ್ಲಿ ವಾಸಿಸಲು ಮುಂದಾದರೆ ಅರಣ್ಯ ಪ್ರದೇಶ, ಗೋಮಾಳ ಎಂದು ಅಧಿಕಾರಿಗಳು ತಕರಾರು ತೆಗೆಯುತ್ತಾರೆ. ಆದರೆ, ನೂರಾರು ಎಕರೆ ಸರ್ಕಾರಿ ಭೂಮಿಗಳನ್ನು ಅತಿಕ್ರಮಿಸಿ ತೋಟ ಮಾಡಿಕೊಂಡವರಿಗೆ ಯಾವುದೇ ತೊಂದರೆ ಆಗುತ್ತಿಲ್ಲ ಎಂದು ದೂರಿದರು.

ಸಾವಿರಾರು ಎಕರೆ ಭೂಮಿಗಳು ಜಿಲ್ಲೆಯಲ್ಲಿ ಒತ್ತುವರಿ ಯಾಗಿದೆ. ಇಂಥ ಆಕ್ರಮಿತ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು, ಆಶ್ರಯ ಇಲ್ಲದ ಆದಿವಾಸಿಗಳಿಗೆ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕೆಲವರಿಗೆ ಕೊಟ್ಟಿರುವ ವಾಸಸ್ಥಳದಲ್ಲಿ ಮೂಲ ಸೌಕರ್ಯಗಳು ಇಲ್ಲದಾಗಿದೆ. ಈ ಬಗ್ಗೆ ಅರಣ್ಯ, ಕಂದಾಯ, ಸಮಾಜ ಕಲ್ಯಾಣ ಇಲಾಖೆಗಳು ಸಮನ್ವತೆಯಿಂದ ಸಭೆ ಕರೆದು ಆದಿವಾಸಿ ಜನಾಂಗದ ಸಮಸ್ಯೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿ ಯಾಗಿ ಜಾರಿಗೆ ತಂದು, ಬದುಕಲು ಅವಕಾಶ ಮಾಡಿ ಕೊಡಬೇಕು. ದಿಡ್ಡಳ್ಳಿ ವಸತಿ ರಹಿತ ಆದಿವಾಸಿಗಳಿಗೆ ಬದುಕಲು ಅನುಕೂಲವಾಗುವ ಪರಿಸರದಲ್ಲಿ ವಸತಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಪಾಲೇಮಾಡುವಿನಲ್ಲಿ ಸರ್ಕಾರ ಕೊಟ್ಟ ಸ್ಮಶಾನ ಜಾಗವನ್ನು ಯಾವುದೇ ಕಾರಣಕ್ಕೂ  ಕ್ರಿಕೆಟ್ ಸಂಸ್ಥೆಗೆ ನೀಡಬಾರದು. ಈ ಜಾಗದಲ್ಲಿ ಈ ಹಿಂದೆ ಸ್ಮಶಾನ ಗಳು ಇದ್ದವು ಎಂಬುದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಮಿತಿಯ ರಾಜ್ಯ ಘಟಕ ಅಧ್ಯಕ್ಷ ಗುರುಶ್ಯಾಮ್, ದುರ್ಗಾಪ್ರಸಾದ್, ಮಹದೇವ್, ಭರತ್, ಅಪ್ಪಾಜಿ, ರಮೇಶ್, ವೈ.ಕೆ. ರವಿ, ಪ್ರೇಮಾ, ತಮ್ಮು, ಮಂಜುಳಾ ವಹಿಸಿದ್ದರು.

**

ಕೊಡಗು ಕೈಬಿಡಲು ಮನವಿ

ಮಡಿಕೇರಿ: ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯಂತೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳನ್ನು ಸೂಕ್ಷ್ಮ ವಲಯವೆಂದು ಘೋಷಿಸಲು ಮುಂದಾಗಿದ್ದು, ಕೊಡಗು ಜಿಲ್ಲೆಯ 55 ಗ್ರಾಮಗಳೂ ಸೇರಿಕೊಂಡಿವೆ. ಇದನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT