ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ: ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ರಂಗು

ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಿಕ್ಷಕರು
Last Updated 14 ಮಾರ್ಚ್ 2017, 6:41 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದ ಶಿಕ್ಷಕ ವೃಂದವು ಹೋಳಿ ಬಣ್ಣದ ಓಕಳಿಯೊಂದಿಗೆ ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ಪರ್ಶ ನೀಡಿ ವೈಶಿಷ್ಟವಾಗಿ ಆಚರಿಸಿತು.

ಬೆಳಿಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್‌ ಮನ್ನಿಕೇರಿ ಆದಿಯಾಗಿ ಶಿಕ್ಷಕರ ಮನೆ, ಮನೆಗೆ ಹೋಗಿ ಶಿಕ್ಷಕರಿಗೆ ಬಣ್ಣವನ್ನು ಹಚ್ಚುವ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿದರು.

ನಂತರ ನಿವೃತ್ತ ಶಿಕ್ಷಕ ಶಿವಲಿಂಗಪ್ಪ ಕೌಜಲಗಿ ತೋಟದಲ್ಲಿ  ‘ಹೋಳಿ ಚಿಂತನ, ಮಂಥನ’ ನಡೆಯಿತು. ಮನಸೂರಖಾನ ಉಸ್ತಾದ ಅವರು ಹಾಸ್ಯಭರಿತ ಶಾಯಿರಿಗಳಿಂದ ರಂಜಿಸಿದರು. ಕೆಲವರು ಸಂಪ್ರ ದಾಯದ ಹೋಳಿ ಹಾಡುಗಳನ್ನು ಗತ್ತಿ ನಿಂದ ಹಾಡಿ ಗಮನ ಸೆಳೆದರು. ಇನ್ನು ಕೆಲವರು ಸ್ವರಚಿತ ಕವಿತೆ ವಾಚಿಸಿ ಚಪ್ಪಾಳೆ ಗಿಟ್ಟಿಸಿದರು.

ಬಳಿಕ ಪ್ರತಿಯೊಬ್ಬ ಶಿಕ್ಷಕರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಕನಿಷ್ಠ 5 ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ  ಆತ್ಮಸ್ಥೈರ್ಯ ತುಂಬಿ, ವಿದ್ಯಾರ್ಥಿಗೆ ಪರೀಕ್ಷೆಯ ಅಭ್ಯಾಸಕ್ಕೆ ಹೆಚ್ಚಿಗೆ ಅವಕಾಶ ಮಾಡಿ ಕೊಡುವ ಬಗ್ಗೆ ಪಾಲಕರಿಗೆ ತಿಳಿ ಹೇಳಿದರು.

ಪುಸ್ತಕ ದೇಣಿಗೆ: ಪುಸ್ತಕ ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ಹಿನ್ನೆಲೆಯಲ್ಲಿ ಸೇರಿದ ಎಲ್ಲ ಶಿಕ್ಷಕರು ಒಂದು ನೂರಕ್ಕೂ ಅಧಿಕ ಪುಸ್ತಕಗಳನ್ನು ಸ್ಥಳೀಯ ಸಾರ್ವಜನಿಕ ಗ್ರಂಥಾಲಯಕ್ಕೆ ದೇಣಿಗೆ ಮಾಡುವ ಬಗ್ಗೆ ನಿರ್ಧರಿಸಿದ್ದು ವಿಶೇಷವಾಗಿತ್ತು.

ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ ಅವರ ಔಚಿತ್ಯಪೂರ್ಣ ಮಾತುಗಳು, ಶಿಕ್ಷಕರ ಸಂಘದ ಮುಖಂಡರಾದ ಆರ್.ಎಂ. ಮಹಾಲಿಂಗಪೂರ, ಬಿ.ಆರ್. ತರಕಾರ, ರಮೇಶ ಅಳಗುಂಡಿ ಮತ್ತಿತರರು ಶೈಕ್ಷಣಿಕ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ರಂಗು ಬಂದಿತ್ತು.

ಬಣ್ಣ ಎರಚಿ ಸಂಭ್ರಮ: ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಹೋಳಿ ಸಂಭ್ರಮದಿಂದ ಆಚರಿಸಿದರು.
ಸ್ಥಳೀಯ ಗಾಂಧಿ ವೃತ್ತ, ಕಲ್ಮೇಶ್ವರ ವೃತ್ತ, ಸಂಗಪ್ಪಣ್ಣ ವೃತ್ತ, ರೇಣುಕಾದೇವಿ ದೇವಸ್ಥಾನ, ದನದ ಪೇಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಪ್ರದಾಯದಂತೆ ಬೆಳಿಗ್ಗೆ ಕಾಮಣ್ಣನ ದಹನ  ನಡೆಯಿತು.


ಬಳಿಕ, ಡ್ರಮ್‌ಗಳಲ್ಲಿ ಮೊದಲೇ ಸಿದ್ಧ ಮಾಡಿಕೊಂಡಿದ್ದ  ಬಣ್ಣ ಕಲಿಸಿದ ನೀರನ್ನು ಎರಚಿ ಆನಂದಪಟ್ಟರು. ಕೆಲ ಯುವಕರು ಸಂಗೀತಕ್ಕೆ ಹೆಜ್ಜೆ ಹಾಕಿ ಕುಪ್ಪಳಿಸಿದರೆ, ಇನ್ನು ಕೆಲವರು ಮುಖಗಳಿಗೆ ಮುಖವಾಡ ಧರಿಸಿದ ದೃಶ್ಯ ಕಂಡು ಬಂತು. ಪುಟಾಣಿಗಳು ಪಿಚಕಾರಿಗಳ ಮೂಲಕ  ಹೋಳಿ ಆಡಿದರು. ಮಹಿಳೆ ಯರು ಈ ಬಾರಿ ಅಧಿಕ ಸಂಖ್ಯೆಯಲ್ಲಿ ಓಕುಳಿಯಲ್ಲಿ ಪಾಲ್ಗೊಂಡಿದ್ದು ವಿಶೇಷ ವಾಗಿತ್ತು.  ಗ್ರಾಮೀಣ ಭಾಗದಲ್ಲಿ ಜನರು ಹೋಳಿ ಹಾಡು ಹಾಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT