ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಸಾರ ಹಬ್ಬದ ಸಂಭ್ರಮ

ಗೋಮಾಂಗ್ ಬೌದ್ಧ ಮಂದಿರದ ಆವರಣದಲ್ಲಿ ವಿಶೇಷ ಪೂಜೆ
Last Updated 14 ಮಾರ್ಚ್ 2017, 6:54 IST
ಅಕ್ಷರ ಗಾತ್ರ

ಮುಂಡಗೋಡ: ಉದ್ದನೆಯ ಕೊಳಾಯಿ ಗಳ ಮೂಲಕ ಶಬ್ದ ಮಾಡುತ್ತಿರುವ ದೃಶ್ಯ ಒಂದೆಡೆ,  ಕೈಯಲ್ಲಿ ತಾಳದಂತ ಪರಿಕರ ಹಿಡಿದು ಬಾರಿಸುತ್ತಿರುವ ಬಿಕ್ಕುಗಳು ಇನ್ನೊಂದೆಡೆ. ಹಬ್ಬದ ಕೊನೆಯ ಕಾರ್ಯಕ್ರಮವನ್ನು ಕಾತುರದಿಂದ ನೋಡಲು, ಜಮಾವಣೆಗೊಂಡಿದ್ದ ಸಹಸ್ರಾರು ಟಿಬೆಟನ್ನರು ಮತ್ತೊಂದೆಡೆ, ಹಿರಿಯ ಬೌದ್ಧ ಗುರುವಿನ ಮಾರ್ಗ ದರ್ಶನದಲ್ಲಿ  ಪೂಜಾ ವಿಧಿ ವಿಧಾನ ಗಳನ್ನು ಮಾಡುತ್ತ, ಮುಂದೆ ಸಾಗುತ್ತಿದ್ದ ಬೌದ್ಧ ಬಿಕ್ಕುಗಳ ದೃಶ್ಯ ಕಂಡುಬಂತು. 
ತಾಲ್ಲೂಕಿನ ಟಿಬೆಟನ್ ಲಾಮಾ ಕ್ಯಾಂಪ್‌ ನಂ.2ರ ಪಾಲ್ಡೆನ್‌ ಡ್ರೆಪುಂಗ್‌ ತಾಶಿ ಗೋಮಾಂಗ್ ಬೌದ್ಧ ಮಂದಿರದ ಆವರಣದಲ್ಲಿ ಲೋಸಾರ(ಹೊಸ ವರ್ಷ) ಹಬ್ಬದ ಕೊನೆಯ ದಿನದ ಪೂಜಾ ಕಾರ್ಯಕ್ರಮ ಸೋಮವಾರ ಜರುಗಿತು.

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ, ವಿಶೇಷ ಪೂಜೆಯನ್ನು ಗೋಮಾಂಗ್ ಬೌದ್ಧ ಮಂದಿರದಲ್ಲಿ ನಡೆಸಿ, ನಂತರ ಮಂದಿರದ ಆವರಣ ದಲ್ಲಿ ದೊಡ್ಡ ಗಾತ್ರದ ಮೂರ್ತಿಯನ್ನು  ಅರ್ಧ ಗಂಟೆಗೂ ಹೆಚ್ಚು ಕಾಲ ಪೂಜಿಸಿದರು. ಹಳದಿ ಬಣ್ಣದ ಉದ್ದನೆಯ ಟೋಪಿಗಳನ್ನು ಧರಿಸಿದ್ದ ಬೌದ್ಧ ಬಿಕ್ಕುಗಳು, ವಿವಿಧ ವಾದ್ಯಗಳನ್ನು ನುಡಿಸುತ್ತಾ, ಹಿರಿಯ ಬೌದ್ಧ ಗುರುವಿನ ನೇತೃತ್ವದಲ್ಲಿ ಪೂಜಾ ವಿಧಾನಗಳನ್ನು ಕೈಗೊಂಡರು. ಟಿಬೆಟನ್ ಕ್ಯಾಂಪ್‌ನ ವಿವಿಧ ಬೌದ್ಧ ಮಂದಿರಗಳ ಬಿಕ್ಕುಗಳು ಹಾಗೂ ಟಿಬೆಟನ್ನರು ಲೋಸಾರ ಹಬ್ಬದ ಕೊನೆಯ ದಿನದ ಪೂಜೆಯಲ್ಲಿ ಪಾಲ್ಗೊಂಡರು.

ಸಾಂಪ್ರದಾಯಿಕ ಉಡುಗೆಯಲ್ಲಿ ಟಿಬೆಟನ್‌ ಮಹಿಳೆಯರು: ಟಿಬೆಟನ್ನರ ಹೊಸ ವರ್ಷವಾದ ಲೋಸಾರ ಹಬ್ಬದ ಕೊನೆಯ ದಿನದಂದು ಟಿಬೆಟನ್‌ ಮಹಿಳೆ ಯರು, ಸಾಂಪ್ರದಾಯಿಕ ಉಡುಗೆ ತೊಟ್ಟು, ಭೂತದಹನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ವೃದ್ಧ ಟಿಬೆಟನ್‌ರು ಇತರರ ಸಹಾಯ ದೊಂದಿಗೆ ಬೌದ್ಧ ಮಂದಿರಕ್ಕೆ ಬಂದು ಹಬ್ಬದ  ಪೂಜೆಯಲ್ಲಿ ಪಾಲ್ಗೊಂಡರು.

ಭೂತ ದಹನ:  ಸುಮಾರು ಹದಿನೈದು ದಿನಗಳವರೆಗೆ ಟಿಬೆಟನ್ನರು ಲೋಸಾರ ಹಬ್ಬವನ್ನು ಆಚರಿಸಿ, ಕೊನೆಯ ದಿನದಂದು ಭೂತ, ಪಿಶಾಚಿಯ ಹೆಸರಿನಲ್ಲಿ ಬೃಹತ್‌ ಆಕಾರದ ಮೂರ್ತಿ ಯನ್ನು ಮಾಡಿ ಮೆರವಣಿಗೆಯಲ್ಲಿ ತಂದು ಸುಡುವುದು ವಾಡಿಕೆ. 

ಗೋಮಾಂಗ್ ಬೌದ್ಧ ಮಂದಿರದ ಆವರಣದಲ್ಲಿ ಬೃಹತ್‌ ಆಕಾರದ ಮೂರ್ತಿಯನ್ನು ಪೂಜಿಸಿ, ನಂತರ ಬೌದ್ಧ ಮಂದಿರದ ಪಕ್ಕದ ಖಾಲಿ ಆವರಣ ದವರೆಗೆ ಮೆರವಣಿಗೆಯಲ್ಲಿ ತರಲಾ ಯಿತು.  ಲೋಸಾರ ವಿಶೇಷ ಖಾದ್ಯ ಹಾಗೂ ದವಸ ಧಾನ್ಯಗಳನ್ನು ಮೂರ್ತಿ ಯನ್ನು ಸುಡುವ ಸ್ಥಳದಲ್ಲಿ ಹಾಕಿದರು.

ಕೆಲ ಸಮಯದವರೆಗೆ ವಿವಿಧ ವಾದ್ಯಗಳ  ನಾದ ಹೊಮ್ಮಿಸಿದ ಬೌದ್ಧ ಬಿಕ್ಕುಗಳು, ನಂತರ ಮೂರ್ತಿಯನ್ನು ಗುಡಿಸಿಲಿನ ಆಕಾರದ ಸ್ಥಳದಲ್ಲಿ ಇಡುತ್ತಿದ್ದಂತೆ, ಬೌದ್ಧ ಬಿಕ್ಕು ಬೆಂಕಿ ಹಚ್ಚುವ ಮೂಲಕ ಭೂತ ದಹನ ಕಾರ್ಯಕ್ರಮ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT