ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಿನಲ್ಲಿ ‘ಹಾವೇರಿ ಹೋಳಿ’

Last Updated 14 ಮಾರ್ಚ್ 2017, 7:00 IST
ಅಕ್ಷರ ಗಾತ್ರ

ಹಾವೇರಿ: ಹುಣ್ಣಿಮೆಯ ಮರುದಿನವಾದ ಸೋಮವಾರ ನಗರದಾದ್ಯಂತ ಬಣ್ಣದೋಕುಳಿ. ಎಲ್ಲೆಲ್ಲೂ ಬಣ್ಣಗಳ ಸಿಂಚನ, ರಸ್ತೆಯಲ್ಲೇ ಯುವಕರ ನರ್ತನ, ಮನೆ ಮುಂದೆ ನಿಂತ ಮಹಿಳೆಯರ ನೋಟ, ಪಿಚಕಾರಿ ಹಿಡಿದ ಮಕ್ಕಳ ಕುಣಿತ,  ಹಲಿಗೆ, ವಾದ್ಯ, ಹಾಡುಗಳ  ನಿನಾದ, ಧ್ವಜಗಳ ಹಾರಾಟ, ಕಂಡ ಕಂಡಲ್ಲಿ ಬಣ್ಣದ ತೂರಾಟ, ನೀರೆರಚಾಟ. ನಗರವಿಡೀ ವರ್ಣಗಳ ಚಿತ್ತಾರ. ಬಿಸಿಲನ್ನೂ ಲೆಕ್ಕಿಸದೇ ಹೋಳಿ ಹೊಂಬಣ್ಣದಲ್ಲಿ ಮಿಂದೆದ್ದ ಜನತೆ. ಪೊಲೀಸರಿಗೆ ಬಂದೋಬಸ್ತ್‌ನದ್ದೇ ಚಿಂತೆ...

‘ಹಾವೇರಿ ಹೋಳಿ’ ಸಂಭ್ರಮವು ಸೋಮವಾರ ನಗರದಾದ್ಯಂತ ಮೂಡಿ ಬಂದ ಚಿತ್ರಣ. ನಗರದಾದ್ಯಂತ ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಎನ್ನದೇ ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ಬಣ್ಣದಾಟದಲ್ಲಿ ಮಿಂದೆದ್ದರು. 

ಬೆಳಿಗ್ಗೆ 8ರಿಂದಲೇ ಬಣ್ಣದ ಬಾಟಲಿ, ಪಿಚಕಾರಿ, ವಾಟರ್ ಪಿಸ್ತೂಲ್‌ಗಳನ್ನು ಹಿಡಿದು, ರಸ್ತೆಯಲ್ಲಿ ಸಂಚರಿಸುವ ಎಲ್ಲರಿಗೆ ಬಣ್ಣ ಎರಚುವ ಮೂಲಕ ರಂಗಿನಾಟಕ್ಕೆ ಚಾಲನೆ ನೀಡಿದರು. 10ಗಂಟೆ ಹೊತ್ತಿಗೆ ಎಲ್ಲರೂ, ಸ್ನೇಹಿತರು, ಹಿತೈಷಿಗಳು, ಸಂಬಂಧಿಗಳ ಜೊತೆಗೂಡಿ ಬಣ್ಣದಾಟವಾಡಿ ಸಂಭ್ರಮಿಸಿದರು. ಯುವಕರು ತಮ್ಮ ಬೈಕ್‌ಗಳಿಗೆ  ಧ್ವಜ ಹಾಗೂ ಪೇಪರ್‌ಗಳನ್ನು ಅಂಟಿಸಿ ಕೊಂಡು, ತಲೆಮೇಲೊಂದು ಬಟ್ಟೆ ಸುತ್ತಿ ಗುಂಪು ಗುಂಪಾಗಿ  ಸಂಚರಿಸಿದರು.

ನಗರದ ಗದ್ದುಗೇರ ಓಣಿ, ಪುರದ ಓಣಿ, ಕಡ್ಲಿ ಸರ್ಕಲ್‌, ನಾಗೇಂದ್ರನಮಟ್ಟಿ, ಹಳೆ ಅಂಚೇ ರಸ್ತೆ, ವಿದ್ಯಾನಗರ. ಬಸವೇಶ್ವರ ನಗರ, ಮಾರ್ಕೆಟ್‌, ಏಲಕ್ಕಿ ಓಣಿ, ಶಿವಾಜಿ ನಗರ, ಹೊಸನಗರ, ಚೌಡೇಶ್ವರಿ ಸರ್ಕಲ್‌, ದಾನೇಶ್ವರಿ ನಗರ, ದ್ಯಾಮವ್ವನ ಓಣಿ, ಮಂಜುನಾಥ ನಗರ, ಇಜಾರಿಲಕಮಾಪೂರ ಸೇರಿದಂತೆ ವಿವಿಧೆಡೆ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಹೋಳಿಯನ್ನು ಆಚರಿಸಿದರು. ಮಧ್ಯಾಹ್ನ 3ಗಂಟೆ ಹೊತ್ತಿಗೆ ದಹಿಸಿದರು.

ಇನ್ನು ಕೆಲ ಯುವಕರು ಹಲಿಗೆ ಬಾರಿಸುತ್ತಾ ಸಂಭ್ರಮಿಸಿದರ.ನಗರದ ಪ್ರಮುಖ ಬೀದಿಗಳಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಪ್ರಮುಖ ರಸ್ತೆಗಳೆಲ್ಲ ಬಣ್ಣಮಯವಾಗಿದ್ದವು.ಕಾಮಣ್ಣನ್ನು ದಹಿಸುವಾಗ ಬಾಯಿ ಬಡಿದುಕೊಂಡು ಕುಣಿದಾಡಿದರು.


ಪೊಲೀಸ್‌ ಬಂದೋಬಸ್ತ್‌: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಯಲ್ಲಿ ವಿದ್ಯಾರ್ಥಿಗಳಿಗೆ ರಕ್ಷಣೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪ್ರತಿ ವೃತ್ತಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ಸರ್ಪಗಾವಲು ಕಂಡು ಬಂತು.

ನೀರಿಗಾಗಿ ಪರದಾಟ: ಬರಗಾಲದ ಕಾರಣ ಕೆರೆಗಳಲ್ಲಿ ಸ್ನಾನಕ್ಕೆ ನೀರು ಇರಲಿಲ್ಲ. ಹೀಗಾಗಿ ಸಮೀಪದ ಹೊಲದ ರೈತರ ಕೊಳವೆಬಾವಿಗಳಿಗೆ ಹೋಗಿ ಸ್ನಾನ ಮಾಡಿದರು. ಹೋಳಿ ಹಬ್ಬದ ನಿಮಿತ್ತ ಮನೆಗಳಲ್ಲಿ ವಿಶೇಷ ಹೋಳಿಗೆ ಊಟವನ್ನು ಸಿದ್ಧಪಡಿಸುತ್ತಾರೆ. ಹೋಳಿ ಆಟ ಮುಗಿದು ಕಾಮಣ್ಣನನ್ನು ದಹಿಸಿದ ನಂತರ, ಸ್ನಾನ ಮಾಡಿ ಈ ವಿಶೇಷ ಊಟವನ್ನು ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT