ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಿನಾಟದಲ್ಲಿ ಸಂಭ್ರಮಿಸಿದ ವಿದೇಶಿ ಪ್ರವಾಸಿಗರು

Last Updated 14 ಮಾರ್ಚ್ 2017, 7:03 IST
ಅಕ್ಷರ ಗಾತ್ರ

ಹೊಸಪೇಟೆ: ಇನ್ನೂ ಎಳೆಬಿಸಿಲು. ಅಷ್ಟಾರಲ್ಲಾಗಲೇ ಹಂಪಿ ರಥಬೀದಿಯಲ್ಲಿ ಸೋಮವಾರ ಜನ ನೆರೆದಿದ್ದರು. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಅಲ್ಲಿ ಸೇರಿದವರ ಮುಖದ ತುಂಬೆಲ್ಲ ಕೆಂಪು, ನೀಲಿ, ಹಳದಿ ಹಾಗೂ ಕೇಸರಿ ಬಣ್ಣಗಳು ಆವರಿಸಿಕೊಂಡಿದ್ದವು. ಯಾರ ಗುರುತು ಸಿಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ಗಾಢವಾದ ಬಣ್ಣಗಳು ಅವರ ಚಹರೆ ಮೇಲೆ ಇತ್ತು. ಎಲ್ಲರ ನಾಲಿಗೆ ಮೇಲೆ ಒಂದೇ ಮಾತು ‘ಹೋಲಿ ಹೈ’...

ಹೋಳಿ ಹಬ್ಬದ ಅಂಗವಾಗಿ ತಾಲ್ಲೂಕಿನ ಹಂಪಿಯಲ್ಲಿ ಸೋಮವಾರ ನಡೆದ ರಂಗಿನಾಟದ ವೇಳೆ ಕಂಡು ಬಂದ ದೃಶ್ಯಗಳಿವು.

ವಿರೂಪಾಕ್ಷೇಶ್ವರ ದೇವಸ್ಥಾನ ಎದುರಿನ ರಥಬೀದಿಯಲ್ಲಿ ಸ್ಥಳೀಯರೊಂದಿಗೆ ವಿದೇಶಿಯರು ಬಣ್ಣದೋಕುಳಿ ಆಡಿದರು. ಪರಸ್ಪರ ಗುಲಾಲ್‌ ಮೈ ಮೇಲೆ ಎರಚಿಕೊಂಡು ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಸಂಭ್ರಮಕ್ಕೆ ಸಾಕ್ಷಿಯಾದರು. ಅನ್ಯ ದೇಶಗಳ ಪ್ರಜೆಗಳು ತಾವು ಹೊರಗಿನವರು ಎನ್ನುವುದನ್ನು ಮರೆತು ಸ್ಥಳೀಯರ ಜತೆ ಬೆರೆತು ಹೋಳಿ ಆಚರಿಸಿದ್ದು ವಿಶೇಷವಾಗಿತ್ತು.

ರಥಬೀದಿಯ ಅಕ್ಕಪಕ್ಕ ನಿಂತಿದ್ದ ಜನರ ಮೇಲೆ ವಿದೇಶಿಯರು ಬಣ್ಣ ಎರಚಿ ಖುಷಿಪಟ್ಟರು. ಸ್ಥಳೀಯ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೆಜ್ಜೆ ಹಾಕಿದರು. ಪಡ್ಡೆ ಹುಡುಗರೊಂದಿಗೆ ಕುಣಿಯುತ್ತ, ನಲಿಯುತ್ತ ಶಿಳ್ಳೆ ಹೊಡೆದು ಬಣ್ಣದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿದ್ದರು.

ರಥಬೀದಿಯಲ್ಲಿ ಆರಂಭವಾದ ಬಣ್ಣದಾಟವು ವಿರೂಪಾಕ್ಷೇಶ್ವರ ದೇಗುಲ ಬಳಿಯಿಂದ ಹರಿಯುವ ತುಂಗಭದ್ರಾ ನದಿ ತಟದಲ್ಲಿ ಕೊನೆಗೊಂಡಿತ್ತು. ಸುಮಾರು 200 ಜನ ವಿದೇಶಿಯರು ಸೇರಿದಂತೆ ಒಟ್ಟು 350ರಿಂದ 400 ಜನ ತಮಟೆ ನಾದಕ್ಕೆ ಹೆಜ್ಜೆ ಹಾಕಿದರು. ಅವರು ಹಾದು ಹೋಗುವ ಮಾರ್ಗದ ಎರಡೂ ಬದಿಯಲ್ಲಿರುವ ಮನೆ ಹಾಗೂ ಮಳಿಗೆಯವರು ಬಕೆಟ್‌, ತಂಬಿಗೆಗಳ ಮೂಲಕ ಬಣ್ಣ ಸುರಿದು ಸಂಭ್ರಮಿಸಿದರು. ವಿದೇಶಿಯರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ಪೊಲೀಸರು ಡಿ.ಜೆ ಬಳಸಲು ಅವಕಾಶ ಕಲ್ಪಿಸಲಿಲ್ಲ. ಅಷ್ಟೇ ಅಲ್ಲ, ಮಧ್ಯಾಹ್ನ ಒಂದು ಗಂಟೆಯ ಒಳಗೆ ರಂಗಿನಾಟ ಮುಗಿಸಲು ಗಡುವು ವಿಧಿಸಿದ್ದರಿಂದ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಮಧ್ಯಾಹ್ನ ಮೂರು ಗಂಟೆಯ ವರೆಗೆ ಬಣ್ಣದೋಕುಳಿ ಆಡುತ್ತಿದ್ದೇವು. ಈ ಬಾರಿ ಮಧ್ಯಾಹ್ನ ಒಂದು ಗಂಟೆಯ ತನಕ ಅವಕಾಶ ಕಲ್ಪಿಸಿದ್ದರಿಂದ ಸರಿಯಾಗಿ ಹಬ್ಬ ಆಚರಿಸಲು ಆಗಲಿಲ್ಲ. ಇಷ್ಟೇ ಅಲ್ಲ, ಈ ಸಲ ಡಿ.ಜೆ ಬಳಸುವುದಕ್ಕೂ ಬಿಟ್ಟಿಲ್ಲ. ಇದರಿಂದ ಬಹಳ ನಿರಾಸೆಯಾಗಿದೆ’ ಎಂದು ರಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಂತಿ ಸಭೆಯಲ್ಲಿ ನಿರ್ಧರಿಸಿದಂತೆ ಮಧ್ಯಾಹ್ನ ಒಂದು ಗಂಟೆಯ ವರೆಗೆ ಅವಕಾಶ ಕಲ್ಪಿಸಲಾಗಿತ್ತು. ಅನೇಕ ದೇಶಗಳ ನಾಗರಿಕರು ಬಂದಿರುವುದರಿಂದ ಅವರಿಗೆ ಸುರಕ್ಷತೆ ಕಲ್ಪಿಸುವುದು ಮುಖ್ಯ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು. ಇದನ್ನೆಲ್ಲ ಪರಿಗಣಿಸಿಯೇ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ’ ಎಂದು ಹಂಪಿ ಸಿ.ಪಿ.ಐ. ರವಿಕುಮಾರ ತಿಳಿಸಿದರು.

ನಗರದಲ್ಲೂ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ರಾಣಿಪೇಟೆ, ಪಟೇಲ್‌ ನಗರ, ಅಮರಾವತಿ, ಬಸವೇಶ್ವರ ಬಡಾವಣೆ, ವಾಲ್ಮೀಕಿ ವೃತ್ತ, ಟಿ.ಬಿ ಡ್ಯಾಂನಲ್ಲಿ ಜನ ರಂಗಿನಾಟವಾಡಿ ಸಂಭ್ರಮಿಸಿದರು. ಪ್ರತಿ ವರ್ಷ ನಗರದ ತಾಲ್ಲೂಕು ಮೈದಾನದಲ್ಲಿ ಸ್ಥಳೀಯ ಶಾಸಕ ಆನಂದ ಸಿಂಗ್‌ ಅವರು ಸಾರ್ವಜನಿಕರಿಗಾಗಿ ರಂಗಿನಾಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಸ್ವತಃ ಅವರೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಬರದ ಕಾರಣಸಕ್ಕೆ ಅವರು ಈ ಬಾರಿ ಹೋಳಿ ಆಚರಿಸಲಿಲ್ಲ.

ಭಾನುವಾರ ತಡರಾತ್ರಿ ನಗರದ ವಡಕರಾಯ ದೇವಸ್ಥಾನ, ಪಟೇಲ್‌ ನಗರ, ಅಮರಾವತಿ ಸೇರಿದಂತೆ ಇತರ ಬಡಾವಣೆಗಳಲ್ಲಿ ಕಾಮದಹನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT