ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಸಡಗರ: ಬಣ್ಣದಲ್ಲಿ ಮಿಂದೆದ್ದ ಜನತೆ

ಭಕ್ತರ ಸಮ್ಮುಖದಲ್ಲಿ ಕಾಮನ ದಹನ
Last Updated 14 ಮಾರ್ಚ್ 2017, 7:05 IST
ಅಕ್ಷರ ಗಾತ್ರ

ಬಳ್ಳಾರಿ: ನಗರದಲ್ಲಿ ಸೋಮವಾರ ನೂರಾರು ಯುವಕ–ಯುವತಿಯರು, ಪೋಷಕರು ಹಾಗೂ ಎಳೆಯ ಮಕ್ಕಳು ಹೋಳಿ ಹಬ್ಬದ ರಂಗಿನಲ್ಲಿ ಮಿಂದು ಸಂಭ್ರಮಿಸಿದರು.

ನಗರದ ಕಪ್ಪಗಲ್ಲು ರಸ್ತೆಯಲ್ಲಿ ಎಬಿವಿಪಿ ಸಂಘಟಿಸಿದ್ದ ರಂಗಿನಾಟದಲ್ಲಿ ಸುತ್ತಮುತ್ತಲಿನ ಪ್ರದೇಶದ ನೂರಾರು ಯುವಕರು ಪಾಲ್ಗೊಂಡು ಬಣ್ಣದ ವೇಷ ಧರಿಸಿ ಕುಣಿದು ಕುಪ್ಪಳಿಸಿದರು. ಬಣ್ಣದ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಜಿದ್ದಾಜಿದ್ದಿಗೆ ಬಿದ್ದರು. ಮಡಕೆ ಒಡೆಯಲೆಂದು ಗೆಳೆಯರ ಹೆಗಲ ಮೇಲೆ ಹತ್ತುತ್ತಿದ್ದ ಪ್ರತಿ ಸ್ಪರ್ಧಿಯ ಮೇಲೆ ಉಳಿದವರು ಬಣ್ಣದ ನೀರು ಎರಚಿ ಉತ್ಸಾಹ ಭಂಗಗೊಳಿಸಲು ಯತ್ನಿಸುತ್ತಿದು ನೋಡುಗರ ವಿಶೇಷ ಆಕರ್ಷಣೆಯಾಗಿತ್ತು. ಮಡಕೆ ಒಡೆಯಲು ಆಗದೆ ಕೆಳಕ್ಕೆ ಬಿದ್ದು ಏಳುತ್ತಿದ್ದವರನ್ನು ಇನ್ನಿತರರು ಉತ್ತೇಜಿಸುತ್ತಿದ್ದುದೂ ಗಮನ ಸೆಳೆಯಿತು.

ಜೈನ ಮಾರುಕಟ್ಟೆ ಪ್ರದೇಶದಲ್ಲಿ ಜೈನ ಸಮುದಾಯದ ಯುವಕ–ಯುವತಿಯರ ಸಂಭ್ರಮ ಮೇರೆ ಮೀರಿತ್ತು. ಬಣ್ಣದ ನೀರಿನಲ್ಲಿ ಆಟವಾಡುವುದಕ್ಕಿಂತಲೂ, ಅವರೆಲ್ಲ ಬಣ್ಣದ ಪುಡಿಯನ್ನು ಪರಸ್ಪರ ಎರಚುತ್ತಾ ಕುಣಿದಾಡಿದರು. ಹೀಗಾಗಿ ಸುತ್ತಮುತ್ತಲಿನ ವಾತಾವರಣದಲ್ಲೂ ಬಣ್ಣ ಹರಡಿತ್ತು.

ಬೈಕ್‌ ಸಂಚಾರ: ಬಣ್ಣದಾಟವಾಡಿದ ಯುವಕರು ಬೈಕ್‌ಗಳಲ್ಲಿ ಸಂಚರಿಸುತ್ತಾ, ಕೇಕೆ ಹಾಕುತ್ತಾ ಹಲವು ಬಡಾವಣೆಗಳಿಗೂ ಭೇಟಿ ನೀಡಿ ಅಲ್ಲಿನವರೊಂದಿಗೆ ಸೇರಿಕೊಂಡಾಗ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಬೆಳಿಗ್ಗೆ ಬಿಸಿಲೇರುವ ಮುನ್ನ ಆರಂಭವಾದ ಹೋಳಿ ಹಬ್ಬದ ಸಂಭ್ರಮ ಮಧ್ಯಾಹ್ನದವರೆಗೂ ಮುಂದುವರಿದಿತ್ತು.

ಮಲ್ಲಿಗೆ ನಾಡಲ್ಲಿ ಸಂಭ್ರಮ
ಹೂವಿನಹಡಗಲಿ:
ತಾಲ್ಲೂಕಿನಾದ್ಯಂತ ಹೋಳಿ ಹಬ್ಬವನ್ನು  ಸೋಮವಾರ  ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಯುವಕರು ಬೀದಿ ಬೀದಿಯಲ್ಲಿ ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟದಲ್ಲಿ ತೊಡಗಿದ್ದರು. ಮಕ್ಕಳು ಬಣ್ಣದ ನೀರಿನ ಸ್ಯಾಸೆಗಳನ್ನು ಹಿಡಿದು ಎರಚುತ್ತಾ ಓಣಿ ಅಂಗಳದಲ್ಲಿ ಓಡಾಡಿದರು. ಮಹಿಳೆಯರು, ಯುವತಿಯರು ಕೂಡ ವಿಧ ವಿಧದ ಬಣ್ಣದಲ್ಲಿ ಮಿಂದ್ದೆದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಾಂಧವ್ಯ ಬೆಸೆಯುವ ಹೋಳಿ ಹಬ್ಬವನ್ನು ಪಟ್ಟಣದ ಯುವಕರು ತೇರು ಹನುಮಪ್ಪ ದೇವಸ್ಥಾನ ಬಳಿ ಸಾಮೂಹಿಕವಾಗಿ ಆಚರಿಸಿದ್ದರಿಂದ ಹೋಳಿ ಆಚರಣೆಗೆ ವಿಶೇಷ ಮೆರಗು ಬಂದಿತ್ತು. ಯುವಕರು ಬಣ್ಣ ತುಂಬಿದ ಗಡಿಗೆ ಹೊಡೆಯುವ ಸ್ಪರ್ಧೆ ಆಯೋಜಿಸಿ ಸಂಭ್ರಮಿಸಿದರು.

ಹೋಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ಅಂಗಡಿ ಮುಂಗಟ್ಟೆಗಳು ಮುಚ್ಚಲ್ಪಟ್ಟಿದ್ದವು. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಹೋಳಿ ಹುಣ್ಣಿಮೆ ಪ್ರಯುಕ್ತ ಭಾನುವಾರ ರಾತ್ರಿ ಹಿಂದೂ ಯುವಶಕ್ತಿಯ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳು ಪಟ್ಟಣದ ಮುಖ್ಯ ಬೀದಿಯಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಿದರು. ಬೆಳಗಿನ ಜಾವ ಕಾಮನಕಟ್ಟೆಯ ಬಳಿ ಸಾಂಪ್ರದಾಯಿಕವಾಗಿ ಕಾಮ ದಹನ ನಡೆಸಲಾಯಿತು. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿ ಕಟ್ಟೆಚ್ಚರ ವಹಿಸಲಾಗಿತ್ತು. ಶಾಂತಿಯುತ ಹೋಳಿ ಆಚರಣೆ ನಡೆಯಿತು.

ಚಿಣ್ಣರ ಸಡಗರ
ಹೊಳಲು:
ಹೋಳಿ ಹಬ್ಬವನ್ನು  ಹೊಳಲು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ 7 ಗಂಟೆಯಿಂದಲೇ ಬಣ್ಣ ಆಡಲು ಬೀದಿಗಿಳಿದ ಮಕ್ಕಳು, ಯುವಕರು ಮಧ್ಯಾಹ್ನದ ವರೆಗೂ ಕುಣಿದು ಕುಪ್ಪಳಿಸಿದರು. ಬಗೆಯ ಬಣ್ಣಗಳನ್ನು ಸ್ನೇಹಿತರು, ಆತ್ಮೀಯರಿಗೆ ಹಚ್ಚಿ ಖುಷಿ ಪಟ್ಟರು. ಮಹಿಳೆಯರು, ಯುವತಿಯರೂ ಮನೆಯ ಸುತ್ತಮುತ್ತ ಆಟವಾಡಿದರು.

ಹಬ್ಬದಾಟದ ನಂತರ ಮನೆಗಳಲ್ಲಿ ಹೋಳಿಗೆ ಊಟ ಮಾಡಿ ಹಬ್ಬವನ್ನು ಆಚರಿಸಿದರು. ಯುವಕರು ಹತ್ತಿರದ ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ವೈವಿಧ್ಯಮಯ ಸಿಹಿ ತಿನಿಸುಗಳನ್ನು ಒಳಗೊಂಡ ಊಟ ಮಾಡಿದರು.

ಕಾಮದೇವನ ಪೂಜೆ
ಕೊಟ್ಟೂರು:
ಹೋಳಿ ಹಬ್ಬವನ್ನು ಪಟ್ಟಣದ ಜನತೆ, ಸಡಗರ ಸಂಭ್ರಮದಿಂದ ಸೋಮವಾರ ಆಚರಿಸಿದರು. ಕಾಮದೇವನನ್ನು ಭಾನುವಾರ ಬುದ್ಧ ಸರ್ಕಲ್ ಬಳಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ರಾತ್ರಿ  ಕಾಮಣ್ಣನ ವಿವಿಧ ವೇಷಭೂಷಣ ಧರಿಸಿ ಕುಣಿದು ಕುಪ್ಪಳಿಸಿದರು. ಬೆಳಗಿನ ಜಾವ ಕಾಮದಹನವನ್ನು ಸಾಮೂಹಿಕ ವಾಗಿ ನೆರವೇರಿಸಿದರು.

ಕಾಮದಹನದ ಸಂಕೇತವಾಗಿ ಬಣ್ಣದೋಕುಳಿಯಲ್ಲಿ ಸಾಮೂಹಿಕವಾಗಿ ಚಿಣ್ಣರು, ಯುವಕರು, ಯುವತಿಯರು, ಪರಸ್ಪರ ವಿವಿಧ ಬಗೆಯ ಬಣ್ಣಗಳನ್ನು ಎರಚಾಡುತ್ತ ಹಬ್ಬದ ಸಂಭ್ರಮ ಮೆರೆದರು. ಬಣ್ಣ ಎರಚುವುದು ಮಧ್ಯಾಹ್ನದ ವರೆಗೂ ನಡೆಯಿತು. ಹೋಳಿಹಬ್ಬ ಮತ್ತು ಬಣ್ಣದೋಕುಳಿಯ ಸಡಗರದಲ್ಲಿ ಯಾವುದೇ ಬಗೆಯ ಅಹಿತಕರ ಘಟನೆ ನಡೆಯದೇ ಸಂಪೂರ್ಣ ಶಾಂತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT