ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ಬೆಳೆಗಾರರಿಗೆ ಕಹಿಯಾದ ಕರಿಬೇವು

ಸತತ ಮೂರು ವರ್ಷದಿಂದ ಬಾರದ ಮಳೆ; ಬತ್ತಿದ ಕೆರೆ– ಕೊಳವೆಬಾವಿಗಳು
Last Updated 14 ಮಾರ್ಚ್ 2017, 7:08 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಕರಿಬೇವು ಬೆಳೆ ನೀರಿಲ್ಲದೆ ಸಂಪೂರ್ಣವಾಗಿ ಒಣಗಿದೆ. ಬಹುತೇಕ ಕಟಾವಿನ ಸಂದರ್ಭಗಳಲ್ಲಿ ಲಾಭವನ್ನೇ ಗಳಿಸುತ್ತಿದ್ದ ರೈತರು ನಷ್ಟವನ್ನು ಎದುರಿಸುವಂತಾಗಿದೆ.

ತಾಲ್ಲೂಕಿನ ಬೆಳಗಲ್ಲು, ಬೆಳಗಲ್ಲು ತಾಂಡ ಮತ್ತು ಜಾನೇಕುಂಟೆ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರಿಬೇವನ್ನು ಬೆಳೆಯಲಾಗುತ್ತಿದೆ. ಬಹುತೇಕ ರೈತರು ಕೊಳವೆಬಾವಿ ನೀರನ್ನೇ  ಆಶ್ರಯಿಸಿದ್ದಾರೆ. ಕೆಲವು ತಿಂಗಳ ಮುಂಚೆಯೇ ಕೊಳವೆಬಾವಿಗಳು ಬತ್ತಿದ ಪರಿಣಾಮವಾಗಿ ಬೆಳೆಗಳು ಸಂಪೂರ್ಣವಾಗಿ ಒಣಗಿವೆ.
‘3.48 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ಒಣಗಿದೆ. ಕೊಳವೆಬಾವಿ ನಾಲ್ಕು ತಿಂಗಳ ಹಿಂದೆಯೇ ಬತ್ತಿದ ಪರಿಣಾಮವಾಗಿ ಬೆಳೆಗೆ ನೀರಿಲ್ಲದಂತಾಗಿದೆ.ಮಳೆಯೂ ಇಲ್ಲದಿರುವುದರಿಂದ ಈ ಬಾರಿ ಬೆಳೆ ಕಟಾವು ಇಲ್ಲವಾಗಿದೆ’ ಎಂದು ರೈತ ವೈ.ಬಸವರಾಜ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಹುಬ್ಬಳ್ಳಿ, ಮಂಗಳೂರು, ರಾಯಚೂರು, ಗದಗ, ದಾವಣಗೆರೆ, ಬಾಂಬೆ ಸೇರಿದಂತೆ ಹಲವೆಡೆ ಕರಿಬೇವಿಗೆ ಬೇಡಿಕೆ ಇದೆ. ಈ ಬಾರಿ ಬೇಡಿಕೆ ಪೂರೈಸಲು ಆಗುವುದಿಲ್ಲ. ಇದರಿಂದ ವ್ಯವಹಾರದ ಸಂಬಂಧಕ್ಕೂ ತೊಂದರೆ ಆಗುವಂತಾಗಿದೆ’ ಎಂದು ಅವರು ಹೇಳಿದರು.

‘ಪ್ರತಿ ಕ್ವಿಂಟಲ್‌ ಕರಿಬೇವಿಗೆ ಸರಾಸರಿ ₹ 15 ಸಾವಿರ ದರ ದೊರಕುತ್ತದೆ. ನವೆಂಬರ್‌ನಿಂದ ಮಾರ್ಚಿವರೆಗಿನ ಅವಧಿಯಲ್ಲಿ ಹೆಚ್ಚಿನ ದರ ದೊರಕುತ್ತದೆ. ನಂತರದಲ್ಲಿ ಕ್ವಿಂಟಲ್‌ಗೆ ₹ 800 ವರೆಗೂ ದರ ಕುಸಿಯುತ್ತದೆ. ಪ್ರತಿ ಎಕರೆಯಲ್ಲಿ ಕನಿಷ್ಠ 80 ಕ್ವಿಂಟಲ್‌ ಇಳುವರಿ ದೊರಕುತ್ತದೆ’ ಎಂದು ಮಾಹಿತಿ ನೀಡಿದರು.

14 ಸಾವಿರ ಖರ್ಚು: ಒಮ್ಮೆ ಬೆಳೆಯನ್ನು ಕಟಾವು ಮಾಡಲು ಕನಿಷ್ಠ ₹ 14 ಸಾವಿರ ಖರ್ಚಾಗುತ್ತದೆ. ಆದಾಯ ಕನಿಷ್ಠ 20 ಸಾವಿರ ದೊರಕುತ್ತದೆ. ಈ ಬಾರಿ ಆ ಪ್ರಮಾಣ ಕಡಿಮೆಯಾಗಿದೆ. ಈ ಬೆಳೆಯಿಂದ ಸದಾ ನಷ್ಟ ಆಗುತ್ತದೆ ಎಂದೇನಿಲ್ಲ. ಈ ಬಾರಿ ಮಾತ್ರ ಕಟಾವು ಇಲ್ಲವಾಗಿರುವುದೇ ನಷ್ಟ’ ಎಂದು ಅವರು ಅಭಿಪ್ರಾಯಪಟ್ಟರು.

ಎಲ್ಲೆಲ್ಲೂ ಕರಿಬೇವು: ತಾಲ್ಲೂಕಿನ ಈ ಮೂರು ಗ್ರಾಮಗಳಿಗೆ ಭೇಟಿ ನೀಡಿದರೆ ಎಲ್ಲೆಲ್ಲೂ ಕರಿಬೇವಿನ ಬೆಳೆಯೇ ಕಾಣುವುದು ಇಲ್ಲಿನ ವಿಶೇಷ. ಬಹುತೇಕ ಗ್ರಾಮಸ್ಥರು ಕರಿಬೇವನ್ನು ಬಿಟ್ಟರೆ ಬೇರೆ ಬೆಳೆ ಬೆಳೆಯುವುದಿಲ್ಲ. ಬೇರೆಡೆ ಸಸಿಗಳನ್ನು ನೆಟ್ಟು ಬೆಳೆದರೆ, ಇಲ್ಲಿ ಬೀಜಗಳನ್ನು ಬಿತ್ತಿ ಬೆಳೆಯುತ್ತಾರೆ. ಕಡಿಮೆ ಅಂತರದಲ್ಲಿ ಬೀಜ ಬಿತ್ತುವುದರಿಂದ, ಸಸಿಗಳನ್ನು ಮರವಾಗಲು ಬಿಡದಿರುವುದರಿಂದ ಇಳುವರಿಯೂ ಹೆಚ್ಚುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ.ಚಿದಾನಂದ.

‘ಈ ರೈತರು ಕರಿಬೇವಿಗೆ ಮಳೆಯನ್ನು ಆಶ್ರಯಿಸುವುದಿಲ್ಲ. ಕೊಳವೆಬಾವಿಯ ನೀರಿನಲ್ಲೇ ಬೆಳೆಯುತ್ತಾರೆ. ಈ ಬಾರಿ ಕೊಳವೆಬಾವಿಗಳು ಬತ್ತಿರುವುದರಿಂದ ಸಮಸ್ಯೆ ಎದುರಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT