ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಲ್ಲಿ ಬದಲಾವಣೆ ಅಗತ್ಯ: ರಾಹುಲ್‌ ಗಾಂಧಿ

ಉತ್ತರ ಪ್ರದೇಶ, ಉತ್ತರಾಖಂಡಗಳಲ್ಲಿ ಹೀನಾಯ ಸೋಲಿನ ನಂತರ ಮೌನ ಮುರಿದ ಕಾಂಗ್ರೆಸ್‌ ಉಪಾಧ್ಯಕ್ಷ
Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಚುನಾವಣೆಗಳಲ್ಲಿ ಪಕ್ಷ ಅನುಭವಿಸಿರುವ ಹೀನಾಯ ಸೋಲಿನ ಬಗ್ಗೆ ಮೌನ ಮುರಿದಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸಂಸತ್ತಿನ ಹೊರಗಡೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ರಾಜ್ಯಗಳ ಫಲಿತಾಂಶವು  ಪಕ್ಷದ ಪಾಲಿಗೆ ಅಷ್ಟೇನು ಕೆಟ್ಟದ್ದು ಮಾಡಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಮತಗಳ ಧ್ರುವೀಕರಣ ಮಾಡುವ ಮೂಲಕ ಬಿಜೆಪಿ ಗೆಲುವು ಪಡೆದಿದೆ ಎಂದು ಅವರು ಆರೋಪಿಸಿದರು.

ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ತಮ್ಮ ನಾಯಕತ್ವದ ಕುರಿತಾಗಿ ಕೇಳಿಬಂದ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಂತರಿಕವಾಗಿ ಪಕ್ಷದಲ್ಲಿ ಬದಲಾವಣೆ ತರಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷದ ಮೂಲ ರಚನೆಯಲ್ಲಿ ಮತ್ತು ಸಾಂಸ್ಥಿಕವಾಗಿ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಿದೆ’ ಎಂದು ರಾಹುಲ್‌ ಅಭಿಪ್ರಾಯಪಟ್ಟರು.

ಪಂಜಾಬ್‌ನಲ್ಲಿ ಪಕ್ಷವು ಸರ್ಕಾರ ರಚಿಸಲಿದೆ. ಮಣಿಪುರ ಮತ್ತು ಗೋವಾಗಳಲ್ಲೂ ಪಕ್ಷ ಗೆದ್ದಿದೆ ಎಂದು ಹೇಳಿದ ಅವರು, ‘ಇದು ಕೆಟ್ಟ ಫಲಿತಾಂಶ ಅಲ್ಲ. ಆದರೆ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಪಕ್ಷ ಸೋತಿದ್ದೂ ನಿಜ’ ಎಂದರು.

‘ಪ್ರತಿ ಪಕ್ಷಕ್ಕೂ ‘ಏರಿಳಿತ’ ಎಂಬುದು ಇದ್ದೇ ಇರುತ್ತದೆ. ಉತ್ತರ ಪ್ರದೇಶದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಅದನ್ನು ನಾವು ಸ್ವೀಕರಿಸುತ್ತೇವೆ. ಆದರೆ, ಬಿಜೆಪಿಯೊಂದಿಗೆ ನಾವು ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದೇವೆ. ಅದು ಇನ್ನೂ ಮುಂದುವರೆಯಲಿದೆ’ ಎಂದು ವಿವರಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿನ ಕಳಪೆ ಪ್ರದರ್ಶನದ ನಂತರ ಕಾಂಗ್ರೆಸ್‌ ಒಂದರ ನಂತರ ಒಂದು ರಾಜ್ಯದಲ್ಲಿ ಸೋಲುತ್ತಾ ಬಂದಿದೆ.

ಈಗ ಎರಡು ರಾಜ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ ನಂತರ, ಪಕ್ಷವನ್ನು ಪುನರ್‌ರಚಿಸಬೇಕು ಮತ್ತು  ಸೋಲನ್ನು ತಡೆಯಲು ಚುನಾವಣಾ ರಣತಂತ್ರದಲ್ಲಿ ಬದಲಾವಣೆ ಮಾಡಬೇಕು ಎಂಬ ಬೇಡಿಕೆಗಳು ಪಕ್ಷದ ವಿವಿಧ ವಲಯಗಳಿಂದ ಕೇಳಿ ಬರಲು ಆರಂಭಿಸಿವೆ.

‘ಜನಾದೇಶ ಬುಡಮೇಲು ಮಾಡಿದ ಬಿಜೆಪಿ’: ಗೋವಾ ಮತ್ತು ಮಣಿಪುರಗಳಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ವಿರುದ್ಧ ಹರಿಯಾಯ್ದ ರಾಹುಲ್‌ ಗಾಂಧಿ, ಬಿಜೆಪಿಯು  ಹಣ ಬಲದಿಂದ ಎರಡೂ ರಾಜ್ಯಗಳ ಜನತೆ ನೀಡಿದ ಜನಾದೇಶವನ್ನು ಬುಡಮೇಲು ಮಾಡಿದೆ ಮತ್ತು ಪ್ರಜಾಪ್ರಭುತ್ವದ ತಳಹದಿಯನ್ನೇ ಹಾಳುಗೆಡವಿದೆ ಎಂದು ಆರೋಪಿಸಿದರು. ಗೋವಾ ರಾಜ್ಯಪಾಲರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದೂ   ದೂರಿದರು.

‘ನಾವು ಗೆದ್ದಿರುವ ಎರಡು ರಾಜ್ಯಗಳಲ್ಲಿ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂಬರ್ಥದಲ್ಲಿ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಹಣ ಬಲದ ಮೂಲಕ ಅವರು (ಬಿಜೆಪಿ) ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶ ಮಾಡುತ್ತಿದ್ದಾರೆ. ಸದ್ಯ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವುದು ಇದುವೇ. ಗೋವಾ ಮತ್ತು ಮಣಿಪುರ ಮತದಾರರು ನೀಡಿದ ಜನಾದೇಶವನ್ನು  ಬಿಜೆಪಿ ಬುಡಮೇಲು ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡೂ ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಮುಂದಾಗಲು ಕಾಂಗ್ರೆಸ್‌ ವಿಳಂಬ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರ ರಚನೆಗೆ ಬಿಜೆಪಿ ಎಷ್ಟು ಬೇಗ ಪ್ರಯತ್ನ ಆರಂಭಿಸಿತ್ತು ಎಂಬುದು ಪ್ರಶ್ನೆ ಅಲ್ಲ. ಜನಾದೇಶವನ್ನೇ ತಿರುಚಲು ಅದು ಎಷ್ಟು ಖರ್ಚು ಮಾಡಿದೆ ಎಂಬುದು ಪ್ರಶ್ನೆ’  ಎಂದರು.

‘ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ’

ನವದೆಹಲಿ: ಗೋವಾ ಮತ್ತು ಮಣಿಪುರಗಳಲ್ಲಿ ಸರ್ಕಾರ ರಚಿಸುವ ಪಕ್ಷದ ಯತ್ನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಹಿಂದೆ ಅದು ಕೂಡ ಈ ರೀತಿ ನಡೆದುಕೊಂಡಿರುವುದರಿಂದ ಈಗ ಇದನ್ನು ಪ್ರಶ್ನಿಸುವ ನೈತಿಕ ಹಕ್ಕು ಅದಕ್ಕಿಲ್ಲ ಎಂದು ಹೇಳಿದೆ.

‘ಅಧಿಕಾರ ಮತ್ತು ಸಂವಿಧಾನದ  356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷವು ಹಲವು ಬಾರಿ ಕಾಂಗ್ರೆಸ್ಸೇತರ ಸರ್ಕಾರಗಳನ್ನು ವಜಾ ಮಾಡಿದೆ. ಏಕೈಕ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೂ ಅದು ಅವಕಾಶ ನೀಡಿಲ್ಲ. ಹಾಗಾಗಿ, ಈಗ ನಮ್ಮನ್ನು ಟೀಕಿಸುವ ನೈತಿಕ ಹಕ್ಕು ಅದಕ್ಕಿಲ್ಲ’ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದರು.

‘ಈ ದೇಶದಲ್ಲಿ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಉಲ್ಲಂಘಿಸಿದವರು ಯಾರಾದರೂ ಇದ್ದರೆ, ಅದು ಕಾಂಗ್ರೆಸ್‌ ಮಾತ್ರ’ ಎಂದು ಆರೋಪಿಸಿದರು.

* ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅವರು ಗೆದ್ದುದಕ್ಕೆ ಹಲವು ಕಾರಣಗಳಿವೆ. ಬಹುಮುಖ್ಯ ಕಾರಣ ಮತಗಳ ಧ್ರುವೀಕರಣ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT