ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೇ ಹೀಗ್ಯಾಕೆ?

ಜೀವನ ಜಂಜಾಟದಲ್ಲಿ ಇದು ಪದೇ ಪದೇ ಎದುರಾಗುವ ಪ್ರಶ್ನೆ
Last Updated 17 ಮಾರ್ಚ್ 2017, 13:21 IST
ಅಕ್ಷರ ಗಾತ್ರ
ಹೀಗೆಂದು ಆಗಾಗ ನಮ್ಮನ್ನು ನಾವು ಕೇಳಿಕೊಂಡಿರುತ್ತೇವೆ. 
 
ಜೀವನ ಜಂಜಾಟದಲ್ಲಿ ಇದು ಪದೇ ಪದೇ ಎದುರಾಗುವ ಪ್ರಶ್ನೆಯೂ ಹೌದು. ಅನಿರೀಕ್ಷಿತವಾಗಿ ಸೋತಾಗ, ಆಗಬಾರದ್ದೇನೋ ಆದಾಗ ತೀರ ಹತಾಶರಾಗಿ ನನಗೇ ಹೀಗ್ಯಾಕಾಗುತ್ತದೆ? ಎಂದು ನಮ್ಮನ್ನು ನಾವು ಕೇಳಿಕೊಳ್ಳುತ್ತೇವೆ. ಈ ಪ್ರಶ್ನೆಗೆ ಉತ್ತರ ಮಾತ್ರ ಸಿಗುವುದಿಲ್ಲ. ಆದರೇನಂತೆ, ಪ್ರಶ್ನೆಯೇನೂ ಮರೆಯಾಗುವುದಿಲ್ಲ!
 
ನಮ್ಮ ಹಾಗೆ ಕೋಟ್ಯಾಂತರ ಜನಗಳಿರುವ ಈ ಭೂಮಿಯ ಮೇಲೆ ‘ನಾನೇ ಯಾಕೆ?’ ಎಂಬ ಪ್ರಶ್ನೆ ನಮ್ಮ ಕಷ್ಟಕಾರ್ಪಣ್ಯದಲ್ಲಿ, ದುಃಖದಲ್ಲಿ ಸಾಮಾನ್ಯವಾಗಿ ಕಾಡುತ್ತದೆ. ಪದೇ ಪದೇ ಬಂದೆರಗುವ ಕಷ್ಟಗಳು, ಜರ್ಝರಿತರನ್ನಾಗಿ ಮಾಡುವ ಸಮಸ್ಯೆಗಳಿಗೆ ಪರಿಹಾರವು ಕಾಣದೇ ಇದ್ದಾಗ ನಮ್ಮನ್ನು ನಾವು ಕೇಳಿಕೊಳ್ಳುವ ಸಾಮಾನ್ಯ ಪ್ರಶ್ನೆ: 
ನನಗೇ ಹೀಗ್ಯಾಕೆ? 
 
ಗೆಳೆಯನು ಮೋಸ ಮಾಡಿದಾಗ, ಪರೀಕ್ಷೆಯಲ್ಲಿ ನಪಾಸಾದಾಗ, ಗೆಳತಿಯು ಕೈಕೊಟ್ಟಾಗ, ಸಾಲ ತೆಗೆದುಕೊಂಡವನು ವಾಪಸು ಕೊಡದಿದ್ದಾಗ, ಟ್ರಾಫಿಕ್ಕು ಜಾಮಾದಾಗಲೇ ಪೊಲೀಸಿನವರು ತಪಾಸಣೆಗಾಗಿ ನಿಲ್ಲಿಸಿಕೊಂಡಾಗ, ಆಟೊದವನು ಚಿಲ್ಲರೆ ಕೊಡದೇ ಜಗಳ ಮಾಡಿದಾಗ, ಬಸ್‌ಸ್ಟ್ಯಾಂಡಿಗೆ ಬಂದು ತಾಸಾದರೂ ನಾವು ಹೋಗಬೇಕಾದಲ್ಲಿಗೆ ಹೋಗುವ ಬಸ್ಸು ಬರದೇ ಇದ್ದಾಗ, ಬಾತರೂಮಿನಲ್ಲಿ ಜಾರಿಬಿದ್ದು ಕಾಲು ಉಳುಕಿಸಿಕೊಂಡಾಗ, ಎಷ್ಟೇ ಹುಡುಕಿದರೂ ಒಂದು ಸರಿಸುಮಾರಾದ ಬಾಡಿಗೆಮನೆಯೂ ಸಿಕ್ಕದಿದ್ದಾಗ... ಹೀಗೇ ಬಹಳಷ್ಟು ಸಂದರ್ಭಗಳಲ್ಲಿ ನಾವು ‘ನನಗೇ ಹೀಗ್ಯಾಕಾಗುತ್ತದೆ?’ - ಎಂದು ಗೋಳಾಡುತ್ತೇವೆ.

ನಮ್ಮ ದುರ್ವಿಧಿಯ ಬಗ್ಗೆ ದುಃಖಿಸುತ್ತೇವೆ. ಆಗಬಾರದ ಅನಾಹುತವೇನೋ ಆಗಿಹೋಯಿತು ಎನ್ನುವ ಹಾಗೆ ಪರದಾಡುತ್ತೇವೆ. ಅದರ ಪರಿಣಾಮವಾಗಿ ಆಟೊದವನ ಜೊತೆಗೆ ಜಗಳವಾಡುತ್ತೇವೆ. ಎಷ್ಟೇ ಆಪ್ತನಾದರೂ, ಎಂಥದ್ದೇ ಕಷ್ಟವೆಂದು ಹೇಳಿದರೂ ಇನ್ನು ಮುಂದೆ ಯಾರಿಗೂ ಕಿಂಚಿತ್ತೂ ಧನಸಹಾಯವನ್ನಂತೂ ಮಾಡಬಾರದು ಎಂದು ಅಂದುಕೊಳ್ಳುತ್ತೇವೆ. 
 
ನಮ್ಮ ಅಸಹಾಯಕತೆಯ ಬಗ್ಗೆ ನಮ್ಮನ್ನೇ ನಾವು ಹಳಿದುಕೊಳ್ಳುತ್ತೇವೆ. ಇಂಥ ಪರಿಸ್ಥಿತಿಯಿಂದ ನಮ್ಮ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ನಮ್ಮ ದಿನಚರಿ ಹದಗೆಡುತ್ತದೆ. ನಿಜಕ್ಕೂ ನಾವು ನಾವಲ್ಲದ ರೀತಿಯಲ್ಲಿ ವರ್ತಿಸುತ್ತಿರುತ್ತೇವೆ.  ಇದರಿಂದ ನಮಗೇ ನಿಜಕ್ಕೂ ನಷ್ಟ. 
 
ಅದೇ, ನಮಗೆ ಅನಿರೀಕ್ಷಿತವಾದ ಸಂತೋಷವಾದಾಗ, ಆಕಸ್ಮಾತ್ ಲಾಟರಿಯಲ್ಲಿ ಲಕ್ಷಗಟ್ಟಲೇ ಬಹುಮಾನ ಬಂದಾಗ, ಬಹಳ ಜನರಿಗೆ ಬಂದು ನರಳಿಸುತ್ತಿರುವ ಕಾಯಿಲೆ ನಮಗೆ ಬರದಿದ್ದಾಗ, ಕುಡಿಯುವ–ಸೇದುವ ಅಭ್ಯಾಸವಿಲ್ಲದ ಗಂಡ ಸಿಕ್ಕಾಗ,  ಮಾತು ಮಾತಿಗೂ ಕಿರಿಕಿರಿ ಮಾಡದ ಹೆಂಡತಿ ಸಿಕ್ಕಾಗ...

ಹೀಗೆಯೇ ಬದುಕಿನಲ್ಲಿ ಬಹಳಷ್ಟು ಒಳ್ಳೆಯದಾದಾಗ ಅಪ್ಪಿತಪ್ಪಿಯೂ ನಾವು ‘ನನಗೇ ಹೀಗ್ಯಾಕೆ?!’ ಎಂದು ಪ್ರಶ್ನಿಸಿಕೊಳ್ಳುತ್ತೇವೆಯೆ? ಖಂಡಿತವಾಗಿಯೂ ಇಲ್ಲ! ಅಂಥ ಸಂದರ್ಭದಲ್ಲಿ ನಮ್ಮ ಅದೃಷ್ಟದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವುದಿಲ್ಲ. ಬದುಕಿನಲ್ಲಿ ನಮಗೆ ಇಷ್ಟೆಲ್ಲ ಸುಖ–ಸಂತೋಷವನ್ನು ಕೊಟ್ಟ ದೇವರನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಸಹಜವಾಗಿಯೇ ಸಂತೋಷದಿಂದ ಅನುಭವಿಸುತ್ತ ಬದುಕಿಬಿಡುತ್ತೇವೆ. 
 
ರಾಜನೊಬ್ಬ ತನ್ನ ಮಂತ್ರಿಗೆ ಒಂದು ವಾಕ್ಯವನ್ನು ಬರೆಯಬೇಕೆಂದೂ, ಆ ವಾಕ್ಯದಿಂದ ಸಂತೋಷವೂ ದುಃಖವೂ ಆಗುವಂತಿರಬೇಕೆಂದೂ, ಅದಾಗದಿದ್ದರೆ ಮಂತ್ರಿಯನ್ನು ಕಠಿಣವಾದ ಶಿಕ್ಷೆಗೆ ಗುರಿಪಡಿಸುತ್ತೇನೆಂದೂ ಹೇಳಿದನಂತೆ. ಆಗ ಚಾಣಾಕ್ಷನಾದ ಮಂತ್ರಿಯೂ, ಇದು ಶಾಶ್ವತವಲ್ಲ! (ಇಟ್ ವಿಲ್ ಛೇಂಜ್) ಅಂತ ಒಂದು ವಾಕ್ಯವನ್ನು ಹೇಳಿದನಂತೆ. ಇದರರ್ಥ ಸಂತೋಷವಾಗಲೀ, ದುಃಖವಾಗಲೀ ಶಾಶ್ವತವಲ್ಲ. ಯಾವುದಾದರೂ ಸರಿಯೇ ಸ್ವಲ್ಪ ಸಮಯದಲ್ಲಿ ಮುಗಿದುಹೋಗುತ್ತದೆ. ಆ ವಾಕ್ಯದ ಅರ್ಥವನ್ನು ತಿಳಿದುಕೊಂಡ ಮಹಾರಾಜನು ಮಂತ್ರಿಗೆ ಚಿನ್ನದ ಹಾರವನ್ನಿತ್ತು ಸನ್ಮಾನಿಸಿದನಂತೆ! 
 
ಈ ಕಥೆಯನ್ನು ಉದಾಹರಣೆಯನ್ನಾಗಿ ಇಟ್ಟುಕೊಂಡು ನಾವು ನಮ್ಮ ದಿನನಿತ್ಯದ ಜೀವನವನ್ನು ಬದುಕಬೇಕು. ಸಮಸ್ಯೆ ಬಂದಾಗ ತಕ್ಷಣಕ್ಕೆ ಗಾಬರಿಗೊಳ್ಳಬಾರದು. ‘ಕಲ್ಲಾಗು ಕಷ್ಟಗಳ ಮಳೆಸುರಿಯೆ...’ ಎನ್ನುವ ಕವಿವಾಣಿಯನ್ನು ನೆನಪಿಸಿಕೊಳ್ಳಬೇಕು. ಕಷ್ಟವೇನೂ ಶಾಶ್ವತವಾಗಿ ಇರುವುದಿಲ್ಲ. ಇದು ಮುಗಿಯುತ್ತಿರುವಂತೆಯೇ ಸಂತೋಷ ಬರಲೇಬೇಕು ಎನ್ನುವುದನ್ನು ತಿಳಿದುಕೊಂಡಿರಬೇಕು. ಹಾಗೆಯೇ ಸಂತೋಷವಾದಾಗ ಉಬ್ಬಿಹೋಗಬಾರದು. ಎರಡೂ ಸಂದರ್ಭಗಳನ್ನು ಸರಿಸಮನಾಗಿ ಸ್ವೀಕರಿಸುವುದನ್ನು ರೂಢಿ ಮಾಡಿಕೊಳ್ಳಬೇಕು.  
 
ನಮಗೆ ನೋವು ಕೊಟ್ಟವರನ್ನು ಅಲ್ಲಿಗೇ ಬಿಟ್ಟು ಮುಂದಕ್ಕೆ ಹೋಗಬೇಕು. ಯಾರೋ ಕೆಲವರು ನಮಗೆ ಕಹಿಯನ್ನು ಕೊಟ್ಟರು ಎಂದು ನಾವು ಯಾರಿಗೂ ಸಿಹಿಯನ್ನು ಕೊಡಬಾರದು ಎಂದು ನಿರ್ಧರಿಸಬಾರದು. ಸಿಹಿಯನ್ನು ಕೊಡುತ್ತಿರುವುದು, ನಮಗಿಂತ ಅಶಕ್ತರಿಗೆ ನಮ್ಮಿಂದಾದ ಸಹಾಯವನ್ನು ಮಾಡುವುದು, ಎಲ್ಲರೊಟ್ಟಿಗೆ ಒಳ್ಳೆಯ ಮಾತನಾಡುತ್ತ, ಸುಮಧುರವಾದ ಮಾನವೀಯ ಸಂಬಂಧವನ್ನು ಇಟ್ಟುಕೊಂಡು, ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಇರುವ ಅವಕಾಶವನ್ನು ಬಿಡಬಾರದು. ನಾವು ರೂಢಿಸಿಕೊಂಡ ಒಳ್ಳೆಯ ಗುಣ ನಮ್ಮ ವ್ಯಕ್ತಿತ್ವದಿಂದ ಜಾರಿ ಹೋಗದಂತೆ ನೋಡಿಕೊಳ್ಳಬೇಕು. 
 
ನಮ್ಮ ಮನಸ್ಸನ್ನು ಸದಾಕಾಲ ನಾವೇ ಗಮನಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದರ ಏರಿಳಿತಗಳನ್ನು ಗಮನಿಸಿಬೇಕು. ಅದರ ಆಲೋಚನೆಗಳನ್ನು, ಬೇಕು-ಬೇಡಗಳನ್ನು ಗಮನಿಸಬೇಕು. ಅದರ ಆರೋಗ್ಯದ ಬಗ್ಗೆ ಗಮನವನ್ನು ಕೊಡಬೇಕು. ಮನಸ್ಸು ಮತ್ತು ಶರೀರದ ಸಂಬಂಧ ಸಮತೋಲನದಿಂದ ಇರುವ ಹಾಗೆ ಇರಬೇಕು.

ನಮಗೆ ಬದುಕಿನಲ್ಲಿ ಇರುವ ಸಂತೋಷಗಳ ಬಗ್ಗೆ, ಅದೃಷ್ಟದ ಬಗ್ಗೆ, ಸ್ನೇಹಿತರ ಬಗ್ಗೆ, ಸಂಬಂಧಿಕರ ಬಗ್ಗೆ, ಮಕ್ಕಳ ಬಗ್ಗೆ ನಾವು ಮನಸ್ಸಿನಾಳದಿಂದ ಹೆಮ್ಮೆ ಪಡುತ್ತಿರಬೇಕು.  ಇದನ್ನು ಅಭ್ಯಾಸದ ಮೂಲಕ ಕಂಡುಕೊಂಡು ಸುಖವಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಬದುಕಿನ ಭವ್ಯತೆಯನ್ನು ಕಂಡು ಅನುಭವಿಸುವ ಅವಕಾಶಗಳನ್ನು ನೋಡುತ್ತ ನಮ್ಮನ್ನು ನಾವೇ ಸಂತೋಷದಿಂದ ಧಾರಾಳವಾಗಿ ಪ್ರಶ್ನಿಸಿಕೊಳ್ಳಬಹುದು: 
‘ನನಗೇ ಹೀಗ್ಯಾಕೆ?!‘ 
 
(ಲೇಖಕ ಆಪ್ತಸಮಾಲೋಚಕ ಮತ್ತು ತರಬೇತುದಾರ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT