ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸದ ಬದುಕಿಗೆ ಸಂತಸದ ಕೆಲಸ

Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಪ್ರೀತಿ ಮತ್ತು ಬದ್ಧತೆ ಯಾವಾಗಲೂ ನಮ್ಮೊಳಗೆ ಶಕ್ತಿ ತುಂಬುತ್ತವೆ; ಇದು ನನ್ನ ಅನುಭವ.  ಅಲ್ಲದೆ, ಈ ಎರಡೂ ಅದ್ಭುತ ಗುಣಗಳು ಅಭದ್ರತೆ ಮತ್ತು ದೌರ್ಬಲ್ಯಗಳಿಂದ ನಮ್ಮನ್ನು ಪ್ರಶಾಂತವಾಗಿ, ನವಿರಾಗಿ ಹೊರತರುತ್ತವೆ. ನಾವು ಅನುಭವಿಸುವ ಶಕ್ತಿಯ ಪ್ರವಾಹ ಅದಮ್ಯವಾಗಿರುತ್ತದೆ.

ನೀವು ಮಾಡಬೇಕಾದ ಕೆಲಸಗಳ ಬಗ್ಗೆ ನಿಮಗೇ ತಿಳಿದಿದೆ. ನೀವು ಅವುಗಳನ್ನು ಪರಿಣತರಂತೆ ಮಾಡಬಲ್ಲಿರಿ ಕೂಡ. ನಿಮ್ಮ ಹೃದಯ ಮತ್ತು ಮನಸ್ಸು, ಕೈ–ಕಾಲುಗಳು ಪರಸ್ಪರ ಸಹಕರಿಸುತ್ತವೆ; ಸೂಕ್ತ ಸಮಯದ ಚೌಕಟ್ಟಿನೊಳಗೆ ಅತಿ ಸಂಕೀರ್ಣ ಕಾರ್ಯಗಳನ್ನು ಆರಾಮವಾಗಿ ಪೂರ್ಣಗೊಳಿಸಲು ಒದಗುತ್ತವೆ. ಮಾತ್ರವಲ್ಲ, ನಿಮಗೆ ಆಯಾಸವಾಗುವುದಿಲ್ಲ; ಉತ್ಸಾಹದಿಂದ ತುಡಿಯುತ್ತಿರುತ್ತೀರಿ; ಸೂರ್ಯೋದಯ, ಸೂರ್ಯಾಸ್ತದ ಬಂಗಾರದ ಬೆಳಗಿನಂತೆ ಕಾಂತಿಯುತವಾಗಿರುವಿರಿ.
 
ನಮ್ಮೆಲ್ಲರಲ್ಲೂ ನಮಗೆ ಹಿತಕರ ಅನುಭವ ನೀಡುವಂಥ ವಿಶೇಷ ಚಟುವಟಿಕೆಯ ಸ್ಫೂರ್ತಿಯೊಂದು ಇರುತ್ತದೆ. ಅದರ ಬಗ್ಗೆ ನಮಗೆ ಅರಿವೂ ಇರುತ್ತದೆ. ಅದನ್ನು ಮಾಡಲೆಂದೇ ನಾವು ಹುಟ್ಟಿರುವುದು ಎಂಬ ಆತ್ಮವಿಶ್ವಾಸವೂ ನಮ್ಮದಾಗಿರುತ್ತದೆ. ಅದು ನಮ್ಮ ಆತ್ಮವನ್ನು ಸ್ಪರ್ಶಿಸುತ್ತದೆ.

ನೀವು ಈ ಚಟುವಟಿಕೆಯನ್ನು ಮಾಡಿದಾಗ ಖೇದ, ಆಯಾಸ,  ದುಃಖ, ಭಯ, ಸಂಶಯಗಳು ಮಾಯವಾಗಿ ಅವು ಸಾಮರಸ್ಯವಾಗಿ ಪರಿವರ್ತಿತವಾಗುತ್ತವೆ. ಆಗ ನಮ್ಮನ್ನು ಸುರಕ್ಷಿತಭಾವ ಆವರಿಸುತ್ತದೆ. ಗೊಂದಲ ಅಥವಾ ನಿರಾಶೆಯಿಂದ ಚಿತ್ತಸ್ವಾಸ್ಥ್ಯ ಕುಂದಲಾರದು. ಈ ಚಟುವಟಿಕೆ ನಮಗಾಗಿಯೇ ಸೃಷ್ಟಿಯಾದದ್ದು. ನಮ್ಮ ವ್ಯಕ್ತಿತ್ವವನ್ನು ನಾವೇ ಉತ್ತಮವಾಗಿಯೂ ಸಂತಸಮಯವಾಗಿಯೂ ರೂಪಿಸಿಕೊಳ್ಳುವ ನಮ್ಮದೇ ದಾರಿ ಇದು. 
 
ನನಗೆ ಸಂತೋಷ ಕೊಡುವ ಚಟುವಟಿಕೆಯೆಂದರೆ ಬರವಣಿಗೆ, ಬರವಣಿಗೆ ಮತ್ತು ಇನ್ನಷ್ಟು ಬರವಣಿಗೆ! ನನ್ನ ಬೆರಳುಗಳ ನಡುವೆ ಲೇಖನಿ ಇರಿಸಿಕೊಳ್ಳುವುದು ನನಗೆ ಪರಿಪೂರ್ಣವಾಗಿ ಒಪ್ಪುತ್ತದೆ ಎಂದೆನಿಸುತ್ತದೆ. ಸಾಲುಗಳನ್ನು ಬರೆದಂತೆ, ನನಗಿದು ಅದ್ಭುತ, ಭಾವಪರವಶದ ಸಮಯ. ಇದೇ ವೇಳೆಗೆ ನನ್ನೊಳಗಿನ ನೋಟಗಳನ್ನು ಪದಗಳನ್ನಾಗಿ ಪರಿವರ್ತಿಸುತ್ತೇನೆ. ಇದು ನಂಬಲು ಅಸಾಧ್ಯವಾದ ಆದರೆ ಆತ್ಮ–ಔನ್ನತ್ಯದ ಅನುಭವ.
 
ನನಗೆ ದೀಪಿಕಾ ಮತ್ತು ಪಂಕಜ್‌ ಎಂಬ ಇಬ್ಬರು ವೈದ್ಯರು ಪರಿಚಯ. ಅವರು ಬೇರೆಯವರ ನೋವುಗಳನ್ನು ಶಮನ ಮಾಡಲೆಂದೇ ಹುಟ್ಟಿದವರು. ಅವರ ರೋಗನಿರ್ಣಯ ಕೌಶಲ, ಅವರು ಸೂಚಿಸುವ ಔಷಧಗಳು ಎಂದಿಗೂ ವಿಫಲವಾಗದಷ್ಟು ನಿಖರ. ಅವರು ಪ್ರತಿ ವ್ಯಕ್ತಿಯಲ್ಲೂ ಪ್ರೀತಿಯ ಭಾವವನ್ನು ಮೂಡಿಸುತ್ತಾರೆ; ಅವರ ಬಗ್ಗೆ ಕಾಳಜಿ ತೋರುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಅವರ ಔಷಧಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆಂದರೆ ಅವರು ಅದಕ್ಕೆ ಪ್ರೀತಿಯನ್ನು ಸುರಿಯುತ್ತಾರೆ ಮತ್ತು ಅದಕ್ಕೆ ಬದ್ಧತೆ ತುಂಬುತ್ತಾರೆ.
 
ಲಾರಿ ಅದ್ಭುತ ಗಾಲ್ಫರ್‌. ನಿಜಕ್ಕೂ ಸ್ಫೂರ್ತಿದಾಯಕ ವ್ಯಕ್ತಿ. ಆತ ತನ್ನ ಆರಂಭದ ವೃತ್ತಿಬದುಕಿನಲ್ಲಿ ಉತ್ತುಂಗದಲ್ಲಿದ್ದಾಗ ಗಾಲ್ಫ್‌ ಸ್ಕಾಲರ್‌ಶಿಪ್‌ ಪಡೆದು ಹೊಸ ಮಿನುಗುವ ಪ್ರತಿಭೆಯಾಗಿ ಮತ್ತು ಭರವಸೆಯ ತಾರೆಯಾಗಿ ಹೊರಹೊಮ್ಮುವತ್ತ ಮುನ್ನುಗ್ಗುತ್ತಿದ್ದ. ಆದರೆ ಅಪಘಾತವೊಂದರಲ್ಲಿ ಸಿಲುಕಿಕೊಂಡ. ಆತನ ಎಡಗೈ ರಟ್ಟೆ ಕತ್ತರಿಸಿಹೋಗಿತ್ತು. ಆದರೂ, ಆತ ತನ್ನೊಳಗೆ ಹೇಳಿಕೊಂಡ, ‘ನಾನು ಗಾಲ್ಫ್ ಆಡುವುದನ್ನು ನಿಲ್ಲಿಸುವುದಿಲ್ಲ’.
 
ಒಂದು ದಿನ ಆತ ಆಸ್ಪತ್ರೆಯಿಂದ ಹೊರ ನಡೆದು ಗಾಲ್ಫ್‌ನ ಹಸಿರು ಅಂಗಳದಲ್ಲಿ ನಿಂತ. ತನ್ನ ಬಲಗೈ ಬಳಸಿ ಚೆಂಡನ್ನು ಇರಿಸಿದ. ನಿಧಾನವಾಗಿ ಗಾಲ್ಫ್‌ ದಂಡವನ್ನು ಹಿಂದಕ್ಕೆ ಎಳೆದು ನೆಲದತ್ತ ಬೀಸಿದ. ಚೆಂಡಿನೊಂದಿಗೆ ದಾಂಡು ಸರಿಯಾಗಿ ಸಂಪರ್ಕಿಸಿತು. ಗಾಲಿಯಲ್ಲಿ ತೇಲಿದ ಚೆಂಡು ಹಸಿರು ಮೈದಾನದ ಒಂದೆಡೆ ಬಿತ್ತು. ಆತ ಎನ್ನ ಎರಡೂ ಕೈ ಮತ್ತು ರಟ್ಟೆಗಳನ್ನು ಹೊಂದಿದ್ದರೆ ಎಷ್ಟು ದೂರದಲ್ಲಿ ಬೀಳುತ್ತಿತ್ತೋ ಹಾಗೆಯೇ ಚಿಮ್ಮಿತ್ತು; ಅದು ಸುಲಭವಾಗಿಯೇ ಆಗಿತ್ತು.
 
ಆತ ಯಾವುದರ ಸಲುವಾಗಿ ಹುಟ್ಟಿದ್ದನೋ ಅದೇ ಚಟುವಟಿಕೆಗೆ ಮರಳಿದ. ಬಳಿಕ, ಕೃತಕ ರಟ್ಟೆಯನ್ನು ಜೋಡಿಸಿಕೊಂಡು ಆಡಿದ. ಪ್ರತಿ ವರ್ಷ ತನ್ನ ದಾಖಲೆಯನ್ನು ಉತ್ತಮಪಡಿಸಿಕೊಂಡ. ನಾವು ಅತಿಯಾಗಿ ಪ್ರೀತಿಸುವ, ನಮ್ಮ ಆಯ್ಕೆಯ ಚಟುವಟಿಕೆ ಎಂದಿಗೂ ನಮಗೆ ಸೂಕ್ತವಾಗಿಯೇ ಇರುತ್ತದೆ. ಅದರತ್ತ ಹೊರಳಲು ನಾವು ಎಂದೂ ಭರವಸೆಯನ್ನು ಕಳೆದುಕೊಳ್ಳಬಾರದು; ತಡ ಮಾಡಲೂಬಾರದು. 
 
ಅತಿಮಾನುಷ ಶಕ್ತಿಯಿಂದಾಗಿ ಈ ರೀತಿ ಕೆಲಸ ಮಾಡಲು ಸಾಧ್ಯ ಎಂದು ಜನರು ನಂಬುವಷ್ಟು ಅತ್ಯಂತ ಸಂಕೀರ್ಣವಾಗಿ ಮತ್ತು ಅಷ್ಟೇ ಸೊಗಸಾಗಿ ಮರಗೆಲಸ ಮಾಡುತ್ತಿದ್ದ ಚೀನಾದ ಮಹಾನ್‌ ಬಡಗಿ ಚಿಯಾಂಗ್‌ ಕುರಿತು ನೀವು ಕೇಳಿರಬಹುದು. ಒಮ್ಮೆ ಲು ರಾಜ್ಯದ ರಾಜಕುಮಾರ ಆತನನ್ನು ಕೇಳಿದ: ‘ನಿನ್ನ ಕಲೆಯ ರಹಸ್ಯವೇನು?’ ‘ಸ್ವಾಮಿಗಳೇ, ಯಾವ ರಹಸ್ಯವೂ ಇಲ್ಲ.
 
ನಾನೊಂದು ವಸ್ತುವನ್ನು ತಯಾರಿಸಲು ಮುಂದಾದಾಗ, ಮೊದಲು ನನ್ನ ಮನಸನ್ನು ಸಂಪೂರ್ಣ ಸ್ಥಿರಗೊಳಿಸುತ್ತೇನೆ. ಮೂರು ದಿನ ಇದೇ ಸ್ಥಿತಿಯಲ್ಲಿ ಯಾವ ಖ್ಯಾತಿಯೂ ನನ್ನನ್ನು ಆವರಿಸದಂತೆ ಅಸಡ್ಡೆ ತೋರುತ್ತೇನೆ. ಏಳು ದಿನಗಳಲ್ಲಿ ನಾನು ನನ್ನ ದೇಹದ ಕುರಿತು ತಿಳಿದುಕೊಳ್ಳುತ್ತೇನೆ. ಯಾವುದೇ ಸ್ವಹಿತಾಸಕ್ತಿ ಇಲ್ಲದೆ, ನನ್ನ ಕೌಶಲವು ಏಕಾಗ್ರತೆ ಮತ್ತು ಶುದ್ಧಗೊಳ್ಳುತ್ತದೆ. ನಾನು ಕಾಡನ್ನು ಹೊಕ್ಕುತ್ತೇನೆ.
 
ಸೂಕ್ತವಾದ ಮರ ಕಾಣಿಸಿದಾಗ, ಅಗತ್ಯವಾದ ವಸ್ತು ತಯಾರಿಸಲು ಬೇಕಾದದ್ದು ಅದರಲ್ಲಿದೆ ಎಂಬುದು ಗೊತ್ತಾಗುತ್ತದೆ. ನಾನು ಅದರಲ್ಲಿ ಸಂಪೂರ್ಣಗೊಂಡ ವಸ್ತುವನ್ನು ನೋಡುತ್ತೇನೆ. ಬಳಿಕ ಕೆಲಸ ಪ್ರಾರಂಭಿಸುತ್ತೇನೆ. ವಸ್ತು ಸಿದ್ಧವಾಗುತ್ತದೆ’.
 
ಎಂತಹ ಬದ್ಧತೆ, ಎಂತಹ ಪ್ರೀತಿ! ಉಳಿದವರಿಂದ ಇಂಥದ್ದು ಏಕೆ ಸಾಧ್ಯವಾಗುವುದಿಲ್ಲ? ಎಂದರೆ, ಅವನ ಮನಸು ಪರಿಶುದ್ಧವಾಗಿದೆ, ಸ್ಪಷ್ಟವಾಗಿದೆ. ಅವನು ಅದರಲ್ಲಿ ಪರಿಶುದ್ಧತೆಯನ್ನು ತುಂಬುತ್ತಾನೆ. ಏಕೆಂದರೆ ಬಡಗಿತನ ಎನ್ನುವುದು ಆತನಿಗೆ ಖುಷಿ ಕೊಡುವ ಚಟುವಟಿಕೆ. ನೀವು ನಿಮ್ಮ ಚಟುವಟಿಕೆಯನ್ನು ಉಲ್ಲಾಸದಾಯಕವಾಗಿ ಮಾಡಿದರೆ, ಅದರಲ್ಲಿ ಯಾವಾಗಲೂ ಯಶಸ್ಸನ್ನು ಪಡೆಯಲು ಸಾಧ್ಯ. ಒಂದು ವೇಳೆ ಯಶಸ್ಸು ಸಿಗದಿದ್ದರೂ ವಿಫಲರಂತೂ ಆಗುವುದಿಲ್ಲ. 
 
ನೀವು ನಿಮ್ಮ ಇಷ್ಟದ ಚಟುವಟಿಕೆಯಲ್ಲಿ ಮುಳುಗಿಹೋದರೆ, ನೀವು ನಿರ್ವಾಣವನ್ನು ಸ್ಪರ್ಶಿಸಿದಂತೆ. ಅದು ಹೇಗೆ? ಸಂತೋಷದಾಯಕ ಚಟುವಟಿಕೆಯು ನಿಮ್ಮಲ್ಲಿನ ವಿಶೇಷ ಅಲೆಯಂತೆ. ಕಡಲಿಗೆ ಅಸಂಖ್ಯಾತ ಅಲೆಗಳಿರುತ್ತವೆ; ಕೆಲವು ಸಣ್ಣವು. ಕೆಲವು ದೊಡ್ಡವು. ಕೆಲವು ಸೂರ್ಯನ ಬಂಗಾರದ ಕಾಂತಿಯನ್ನು ಹಿಡಿಯಲು ಎತ್ತರಕ್ಕೆ ಚಿಮ್ಮುತ್ತವೆ; ತಮ್ಮನ್ನೇ ಬಂಗಾರವನ್ನಾಗಿಸಿಕೊಳ್ಳುತ್ತವೆ. ನೀವು ಅಲೆಯನ್ನು ಸ್ಪರ್ಶಿಸಿದರೆ, ಇನ್ನೊಂದನ್ನೂ ಸ್ಪರ್ಶಿಸಿದಂತೆ. ಅದೇ ಕಡಲು.

ನಿಮ್ಮ ಸಂತೋಷದಾಯಕ ಚಟುವಟಿಕೆಯ ಅಲೆಯಲ್ಲಿದ್ದರೆ, ನೀವು ಶಾಶ್ವತತೆಯ ವಿಶಾಲ ಕಡಲನ್ನು ಸ್ಪರ್ಶಿಸುತ್ತೀರಿ. ಶಾಶ್ವತತೆಯ ಹಿರಿದಾದ ಅರಿವಾದ ನಿರ್ವಾಣವನ್ನು ಸ್ಪರ್ಶಿಸುತ್ತೀರಿ. ‘ನಾನು ಬಂದೆ. ನಾನು ನೆಲೆಸಿದ್ದೇನೆ. ಇಲ್ಲಿ ನಾನು ಸುಖವಾಗಿದ್ದೇನೆ. ನಾನು ಮುಕ್ತ. ಅಂತಿಮವಾಗಿ ನಾನು ಇರುವೆ’ – ಎನ್ನುವುದು ಇದರ ಪ್ರಧಾನ ಮಂತ್ರ. ಸತ್ಯವೆಂದರೆ; ನೀವು ಈಗಾಗಲೇ ನಿರ್ವಾಣದಲ್ಲಿದ್ದೀರಿ; ನಿಮಗೆ ಅದು ತಿಳಿದಿಲ್ಲವಷ್ಟೆ. ಸಂತೋಷದಾಯಕ ಚಟುವಟಿಕೆಯೇ ನಿಮ್ಮ ನಿರ್ವಾಣದ ಕೀಲಿಕೈ.
 
ನೀವು ನಿಮ್ಮ ಸಂತೋಷದ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದಾಗ, ನಿರ್ವಾಣದಲ್ಲಿ ನಿಮಗೆ ಯಾವ ಬಳಲಿಕೆಯೂ ಅರಿವಾಗುವುದಿಲ್ಲ. ಅಲ್ಲಿ ಅಳತೆಗೂ ನಿಲುಕದ ಶಾಂತಿ, ಸಿಹಿಯಾದ ಒಳ್ಳೆತನ, ತೀವ್ರ ಆನಂದ, ಆಳವಾದ ಸಂತೃಪ್ತಿ, ತಣ್ಣಗಿನ ಸಾಮರಸ್ಯ ಸಿಗುತ್ತದೆ. ಸಮಯ ಉರುಳುತ್ತದೆ. ಭಯ ತೊಲಗುತ್ತದೆ. ಅನುಮಾನ, ಕೊರತೆ, ಅಭದ್ರತೆ, ದುಃಖ, ಹತಾಶೆಗಳು ದೂರ ಸರಿಯುತ್ತವೆ.
 
ಅರೇ! ನಿಮ್ಮ ಸ್ನಾಯುಗಳು ಮತ್ತು ಮನಸ್ಸಿನಲ್ಲಿ ಶಕ್ತಿ, ಚೈತನ್ಯ ತುಂಬಿದಂತೆ ಅನಿಸುತ್ತದೆಯಲ್ಲವೇ? ಇದು ಬದುಕುವುದಕ್ಕಾಗಿ ಸಂತೋಷದಿಂದ ಇರುವುದು. ಇತರರ ಅಮುಖ್ಯ ಹುಡುಕಾಟಗಳಲ್ಲಿ ನಿಮಗೆ ಖುಷಿ ಕೊಡುವ ಚಟುವಟಿಕೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮೊಳಗೆ ಅಲೆ ಇದೆ. ಅದನ್ನು ಸ್ಪರ್ಶಿಸಿ. ಅದರ ಮೂಲಕ ನಿರ್ವಾಣವನ್ನು ಸ್ಪರ್ಶಿಸಿ. 
ಭರತ್ ಮತ್ತು ಶಾಲನ್ ಸವೂರ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT