ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಐಎಸ್ ಖೊರಾಸನ್?

Last Updated 14 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಭಯೋತ್ಪಾದನಾ ಸಂಘಟನೆ ಭಾರತವನ್ನು ಆಕ್ರಮಿಸಲು ಸಾಧ್ಯವೇ’ ಎಂಬ ಪ್ರಶ್ನೆ ಮೂರು ವರ್ಷಗಳಿಂದ ಕೇಳಿಬರುತ್ತಿತ್ತು. ‘ಇದು ಅಸಂಭವ’ ಎಂಬ ಉತ್ತರವನ್ನು ದೇಶದ ಭದ್ರತಾ ತಜ್ಞರು ನೀಡುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ಭೋಪಾಲ್‌–ಉಜ್ಜಯಿನಿ ರೈಲಿನಲ್ಲಿ ಸಂಭವಿಸಿದ ಸ್ಫೋಟ, ಐಎಸ್‌ನ ‘ಖೊರಾಸನ್‌ ಗುಂಪು’ ಭಾರತದ ನೆಲೆಯಲ್ಲಿ ನಡೆಸಿದ ಮೊದಲ ದಾಳಿ ಎಂದು ಪರಿಗಣಿಸಲಾಗಿದೆ. ಹೀಗಿರುವಾಗ ಐಎಸ್‌ ಭಾರತದಲ್ಲಿ ನೆಲೆಗೊಂಡಿರಬಹುದೇ ಎಂಬ ಕುತೂಹಲ, ಆತಂಕ ಜನಸಾಮಾನ್ಯರಲ್ಲಿ ಮೂಡಿದೆ. ಇಂತಹ ಅಂಶಗಳನ್ನು ವಿವರಿಸಲು ಹಾಗೂ ಘಟನೆಯ ಗಾಂಭೀರ್ಯವನ್ನು ರಾಷ್ಟ್ರದ ಭದ್ರತಾ ದೃಷ್ಟಿಕೋನದಿಂದ ಅರಿಯಲು ಈ ಲೇಖನವು ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತದೆ. ಮೊದಲನೆಯದಾಗಿ, ಐಎಸ್‌ನ ‘ಖೊರಾಸನ್ ಗುಂಪು’ ಎಂದರೇನು,  ಭಾರತದ ಮೇಲೆ ಅದರ ಪರಿಣಾಮವೇನು? ಎರಡನೆಯ ಪ್ರಶ್ನೆ, ಈ ಸ್ಫೋಟಗಳ ಹಿನ್ನೆಲೆಯಲ್ಲಿ ರಾಷ್ಟ್ರದ ಭದ್ರತಾ ಸಂಸ್ಥೆಗಳು ಅರಿತುಕೊಳ್ಳಬೇಕಾದ ವಿಷಯಗಳೇನು?

2014ರಲ್ಲಿ ಪಾಕಿಸ್ತಾನದಲ್ಲಿ ನಡೆದ ರಹಸ್ಯ ಸಭೆಯಲ್ಲಿ, ಪಾಕಿಸ್ತಾನದ ತೆಹ್ರೀಕ್-ಎ- ತಾಲಿಬಾನ್ ಎಂಬ ಭಯೋತ್ಪಾದಕ ಸಂಘಟನೆಯ ಕೆಲವರು ಐಎಸ್‌ನ ಕೆಲ ಮುಖಂಡರೊಂದಿಗೆ ಚರ್ಚಿಸಿ ‘ವಿಲಾಯತ್ ಖೊರಾಸನ್’ (ಖೊರಾಸನ್‌ ಪ್ರಾಂತ್ಯ) ಎಂಬ ಪ್ರದೇಶವನ್ನು ಗುರುತಿಸಿದರು. ಇತಿಹಾಸದಲ್ಲಿ ಈ ಪ್ರದೇಶ ಇಂದಿನ ಆಫ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಇರಾನಿನ ಕೆಲ ಭಾಗಗಳಿಗೆ ಸೇರಿತ್ತು. ಇಸ್ಲಾಂ ಆಧಾರಿತ ಆಡಳಿತ ತರುವುದಕ್ಕಾಗಿ ‘ಖಲೀಫರ ರಾಜ್ಯ’ ಸ್ಥಾಪಿಸಬೇಕೆಂದು ಪಣ ತೊಟ್ಟಿರುವ ಐಎಸ್‌ ತನ್ನ ಹತೋಟಿಯಲ್ಲಿದ್ದ ಇರಾಕ್, ಸಿರಿಯಾದ ಬಹುತೇಕ ಪ್ರದೇಶಗಳನ್ನು  ಪಶ್ಚಿಮ ದೇಶಗಳ ವಿರುದ್ಧದ ಹೋರಾಟದಲ್ಲಿ  ಕಳೆದುಕೊಂಡಿದೆ. ಇದರಿಂದಾಗಿ ಅದು ಆಫ್ಘಾನಿಸ್ತಾನವನ್ನು ತನ್ನ ಮುಂದಿನ ಊರುಗೋಲಾಗಿ ಬಳಸಿಕೊಳ್ಳಬಹುದೆಂಬುದು ತಜ್ಞರ ಅನುಮಾನ. ಪ್ರಾದೇಶಿಕವಾಗಿ ಇದು ಆಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಸೀಮಿತವಾಗಿದ್ದರೂ, ಭಯೋತ್ಪಾದಕ ಕಾರ್ಯಾಚರಣೆಗೆ ಖೊರಾಸನ್‌ ಯೋಜನೆಯಲ್ಲಿ ಭಾರತವನ್ನೂ ಸೇರಿಸಿದೆ. ಭಾರತದ ಮುಸ್ಲಿಂ ಸಮುದಾಯದಿಂದ ಕಾರ್ಯಕರ್ತರನ್ನು ಭರ್ತಿ ಮಾಡಲು ಐಎಸ್‌ ಆನ್‌ಲೈನ್‌ ವೇದಿಕೆ ಬಳಸುತ್ತಿದೆ. ಕೆಲ ಪ್ರಸಂಗಗಳಲ್ಲಿ ನೇರ ಸಂಪರ್ಕ ಜಾಲ ಹೊಂದಿತ್ತು. ಇದರ ಪರಿಣಾಮ ಎಂದರೆ, ನಾಪತ್ತೆಯಾಗಿದ್ದ ಕೇರಳದ ಅನೇಕ ಯುವಕರು ಆಫ್ಘಾನಿಸ್ತಾನ
ತಲುಪಿದ್ದಾರೆ. ಗುಪ್ತಚರ ಇಲಾಖೆಯೂ ಇದನ್ನು ದೃಢಪಡಿಸಿದೆ.

ಇದೆಲ್ಲದರ ನಡುವೆಯೂ, ‘ಖೊರಾಸನ್ ಗುಂಪು’ ಭಾರತದಲ್ಲಿ ಸ್ಥಾಪನೆಯಾಗಿದೆ ಎಂದು ಘೋಷಿಸಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ, ಶಂಕಿತ ದುಷ್ಕರ್ಮಿಗಳು ಭಾರತೀಯರೇ ಆಗಿದ್ದರೂ, ಐಎಸ್‌ನೊಂದಿಗೆ ನೇರ ಸಂಬಂಧ ಹೊಂದಿರಲಿಲ್ಲ. ಸ್ಫೋಟದಲ್ಲಿ ಉಪಯೋಗಿಸಲಾದ ಬಾಂಬ್ ತಯಾರಿಕೆಯಿಂದ ಹಿಡಿದು ಕಾರ್ಯಾಚರಣೆಯ ಅನುಷ್ಠಾನದವರೆಗಿನ ಎಲ್ಲಾ ಹೊಣೆಯನ್ನು ಇವರೇ ಹೊತ್ತಿದ್ದರು. ಸ್ಫೋಟದ ನಂತರವೂ ಐಎಸ್‌ ಯಾವುದೇ ವಿಡಿಯೊ ಅಥವಾ ಘೋಷಣೆ ಬಿಡುಗಡೆ ಮಾಡಿಲ್ಲ. ಸಾಮಾನ್ಯವಾಗಿ, ಇಂತಹ ಘಟನೆ ಸಂಭವಿಸಿದಾಗ ದಾಳಿಯ ಹೊಣೆಗಾರಿಕೆಯನ್ನು ಹೊತ್ತು ಮಾಧ್ಯಮಗಳಿಗೆ ಹೇಳಿಕೆ ರವಾನಿಸುವುದು  ಐಎಸ್‌ನ ಕಾರ್ಯವಿಧಾನ. ಅಲ್ಲದೆ, ಭಾರತೀಯ ಮುಸ್ಲಿಮರಲ್ಲಿ ಐಎಸ್‌ ಸಿದ್ಧಾಂತದತ್ತ ಆಕರ್ಷಣೆ ಕಂಡುಬಂದಿಲ್ಲ. ಕೋಮು ಹಿಂಸೆ, ರಾಜಕೀಯ ಹಾಗೂ ಸಾಮಾಜಿಕ ತೊಂದರೆಗಳಿಗೆ ಸಿಲುಕಿದ ಭಾರತೀಯ ಮುಸ್ಲಿಮರಲ್ಲಿ ತೀವ್ರಗಾಮಿ ಕಿಚ್ಚು ಹಚ್ಚಲು ಐಎಸ್‌ಗೆ ಸಾಧ್ಯವಾಗಿಲ್ಲ. ಐಎಸ್‌ ಪರ ಹೋರಾಡಲು ಇರಾಕ್,  ಸಿರಿಯಾಗೆ ಹೋದ ಭಾರತೀಯರ ಅನುಭವಗಳೂ ಹೊಸ ಸೇರ್ಪಡೆಯನ್ನು ಪ್ರೇರೇಪಿಸುವಂತಿಲ್ಲ. ಮೇಲಾಗಿ, ಐಎಸ್‌ ಸೇರಲು ಯತ್ನಿಸಿದ ಹಲವರು ಭಾರತೀಯ ಭದ್ರತಾ ಸಿಬ್ಬಂದಿಯ ಎಚ್ಚರಿಕೆ ನಡೆಯಿಂದ  ಬಂಧನಕ್ಕೊಳಗಾಗಿದ್ದಾರೆ.

ಈ ವಿದ್ಯಮಾನ ವಿಶ್ಲೇಷಿಸುವಾಗ ನಮ್ಮ ಗಮನ ನಮ್ಮ ಭದ್ರತಾ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳ ಕಡೆಯೂ ಹರಿಯಬೇಕಾಗುತ್ತದೆ. 9/11 ದಾಳಿಯ ನಂತರ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಪ್ರಪಂಚದ ಹಲವಾರು ಬಲಿಷ್ಠ ದೇಶಗಳು ಒಟ್ಟಾಗಿ ಕಾರ್ಯಾಚರಣೆ ನಡೆಸಿದವು. ಪರಿಣಾಮವಾಗಿ, ವಿಮಾನಗಳನ್ನು ಭಯೋತ್ಪಾದಕ ಕೃತ್ಯಕ್ಕೆ ಬಳಸುವ ಸಂಖ್ಯೆ ಕಡಿಮೆಯಾಯಿತು. ಭಾರತದಲ್ಲಿ 1996ರಿಂದ ಭಯೋತ್ಪಾದಕರ ದಾಳಿಗೆ ರೈಲುಗಳು ಪ್ರಮುಖ ಗುರಿಯಾಗಿವೆ. ರೈಲು ಬಾಂಬ್ ಸ್ಫೋಟಕ್ಕೆ ನೂರಾರು ಮಂದಿ ಬಲಿಯಾಗಿದ್ದರೂ ರೈಲ್ವೆ ಸುರಕ್ಷತೆ ಇನ್ನೂ ಬಲವಾಗಿಲ್ಲ. ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಿರ್ಣಾಯಕವಾಗಿರುವ ಮೂಲ ಸೌಕರ್ಯಗಳ ರಕ್ಷಣೆಯು ಜಗತ್ತಿನ ಮುಖ್ಯ ಗುರಿಯಾಗಿದೆ. ಈ ವಿಷಯದ ಮಹತ್ವವನ್ನು ಅರಿತು ಭಾರತವು ರೈಲ್ವೆಯಂತಹ ಮೂಲಸೌಕರ್ಯದ ಸಂರಕ್ಷಣೆಗೆ ಸೂಕ್ತ ಭದ್ರತಾ ವ್ಯವಸ್ಥೆ ಅಳವಡಿಸಿಕೊಂಡಲ್ಲಿ ಗುಪ್ತಚರ ಸಂಸ್ಥೆಗಳ ಮೇಲಿರುವ ಒತ್ತಡವನ್ನು ತಗ್ಗಿಸಬಹುದು.

ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆಯ ವೇಳೆಯಲ್ಲಿ ದೊರೆತ ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸರು ಎಚ್ಚರಿಕೆ ವಹಿಸಬೇಕಾಗಿದೆ. ಆನ್‌ಲೈನ್‌ ವೇದಿಕೆಯ ಮೂಲಕ ಪ್ರೇರಿತಗೊಂಡ ಯುವಕರಿಗೆ ಬಂದೂಕುಗಳು ಹೇಗೆ ಸಿಕ್ಕಿದವು? ಹಿಂದೆ ನಡೆದ ಅನೇಕ ಭಯೋತ್ಪಾದಕ ಕೃತ್ಯಗಳಲ್ಲಿ ಪಾಕಿಸ್ತಾನದ ಬೆಂಬಲ ಸ್ಪಷ್ಟವಾಗಿದ್ದರಿಂದ, ದುಷ್ಕರ್ಮಿಗಳು ಶಸ್ತ್ರಾಸ್ತ್ರ ಪಡೆದುಕೊಂಡಿದ್ದುದು ಆಶ್ಚರ್ಯದ ಸಂಗತಿಯಾಗಿರಲಿಲ್ಲ. ಆದರೆ ಈಗಿನದು ಹಾಗಲ್ಲ. ಹೊರದೇಶದ ನೆರವಿಲ್ಲದೆ ಉಗ್ರರು ತಮ್ಮ ಸಾಮರ್ಥ್ಯದಿಂದಲೇ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು. ಈ ವಿಷಯದಲ್ಲಿ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಅಸಾಮರ್ಥ್ಯ ಮೇಲ್ನೋಟಕ್ಕೆ ಎದ್ದುಕಾಣುತ್ತದೆ.

ಭವಿಷ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯದಂತೆ ಸಂಪೂರ್ಣವಾಗಿ ತಡೆಗಟ್ಟುವುದು ಕಠಿಣ ಕಾರ್ಯ. ಭಾರತದಲ್ಲಿ ಗುಪ್ತಚರ ಸಂಸ್ಥೆಗಳು ಸಿಬ್ಬಂದಿ ಕೊರತೆಯಿಂದ ನರಳುತ್ತಿವೆ. ಅನ್ಯ ದೇಶಗಳ ಗೂಢಚಾರಿಕೆಯನ್ನು ಬಹಿರಂಗಪಡಿಸುವುದು ಸೇರಿದಂತೆ ನಾನಾ ಜವಾಬ್ದಾರಿಗಳು  ಇರುವುದರಿಂದ ಅವುಗಳ ಮೇಲೆ ಭಾರಿ  ಒತ್ತಡ ಬೀಳುತ್ತಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಗುಪ್ತಚರ ಸಂಸ್ಥೆಗಳು ಹಾಗೂ ಪೊಲೀಸರಿಗೆ ಸಾಮಾನ್ಯ ಪ್ರಜೆಗಳ ನೆರವು ಅತ್ಯಗತ್ಯ. ಭದ್ರತಾ ತಜ್ಞರು ಇದನ್ನು ‘ಕಮ್ಯುನಿಟಿ ಪೊಲೀಸಿಂಗ್’ ಎಂದು ಕರೆಯುತ್ತಾರೆ. ಅನುಮಾನಾಸ್ಪದ ನಡವಳಿಕೆಗಳು ಕಂಡುಬಂದಲ್ಲಿ ಪೊಲೀಸರ ಗಮನಕ್ಕೆ ತರುವ ಹೊಣೆಯನ್ನು ಪ್ರಜೆಗಳು ಹೊರಬೇಕು.  ಮುಖ್ಯವಾಗಿ ಮುಸ್ಲಿಂ ಸಮುದಾಯದ ನೆರವು ಭದ್ರತಾ ಸಿಬ್ಬಂದಿಗೆ ಅನಿವಾರ್ಯ. ಐಎಸ್‌ ಹೇಳುವ ಇಸ್ಲಾಂನ ವಿವರಣೆಯನ್ನು ತಿರಸ್ಕರಿಸಿ ಯುವಕರನ್ನು ಸರಿದಾರಿಯಲ್ಲಿ ನಡೆಸುವುದಲ್ಲದೆ, ಉಗ್ರಗಾಮಿ ಸಿದ್ಧಾಂತವನ್ನು ಅಳವಡಿಸಿಕೊಂಡವರ ಬಗ್ಗೆ ಮಾಹಿತಿ ನೀಡುವವರೆಗೆ ಈ ಸಮುದಾಯದ ನೆರವು ಅಗತ್ಯವಾಗಿದೆ.

ಐಎಸ್‌ ಖೊರಾಸನ್ ಭಾರತದಲ್ಲಿ ಇನ್ನೂ ಅಂಬೆಗಾಲು ಇಡುತ್ತಿದೆ. ಭಾರತದ ಲೌಕಿಕ ಹಾಗೂ ಸಾಮಾಜಿಕ ವ್ಯವಸ್ಥೆ, ಭದ್ರತಾ ಸಂಸ್ಥೆಗಳ ಕಟ್ಟೆಚ್ಚರದ ಕಾರಣ ಅದು ನಮ್ಮ ದೇಶದಲ್ಲಿ ಬೆಳೆಯುವುದು ಕಷ್ಟ. ಆದರೆ ಅದು ಅಸಾಧ್ಯವೂ ಅಲ್ಲ. ಆದ್ದರಿಂದ ಐಎಸ್‌ಪ್ರೇರಿತ ಭಯೋತ್ಪಾದನೆ ತಡೆಗಟ್ಟಲು ಒಂದು ನಿರ್ದಿಷ್ಟವಾದ ಉಪಾಯವಿಲ್ಲ. ಬದಲಾಗಿ, ಭದ್ರತಾ ಸಿಬ್ಬಂದಿ ಹಾಗೂ ನಾಗರಿಕ ಸಮಾಜ ಕೈಜೋಡಿಸಬೇಕು. ಆಗ ಮಾತ್ರ ಐಎಸ್‌ ಪ್ರಭಾವವನ್ನು ಮುರಿಯಬಹುದು.

ಲೇಖಕ: ಸಂಶೋಧನಾ ವಿದ್ಯಾರ್ಥಿ, ಅಂತರರಾಷ್ಟ್ರೀಯ ಅಧ್ಯಯನ ಶಾಲೆ, ಜೆಎನ್‌ಯು, ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT