ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗುತ್ತಿರುವ ತೋಟಗಳಿಗೆ ಟ್ಯಾಂಕರ್ ನೀರು

Last Updated 15 ಮಾರ್ಚ್ 2017, 4:42 IST
ಅಕ್ಷರ ಗಾತ್ರ

ಹೊನ್ನಾಳಿ: ರಾಜ್ಯದಲ್ಲಿ ಎರಡು ಮೂರು ವರ್ಷಗಳಿಂದ ಭೀಕರ ಬರಗಾಲ ಆವರಿಸಿದೆ. ಬರಗಾಲದಿಂದಾಗಿ ಕೊಳವೆ ಬಾವಿಗಳು, ಕೆರೆ ಕಟ್ಟೆಗಳು ನೀರಿಲ್ಲದೇ ಬತ್ತಿ ಹೋಗಿದ್ದು, ತಾಲ್ಲೂಕಿನ ರೈತರು ತೋಟಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಪ್ರಸ್ತುತ ತುಂಗಾ ಎಡನಾಲೆ ಹಾಗೂ ಬಲನಾಲೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ತೋಟಗಾರಿಕೆ ಬೆಳೆ ಬೆಳೆಗಾರರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸುಮಾರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಅಡಿಕೆ, ತೆಂಗಿನ ಮರಗಳು ಬಿಸಿಲಿನ ತಾಪಕ್ಕೆ ಒಣಗುವ ಹಂತದಲ್ಲಿವೆ. ಮಳೆಗಾಲದವರೆಗೂ ಅಡಿಕೆ ಹಾಗೂ ತೆಂಗಿನ ಮರಗಳನ್ನು ಉಳಿಸಿಕೊಳ್ಳುವ ಧಾವಂತದಲ್ಲಿ ರೈತರು ನೀರಿನ ಟ್ಯಾಂಕರ್ ಗಳ ಮೊರೆ ಹೋಗಿದ್ದಾರೆ.

ಕೆಲವು ರೈತರು ನೀರಿನ ಪೂರೈಕೆಗಾಗಿ ಹೊಸ ನೀರಿನ ಟ್ಯಾಂಕರ್ ಗಳನ್ನೇ ಖರೀದಿಸಿದ್ದಾರೆ. ಕೆಲವರು ಸಾವಿರಾರು ರೂಪಾಯಿ ಬಾಡಿಗೆತೆತ್ತು ಟ್ಯಾಂಕರ್‌ ಮೂಲಕ ನದಿಯಿಂದ ನೀರು ತುಂಬಿಸಿಕೊಂಡು ತೋಟಕ್ಕೆ ಹಾಯಿಸುತ್ತಿದ್ದಾರೆ.

ತಾಲ್ಲೂಕಿನ ಅರಕೆರೆ, ತರಗನಹಳ್ಳಿ, ಸಿಂಗಟಗೆರೆ, ಮಾಸಡಿ, ನರಸಗೊಂಡನ ಹಳ್ಳಿ ಭಾಗದ 40 ರಿಂದ 50 ರೈತರು ಅಡಿಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್‌ನಲ್ಲಿ ನೀರು ಸಾಗಿಸುತ್ತಿದ್ದಾರೆ.

ದಿನವೊಂದಕ್ಕೆ 6ರಿಂದ 8 ಟ್ಯಾಂಕರ್ ನೀರು ಹಾಯಿಸಿ ಅರ್ಧ ಎಕರೆಯಷ್ಟು ತೋಟಗಳಿಗೆ ನೀರು ಪೂರೈಸುತ್ತಿದ್ದೇವೆ. ಮಳೆಗಾಲದವರೆಗೆ ಗಿಡಗಳನ್ನು ಬದುಕಿಸಿಕೊಂಡರೆ ಸಾಕು ಎನ್ನುತ್ತಾರೆ ರೈತರು.

ಅರಕೆರೆ ಶಾಂತರಾಜ ಎಂಬುವರು  ಎರಡು ಎಕರೆ ಬಾಳೆ ಬೆಳೆದಿದ್ದು, ಕಟಾವಿಗೆ ಬಂದಿದೆ. ಒಳ್ಳೆಯ ಬೆಲೆ ಕೂಡಾ ಇದೆ. ಈ ಹಂತದಲ್ಲಿ ನೀರಿಲ್ಲ. ಹಾಗಾಗಿ ಅವರು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.

ಕಳೆದ ವರ್ಷ ಇವರ ಬಾಳೆ ತೋಟ ಗಾಳಿ ಮಳೆಗೆ ಸಿಕ್ಕಿ ಹಾಳಾಗಿತ್ತು. ಮಾಜಿ ಸಚಿವರು, ಸಂಸದರು, ಜಿಲ್ಲಾಧಿಕಾರಿ, ತಹಶೀಲ್ದಾರ್, ಶಾಸಕರು ಜನಪ್ರತಿನಿಧಿ ಗಳು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು. ಆದರೆ ಇದುವರೆಗೂ ಸಿಕ್ಕಿಲ್ಲ ಎನ್ನುತ್ತಾರೆ ಶಾಂತರಾಜ.

ಅರಕೆರೆ ನಾಗರಾಜ್ ಎಂಬ ರೈತ 6 ಎಕರೆ ಅಡಿಕೆ ತೋಟ ಉಳಿಸಿಕೊಳ್ಳಲು ಪರದಾಡುತ್ತಿರುವುದಾಗಿ ಹೇಳುತ್ತಾರೆ. ಅರ್ಧದಷ್ಟು ತೋಟ ಒಣಗಿಹೋಗಿದ್ದು, ಉಳಿದರ್ಧ ತೋಟವನ್ನಾದರೂ ಉಳಿಸಿಕೊಳ್ಳುವ ಸವಾಲು ಅವರದ್ದು, ಅದಕ್ಕಾಗಿ ಕಳೆದ ಒಂದು ವಾರದಿಂದ ನೀರು ಹಾಯಿಸುತ್ತಿರುವುದಾಗಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT