ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿ, ಸಂಸ್ಥೆಗಳ ವಿರುದ್ಧ ದೂರಿನ ಸುರಿಮಳೆ!

Last Updated 15 ಮಾರ್ಚ್ 2017, 4:54 IST
ಅಕ್ಷರ ಗಾತ್ರ

ಶಿವಮೊಗ್ಗ: ಖರೀದಿಸುವ ವಸ್ತುವಿಗೆ ತಕ್ಕಂತೆ ಗುಣಮಟ್ಟ ಸರಿ ಇರದಿದ್ದರೆ, ಪಡೆಯುವ ಸೇವೆ ನ್ಯೂನತೆಯಿಂದ ಕೂಡಿದ್ದರೆ ಅಂತಹ ಕಂಪೆನಿ, ಸಂಸ್ಥೆಗಳ ವಿರುದ್ಧ ದೂರು ಸಲ್ಲಿಸಿ ಪರಿಹಾರ ಪಡೆಯುವುದು ಪ್ರತಿಯೊಬ್ಬ ಗ್ರಾಹಕರ ಹಕ್ಕು.

ಅಮೆರಿಕ ಮೊದಲ ದೇಶ: ಇಂತಹ ಹಕ್ಕಿಗಾಗಿ ಮೊದಲ ಚಳವಳಿ ನಡೆದಿದ್ದು ಅಮೆರಿಕದಲ್ಲಿ. ಗ್ರಾಹಕರಿಗೆ ಆಗುವ ಮೋಸ, ವಂಚನೆ ವಿರುದ್ಧ ಅಮೆರಿಕದ ಕೆಲವರು 1862ರಲ್ಲಿ ಸಂಘಟಿತರಾಗಿ ಧ್ವನಿ ಎತ್ತಿದ್ದರು.

ಅಮೆರಿಕದಲ್ಲಿ ಗ್ರಾಹಕರ ಹಕ್ಕುಗಳ ಪರ ಧ್ವನಿ ಮೊಳಗಿದ 100 ವರ್ಷಗಳ ನಂತರ ಆ ದೇಶದ ಅಧ್ಯಕ್ಷರಾಗಿದ್ದ ಜಾನ್‌ ಎಫ್‌.ಕೆನಡಿ ಗ್ರಾಹಕರ ಹಕ್ಕುಗಳ ಘೋಷಣೆ ಹೊರಡಿಸಿದ್ದರು. ಘೋಷಣೆ ಹೊರಡಿಸಿದ ಮಾರ್ಚ್‌ 15ರಂದು ಪ್ರತಿ ವರ್ಷ ವಿಶ್ವ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತದೆ.

1969ರಲ್ಲಿ ಮುಂಬೈನ ಆರು ಜನ ಮಹಿಳೆಯರು ಸೇರಿ ವಿವಿಧ ಕಂಪೆಗಳು ಗ್ರಾಹಕರಿಗೆ ಎಸಗುತ್ತಿದ್ದ ವಂಚನೆಗಳ ವಿರುದ್ಧ ಧ್ವನಿ ಎತ್ತಿದ್ದರು. ನಂತರ ಮುಂಬೈ ಮಹಿಳಾ ಗ್ರಾಹಕರ ಸಂಘ ಕಟ್ಟಿ ಆಂದೋಲನವನ್ನೇ ರೂಪಿಸಿದ್ದರು. ಖಾಸಗಿ, ಸರ್ಕಾರಿ ಸ್ವಾಮ್ಯದ ಕಂಪೆನಿಗಳು. ಸೇವಾ ಸಂಸ್ಥೆಗಳ ನ್ಯೂನತೆ ವಿರುದ್ಧ ಹೋರಾಟ ಇತರ ಭಾಗಗಳಿಗೂ ಹಬ್ಬಿತ್ತು. ಕೊನೆಗೆ ಎಚ್ಚೆತ್ತ ಕೇಂದ್ರ ಸರ್ಕಾರ 1986ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿತ್ತು.

ಮೂರು ಹಂತಗಳ ಪರಿಹಾರ ವೇದಿಕೆ: ವ್ಯಾಜ್ಯಗಳ ಪರಿಹಾರಕ್ಕಾಗಿ ಸರ್ಕಾರ ಗ್ರಾಹಕರ ಸಂರಕ್ಷಣಾ ಕಾಯ್ದೆ ಮೂಲಕ ಮೂರು ಹಂತಗಳಲ್ಲಿ ಅರೆ ನ್ಯಾಯಾಂಗ ವ್ಯವಸ್ಥೆ ಒಳಗೊಂಡ ‘ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ’ ಸ್ಥಾಪಿಸಿದೆ. ಜಿಲ್ಲಾಮಟ್ಟದಲ್ಲಿ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರನ್ನು ಒಳಗೊಂಡ ಈ ವೇದಿಕೆ ಗ್ರಾಹಕರ ಪರಿಹಾರ ಒದಗಿಸುವಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ.

ಗ್ರಾಹಕರು ತಾವು ಖರೀದಿಸುವ ಯಾವುದೇ ಉತ್ಪನ್ನಗಳಲ್ಲಿ ಲೋಪ ಕಂಡುಬಂದರೆ, ಗುಣಮಟ್ಟ ಕಳಪೆಯಾಗಿದ್ದರೆ, ಪಡೆದ ಸೇವೆ ನ್ಯೂನತೆಯಿಂದ ಕೂಡಿದ್ದರೆ ವೇದಿಕೆಗೆ ದೂರು ಸಲ್ಲಿಸಬಹುದು. ಅಲ್ಲಿ ನೀಡುವ ತೀರ್ಪಿನ ವಿರುದ್ಧ ರಾಜ್ಯ,ರಾಷ್ಟ್ರ ಗ್ರಾಹಕರ ಪರಿಹಾರವ್ಯಾಜ್ಯಗಳ ವೇದಿಕೆಗೆ ಮೇಲ್ಮನವಿ ಸಲ್ಲಿಸಬಹುದು.

ವೆಚ್ಚ ಅತ್ಯಂತ ಕಡಿಮೆ: ಗ್ರಾಹಕರು ಅನ್ಯಾಯ ಎಸಗಿದ ಯಾವುದೇ ಕಂಪೆನಿ, ಸಂಸ್ಥೆಗಳ ವಿರುದ್ಧ ಪರಿಹಾರ ಕೋರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ, ಪರಿಹಾರ ಪಡೆದರೆ ಸಲ್ಲಿಸುವ ಶುಲ್ಕ ಅತ್ಯಂತ ಕಡಿಮೆ.

**

ಪ್ರಜಾವಾಣಿ ಸಂದರ್ಶನ

(ಇ.ಪ್ರೇಮಾ ಹಾಲಸ್ವಾಮಿ, ವೇದಿಕೆಯ ಮಾಜಿ ಸದಸ್ಯೆ)

ಸರಳ ಪ್ರಕ್ರಿಯೆ, ಗ್ರಾಹಕನೇ ವಕೀಲ: ಇ.ಪ್ರೇಮಾ

ಈ ವೇದಿಕೆಗಳಲ್ಲಿ ಕಾನೂನು, ವಿಜ್ಞಾನ, ವಾಣಿಜ್ಯ, ಕೈಗಾರಿಕೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಅನುಭವಿ ಗಣ್ಯರನ್ನು ಸದಸ್ಯರು, ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ.

ಗ್ರಾಹಕರ ವ್ಯಾಜ್ಯಗಳು, ಪರಿಹಾರ, ಜನರ ಜಾಗೃತಿ ಕುರಿತು ವೇದಿಕೆಯ ಮಾಜಿ ಸದಸ್ಯರು, ವಕೀಲರೂ ಆದ ಇ.ಪ್ರೇಮಾ ಹಾಲಸ್ವಾಮಿ ಗ್ರಾಹಕರ ವೇದಿಕೆ ಜತೆಗಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮೂಲತಃ ಭದ್ರಾವತಿ ತಾಲ್ಲೂಕು ಎಡೇಹಳ್ಳಿಯ ಪ್ರೇಮಾ ಅವರು ಸ್ನಾತಕೋತ್ತರ ಕಾನೂನು ಪದವೀಧರರು. ಕುವೆಂಪು ವಿವಿ ಸೆನೆಟ್‌ ಸದಸ್ಯರಾಗಿ, ದಾವಣಗೆರೆ ವಿವಿ ಸಿಂಡಿಕೇಟ್‌ ಸದಸ್ಯರಾಗಿ, ಐದು ವರ್ಷ ಗ್ರಾಹಕರ ವೇದಿಕೆ ಸದಸ್ಯರು, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

* ಗ್ರಾಹಕರ ವೇದಿಕೆಗೆ ಸಾಕಷ್ಟು ದೂರು ದಾಖಲಾಗುತ್ತವೆಯೇ?
ವರ್ಷಕ್ಕೆ ಭವಿಷ್ಯ ನಿಧಿ ಪ್ರಕರಣ ಹೊರತುಪಡಿಸಿ 100ರಿಂದ 200ರಷ್ಟು ದೂರುಗಳು ದಾಖಲಾಗುತ್ತವೆ. ಗ್ರಾಹಕರಲ್ಲಿ ಈಚೆಗೆ ಸಾಕಷ್ಟು ಜಾಗೃತಿ ಮೂಡಿದೆ. ತಮಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ಪಡೆಯುವಲ್ಲೂ ಯಶ ಕಂಡಿದ್ದಾರೆ.

* ಭವಿಷ್ಯ ನಿಧಿ ಸಮಸ್ಯೆ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆಯೇ?
ಇಲ್ಲ. ಆದರೆ, ಕಾರ್ಮಿಕರ ಸಂಖ್ಯೆ ಬಹುದೊಡ್ಡ ಪ್ರಮಾಣದಲ್ಲಿ ಇರುವ ಕಾರಣ ಯಾವುದೇ ಒಂದು ಕಂಪೆನಿ ನೌಕರರು ಭವಿಷ್ಯನಿಧಿ ಪಡೆಯುವಲ್ಲಿ ಸಮಸ್ಯೆ ಎದುರಾದರೆ ಒಟ್ಟಿಗೆ ದೂರು ದಾಖಲಿಸುತ್ತಾರೆ. ಒಮ್ಮೊಮ್ಮೆ ಸಾವಿರ ಸಂಖ್ಯೆಯನ್ನೂ ದಾಟುತ್ತದೆ. ಒಂದು ತೀರ್ಪಿಗೆ ಅಷ್ಟೂ ಪ್ರಕರಣಗಳು ಇತ್ಯರ್ಥವಾಗಿ ಬಿಡುತ್ತವೆ.

* ಭವಿಷ್ಯನಿಧಿ ಪ್ರಕರಣ ಹೊರತುಪಡಿಸಿ ಯಾವ ರೀತಿಯ ಪ್ರಕರಣ ಹೆಚ್ಚು ದಾಖಲಾಗುತ್ತವೆ?
ಈಚೆಗೆ ಮೊಬೈಲ್‌ ಕಂಪೆನಿಗಳ ಸೇವಾ ನ್ಯೂನತೆ, ಕಳಪೆ ಗುಣಮಟ್ಟದ ಮೊಬೈಲ್‌ ಫೋನ್‌ಗಳ ವಿರುದ್ಧ ದೂರು ದಾಖಲಾಗುತ್ತಿವೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವ್ಯಾಜ್ಯಗಳು, ದಿನ ಬಳಕೆ ವಸ್ತುಗಳ ಖರೀದಿ, ವಿಮಾ ಪ್ರಕರಣಗಳು, ಬ್ಯಾಂಕ್‌ ಸೇವಾ ನ್ಯೂನತೆ ಪ್ರಕರಣಗಳು ಹೆಚ್ಚು ದಾಖಲಾಗುತ್ತವೆ.

* ಸರಾಸರಿ ಎಷ್ಟು ಪ್ರಕರಣಗಳು ಇತ್ಯರ್ಥವಾಗುತ್ತವೆ?
ಪ್ರತಿ ತಿಂಗಳು ಸರಾಸರಿ 15ರಿಂದ 20 ಪ್ರಕರಣಗಳು ಇತ್ಯರ್ಥವಾಗುತ್ತವೆ. ಭವಿಷ್ಯ ನಿಧಿಯಂತಹ ಗುಚ್ಛ ಪ್ರಕರಣಗಳಲ್ಲಿ ಆ ಸಂಖ್ಯೆ 100 ದಾಟುತ್ತವೆ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ 1,300 ಪ್ರಕರಣಗಳು ದಾಖಲಾಗಿದ್ದು, 1,050 ಪ್ರಕರಣಗಳು ಇತ್ಯರ್ಥವಾಗಿವೆ.

* ಜಿಲ್ಲಾ ಗ್ರಾಹಕರ ವೇದಿಕೆ ನೀಡುವ ಹಲವು ತೀರ್ಪುಗಳು ಮೇಲಿನ ಹಂತದಲ್ಲಿ ಪ್ರತಿಕೂಲವಾಗಿವೆಯಲ್ಲ?
ಎಲ್ಲ ಪ್ರಕರಣಗಳಲ್ಲೂ ಆ ರೀತಿ ಆಗಿಲ್ಲ. ಕೆಲವು ಪ್ರಕರಣಗಳಲ್ಲಿ ಅದು ಸಹಜ. ಗ್ರಾಹಕರು ಖರೀದಿಸಿದ ವಸ್ತುಗಳ ರಸೀದಿ, ಪಡೆದ ಸೇವೆಯ ದಾಖಲೆ ಸರಿಯಾಗಿ ಇಟ್ಟುಕೊಳ್ಳಬೇಕು. ವ್ಯಾಜ್ಯಗಳು, ದೂರುಗಳು ದುರುದ್ದೇಶಪೂರಿತವಾಗಿರಬಾರದು. ನಿಯಮಕ್ಕೆ ಪೂರಕವಾಗಿರಬೇಕು. ಆಗ ಎಲ್ಲೆಡೆ ಒಂದೇ ತೆರನಾದ ನ್ಯಾಯ ಸಿಗುತ್ತದೆ.

* ವೇದಿಕೆ ಮೂಲಕ ಗ್ರಾಹಕರಿಗೆ ಅನುಕೂಲ ಆಗಿದಿಯೇ?
ಖಂಡಿತ ಆಗಿದೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ಇರುವ ಕಠಿಣ ಪ್ರಕ್ರಿಯೆ ವೇದಿಕೆಯಲ್ಲಿ ಇರುವುದಿಲ್ಲ. ಅತ್ಯಂತ ಸರಳೀಕೃತ ಪ್ರಕ್ರಿಯೆ ಮೂಲಕ ಪರಿಹಾರ ಒದಗಿಸಲಾಗುತ್ತದೆ. ವಕೀಲರ ಅಗತ್ಯವಿಲ್ಲದೇ ವಾದ ಮಂಡಿಸಬಹುದು. ಶುಲ್ಕವೂ ಅತ್ಯಂತ ಕಡಿಮೆ. ₹ 20 ಲಕ್ಷದವರೆಗಿನ ವ್ಯಾಜ್ಯಗಳಿಗೆ ಕೇವಲ ₹ 500 ಶುಲ್ಕ ಪಾವತಿಸಿ ವೇದಿಕೆ ಮೂಲಕ ಪರಿಹಾರ  ಪಡೆಯಬಹುದು.

*  ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆಯೇ?
ಇನ್ನಷ್ಟು ಮೂಡಬೇಕಿದೆ. ಜನರ ದಾರಿ ತಪ್ಪಿಸುವ ಜಾಹೀರಾತು, ರೈತರಿಗೆ ವಿತರಿಸುವ ಕಳಪೆ ಬಿತ್ತನೆ ಬೀಜದ ಪ್ರಕರಣಗಳನ್ನೂ ವೇದಿಕೆಯಲ್ಲಿ ದಾಖಲಿಸಬಹುದು. ಮೈಸೂರಿನ ಮಹಿಳೆಯೊಬ್ಬರು ರೀಡರ್‌ ಡೈಜೆಸ್ಟ್‌ನ ದಾರಿ ತಪ್ಪಿಸುವ ಜಾಹೀರಾತಿನ ವಿರುದ್ಧ, ಬೆಂಗಳೂರಿನ ಗ್ರಾಹಕರೊಬ್ಬರು ₹ 20 ದೋಸೆಗೆ ಸಂಬಂಧಿಸಿದ ಸೇವಾ ನ್ಯೂನತೆ ವಿರುದ್ಧ ಹೋರಾಟ ನಡೆಸಿದ್ದರು. ಈ ಎರಡು ಘಟನೆಗಳು ರಾಜ್ಯದಲ್ಲಿ ಸಾಕಷ್ಟು ಗಮನ ಸೆಳೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT