ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವ ಮಂಟಪ’ ನಿರ್ಮಾಣಕ್ಕೆ ಸಿದ್ಧತೆ

Last Updated 15 ಮಾರ್ಚ್ 2017, 5:21 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿ ಬೃಹತ್ ಮತ್ತು ವಿಶಿಷ್ಟವಾದ ಅನುಭವ ಮಂಟಪ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದ್ದು, ಸರ್ಕಾರ ಇದಕ್ಕಾ ನೇಮಿಸಿರುವ ತಜ್ಞರ ಸಲಹಾ ಸಮಿತಿಯ ಅಧ್ಯಕ್ಷ ಸಾಹಿತಿ ಗೋ.ರು.ಚನ್ನಬಸಪ್ಪ ಹಾಗೂ ಸದಸ್ಯರು ಮಂಗಳವಾರ ಇಲ್ಲಿ ವಿವಿಧೆಡೆ ಸ್ಥಳ ಪರಿಶೀಲಿಸಿದರು.

ತ್ರಿಪುರಾಂತ ಕೆರೆ ದಂಡೆಯಲ್ಲಿನ ಅನುಭವ ಮಂಟಪದ ಪರಿಸರ, ಬಂದವರ ಓಣಿಯಲ್ಲಿನ ಅಕ್ಕಮಹಾದೇವಿ ತೀರ್ಥದ ಸ್ಥಳ ಮತ್ತು ಬೆಟಬಾಲ್ಕುಂದಾ ಹತ್ತಿರದ ಮೊರಾರ್ಜಿ ಶಾಲೆ ಇರುವ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಈಗ ಇರುವ ಅನುಭವ ಮಂಟಪದ ಸ್ಥಳದಲ್ಲಿಯೇ ನೂತನ ಮಂಟಪ ನಿರ್ಮಿಸಿದರೆ ಸೂಕ್ತ. ಅದಕ್ಕಾಗಿ ಸ್ಥಳ ಒದಗಿಸಲಾಗುವುದು ಎಂದು ಮಂಟಪದ ಉಸ್ತುವಾರಿ ವಹಿಸಿರುವ ವಿಶ್ವ ಬಸವಧರ್ಮ ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ತಜ್ಞರ ಸಮಿತಿಗೆ ಮನವಿಪತ್ರ ಸಲ್ಲಿಸಿದರು.

ಸ್ಥಳ ಪರಿಶೀಲನೆ ನಂತರದಲ್ಲಿ ಮಂಡಳಿಯ ಸಭಾಂಗಣದಲ್ಲಿ ತಜ್ಞರ ಸಲಹಾ ಸಮಿತಿಯ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಯಿತು. ಅನುಭವ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಕೆಲವರು ಸಲಹೆಗಳನ್ನು ನೀಡಿದರು. ಗೋ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಸಿದ್ದರಾಮ ಶರಣರು ಬೆಲ್ದಾಳ, ಅಭಿವೃದ್ಧಿ ಮಂಡಳಿ ನಿರ್ದೇಶಕ ಶಿವರಾಜ ನರಶೆಟ್ಟಿ, ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ, ಕವಿ ಡಾ.ಸಿದ್ದಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಸಾಹಿತಿ ಡಾ.ಸಿ.ವೀರಣ್ಣ, ರಂಜಾನ ದರ್ಗಾ, ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ನಿವೃತ್ತ ಎಂಜಿನಿಯರ್ ಬಸವರಾಜ ಗದ್ವಾಲ ಸಭೆಯಲ್ಲಿ ಪಾಲ್ಗೊಂಡಿದ್ದರು.

ಚಾಲುಕ್ಯ ಶೈಲಿ: ನೂತನ ಅನುಭವ ಮಂಟಪವು ಚಾಲುಕ್ಯ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ಒಳಗಡೆ ಎಲ್ಲ ಆಧುನಿಕ ಸೌಕರ್ಯಗಳಿರುತ್ತವೆ ಎಂದು ತಜ್ಞರ ಸಲಹಾ ಸಮಿತಿ ಅಧ್ಯಕ್ಷರಾದ ಗೋ.ರು.ಚನ್ನಬಸಪ್ಪ ಸಭೆ ನಂತರ ಪತ್ರಕರ್ತರಿಗೆ ತಿಳಿಸಿದರು.

ಮಂಟಪಕ್ಕಾಗಿ ಸುಮಾರು 25 ಎಕರೆ ಜಮೀನು ಮತ್ತು ಮೊದಲ ಹಂತದಲ್ಲಿ ₹100 ಕೋಟಿಗೂ ಅಧಿಕ ಅನುದಾನದ ಅವಶ್ಯಕತೆ ಇದೆ. ಈ ಕುರಿತು ಶೀಘ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ. ಈ ಬಗ್ಗೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಾರ್ಚ್ 21 ರಂದು ಸಭೆ ನಡೆಸಲಾಗುತ್ತದೆ. ಆ ಬಳಿಕ ಯೋಜನೆಯ ಕರಡು ಸಿದ್ಧಪಡಿಸಲಾಗುತ್ತದೆ ಎಂದರು.

ಮಂಟಪವು ಷಟಸ್ಥಲಾಕಾರ ಇಲ್ಲವೆ ಮಂಡಲಾಕಾರದಲ್ಲಿರಲಿದೆ. ಮಂಟಪದ ಆವರಣದಲ್ಲಿ 770 ಅಮರಗಣಂಗಳಷ್ಟು ಸಂಖ್ಯೆಯ ಆಸನಗಳು, ಧ್ವನಿ ಬೆಳಕಿನ ವ್ಯವಸ್ಥೆ ಇರಲಿದೆ. ಇದು ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾಗುವ ಜತೆಗೆ ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಬಗೆಗೂ ಗಂಭೀರ ಚಿಂತನೆ ನಡೆಸುವ ಅಂತರರಾಷ್ಟ್ರೀಯ ಕೇಂದ್ರವಾಗಬೇಕು.

ಪ್ರವಾಸಿಗರ ಆಕರ್ಷಣಿಯ ತಾಣವೂ ಆಗುವಂತೆ ಇದನ್ನು ರೂಪಿಸಲು ಯೋಜಿಸಲಾಗಿದೆ ಎಂದು ಗೋ.ರು.ಚನ್ನಬಸಪ್ಪ ಮಾಹಿತಿ ನೀಡಿದರು.

**

ನೂತನ ಮಂಟಪವು 12 ನೇ ಶತಮಾನದ ಅನುಭವ ಮಂಟಪದ ಸ್ಮಾರಕವಾಗದೆ ಸಮಕಾಲೀನ ಸಂದರ್ಭಕ್ಕೆ ಸೂಕ್ತವಾದ ಸಂರಚನೆಯಾಗಲಿದೆ
-ಗೋ.ರು.ಚನ್ನಬಸಪ್ಪ, ಅಧ್ಯಕ್ಷ, ಸಲಹಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT