ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಕಾಯಲು ಬದ್ಧ

Last Updated 15 ಮಾರ್ಚ್ 2017, 7:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿರುವ ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೃತಕ ಗರ್ಭಧಾರಣೆ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೋಚಿಮುಲ್‌ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ‘ಕೃತಕ ಗರ್ಭಧಾರಣಾ ಕಾರ್ಯಕರ್ತರ ಉತ್ತಮ ಸೇವೆಯಿಂದಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳು ಬೆದೆಗೆ ಬಂದಾಗ ಕಾರ್ಯಕರ್ತರು ಸಕಾಲಕ್ಕೆ ಅವುಗಳಿಗೆ ಕೃತಕ ಗರ್ಭಧಾರಣೆ ಚಿಕಿತ್ಸೆ ನೀಡುವುದರಿಂದ ರೈತರಿಗೆ ಹಣ ಮತ್ತು ಸಮಯ ಉಳಿತಾಯವಾಗುತ್ತಿದೆ’ ಎಂದರು.

‘ಬರದಿಂದಾಗಿ ಬಯಲುಸೀಮೆ ಜಿಲ್ಲೆಗಳಲ್ಲಿ ದನಕರು ಸಾಕುವುದು ಕಷ್ಟವಾಗುತ್ತಿದೆ. ಇದನ್ನು ಮನಗಂಡ ಒಕ್ಕೂಟವು ಹಾಲಿನ ಪ್ರೋತ್ಸಾಹ ಧನವನ್ನು ಏರಿಕೆ ಮಾಡಿದೆ. ಜತೆಗೆ ರಿಯಾಯಿತಿ ದರದಲ್ಲಿ ಪಶು ಆಹಾರ ನೀಡುತ್ತಿದೆ. ಒಕ್ಕೂಟ ರೈತರ ಹಿತ ಕಾಯಲು ಸದಾ ಬದ್ಧವಾಗಿರುತ್ತದೆ’ ಎಂದು ತಿಳಿಸಿದರು.

ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ‘ಹಾಲಿನ ಇಳುವರಿ ಇನ್ನೂ ಹೆಚ್ಚಬೇಕಾದರೆ ಕಾರ್ಯಕರ್ತರಿಗೆ ಉತ್ತಮ ತಳಿಗಳ ವೀರ್ಯ ನಳಿಕೆ ಪೂರೈಸಬೇಕಾದ ಅಗತ್ಯವಿದೆ. ಸದ್ಯ ಕಾರ್ಯಕರ್ತರು ಒಕ್ಕೂಟದ ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಿ ಈಡೇರಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದರು.

ಕೋಚಿಮುಲ್ ವ್ಯವಸ್ಥಾಪಕ ವಿ.ಎಂ.ರಾಜು ಮಾತನಾಡಿ, ‘ಭಾರತ ಹಾಲು ಉತ್ಪಾದನೆಯಲ್ಲಿ ಪ್ರಪಂಚದ ಪ್ರಮುಖ ದೇಶಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇದಕ್ಕೆಲ್ಲ ಕೃತಕ ಗರ್ಭಧಾರಣೆಯೇ ಕಾರಣ. ನಾವು ಹಾಲಿನ ಉತ್ಪಾದನೆಯಲ್ಲಿ ಮೊದಲ ಸ್ಥಾನಕ್ಕೆ ಏರಬೇಕಾದರೆ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಹೆಚ್ಚಿನ ತರಬೇತಿ ಅವಶ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕೃತಕ ಗರ್ಭಧಾರಣೆ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಚೌಡರೆಡ್ಡಿ ಮಾತನಾಡಿ, ‘ಕಾರ್ಯಕರ್ತರಿಗೆ ಹೆಚ್ಚು ಹಾಲು ನೀಡುವಂತಹ ತಳಿಗಳ ವೀರ್ಯ ನಳಿಕೆ ಪೂರೈಸಬೇಕು. ನಾಟಿ ತಳಿಗಳ ವೀರ್ಯ ಸರಬರಾಜಿಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಚಿಕಿತ್ಸೆಗೆ ಅಗತ್ಯವಾದ ಸಾಮಗ್ರಿಗಳುಳ್ಳ ಕಿಟ್‌ ನೀಡಬೇಕು’ ಎಂದು ಒತ್ತಾಯಿಸಿದರು.

‘ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಿಸಬೇಕು. ವರ್ಷಕ್ಕೊಮ್ಮೆ ಅಧ್ಯಯನ ಪ್ರವಾಸಕ್ಕೆ ಕಳುಹಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಬೇಕು. 60 ವರ್ಷ ತುಂಬಿದವರಿಗೆ ಪಿಂಚಣಿ ನೀಡಬೇಕು. ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಮೆಗಾ ಡೇರಿ ಆವರಣದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಕೋಚಿಮುಲ್‌ವ್ಯವಸ್ಥಾಪಕ ನಿರ್ದೇಶಕ ಎನ್.ಹನುಮೇಶ್, ನಿರ್ದೇಶಕರಾದ ಕೆ.ಅಶ್ವತ್ಥರೆಡ್ಡಿ, ಜೆ.ಕಾಂತರಾಜು, ಮುನಿಯಪ್ಪ, ವೈ.ಬಿ.ಅಶ್ವತ್ಥನಾರಾಯಣ ಬಾಬು, ಕೋಚಿಮುಲ್‌ ಅಧಿಕಾರಿಗಳಾದ ಎಂ.ವೆಂಕಟಾಚಲಪತಿ, ಪಾಪೇಗೌಡ, ಕೆ.ಜಿ.ಈಶ್ವರಯ್ಯ, ಪುಣ್ಯಕೋಟಿ, ಎಲ್.ರಾಘವೇಂದ್ರ, ಕೃತಕ ಗರ್ಭಧಾರಣಾ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

**

ತೀವ್ರ ಬರಗಾಲದಲ್ಲಿಯೂ ಜಿಲ್ಲೆಯಲ್ಲಿ ನಿತ್ಯ ಸುಮಾರು 8.5 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರ ಶ್ರೇಯ ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ ಸಲ್ಲುತ್ತದೆ.
-ಕೆ.ವಿ.ನಾಗರಾಜ್, ಕೋಚಿಮುಲ್ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT