ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಸಿದರೆ ₹ 25 ಸಾವಿರ ಬಾಡಿಗೆ

Last Updated 15 ಮಾರ್ಚ್ 2017, 7:51 IST
ಅಕ್ಷರ ಗಾತ್ರ

ಮಾಲೂರು: ಜಲ ಮೂಲಗಳು ಇಲ್ಲದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಖಾಸಗಿ ಕೊಳವೆ ಬಾವಿಗಳ ಮಾಲೀಕರು ನೀರು ಸರಬರಾಜು ಮಾಡಲು ಮುಂದೆ ಬಂದರೆ  ತಿಂಗಳಿಗೆ ₹ 25 ಸಾವಿರ ಬಾಡಿಗೆ  ನೀಡಲಾಗುವುದು  ಎಂದು   ಜಿಲ್ಲಾಧಿಕಾರಿ ಡಾ.ಎನ್. ತ್ರಿಲೋಕಚಂದ್ರ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜನಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ  ತಾಲ್ಲೂಕು ಬರ ಪರಿಸ್ಥಿತಿ ಸಮನ್ವಯ ಸಭೆಯಲ್ಲಿ  ಅವರು ಮಾತನಾಡಿದರು.

ಬೇಸಿಗೆಯ ತಾಪಮಾನ ಹೆಚ್ಚಾದಂತೆ ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ  ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೀರಿನ ಸಮಸ್ಯೆ ಉದ್ಭವಿಸಿರುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ 1600  ರಿಂದ 1800 ಅಡಿ ಆಳ ಕೊಳವೆ ಬಾವಿ ಕೊರೆಯಿಸಿದರೆ ಅಲ್ಪ–ಸ್ವಲ್ಪ ನೀರು ದೊರೆಯುತ್ತದೆ. ಆದರೆ ಸರ್ಕಾರ  1400 ಅಡಿ ಆಳ ಮಾತ್ರ ಕೊಳವೆ ಬಾವಿ ಕೊರೆಯಿಸಲು ಅನುದಾನ ನೀಡುತ್ತಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ನೀರು ಸಿಗುವುದಿಲ್ಲ. ಈಗಾಗಲೇ ಬಿಸಿಲಿನ ಬೇಗೆಯು ಎಚ್ಚಾಗಿದೆ. ಕುಡಿಯುವ ನೀರಿಗೆ ತಾತ್ಸಾರ ಉಂಟಾಗಿದೆ ಎಂದು ತಿಳಿಸಿದರು.

ಕೊಳವೆ ಬಾವಿ ಕೊರೆಯಿಸಿ ಮೋಟರ್ ಪಂಪ್ ಅಳವಡಿಸುವ ವೇಳೆಗೆ ಬೇಸಿಗೆ ಮುಗಿದಿರುತ್ತದೆ. ಆದ್ದರಿಂದ ಖಾಸಗಿ ಕೊಳವೆ ಬಾವಿಗಳಿಗೆ ಸರ್ಕಾರದಿಂದ ₹ 15 ಸಾವಿರ ನೀಡುತ್ತಿರುವುದರಿಂದ ರೈತರು ಕೊಳವೆ ಬಾವಿಗಳಿಂದ ನೀರನ್ನು ನೀಡಲು ಮುಂದೆ ಬರುತ್ತಿಲ್ಲ. ಹೀಗಾಗಿ ತಿಂಗಳಿಗೆ ಬಾಡಿಗೆಯನ್ನು ₹ 15 ಸಾವಿರದಿಂದ ₹ 25 ಸಾವಿರಕ್ಕೆ ಹೆಚ್ಚಿಸಬೇಕೆಂದು ಶಾಸಕ ಕೆ.ಎಸ್.ಮಂಜುನಾಥ್ ಗೌಡ  ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಖಾಸಗಿ ಕೊಳವೆ ಬಾವಿಗಳಿಗೆ ಜಿಲ್ಲಾಡಳಿತದಿಂದ  ₹ 20 ಸಾವಿರ,  ಆಯಾ ಗ್ರಾ.ಪಂ ನಿಂದ ₹ 5 ಸಾವಿರ ಸೇರಿದಂತೆ ಒಟ್ಟು ₹ 25 ಸಾವಿರ ನೀಡುವುದಾಗಿ ಘೋಷಿಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ಜಮೀರ್ ಅಹ್ಮದ್ ಮಾತನಾಡಿ, ತಾಲ್ಲೂಕಿನ 28 ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳಲ್ಲಿ  40  ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಕೆನರಾ ಬ್ಯಾಂಕ್, ಲ್ಯಾಂಡ್ ಆರ್ಮಿ ಮತ್ತು ಸಾಯಿ ಗ್ರೂಪ್ಸ್ ನಿಂದ ಇನ್ನೂ 40 ಶುದ್ಧ ನೀರಿನ ಘಟಕ ಕಾಮಗಾರಿಗಳು ನಡೆಯುತ್ತಿದೆ. ಕೆನರಾ ಬ್ಯಾಂಕ್ ವತಿಯಿಂದ ನಡೆಯುತ್ತಿರುವ ಶುದ್ಧ ನೀರಿನ ಘಟಕಗಳ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೋಟಿಸ್ ಸಹ ನೀಡಲಾಗಿದೆ ಎಂದರು.

ಜಿ.ಪಂ.ಉಪಾಧ್ಯಕ್ಷೆ ಯಶೋದಮ್ಮ, ತಾ.ಪಂ.ಅಧ್ಯಕ್ಷೆ ತ್ರಿವರ್ಣ ರವಿ, ಉಪಾಧ್ಯಕ್ಷೆ ನಾಗವೇಣಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾಗೇಶ್, ಸದಸ್ಯರಾದ ರಾಮಕೃಷ್ಣಪ್ಪ, ಶ್ರೀವಿದ್ಯಾ, ಪುರಸಭಾಧ್ಯಕ್ಷ ಎಂ. ರಾಮೂರ್ತಿ, ಮುಖ್ಯಾಧಿಕಾರಿ ಪ್ರಸಾದ್, ಮುಖಂಡರಾದ ಅಗ್ರಿ ನಾರಾಯಣಪ್ಪ, ಕ್ಷೇತ್ರನಹಳ್ಳಿ ವೆಂಕಟೇಶ್ ಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT