ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕು ಪತ್ರ ಇಲ್ಲದಿದ್ದರೆ ಮನೆ ನಿಮ್ಮದಲ್ಲ

Last Updated 15 ಮಾರ್ಚ್ 2017, 7:55 IST
ಅಕ್ಷರ ಗಾತ್ರ

ತುಮಕೂರು: ‘ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿ ಕಂದಾಯ ಕಟ್ಟಿಕೊಂಡು ಬಂದಿದ್ದೇವೆ ಎಂದು ಸುಮ್ಮನಿದ್ದರೆ ಮನೆ ನಿಮ್ಮದಾಗುವುದಿಲ್ಲ. ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಹಕ್ಕು ಪತ್ರ ಪಡೆಯಲೇಬೇಕು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಮಂಗಳವಾರ ನಗರದ 22ನೇ ವಾರ್ಡಿನ ಹೊಸಾಳಯ್ಯನತೋಟ ಬಡಾವಣೆಯ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡ 107 ಫಲಾನುಭವಿಗಳಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 94 ಸಿಸಿ ಅಡಿಯಲ್ಲಿ ಸಕ್ರಮಗೊಳಿಸಿದ ಹಕ್ಕು ಪತ್ರಗಳ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

‘ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡ ಬಡವರಿಗೆ ಹಕ್ಕು ಪತ್ರ ವಿತರಣೆ ಮಾಡಲು ಸರ್ಕಾರ ಹೋರಾಟ ರೂಪದಲ್ಲಿ ಕೆಲಸ ಮಾಡುತ್ತಿದೆ. ಮೂರ್ನಾಲ್ಕು ಬಾರಿ ಅರ್ಜಿ ಸಲ್ಲಿಕೆಗೆ ಸಮಯ ವಿಸ್ತರಣೆ ಮಾಡಲಾಗಿತ್ತು. ಅನೇಕರು ಅರ್ಜಿ ಸಲ್ಲಿಸಿ ಹಕ್ಕು ಪತ್ರ ಪಡೆಯುತ್ತಿದ್ದಾರೆ. ಆದರೆ, ಇನ್ನೂ ಕೆಲ ಕಡೆ ಅರ್ಜಿ ಸಲ್ಲಿಸಿಲ್ಲ. ಕೆಲವರಿಗೆ ಗೊತ್ತೇ ಇಲ್ಲ’ ಎಂದರು.

‘ಹಾಗಂತ ನಾವು ಸುಮ್ಮನೇ ಇರುವುದಿಲ್ಲ. ಎಲ್ಲೆಲ್ಲಿ ಸರ್ಕಾರಿ ಜಾಗ ಇದೆ ಎಂಬುದನ್ನು ನಕಾಶೆ ಹಿಡಿದು  ಗುರುತಿಸಬೇಕು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದರೆ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಸೂಚಿಸಬೇಕು ಅಥವಾ ಸ್ಥಳದಲ್ಲಿಯೇ ಫಲಾನುಭವಿಯಿಂದ ಅರ್ಜಿ ಭರ್ತಿ ಮಾಡಿಸಿಕೊಳ್ಳಬೇಕು ಎಂದು ಈಗಾಗಲೇ ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗೆ, ತಹಶೀಲ್ದಾರರಿಗೆ ಆದೇಶಿಸಲಾಗಿದೆ’ ಎಂದು ಹೇಳಿದರು.

‘ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರು ಹಕ್ಕು ಪತ್ರ ಪಡೆದುಕೊಳ್ಳಬೇಕು. ಅಕ್ರಮವಾಗಿ ಮನೆ ಕಟ್ಟಿದ್ದಕ್ಕೆ ಕಾನೂನಿನ ಪ್ರಕಾರ 1 ವರ್ಷ ಜೈಲು ಶಿಕ್ಷೆ ಇದೆ. ₹ 3 ಸಾವಿರ ದಂಡ ಕೊಡಬೇಕಾಗುತ್ತದೆ. ಇದು ಬೇಕೆ’ ಎಂದು ಪ್ರಶ್ನಿಸಿದರು.

ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ‘1994ರಲ್ಲಿ ಷಫಿ ಅಹಮ್ಮದ್ ಅವರು ಶಾಸಕರಾಗಿದ್ದಾಗ ನಗರದಲ್ಲಿ ಬಡವರಿಗೆ ನಿವೇಶನ ಹಕ್ಕು ಪತ್ರ ಕೊಡಿಸಿದ್ದರು. ಬಳಿಕ ಯಾರಿಗೂ ಹಕ್ಕು ಪತ್ರ ವಿತರಣೆ ಮಾಡಿರಲಿಲ್ಲ. ಈಗ ಕಂದಾಯ ಸಚಿವರ ವಿಶೇಷ ಕಾಳಜಿಯಿಂದ ಈ ಕೆಲಸ ಆಗುತ್ತಿದೆ’ ಎಂದು ನುಡಿದರು.

‘ನಗರದಲ್ಲಿ 497 ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಹಕ್ಕು ಪತ್ರ ಕೊಡುವ ಪ್ರಕ್ರಿಯೆ ನಡೆದಿದೆ.  ಹೊಸಾಳಯ್ಯನ ತೋಟ ಬಡಾವಣೆಯಲ್ಲಿ 3 ವರ್ಷದಲ್ಲಿ ₹ 7 ಕೋಟಿಗೂ ಅಧಿಕ ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಉಪಮೇಯರ್ ಫರ್ಜಾನಾ ಖಾನಂ, ಉಪವಿಭಾಗಾಧಿಕಾರಿ ತಬುಸಮ್ ಜಹೇರಾ, ಆಶ್ರಯ ಸಮಿತಿ ಸದಸ್ಯೆ ವೀಣಾ, ಸದಸ್ಯ ಇಸ್ಮಾಯಿಲ್ ವೇದಿಕೆಯಲ್ಲಿದ್ದರು. ತಹಶೀಲ್ದಾರ್‌ ರಂಗೇಗೌಡ ಸ್ವಾಗತಿಸಿದರು.

**

ತಂದೆ-  ತಾಯಿ ಕಳೆದುಕೊಂಡ   ಮಕ್ಕಳಿಗೆ ಹಕ್ಕು ಪತ್ರ

ಹೊಸಾಳಯ್ಯನ ತೋಟದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ ಸುರೇಶ್ ಮತ್ತು ಮಹಾಲಕ್ಷ್ಮಿ ದಂಪತಿ ಇಬ್ಬರೂ ಮೃತಪಟ್ಟಿದ್ದರಿಂದ ಅವರ 9 ವರ್ಷದ ಮಗ ಭರತ್, 6 ವರ್ಷದ ಮಿಥಿಲಾ ಹಾಗೂ ಈ ಮಕ್ಕಳ ಅಜ್ಜ ಶಿವಣ್ಣ (ತಾಯಿ ತಂದೆ) ಅವರ ಹೆಸರಿಗೆ ಹಕ್ಕುಪತ್ರವನ್ನು ಸಚಿವರು ವಿತರಣೆ ಮಾಡಿದರು.

ಮಕ್ಕಳನ್ನು ಗಲ್ಲ ಹಿಡಿದು ಮುದ್ದು ಮಾಡಿದ ಸಚಿವರು ಪೋಟೊ ತೆಗೆಸಿಕೊಂಡರು.

ಸುರೇಶ್ ರಸ್ತೆ ಅಪಘಾತದಲ್ಲಿ ಹಾಗೂ ಮಹಾಲಕ್ಷ್ಮಿ ಅವರು ಗ್ಯಾಸ್ ದುರಂತದಲ್ಲಿ ಮೃತಪಟ್ಟಿದ್ದರು.

**

ಬಡವರ ಕಷ್ಟಕ್ಕೆ ಸ್ಪಂದಿಸಿದರೆ ಮೋಕ್ಷ

‘ಶಾಸಕ ರಫೀಕ್ ಅವರೇ ನೀವು ಮೆಕ್ಕಾಕ್ಕೆ ಹೋದರೆ, ನಾನು ತಿರುಪತಿಗೆ ಹೋದರೆ ಮೋಕ್ಷ ಸಿಗುವುದಿಲ್ಲ. ಇಂತಹ ಬಡವರ ಪರ ಕೆಲಸ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಿದರೆ ಮೋಕ್ಷ ಯಾಕೆ ಸಿಗುವುದಿಲ್ಲ. ತಾನಾಗಿಯೇ ಸಿಗುತ್ತದೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT