ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ಬಿಜೆಪಿ ಪ್ರತಿಭಟನೆ, ಆಕ್ರೋಶ

Last Updated 15 ಮಾರ್ಚ್ 2017, 8:44 IST
ಅಕ್ಷರ ಗಾತ್ರ

ಆನೇಕಲ್‌: ತಾಲ್ಲೂಕಿನ ಬಿಜೆಪಿಯ ಮುಖಂಡ ಹಾಗೂ ಬೊಮ್ಮಸಂದ್ರ ಪುರಸಭೆಯ ಸದಸ್ಯ ಶ್ರೀನಿವಾಸ್‌ಪ್ರಸಾದ್‌ (40) ಅವರನ್ನು ದುಷ್ಕರ್ಮಿಗಳು ಮಂಗಳವಾರ ನಸುಕಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ಬೊಮ್ಮಸಂದ್ರ ಬಿಟಿಎಲ್‌ ಕಾಲೇಜು ಮುಂಭಾಗದಲ್ಲಿ ನಡೆದಿದೆ.
ಶ್ರೀನಿವಾಸ್ ಪ್ರಸಾದ್ ಅವರ ಪತ್ನಿ ಶೈಲಜಾ ಪ್ರಸ್ತುತ ಸುರಗಜಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆಯಾಗಿದ್ದಾರೆ. ಮೃತರಿಗೆ ಒಬ್ಬ ಮಗ ಹಾಗೂ ಮಗಳಿದ್ದಾರೆ.

ಬೆಳಗಿನ ಜಾವ 5ರ ವೇಳೆಯಲ್ಲಿ ವಾಯುವಿಹಾರಕ್ಕೆ ತೆರಳಲು ಇನ್ನೋವಾ ಕಾರಿನಲ್ಲಿ ಬಿಟಿಎಲ್ ಕಾಲೇಜಿನ ಬಳಿ ಬಂದಿದ್ದಾರೆ. ವಾಯುವಿಹಾರಕ್ಕೆ ಬಿಟಿಎಲ್ ಕಾಲೇಜಿನ ಮುಂಭಾಗದ ಪಾರ್ಕಿಂಗ್ ಜಾಗದಲ್ಲಿ ತಮ್ಮ ಹೊಸ ಕಾರನ್ನು ನಿಲ್ಲಿಸುತ್ತಿದ್ದಂತೆ ದಾಳಿ ನಡೆಸಿ ಕಾರದಪುಡಿ ಎರಚಿ ಮಚ್ಚು, ಲಾಂಗುಗಳಿಂದ ತಲೆ ಹಾಗೂ ಎದೆ ಭಾಗಕ್ಕೆ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಶ್ರೀನಿವಾಸಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಪೊಲೀಸರು ಘಟನೆಯ ಮಾಹಿತಿ ಗೊತ್ತಾಗುತ್ತಿದ್ದಂತೆ ಮೃತ ದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಬಿಜೆಪಿಯ ಜನಪ್ರಿಯ ನಾಯಕನಾಗಿದ್ದ ಶ್ರೀನಿವಾಸಪ್ರಸಾದ್ ಅವರು ಕೊಲೆಯಾಗಿರುವ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಾಲ್ಲೂಕಿನ ಸಹಸ್ರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರು. ಘಟನೆ ಖಂಡಿಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಬಿಜೆಪಿಯ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 7ರ ಬೊಮ್ಮಸಂದ್ರದ ಬಳಿ ಪ್ರತಿಭಟನೆಗೆ ತೊಡಗಿದರು. ಈ ಸಂದರ್ಭದಲ್ಲಿ ಪೊಲೀಸರಿಗೂ ಹಾಗೂ ಬಿಜೆಪಿ ಕಾರ್ಯಕರ್ತರಿಗೂ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರು ನೂಕಾಟದಲ್ಲಿ ತೊಡಗಿರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಮನವೊಲಿಸಿ ರಾಷ್ಟ್ರೀಯ ಹೆದ್ದಾರಿಯ ಪ್ರತಿಭಟನೆ ತೆರವುಗೊಳಿಸಿದರು. ವಾಸು ಅವರ ಹತ್ಯೆ ಬಗ್ಗೆ ತಾಲ್ಲೂಕಿನಾದ್ಯಂತ ಸುದ್ದಿ ಹರಡುತ್ತಿದ್ದಂತೆ ಸಹಸ್ರಾರು ಜನರು ಕಿತ್ತಗಾನಹಳ್ಳಿಯತ್ತ ಬಂದಿದ್ದರಿಂದ ಚಂದಾಪುರದಿಂದ ಹೆಬ್ಬಗೋಡಿವರೆಗೂ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಎಲ್ಲಿ ನೋಡಿದರೂ ಜನರೇ ಜಮಾಯಿಸಿದ್ದರು.

ಮಧ್ಯಾಹ್ನ 3.30ರ ವೇಳೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ  ಮೃತದೇಹವನ್ನು  ಕಿತ್ತಗಾನಹಳ್ಳಿಗೆ ತರಲಾಯಿತು. ಶಾಲೆಯ ಆವರಣದಲ್ಲಿ ಮೃತದೇಹವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.

ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಸತೀಶ್‌ರೆಡ್ಡಿ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕೊಲೆ, ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಮುನಿರಾಜು, ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ಮೃತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು. 

ಆರೋಪಿಗಳ ಪತ್ತೆಗೆ ತಂಡ :  ಶ್ರೀನಿವಾಸ್ ಪ್ರಸಾದ್ ಕೊಲೆ ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಎಸ್.ಕೆ.ಉಮೇಶ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ತಂಡಗಳು ಕಾರ್ಯಾಚರಣೆ ಪ್ರಾರಂಭ ಮಾಡಿದ್ದು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಐಜಿಪಿ ಸೀಮಂತ್‌ಕುಮಾರ್ ತಿಳಿಸಿದರು.

***

ಇಂದು ಪ್ರತಿಭಟನೆ

ಪುರಸಭಾ ಸದಸ್ಯ ಶ್ರೀನಿವಾಸ್ ಪ್ರಸಾದ್ ಅವರ ಹತ್ಯೆಯನ್ನುಖಂಡಿಸಿ ಹಾಗೂ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಘಟಕದಿಂದ ಹೆಬ್ಬಗೋಡಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಶಿವಪ್ಪ ಅವರು ತಿಳಿಸಿದ್ದಾರೆ.

***

ಕೊಲೆಗೆ ರಾಜಕೀಯ  ಷಡ್ಯಂತ್ರ ಕಾರಣ

ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ ಇದು ರಾಜಕೀಯ ಷಡ್ಯಂತ್ರದಿಂದ ನಡೆದ ಕೊಲೆಯಾಗಿದೆ. ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕು. ಶಾಂತಿ ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು.   ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಿ.ಎಸ್.ವೀರಯ್ಯ ಮಾತನಾಡಿ, ಕೊಲೆ ಘಟನೆಯನ್ನು ಖಂಡಿಸಿ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಎಸ್‌ಸಿ ಮೋರ್ಚಾ ಘಟಕಗಳು ಮಾರ್ಚ್‌ 17ರಂದು ಪ್ರತಿಭಟನೆ ನಡೆಸಲಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT