ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌: ಗರಿಗೆದರಿದ ನಿರೀಕ್ಷೆ

Last Updated 15 ಮಾರ್ಚ್ 2017, 8:52 IST
ಅಕ್ಷರ ಗಾತ್ರ

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ರಾಜ್ಯದ ಮುಂಗಡ ಬಜೆಟ್‌ ಮಂಡಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಜನರ ನಿರೀಕ್ಷೆಗಳು ಗರಿಗೆದರಿವೆ.
ರಾಮನಗರವು ರಾಜಧಾನಿಯಿಂದ ಕೂಗಳತೆ ದೂರದಲ್ಲಿ ಇದ್ದು, ನಾಲ್ಕು ತಾಲ್ಲೂಕುಗಳ ಪುಟ್ಟ ಜಿಲ್ಲೆಯಾಗಿದೆ. ಜಿಲ್ಲಾ ಕೇಂದ್ರವಾಗಿ ಒಂದು ದಶಕ ಕಳೆದಿದ್ದು, ಮೂಲ ಸೌಕರ್ಯಗಳು ಇನ್ನಷ್ಟೇ ಅಭಿವೃದ್ಧಿ ಕಾಣಬೇಕಿದೆ. ಇಲ್ಲಿಗೆ ಅಗತ್ಯವಾದ ಯೋಜನೆಗಳ ಘೋಷಣೆ ಹಾಗೂ ಅವುಗಳಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆಯಾಗಿದೆ.

ಮೇಕೆದಾಟಿಗೆ ವಿಶೇಷ ಆದ್ಯತೆ: ರಾಜ್ಯದ ಬಹುಚರ್ಚಿತ ವಿಷಯಗಳಲ್ಲಿ ಒಂದಾಗಿರುವ ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಬಗ್ಗೆ ರಾಜ್ಯ ಸರ್ಕಾರವು ಈ ಬಗ್ಗೆ ಈಗಾಗಲೇ ಘೋಷಣೆ ಹೊರಡಿಸಿದೆ. ರಾಮನಗರ ಸಹಿತ ಸುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆಯ ದೃಷ್ಟಿಯಿಂದಲೂ ಈ ಯೋಜನೆ ಮಹತ್ವದ್ದಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ವಿಶೇಷ ಘೋಷಣೆಯ ನಿರೀಕ್ಷೆ ಇದೆ.

ಕುಡಿಯುವ ನೀರು ಯೋಜನೆ: ನಗರಗಳು ಬೆಳೆಯುತ್ತಿರುವ ವೇಗಕ್ಕೆ ತಕ್ಕಂತೆ ಅಲ್ಲಿನ ಜನರಿಗೆ ಕುಡಿಯುವ ನೀರು ಪೂರೈಕೆಯು ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ರಾಮನಗರ ನಗರಸಭೆಯ 31 ವಾರ್ಡುಗಳಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ನಗರಸಭೆಯ ಅಧಿಕಾರಿಗಳು ವಿಶೇಷ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಿಯೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

ಯೋಜನೆ ಮುಗಿದು ವರ್ಷಗಳೇ ಕಳೆದಿದ್ದರೂ ಉದ್ಘಾಟನೆಗೊಳ್ಳದ ಮಾಗಡಿ ತಾಲ್ಲೂಕಿನ ವೈ.ಜಿ. ಗುಡ್ಡ, ಶ್ರೀರಂಗ ಮೊದಲಾದ ಯೋಜನೆಗಳಿಗೆ ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಅನುದಾನ ನೀಡುವ ಮೂಲಕ ಅವುಗಳನ್ನು ಪುನಶ್ಚೇತನಗೊಳಿಸಿ ಸುತ್ತಲಿನ ಬಹುಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಾರ್ಯವು ತುರ್ತಾಗಿ ಆಗಬೇಕಿದೆ.

ರೇಷ್ಮೆಗೆ ಉತ್ತೇಜನ: ರೇಷ್ಮೆ ನಾಡು ಎಂದೇ ಖ್ಯಾತಿಯಾಗಿರುವ ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ಕೃಷಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಸರ್ಕಾರವು ಈ ಕಸುಬುಗಾರಿಕೆಯಲ್ಲಿ ತೊಡಗಿಕೊಂಡಿರುವ ಕೃಷಿಕರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿ ಪುನಶ್ಚೇತನಕ್ಕೆ ನಾಂದಿ ಹಾಡಬಹುದು ಎನ್ನುವ ನಿರೀಕ್ಷೆ ಇಲ್ಲಿನ ಜನರದ್ದು. ರೇಷ್ಮೆ ಮಾರುಕಟ್ಟೆ ವ್ಯವಸ್ಥೆಯಲ್ಲಿಯೂ ಹಲವು ಬದಲಾವಣೆಗಳ ನಿರೀಕ್ಷೆ ಹೊಂದಲಾಗಿದೆ.  ಗೂಡಿನ ಬೆಲೆಯ ಏರಿಳಿತದಿಂದಾಗಿ ಪದೇಪದೇ ಕೃಷಿಕರು ಹಾಗೂ ರೀಲರುಗಳ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಕೊನೆ ಹಾಡಬೇಕಿದೆ. ಮಾರಾಟ ವ್ಯವಸ್ಥೆಗೆ ಸುಧಾರಿತ ಗಣಕೀಕೃತ ಆನ್‌ಲೈನ್ ವ್ಯವಸ್ಥೆ ಬರಬೇಕಿದೆ. ಮುಖ್ಯವಾಗಿ ಆಧುನಿಕ ಮಾರುಕಟ್ಟೆ ನಿರ್ಮಾಣ ಆಗಬೇಕಿದೆ. ಅದಕ್ಕೆಂದು ಜಾಗ ಗುರುತಿಸಿ, ಒಂದಿಷ್ಟು ಹಣ ತೆಗೆದಿಟ್ಟಿದ್ದರೂ ಆ ಕಾರ್ಯಕ್ಕೆ ಇನ್ನೂ ಚಾಲನೆ ದೊರೆತಿಲ್ಲ.

ವೃಷಭಾವತಿ, ಅರ್ಕಾವತಿ ಪುನಶ್ಚೇತನ: ದಶಕಗಳ ಹಿಂದೆ ನದಿಯಾಗಿದ್ದ ವೃಷಭಾವತಿ ಇಂದು ಬೆಂಗಳೂರು ನಗರದ ಕೊಳಚೆ ನೀರು ಹೊತ್ತು ರಾಮನಗರದಲ್ಲಿ ಹರಿಯತೊಡಗಿದೆ. ಇದರಿಂದ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಸುತ್ತಲಿನ ಅಂತರ್ಜಲಕ್ಕೆ ಹಾನಿಯಾಗಿದ್ದು, ಇಲ್ಲಿ ಲಭ್ಯವಾಗುವ ನೀರು ಕುಡಿಯಲು, ವ್ಯವಸಾಯಕ್ಕೆ ಯೋಗ್ಯವಾಗಿಯೂ ಉಳಿದಿಲ್ಲ. ಹೀಗಾಗಿ ವೃಷಭಾವತಿ ಕಣಿವೆಯ ಪುನಶ್ಚೇತನ ಕಾರ್ಯವು ತುರ್ತಾಗಿ ನಡೆಯಬೇಕಿದೆ. ಕಳೆದ ನವೆಂಬರ್‌ನಲ್ಲಿ ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಸುರೇಶ್‌, ಶಾಸಕ ಎಚ್‌.ಸಿ. ಬಾಲಕೃಷ್ಣ  ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ಆಶಾಭಾವವಿದೆ.

ಕಸ ವಿಲೇವಾರಿ ಸಮಸ್ಯೆ: ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ ಕಸ ವಿಲೇವಾರಿಯೇ ಪ್ರಮುಖ ಸವಾಲಾಗಿದೆ. ಐದೂ ನಗರ–ಪಟ್ಟಣಗಳನ್ನು ಒಳಗೊಂಡ ತಾಜ್ಯ ಸಂಸ್ಕರಣ ಘಟಕಕ್ಕೆ ರಾಜ್ಯ ಸರ್ಕಾರದಿಂದ ನೆರವು ಘೋಷಣೆ ಆಗುವ ನಿರೀಕ್ಷೆ ಇದೆ.

ಕೈಗಾರಿಕಾ ಕಾರಿಡಾರ್‌: ಬೆಂಗಳೂರಿನ ಕೈಗಾರಿಕೆಗಳ ಬೆಳವಣಿಗೆಯ ಹೊರೆಯನ್ನು ಹೊತ್ತಿರುವ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಾದ ಬಿಡದಿ ಹಾಗೂ ಹಾರೋಹಳ್ಳಿ ನಡುವೆ ಕೈಗಾರಿಕಾ ಕಾರಿಡಾರ್‌ ರಚನೆ ಹಾಗೂ ಮೂಲ ಸೌಕರ್ಯಗಳ ವಿಸ್ತರಣೆ ವಿಚಾರವು ಈಗಾಗಲೇ ಸರ್ಕಾರದ ಗಮನಕ್ಕೆ ತಲುಪಿದೆ.

ಮೆಟ್ರೊ ರೈಲು ವಿಸ್ತರಣೆಯಾಗಲಿ: ಬೆಂಗಳೂರು ‘ನಮ್ಮ ಮೆಟ್ರೊ’ ರೈಲು ಈಗಾಗಲೇ ಕೆಂಗೇರಿಯವರೆಗೂ ವಿಸ್ತರಣೆ ಆಗುತ್ತಿದ್ದು, ಕಾಮಗಾರಿಗಳೂ ತ್ವರಿತ ಗತಿಯಲ್ಲಿ ನಡೆದಿವೆ. ಇದರ ಮುಂದುವರಿಕೆ ಭಾಗವಾಗಿ ಬಿಡದಿಯವರೆಗೆ ಮೆಟ್ರೊ ವಿಸ್ತರಣೆ ಆದಲ್ಲಿ ರಸ್ತೆ ಸಂಚಾರದ ಮೇಲಿನ ಒತ್ತಡ ನಿವಾರಣೆ ಆಗಲಿದೆ. ಕೈಗಾರಿಕೆಗಳ ಬೆಳವಣಿಗೆಗೂ ಪೂರಕವಾಗಲಿದೆ ಎಂಬ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಆಲೋಚನೆ ನಡೆಸಿರುವ ಸಾಧ್ಯತೆಯೂ ಇದೆ.

ಬಿಡದಿಗೆ ವಿಶೇಷ ಪ್ಯಾಕೇಜ್‌: ವರ್ಷದ ಹಿಂದಷ್ಟೇ ಪುರಸಭೆಯಾಗಿ ಮೇಲ್ದರ್ಜೆಗೆ ಏರಿರುವ  ಬಿಡದಿಯ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ನೆರವಿನ ನಿರೀಕ್ಷೆ ಇದೆ.

ಕೆರೆ ಯೋಜನೆಗಳಿಗೆ ಮರು ಜೀವ: ಚನ್ನಪಟ್ಟಣದಲ್ಲಿ ಶಾಸಕ ಸಿ.ಪಿ. ಯೋಗೇಶ್ವರ್‌ ನೇತೃತ್ವದಲ್ಲಿ ಇಗ್ಗಲೂರು ಬ್ಯಾರೇಜ್‌ನಿಂದ ಕೆರೆಗಳಿಗೆ ನೀರು ತುಂಬಿಸುವ  ಯೋಜನೆಯು ಈಗಾಗಲೇ ಯಶಸ್ಸು ಕಂಡಿದೆ. ಇದೇ ಮಾದರಿಯಲ್ಲಿ ಉಳಿದ ಮೂರು ತಾಲ್ಲೂಕುಗಳ ಕೆರೆಗಳಿಗೆ ಪುನಶ್ಚೇತನ ನೀಡುವ ಕಾರ್ಯವು ನಡೆದಿದೆ. ಮಾಗಡಿಯಲ್ಲಿ ಹೇಮಾವತಿ ನೀರು ತರುವ ಕಾರ್ಯ ಕುಂಟುತ್ತಾ ಸಾಗಿದೆ. ಇಲ್ಲಿನ ಅಂತರ್ಜಲ ಸುಧಾರಣೆ ದೃಷ್ಟಿಯಿಂದ ಈ ಕಾರ್ಯಕ್ಕೆ ಚುರುಕು ನೀಡುವ ಅಗತ್ಯವಿದ್ದು, ಸರ್ಕಾರದ ನಡೆ ಬಗ್ಗೆ ಕುತೂಹಲವಿದೆ.

ಜಲಾಶಯಗಳ ಅಭಿವೃದ್ಧಿ: ಕಳೆದ ನವೆಂಬರ್‌ನಲ್ಲಿ ಚಿತ್ರನಟರ ಸಾವಿನಿಂದ ಹೆಚ್ಚು ಸುದ್ದಿಯಾದ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯವು ಸಂಪೂರ್ಣ ಕಲುಷಿತಗೊಂಡಿದೆ. ಬರೀ ಹೂಳು, ಕೊಳಚೆ ನೀರು ತುಂಬಿರುವ ಜಲಾಶಯವನ್ನು ಅಭಿವೃದ್ಧಿ ಪಡಿಸಿ, ಬೆಂಗಳೂರು ನಗರಕ್ಕೆ ನೀರ ಪೂರೈಕೆಯ ಪರ್ಯಾಯ ಮೂಲವಾಗಿ ಉಳಿಸಿಕೊಳ್ಳಬೇಕಾದ ಸವಾಲು ಸರ್ಕಾರದ ಮುಂದಿದೆ. ಈ ದಿಸೆಯಲ್ಲಿ ಈಗಾಗಲೇ ಪರಿಶೀಲನೆಯೂ ನಡೆದಿದೆ. ಅಂತೆಯೇ ಜಿಲ್ಲೆಯ ಉಳಿದ ಜಲಾಶಯಗಳಾದ ಮಾಗಡಿಯ ಮಂಚನಬೆಲೆ ಹಾಗೂ ಕನಕಪುರ ತಾಲ್ಲೂಕಿನ ಹಾರೋಬೆಲೆ ಜಲಾಶಯಗಳ ಅಭಿವೃದ್ಧಿ ಹಾಗೂ ನೀರಿನ ಸದ್ಬಳಕೆ ಬಗ್ಗೆಯೂ ಚಿಂತನೆ ನಡೆಯಬೇಕಿದೆ.

ವನ್ಯಜೀವಿ–ಮಾನವ ಸಂಘರ್ಷ: ಜಿಲ್ಲೆಯಾದ್ಯಂತ ಈಚಿನ ವರ್ಷಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷವು ತಾರಕಕ್ಕೆ ಏರಿದೆ. ಅದರಲ್ಲೂ ಆನೆಗಳು, ಚಿರತೆಗಳು ಹಳ್ಳಿಗಳಿಗೆ ನುಗ್ಗಿ ಬೆಳೆ ಹಾನಿ, ಪ್ರಾಣ ಹಾನಿ ಮಾಡುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವಿದ್ದು, ಅದರ ಸುತ್ತ ಸೌರ ವಿದ್ಯುತ್‌  ತಂತಿಬೇಲಿ, ಕಂದಕಗಳ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಬೇಕೆನ್ನುವ ಒತ್ತಾಯ ಕೇಳಿಬಂದಿದೆ.

***

ನಿರೀಕ್ಷಿತ ಯೋಜನೆಗಳಿಗೆ ಬೇಕಿದೆ ಬದ್ಧತೆ

ರಾಮನಗರದ ಅರ್ಚಕರಹಳ್ಳಿ ಬಳಿ  ಸುಮಾರು ₹340 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣ ಕಾರ್ಯವು ದಶಕದಿಂದಲೂ ಕುಂಟುತ್ತಲೇ ಇದೆ. ಈಗಲಾದರೂ ರಾಜ್ಯ ಸರ್ಕಾರ ಬದ್ಧತೆ ಪ್ರದರ್ಶಿಸಿ ಕನಿಷ್ಠ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಅಗತ್ಯವಿದೆ.

₹60 ಕೋಟಿ ವೆಚ್ಚದಲ್ಲಿ ರಾಮನಗರದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾರ್ಯವೂ ನನೆಗುದಿಗೆ ಬಿದ್ದಿದೆ. ಬಹುನಿರೀಕ್ಷಿತ ಯೋಜನೆಗಳಾದ ಕೆಂಗಲ್ ಹಾಗೂ ಕನಕಪುರದಲ್ಲಿ ಹಾಲಿನ ಪುಡಿ ಉತ್ಪಾದನಾ ಕೇಂದ್ರ ಹಾಗೂ ಶೀತಲೀಕರಣ ಘಟಕಗಳ ಕಾಮಗಾರಿಗಳಿಗೆ ವೇಗ ಒದಗಿಸುವುದು.

ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ ಬಳಿ ಮಾವು ಸಂಸ್ಕರಣ ಘಟಕಕ್ಕೆ ಚಾಲನೆ, ಇಂಧನ ಇಲಾಖೆಯ ವತಿಯಿಂದ ಮರಳವಾಡಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿರುವ ‘ಸೂರ್ಯ’ ಯೋಜನೆಯ ವಿಸ್ತರಣೆ. ಕನಕಪುರದ ರೈತರಿಗೆ ನೆರವಾಗಿರುವ ‘ಹೈ ವೋಲ್ಟೇಜ್‌ ಡಿಸ್ಟ್ರಿಬ್ಯುಷನ್‌ ಸಿಸ್ಟಂ’ ಅನ್ನು ಉಳಿದ ಮೂರು ತಾಲ್ಲೂಕಿಗೂ ವಿಸ್ತರಿಸುವುದು... ಹೀಗೆ ಹತ್ತು ಹಲವು ಯೋಜನೆಗಳಿಗೆ ಸರ್ಕಾರವು ಸ್ಪಂದಿಸುವ ನಿರೀಕ್ಷೆ ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT