ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿ ಪಿಚ್‌ ಮೇಲೆ ಎಲ್ಲರ ಕಣ್ಣು

ಕ್ರಿಕೆಟ್‌: ಭಾರತ–ಆಸ್ಟ್ರೇಲಿಯಾ ನಡುವೆ ಇಂದಿನಿಂದ ಟೆಸ್ಟ್‌, ಹೊಸ ಅಂಗಳದಲ್ಲಿ ನಿರೀಕ್ಷೆಗಳ ಭಾರ
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಣದ ‘ಬಾರ್ಡರ್‌  ಗಾವಸ್ಕರ್‌ ಟ್ರೋಫಿ’ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯ ಗುರುವಾರ  ಆರಂಭವಾಗಲಿದ್ದು ಹಲವು ದಿನಗಳಿಂದ ಪದೇ ಪದೇ ಚರ್ಚೆಗೆ ಕಾರಣವಾಗಿರುವ ಪಿಚ್‌ ಮೇಲೆಯೇ ಉಭಯ ತಂಡಗಳ ಚಿತ್ತ ನೆಟ್ಟಿದೆ.

ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಚೊಚ್ಚಲ ಟೆಸ್ಟ್‌ ಆಯೋಜನೆಯಾಗಿದೆ. ನಾಲ್ಕು ಪಂದ್ಯಗಳ ಸರಣಿ ಇದಾಗಿದ್ದು ಸದ್ಯಕ್ಕೆ ಉಭಯ ತಂಡಗಳು 1–1ರಲ್ಲಿ ಸಮಬಲ ಹೊಂದಿವೆ.

ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಸ್ಟೀವನ್‌ ಸ್ಮಿತ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ 333 ರನ್‌ಗಳಿಂದ ಗೆಲುವು ಪಡೆದಿತ್ತು. ಬೆಂಗಳೂರಿನಲ್ಲಿ ಜರುಗಿದ್ದ ಎರಡನೇ ಪಂದ್ಯದಲ್ಲಿ ಭಾರತ 75 ರನ್‌ಗಳ ಜಯ ಸಾಧಿಸಿತ್ತು. ಆದ್ದರಿಂದ ಉಳಿದ ಎರಡು ಪಂದ್ಯಗಳು ಉಭಯ ತಂಡಗಳಿಗೂ ಮುಖ್ಯವಾಗಿವೆ.

ಟೆಸ್ಟ್ ಸರಣಿಗಿಂತ ಪಿಚ್‌ ವಿವಾದವೇ ಹೆಚ್ಚು ಚರ್ಚೆಯಾಗುತ್ತಿದೆ. ಏಕೆಂದರೆ ಪುಣೆಯ ಪಿಚ್‌ ಕಳಪೆ ಎಂದು ರೆಫರಿ ದೂರು ನೀಡಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಕೂಡ ಸಾಧಾರಣಕ್ಕಿಂತಲೂ ಕಡಿಮೆ ಗುಣಮಟ್ಟದ್ದಾ ಗಿತ್ತು ಎಂದು ರೆಫರಿ ಕ್ರಿಸ್‌ ಬ್ರಾಡ್ ಹೇಳಿದ್ದಾರೆ. ಆದ್ದರಿಂದ ಚೊಚ್ಚಲ ಟೆಸ್ಟ್‌ ಸಂಭ್ರ ಮಕ್ಕೆ ಅಣಿಯಾಗಿರುವ ಜಾರ್ಖಂಡ್‌ ಕ್ರೀಡಾಂಗಣದ  ಪಿಚ್‌ ಹೇಗಿರಲಿದೆ ಎನ್ನುವ ಕುತೂಹಲವಿದೆ.

ಸ್ಮಿತ್‌ ಮತ್ತು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಇಲ್ಲಿನ ಪಿಚ್‌ ಬಗ್ಗೆಯೇ ಹೆಚ್ಚು ಮಾತನಾಡಿ ದ್ದಾರೆ.  ಮೂರ್ನಾಲ್ಕು ದಿನಗಳ ಹಿಂದೆ ಮಹೇಂದ್ರ ಸಿಂಗ್ ದೋನಿ ಅವರು ಜೆಸಿಎ ಅಂಗಳದ ಪಿಚ್ ಪರಿಶೀಲಿಸಿದ್ದರು. ಆತಿಥೇಯ ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ ಕೂಡ ಬುಧ ವಾರ  ಪಿಚ್‌ ವೀಕ್ಷಿಸಿದರು. ಅಷ್ಟೇ ಅಲ್ಲ ಪೂರ್ವ ವಲಯದ ಪಿಚ್‌ ಕ್ಯುರೇಟರ್‌ ಆಶಿಶ್‌ ಭೌಮಿಕ್‌ ಜೊತೆಗೆ ಚರ್ಚಿಸಿದರು.

ಬ್ಯಾಟಿಂಗ್ ವೈಫಲ್ಯದ ಚಿಂತೆ: ಹಿಂದಿನ ಸರಣಿಗಳಲ್ಲಿ ರನ್ ಮಳೆ ಸುರಿಸಿದ್ದ ಭಾರತ ತಂಡದವರು ಕಾಂಗರೂಗಳ ನಾಡಿನ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾರೆ.

ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 17 ರನ್‌ಗೆ ಔಟಾಗಿದ್ದ ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ದ್ವಿತೀಯ ಇನಿಂಗ್ಸ್‌ನಲ್ಲಿ 92 ರನ್ ಹೊಡೆದಿದ್ದರು. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿರುವ ಅಜಿಂಕ್ಯ ರಹಾನೆ ಮತ್ತು ವಿರಾಟ್‌ ಕೊಹ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.

ಸ್ಪಿನ್ನರ್‌ಗಳೇ ನಿರ್ಣಾಯಕರು:  ಪ್ರವಾಸಿ ತಂಡ ಸ್ಥಿರ ಬ್ಯಾಟಿಂಗ್ ಮಾಡುವಲ್ಲಿ ವಿಫ ಲವಾಗುತ್ತಿದೆ. ಬೆಂಗಳೂರಿನ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಈ ತಂಡ ದವರು 112 ರನ್ ಗಳಿಸುವಷ್ಟರಲ್ಲಿ ಆಲೌಟ್‌ ಆಗಿದ್ದರು. ಆಗ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ರವಿಚಂದ್ರನ್‌ ಅಶ್ವಿನ್‌ ಹೆಚ್ಚು ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡವನ್ನು ಸೋಲಿನ ಪ್ರಪಾತಕ್ಕೆ ನೂಕಿದ್ದರು.

ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನೇಥನ್‌ ಲಿಯಾನ್ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲ ಎರಡೂ ಪಂದ್ಯಗಳಲ್ಲಿ ಸ್ಪಿನ್ನರ್‌ಗಳೇ ಪ್ರಾಬಲ್ಯ ಮೆರೆದಿರುವ ಕಾರಣ ರಾಂಚಿ ಅಂಗಳದಲ್ಲಿ  ಸ್ಪಿನ್ನರ್‌ಗಳೇ ನಿರ್ಣಾಯಕರು.

ವಿರಾಟ್ ಕೊಹ್ಲಿ– ಸ್ಮಿತ್ ಜೊತೆ ಮಾತುಕತೆ
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ನಾಯಕ ಸ್ಟೀವನ್‌ ಸ್ಮಿತ್‌ ಜೊತೆ ಐಸಿಸಿ ಪಂದ್ಯದ ರೆಫರಿ ರಿಚಿ ರಿಚರ್ಡ್‌ಸನ್‌ ಅವರು ಬುಧವಾರ ಮಾತನಾಡಿದರು.

ಡಿಆರ್‌ಎಸ್‌ ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ಸ್ಮಿತ್‌ ನಿಯಮ ಉಲ್ಲಂಘಿಸಿದ್ದರಿಂದ ಉಭಯ ತಂಡಗಳ ನಾಯಕರ ನಡುವೆ ಹಿಂದಿನ ಪಂದ್ಯದ ವೇಳೆ ಮಾತಿನ ಚಕಮಕಿ ನಡೆದಿತ್ತು.

ವಿಜಯ್‌ ಫಿಟ್‌
ಭುಜದ ನೋವಿಗೆ ಒಳಗಾಗಿ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದ ಮುರಳಿ ವಿಜಯ್‌ ಚೇತರಿಸಿಕೊಂಡಿದ್ದು ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ಕರ್ನಾಟಕದ ಕೆ.ಎಲ್‌. ರಾಹುಲ್‌ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಹಿಂದಿನ ಪಂದ್ಯದಲ್ಲಿ ರಾಹುಲ್‌ ಜೊತೆ ಇನಿಂಗ್ಸ್ ಆರಂಭಿಸಿದ್ದ ಅಭಿನವ್‌ ಮುಕುಂದ್‌ ಎರಡೂ ಇನಿಂಗ್ಸ್‌ ಸೇರಿ 16 ರನ್ ಮಾತ್ರ ಗಳಿಸಿದ್ದರು.

ವಿವಾದ ಮರೆಯಲು ಅವಕಾಶ
ಅಂಪೈರ್‌ ತೀರ್ಪು ಪರಿಶೀಲನಾ ಪದ್ಧತಿ ಬಳಕೆ ಮಾಡಿಕೊಳ್ಳುವ ವಿಷಯದಲ್ಲಿ ನಿಯಮ ಉಲ್ಲಂಘಿಸಿದ್ದ ಸ್ಮಿತ್‌ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿ ನಂತರ ಹಿಂದಕ್ಕೆ ಪಡೆದುಕೊಂಡಿತ್ತು. ಆದ್ದರಿಂದ ಎರಡನೇ ಪಂದ್ಯ ವಿವಾದದಲ್ಲಿ ಅಂತ್ಯಕಂಡಿತ್ತು. 

ಡಿಆರ್‌ಎಸ್‌ ಬಳಸಿಕೊಳ್ಳಲು ಸ್ಮಿತ್‌ ಡ್ರೆಸ್ಸಿಂಗ್ ಕೊಠಡಿಯ ನೆರವು ಪಡೆದದ್ದು ವಿವಾದಕ್ಕೆ ಕಾರಣವಾಗಿತ್ತು. ಅದನ್ನೆಲ್ಲಾ ಮರೆತು ಕ್ರಿಕೆಟ್‌ನತ್ತ ಗಮನ ಹರಿಸಲು ಉಭಯ ತಂಡಗಳಿಗೂ ಈ ಪಂದ್ಯ ವೇದಿಕೆಯಾಗಿದೆ.

ಆಸ್ಟ್ರೇಲಿಯಾಕ್ಕೆ 800ನೇ ಟೆಸ್ಟ್‌
ಬುಧವಾರಕ್ಕೆ ಸರಿಯಾಗಿ 140 ವರ್ಷಗಳ ಹಿಂದೆ ಮೊದಲ ಟೆಸ್ಟ್ ಆಸ್ಟ್ರೇಲಿಯಾ ತಂಡ ಈಗ 800ನೇ ಪಂದ್ಯದ ಸಂಭ್ರಮದಲ್ಲಿದೆ. 1877ರ ಮಾರ್ಚ್‌ 15ರಂದು ಕಾಂಗರೂಗಳ ನಾಡಿನ ತಂಡ ಇಂಗ್ಲೆಂಡ್‌ ಎದುರು ತನ್ನ ಮೊದಲ ಟೆಸ್ಟ್‌ ಆಡಿತ್ತು. ಮೆಲ್ಬರ್ನ್‌ ಮೈದಾನದಲ್ಲಿ ನಡೆದಿದ್ದ  ಪಂದ್ಯವನ್ನು ಸುಮಾರು 12,000 ಜನ ವೀಕ್ಷಿಸಿದ್ದರು. ಆಗ ಆಸ್ಟ್ರೇಲಿಯಾ 45 ರನ್‌ಗಳ ಗೆಲುವು ಪಡೆದಿತ್ತು.

*
ಬೆಂಗಳೂರಿನ ಪಂದ್ಯದ ವೇಳೆ ಏನಾಯಿತೊ ಅದನ್ನು ಅಲ್ಲಿಗೆ ಬಿಟ್ಟು ಬಂದಿದ್ದೇವೆ. ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ಗೆಲುವು ಪಡೆಯು ವುದರತ್ತ ಮಾತ್ರ ನಮ್ಮ ಗಮನ.
-ವಿರಾಟ್‌ ಕೊಹ್ಲಿ,
ಭಾರತ ತಂಡದ ನಾಯಕ

*
ಹಿಂದಿನ ಟೆಸ್ಟ್‌ನಲ್ಲಿ ನನ್ನಿಂದ ತಪ್ಪಾಗಿತ್ತು. ಅದನ್ನು ಒಪ್ಪಿಕೊಂಡಿದ್ದೇನೆ. ಆದರೆ ಕೊಹ್ಲಿ ಆ ವಿವಾದದ ಕುರಿತು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದು ಸರಿಯಲ್ಲ.
-ಸ್ಟೀವನ್‌ ಸ್ಮಿತ್‌,
ಆಸ್ಟ್ರೇಲಿಯಾ ತಂಡದ ನಾಯಕ

*
ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT