ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಮಂಚಕೆ ಬಾ, ಚಕೋರಿ!

e–ಪುಸ್ತಕ
Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಲೋಕದ ಸಂಕಟಗಳನ್ನೆಲ್ಲ ಹೇರಿಕೊಂಡಿರುವ ‘ಸಮಕಾಲೀನ ಕನ್ನಡ ಕವಿತೆ’ ದಣಿದಿರುವುದನ್ನು ಕಾವ್ಯರಸಿಕರು ಬಲ್ಲರು. ಈಗಲೂ ಪ್ರೇಮದ ಹಾಡುಗಳಿಗೆ, ತಾರುಣ್ಯದ ಕಾವಿನ ಕನವರಿಕೆಗಳಿಗೆ ಹಳೆಯ ಕವಿಗಳ ಹಾಡುಗಳನ್ನೇ ನೇವರಿಸಬೇಕು.

ಹೀಗೆ ಮರಳಿ ಮರಳಿ ಓದಲು ಒತ್ತಾಯಿಸುವ ಕವಿತೆಗಳ ಗುಚ್ಛ ಕುವೆಂಪು ಅವರ ‘ಚಂದ್ರಮಂಚಕೆ ಬಾ, ಚಕೋರಿ!’. 1954ರಲ್ಲಿ ‘ಉದಯರವಿ’ ಪ್ರಕಾಶನದ ಮೂಲಕ ಮೊದಲ ಮುದ್ರಣ ಕಂಡ ಈ ಕೃತಿಯ ಅಂದಿನ ಕ್ರಯ: ರೂ 2 ರೂಪಾಯಿ 12 ಪೈಸೆ ಕ್ರಯ. ‘ರಸ ತಪಸ್ಯೆಯ ಕಾಣಿಕೆ / ಗೃಹ ತಪಸ್ವಿನಿ ಹೇಮಿಗೆ’ ಎನ್ನುವ ಮೂಲಕ ಚಕೋರಿ ಕವಿತೆಗಳನ್ನು ಕುವೆಂಪು ತಮ್ಮ ಪತ್ನಿಗೆ ಅರ್ಪಿಸಿದ್ದಾರೆ.

ಇಲ್ಲಿನ 59 ಕವಿತೆಗಳು ಪ್ರೇಮದ ಅನನ್ಯತೆಯನ್ನು ಹಾಗೂ ಆ ಪ್ರೇಮವನ್ನು ಮೊಗೆಮೊಗೆದು ಕೊಡುವ ಸಂಗಾತಿಯ ಒಲವಿನ ಉದಾತ್ತತೆಯನ್ನು ಬಣ್ಣಿಸಿದೆ.

‘ತೆರೆಯ ಚಿಮ್ಮಿಸಿ, ನೆರೆಯ ಹೊಮ್ಮಿಸಿ / ಕ್ಷೀರಸಾಗರದಲ್ಲಿ ತೇಲುವ / ಬಾಗುಚಂದ್ರನ ತೂಗುಮಂಚಕೆ / ಬಾ, ಚಕೋರಿ! ಬಾ. ಚಕೋರಿ / ಎದೆ ಹಾರಿದೆ ಬಾಯಾರಿದೆ / ಚಕೋರ ಚುಂಬನ!’ ಎನ್ನುವುದು ಕವಿಯ ಮುಕ್ತ ಆಹ್ವಾನ.

‘ಅಮೃತಕಲಶ ತೀರ್ಥ ಜಲದ / ಮಧುರ ವಕ್ಷ ಮೃದುಸ್ಥಲದಿ / ಮಲಗಿಸೆನ್ನ ಮುದ್ದಿಸು / ರಸೋನಿದ್ದೆಗದ್ದಿಸು’ ಎಂದು ಕೊಂಚ ಬಿಡುಬೀಸಾಗಿಯೇ ಕವಿ ತಮ್ಮ ಕೋಮಲ ಭಾವನೆಗಳನ್ನು ಅನಾವರಣಗೊಳಿಸಿದ್ದಾರೆ.

ಓದುಗರಿಗೆ ಅವರವರ ರಸಗಳಿಗೆಗಳನ್ನು ಉದ್ದೀಪಿಸುವಷ್ಟು ಇಲ್ಲಿನ ಚಿತ್ರಬಿಂಬಗಳು ಸೊಗಸಾಗಿವೆ. ಚಕೋರಿ ಪದ್ಯಗಳು ಕಾಮನೆಗಳ ಕುರಿತಷ್ಟೇ ಮಾತನಾಡುವುದಿಲ್ಲ. ಅಂತರಂಗದ ಸಾಮೀಪ್ಯದ ಕುರಿತೂ ಹೇಳುತ್ತಾ – ‘ಅಂಗ ಮಾತ್ರವಲ್ಲ, ಬೇಕು / ನಿನ್ನ ಸಂಗ; / ಸಂಗ ಮಾತ್ರವಲ್ಲ, ಬೇಕು /

ಅಂತರಂಗ’ ಎನ್ನುವ ನಿಲುವಿಗೆ ತಲುಪುವುದು ಈ ಕವಿತೆಗಳ ಹಿಂದಿನ ಮನೋಧರ್ಮದಂತೆ ಕಾಣಿಸುತ್ತದೆ. ಪ್ರೇಮದ ತುತ್ತತುದಿಯಲ್ಲಿ ಕವಿಗೆ ತನ್ನ ಸಂಗಾತಿ, ಅಮ್ಮನ ರೂಪದಲ್ಲಿ ಕಾಣಿಸುತ್ತಾರೆ; ಭಗವತಿಯೂ ಆಗುತ್ತಾರೆ.

ಇದು ಪ್ರೇಮದ ಔನ್ನತ್ಯ. ಪ್ರೇಮಲೋಕಕ್ಕೆ ರಸಿಕರನ್ನು ಆಹ್ವಾನಿಸುವ ‘ಚಂದ್ರಮಂಚಕೆ ಬಾ, ಚಕೋರಿ!’ ಕೃತಿಯನ್ನು goo.gl/WYeD7H ಕೊಂಡಿ ಬಳಸಿ ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT