ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಹಕ್ಕಿಗಳಿಗೆ ಒಂದು ಧಾಮ

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಆಧುನೀಕರಣ ಕಾಡನ್ನೂ ಬಿಟ್ಟಿಲ್ಲ. ಇದರಿಂದ ವನ್ಯಜೀವಿಗಳ ತಾಣಗಳು ಕಣ್ಮರೆಯಾಗುತ್ತಿರುವುದಲ್ಲದೆ ಪ್ರಾಣಿಸಂಕುಲದ ಜೀವನಚಕ್ರವೂ ತೊಂದರೆಗೀಡಾಗುತ್ತಿದೆ.

ಅದರಲ್ಲೂ ವಂಶಾಭಿವೃದ್ಧಿಗೆ ಅಲ್ಲಿಂದಿಲ್ಲಿಗೆ ವಲಸೆ ಹೋಗುವ ಹಕ್ಕಿಗಳ ಮೇಲಿನ ಪರಿಣಾಮವಂತೂ ಗಣನೆಗೆ ತೆಗೆದುಕೊಂಡವರಿಲ್ಲ. ಆದರೆ ಇದಕ್ಕೆ ಅಪವಾದವೆಂಬಂತೆ ಚೀನಾದಲ್ಲೊಂದು ‘ಹಕ್ಕಿಗಳ ನಿಲ್ದಾಣ’ ನಿರ್ಮಾಣಗೊಳ್ಳುತ್ತಿದೆ. ಅದರ ಹೆಸರು ‘ಬರ್ಡ್ಸ್‌  ಏರ್‌ಪೋರ್ಟ್‌’.

ಹೆಸರು ಕೇಳಿದಾಕ್ಷಣ, ಪಕ್ಷಿಗಳಿಗೂ ವಿಮಾನ ನಿಲ್ದಾಣಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎನ್ನಿಸಬಹುದು. ಆದರೆ ಪಕ್ಷಿ ಹಾಗೂ ವಿಮಾನದ ಕೆಲಸ ಹಾರುವುದೇ ಅಲ್ಲವೇ? ಆದ್ದರಿಂದ   ಪಕ್ಷಿಗಳಿಗೂ ನಿಲ್ದಾಣ ಎಂಬಂತೆ ಈ ಪಕ್ಷಿಧಾಮವನ್ನು ವಿನ್ಯಾಸಗೊಳಿಸಲಾಗುವುದಂತೆ.

ಚೀನಾದ ಲಿಂಗ್ಯಾಂಗ್‌ನಲ್ಲಿ ವಲಸೆ ಹಕ್ಕಿಗಳಿಗೆಂದೇ ವಿಶೇಷವಾಗಿ ರೂಪುಗೊಳ್ಳುತ್ತಿರುವ ಪಕ್ಷಿಧಾಮ ಇದು. ಮೆಕ್ ಗ್ರಾಗರ್ ಕೋಕಲ್ಸ್ ಎಂಬ ಅಂತರರಾಷ್ಟ್ರೀಯ ವಿನ್ಯಾಸಕ ಈ ಯೋಜನೆಯ ವಿನ್ಯಾಸದ ಜವಾಬ್ದಾರಿಯನ್ನು ಕೈಗೆತ್ತಿಕೊಂಡಿರುವುದು. ಇತ್ತೀಚೆಗೆ ನಗರೀಕರಣದ ಪ್ರಭಾವ ಮಿತಿ ಮೀರಿದ್ದು, ಅದನ್ನು ಒಂದಿಷ್ಟಾದರೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ.

ಪ್ರತಿವರ್ಷವೂ ಅಂಟಾರ್ಟಿಕದಿಂದ ಪೂರ್ವ ಏಷ್ಯಾ -ಆಸ್ಟ್ರೇಲಿಯಾದ ವಲಸೆ ಮಾರ್ಗವಾಗಿ ಸುಮಾರು ಐದು ಕೋಟಿ ವಲಸೆ ಹಕ್ಕಿಗಳು ಹಾದು ಹೋಗುತ್ತವೆ. ಆ ಮಾರ್ಗದಲ್ಲಿ ಚೀನಾದ ಪೋರ್ಟ್‌ ಆಫ್ ಟಿಯಾಂಜಿನ್ ಬಳಿಯೂ ವಲಸೆ ಹಕ್ಕಿಗಳು ಒಂದಷ್ಟು ಸಮಯ ನೆಲೆಸುತ್ತವೆ. ಆದ್ದರಿಂದ ಅವುಗಳಿಗೆ ವ್ಯವಸ್ಥಿತ ನೆಲೆ ರೂಪಿಸಿ ಅವುಗಳಿಗೆಂದೇ ಹಸಿರು ವಾತಾವರಣ ನಿರ್ಮಿಸುವ ಯೋಜನೆ ಸಿದ್ಧಗೊಳಿಸಲಾಗಿದೆ.

60 ಹೆಕ್ಟೇರ್ ಪ್ರದೇಶವನ್ನು ಈ ಯೋಜನೆಗೆ ಮೀಸಲಿರಿಸಲಾಗಿದೆ. ಪಕ್ಷಿಗಳಿಗೆ, ಅವುಗಳ ವಂಶಾಭಿವೃದ್ಧಿಗೆ ನೆರವಾಗುವಂಥ ವಾತಾವರಣ ಕಲ್ಪಿಸಲೆಂದು ಮಡ್ ಫ್ಲಾಟ್, ರೀಡ್ ಏರಿಯಾ, ಐಲೆಂಡ್ ಲೇಕ್, ಬುಷ್ ಎಂದು ನಾಲ್ಕು ವಿಭಾಗಗಳು ಧಾಮದಲ್ಲಿರಲಿವೆ.

ವ್ಯರ್ಥವಾದ ನೀರನ್ನು ಮರುಬಳಕೆ ಮಾಡುವ ಮೂಲಕ ಹಾಗೂ ಸಂಗ್ರಹಿತ ಮಳೆ ನೀರನ್ನು ಈ ಧಾಮಕ್ಕೆ ಹರಿಬಿಟ್ಟು ತೇವಾಂಶ ಉಳಿಸಿಕೊಳ್ಳಲಾಗುವುದಂತೆ. ಹೆಚ್ಚು ಖರ್ಚಿಲ್ಲದೇ ಧಾಮವನ್ನು ನಿಭಾಯಿಸುವ ಆಲೋಚನೆ ಇದರ ಹಿಂದಿರುವುದಂತೆ.

ವಲಸಿತ ಹಕ್ಕಿಗಳನ್ನು ರಕ್ಷಿಸುವ, ಈ ಮೂಲಕ ಅವುಗಳ ಸಂತತಿಯನ್ನು ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದಿದ್ದಾರೆ ಗ್ರೆಗೊರ್. ಪಕ್ಷಿಗಳೊಂದಿಗೆ ಸುತ್ತಮುತ್ತಲ ಜನಕ್ಕೂ ಉಪಯೋಗವಾಗಬೇಕೆಂದು ನಡಿಗೆಗೆ ಹಾಗೂ ಸೈಕ್ಲಿಂಗ್‌ಗೂ ಜಾಗ ಮೀಸಲಿಡಲಾಗಿದೆ. ಸ್ವಲ್ಪ ವರ್ಷಗಳ ನಂತರ ವಾಟರ್ ಪೆವಿಲಿಯನ್ ಎಂಬ ಸಂಶೋಧನಾ ಕೇಂದ್ರವನ್ನು ತೆರೆಯುವ ಆಲೋಚನೆಯಿದ್ದು, ಈ ಬರ್ಡ್ಸ್‌ ಏರ್‌ಪೋರ್ಟ್‌ನ ಯೋಜನೆ ಕಾರ್ಯರೂಪಕ್ಕೆ ಬರುವುದು 2017ರ ಅಂತ್ಯದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT