ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಾಚರಣೆ ಯಾರಿಗಾಗಿ?

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಹಿಳಾ ದಿನಾಚರಣೆಯಂದು ಹಲವು ಸಂದೇಶಗಳು ನನ್ನ ಮೊಬೈಲ್‌ನಲ್ಲಿ ಸದ್ದು ಮಾಡುತ್ತಿದ್ದವು. ಅದರಲ್ಲಿ ಕೆಲವು, ಯಾರೋ ಕಳುಹಿಸಿದ್ದನ್ನು ಫಾರ್ವರ್ಡ್‌ ಮಾಡಿದ್ದ ಸಂದೇಶ ಗಳಾಗಿದ್ದವು. ಒಂದು ಕ್ಷಣ ಯೋಚಿಸಿದಾಗ, ಈ ಬಗೆಯ ದಿನಾಚರಣೆಗಳೆಲ್ಲ ಹೀಗೆ ಕೇವಲ ಸಂದೇಶ ಕಳುಹಿಸುವುದಕ್ಕಷ್ಟೇ ಸೀಮಿತವಾಗುತ್ತಿವೆಯೇ ಎನಿಸಿತು.

ಹೆಣ್ಣನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತೇವೆ. ಆದರೆ ಮನೆಯ ಹಣಕಾಸು ವ್ಯವಹಾರ ನೋಡಿಕೊಳ್ಳುವವ ಪುರುಷನೇ ಆಗಿರುತ್ತಾನೆ. ಹೆಣ್ಣನ್ನು ಸರಸ್ವತಿ ಎಂದು ಕರೆಯುತ್ತೇವೆ. ಹಾಗೆಯೇ ಮಹಿಳೆಯ ಹೆಸರನ್ನು ಶಾಲೆಗೆ ಇಟ್ಟರೂ ಅದರ ಅಧಿಕಾರ ಇರುವುದು ಪುರುಷನ ಕೈಯಲ್ಲೇ. ಹೆಣ್ಣನ್ನು ಧರಣಿ ಎನ್ನುತ್ತೇವೆ. ಆದರೆ ಜಮೀನು ಇರುವುದು ಯಜಮಾನನ ಹೆಸರಿನಲ್ಲಿ. ಮಹಿಳೆಯರು ಎಲ್ಲಾ ರಂಗದಲ್ಲಿಯೂ ಮುಂದುವರಿಯುತ್ತಿದ್ದಾರೆ ಎಂದು ಹೇಳುತ್ತೇವಾದರೂ, ಉದ್ಯೋಗ ಕ್ಷೇತ್ರದಲ್ಲಿ ಅವರ ಸಂಖ್ಯೆ ತೀರಾ ಕಡಿಮೆ.

ಯಾವುದೋ ಪುಸ್ತಕದಲ್ಲಿ ಯಾರೋ ಬರೆದ ವಾಕ್ಯಗಳನ್ನು ಓದಿ ಚಪ್ಪಾಳೆ ಗಿಟ್ಟಿಸಿಕೊಂಡು ಎದ್ದು ಹೋಗುವ ದಿನಾಚರಣೆಗಳಿಂದ ಯಾರಿಗೂ ಪ್ರಯೋಜನವಿಲ್ಲ. ಎಷ್ಟೋ ಕಡೆ ಭಾಷಣಗಳಲ್ಲಿ ಪುರುಷರ ವಿರುದ್ಧ ಮಹಿಳೆ ಹೋರಾಡಬೇಕು ಎಂಬ ಮಾತು ಕೇಳಿಬರುತ್ತದೆ. ವಾಸ್ತವದಲ್ಲಿ ಎಷ್ಟೋ ಬಾರಿ ಅವಳು ದೌರ್ಜನ್ಯಕ್ಕೆ ಒಳಗಾಗುವುದು ಇನ್ನೊಬ್ಬ ಮಹಿಳೆಯಿಂದಲೇ.

ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣ ಸಾಧ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕಿರು ಸಾಲ ನೀಡುವ ಸಂಸ್ಥೆಗಳು ಹೆಚ್ಚಾಗಿ, ಸಾಲದ ಮೇಲೆ ಸಾಲ ಕೊಟ್ಟು ಸದಸ್ಯೆಯರನ್ನು ಸಾಲಗಾರರನ್ನಾಗಿ ಮಾಡಿವೆ. ಮರುಪಾವತಿಯ ಸಂಕಷ್ಟದಲ್ಲಿ ಅವರು ದಿನ ದೂಡುವಂತಾಗಿದೆ.

ಇದು, ಮಹಿಳೆ ಮೇಲೆ ಆಗುತ್ತಿರುವ ಆರ್ಥಿಕ ಶೋಷಣೆ. ಮೊದಲು ಮಹಿಳೆಯನ್ನು ಗೌರವಿಸಿ, ಪ್ರೋತ್ಸಾಹಿಸಬೇಕು. ಆಕೆ ನಿರ್ವಹಿಸುವ  ಕೆಲಸಗಳನ್ನು ಗುರುತಿಸಬೇಕು. ಇದರಿಂದ ಆಕೆಯಲ್ಲಿ ಆತ್ಮವಿಶ್ವಾಸ ಮೂಡುವುದಲ್ಲದೆ ಮಹಿಳಾ ದಿನಾಚರಣೆಯೂ ಅರ್ಥಪೂರ್ಣವಾಗುತ್ತದೆ.
-ಸೋಮಶೇಖರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT