ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

⁠⁠⁠ಪಕ್ಷಾಂತರ ‘ಪರ್ವ’ಕ್ಕೊಂದು ಮುನ್ನುಡಿ

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇದು ಪಕ್ಷಾಂತರ ಪರ್ವ. ಒಂದು ಚುನಾವಣೆ ಸಮೀಪಿಸಿದಂತೆ ಪಕ್ಷಾಂತರದ ವ್ಯಾಪಾರ ಚುರುಕಾಗುತ್ತದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರಂತೂ ಕೊಡು ಕೊಳ್ಳುವಿಕೆಯ ಭಾರೀ ಪ್ರಮಾಣದ ಚೌಕಾಸಿ ಶುರುವಾಗುತ್ತದೆ. ಕೆಲವರ ಪಕ್ಷಾಂತರ ಅಸಹ್ಯ ಹುಟ್ಟಿಸಿದರೆ, ಕೆಲವರ ಬಗ್ಗೆ ಅಸಾಧ್ಯ ಕೋಪ ಬರುತ್ತದೆ. ಇನ್ನು ಕೆಲವರನ್ನು ಕಂಡರೆ ಅನುಕಂಪ ಹುಟ್ಟುತ್ತದೆ.

ಹೀಗೆ ಸ್ವಾರ್ಥವೇ ಮುಖ್ಯವಾಗಿ ಪಕ್ಷಾಂತರ ಮಾಡುವ ನಿರ್ಲಜ್ಜರಿಗೆ ತಮಗೆ ಮತ ನೀಡಿದವರಿಗೆ ವಿಶ್ವಾಸದ್ರೋಹ ಬಗೆಯುತ್ತಿದ್ದೇವೆಂಬ ಅಳುಕಾಗಲೀ, ಮಾರಿಕೊಂಡ ನಿಷ್ಠೆಯ ಬಗ್ಗೆ ಅಪರಾಧಿ ಪ್ರಜ್ಞೆಯಾಗಲೀ, ಇದ್ದಿರಬಹುದಾದ ತತ್ವಕ್ಕೆ ಎಳ್ಳು ನೀರು ಬಿಟ್ಟ ಬಗ್ಗೆ ಒಂದಿಷ್ಟು ಸಂಕೋಚವಾಗಲೀ, ಅದುವರೆಗೆ ಒಂದಲ್ಲ ಒಂದು ಸ್ಥಾನಮಾನ ನೀಡಿದ್ದ ಪಕ್ಷದ ಬಗ್ಗೆ ಕೃತಜ್ಞತೆಯಾಗಲೀ ಇರುವುದಿಲ್ಲ.

ಈ ವಿಚಾರವನ್ನು ಹೀಗೆ ವಿವರಿಸಿದರೆ ಒಳ್ಳೆಯದು. ಬೆಂಕಿ ಉಗುಳುವ ಮಾತುಗಾರ ಎಂದೇ ಹೆಸರಾಗಿದ್ದ ಎ.ಕೆ.ಸುಬ್ಬಯ್ಯ 1984ರ ಸೆಪ್ಟೆಂಬರ್‌ನಲ್ಲಿ ಮಡಿಕೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ವಿವರವಾಗಿ ಮಾತನಾಡಿದ್ದರು. ಅವರ ಮಾತುಗಳ ನಡುವೆ ಇದ್ದ ನಿಗೂಢಾರ್ಥವನ್ನು ಗ್ರಹಿಸಿ ‘ಎ.ಕೆ.ಸುಬ್ಬಯ್ಯ ಕಾಂಗೈಗೆ?’ ಎಂಬ ಬಾಕ್ಸ್ ಐಟಂ ಅನ್ನೂ ಆಗ ಕೆಲಸ ಮಾಡುತ್ತಿದ್ದ ಪತ್ರಿಕೆಗೆ ಕಳಿಸಿದ್ದೆ.

ಆದರೆ ಆ ಬಾಕ್ಸ್‌ ಐಟಂಗೆ ಪ್ರಕಟಣೆಯ ಭಾಗ್ಯ ದೊರೆತಿರಲಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ವಿರೋಧಿಸುತ್ತಾ ರಾಜಕಾರಣ ನಡೆಸಿದ ಸುಬ್ಬಯ್ಯ, ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬುದನ್ನು ನಂಬಲು ಸುದ್ದಿಮನೆಯ ಮುಖ್ಯಸ್ಥರು ಸಿದ್ಧರಿರಲಿಲ್ಲ. ಯಾಕೆಂದರೆ ಸುಬ್ಬಯ್ಯನವರದು ಪ್ರಾಮಾಣಿಕತೆಗೆ ಭಂಗ ತಂದುಕೊಳ್ಳದ ನಿಸ್ವಾರ್ಥ ವ್ಯಕ್ತಿತ್ವ.

ಆ ಪತ್ರಿಕಾಗೋಷ್ಠಿಯಲ್ಲಿನ ಸುಬ್ಬಯ್ಯ ಅವರ ಮಾತುಗಳ ಆಳದಲ್ಲಿ ಕಾಂಗ್ರೆಸ್ ಸೇರುವುದಕ್ಕೆ ಸಿದ್ಧತೆ ನಡೆಸಿದ ಸೂಚನೆ ಇದ್ದರೂ ಅವರು ಆ ವರ್ಷವೇ ಕಾಂಗ್ರೆಸ್ ಪಕ್ಷ ಸೇರಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಬರೆದಿದ್ದರಲ್ಲೂ ತಪ್ಪಿರಲಿಲ್ಲ. ಆನಂತರ ಅವರನ್ನೇ ಪ್ರಶ್ನಿಸಿದಾಗ ನನ್ನ ಊಹೆ ಸರಿಯಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದರು. ಡಿ.ಬಿ.ಕಲ್ಮಣಕರ್ ಮಧ್ಯಸ್ಥಿಕೆಯಲ್ಲಿ ನಡೆಸಿದ ಮಾತುಕತೆ ಸಂದರ್ಭದಲ್ಲಿ, ಸುಬ್ಬಯ್ಯ ಅವರು ಸ್ಥಾಪಿಸಿದ್ದ ಕನ್ನಡ ನಾಡು ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನ ಮಾಡುವುದಕ್ಕೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಒಲವು ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಆಗ ಬಲಿಷ್ಠವಾಗಿದ್ದ ಜನತಾ ಪಕ್ಷವನ್ನು ಎದುರಿಸಲು ಸುಬ್ಬಯ್ಯ ಅವರಂಥ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕಿತ್ತು. ಆದರೆ ಈ ಮಾತುಕತೆ ನಡೆದ ಒಂದೇ ತಿಂಗಳಲ್ಲಿ  ಅಂದರೆ 1984ರ ಅ. 31ರಂದು ಇಂದಿರಾ ಅವರ ಹತ್ಯೆಯಾಯಿತು. ರಾಜೀವ್ ಗಾಂಧಿ ಪ್ರಧಾನಿಯಾದರು. ಅನುಕಂಪದ ಅಲೆಯಲ್ಲಿ ಐತಿಹಾಸಿಕ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಸುಬ್ಬಯ್ಯ ಅವರ ಸೇರ್ಪಡೆ ವಿಚಾರವನ್ನು ನಿರ್ಲಕ್ಷಿಸಿತು.

ಅಚ್ಚರಿ ಹುಟ್ಟಿಸುವಂತೆ ಬಿಜೆಪಿಯಿಂದ ಹೊರಬಂದು ಸ್ಥಾಪಿಸಿದ್ದ ಕನ್ನಡನಾಡು ಪಕ್ಷ, ಚರಣ್ ಸಿಂಗ್ ಅವರ ಲೋಕದಳದಲ್ಲಿ ವಿಲೀನವಾಗಿ ಸುಬ್ಬಯ್ಯ ಆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದರು. ಅಲ್ಲೂ ಉಳಿಯದೆ ಕಾಂಗ್ರೆಸ್, ಬಿಎಸ್‌ಪಿ, ಜೆಡಿಎಸ್, ಮತ್ತೆ ಕಾಂಗ್ರೆಸ್ ಸೇರಿ ಎಲ್ಲೂ ನೆಲೆ ನಿಲ್ಲದೆ ಪಕ್ಷ ರಾಜಕೀಯದಿಂದ ದೂರವಾಗಿ ಪ್ರಗತಿಪರ ಹೋರಾಟಗಳಲ್ಲಿ ಸಕ್ರಿಯವಾದರು.

ಸುಬ್ಬಯ್ಯ ಅವರ ಪಕ್ಷಾಂತರಗಳಿಗೆ ವ್ಯಾವಹಾರಿಕ ಸ್ವಾರ್ಥ ಇರಲಿಲ್ಲ. ಹೀಗಾಗಿಯೇ, ‘ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಗುರಿ ಮುಟ್ಟಲು ಒಂದಲ್ಲ ಒಂದು ವಾಹನ ಬಳಸಿಕೊಂಡಿದ್ದೇನೆ’ ಎಂದು ತಮ್ಮ ಪಕ್ಷಾಂತರಗಳನ್ನು ಸುಬ್ಬಯ್ಯ ಸಮರ್ಥಿಸಿಕೊಳ್ಳುತ್ತಾರೆ. ಅವರಲ್ಲಿ ಪ್ರಾಮಾಣಿಕತೆ, ದಿಟ್ಟತನ ಇತ್ತು, ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವ ಎಳ್ಳಷ್ಟೂ ಇರಲಿಲ್ಲ. ಸರ್ಕಾರದ ಮಟ್ಟದಲ್ಲಿ ಒಂದೇ ಒಂದು ಅಧಿಕಾರ ಪಡೆಯುವುದಕ್ಕೂ ಅವರೊಳಗಿನ ‘ದೋಷ’ ಅವಕಾಶ ನೀಡಲಿಲ್ಲ.

ರಾಜಕಾರಣವೇ ಉದ್ಯಮವಾಗಿ ಬೆಳೆದಿರುವ ಈ ದಿನಗಳಲ್ಲಿ ಸುಬ್ಬಯ್ಯ ಅಂಥವರು ರಾಜಕೀಯ ಅಸ್ಪೃಶ್ಯತೆಯ ಶಾಪಕ್ಕೆ ಬಲಿಯಾದರು. ಅವರ ಬಗ್ಗೆ ಪ್ರೀತಿ, ಹೆಮ್ಮೆ, ಅನುಕಂಪ ಏಕಕಾಲದಲ್ಲಿ ನಮ್ಮನ್ನು ಕಾಡುತ್ತದೆ. ಆದರೆ ದಶಕಗಳ ಕಾಲ ಒಂದೇ ಪಕ್ಷದಲ್ಲಿದ್ದು ಬಹುಪಾಲು ಎಲ್ಲ ರೀತಿಯ ಅಧಿಕಾರ ಅನುಭವಿಸಿ, ಕೇವಲ ಒಮ್ಮೆ ಪರಿಗಣಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ಬೇರೆ ಪಕ್ಷಗಳ ಬಾಗಿಲ ಬಳಿ ಇಣುಕುತ್ತಿರುವ ಕೆಲವರ ಬಗ್ಗೆ ಅಸಹ್ಯ ಹುಟ್ಟುತ್ತದೆ.

ಮಹಾಕಾವ್ಯಗಳನ್ನೇ ನೋಡಿ. ಮಹಾಭಾರತದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿಯ ಸೇವಕಿ ಸುಗಧಳಲ್ಲಿ ಹುಟ್ಟಿದ ಯುಯುತ್ಸು ನ್ಯಾಯಪರತೆ ಮತ್ತು ನೈತಿಕತೆಗೆ ಮಹೋನ್ನತ ಉದಾಹರಣೆಯಂತಿದ್ದವನು. ಕೌರವರ ಕಡೆ ಇದ್ದ ಹನ್ನೊಂದು ಮಹಾರಥಿಗಳಲ್ಲಿ ಈತ ಕೂಡ ಒಬ್ಬ. ಪಾಂಡವರ ವಿರುದ್ಧ ಕುತಂತ್ರ ನಡೆಸುತ್ತಲೇ ಇದ್ದ ದುರ್ಯೋಧನನ ಅಧರ್ಮದಿಂದ ಬೇಸತ್ತು ಧರ್ಮ ಎತ್ತಿ ಹಿಡಿಯುವುದಕ್ಕಾಗಿ ಪಾಂಡವರ ಕಡೆ ಪಕ್ಷಾಂತರ ಮಾಡಿ ಮಹಾಭಾರತ ಯುದ್ಧದಲ್ಲಿ ಪಾಂಡವರ ಪರವಾಗಿ ಸೆಣಸಿದ್ದ.

ಇನ್ನೊಂದೆಡೆ,  ಮದುವೆಗೆ ಮೊದಲೇ ಕುಂತಿಯಲ್ಲಿ ಸೂರ್ಯನಿಂದ ಜನಿಸಿದ ಕರ್ಣನದು ವಿಧಿಯಾಟದ ಅಪೂರ್ವ ವ್ಯಕ್ತಿತ್ವ. ಪಾಂಡವರ ಜತೆ ರಾಜಕುಲದಲ್ಲೇ ಇರಬೇಕಾದವನು ಇನ್ನೆಲ್ಲೋ ಬೆಳೆದು ಕಾಲದ ಆಟದಲ್ಲಿ ದುರ್ಯೋಧನನ ಸ್ನೇಹಿತನಾಗಿ ಕೌರವರ ಜತೆ ಗುರುತಿಸಿಕೊಂಡವನು. ಮಹಾಭಾರತ ಯುದ್ಧದಲ್ಲಿ ಕರ್ಣನನ್ನು ಮಣಿಸುವುದು ಅಷ್ಟು ಸುಲಭವಾಗಿರಲಿಲ್ಲ.

ಪಾಂಡವರ ಕಡೆ ಬಂದರೆ ರಾಜ್ಯ, ಸಂಪತ್ತು, ಸಿಂಹಾಸನದ ಜತೆ  ಪಾಂಡವರ ಸೇವೆಯನ್ನೂ ಪಡೆಯಬಹುದೆಂಬ ಕೃಷ್ಣನ ಮಾತಿಗೆ ಮರುಳಾಗದ ಕರ್ಣ, ಎಲ್ಲ ಪ್ರಲೋಭನೆಗಳನ್ನೂ ತಿರಸ್ಕರಿಸುತ್ತಾನೆ. ‘ಏನನ್ನೋ ಪಡೆಯುವುದಕ್ಕಾಗಿ ಈ ಯುದ್ಧ ಮಾಡುತ್ತಿಲ್ಲ. ಸಮಯಕ್ಕಾದ ಗೆಳೆಯ ದುರ್ಯೋಧನನ ಅತ್ಯಗತ್ಯ ಸಮಯದಲ್ಲಿ ಅವನೊಂದಿಗಿದ್ದು ಕಾಪಾಡುವುದು ನನ್ನ ಧರ್ಮ’ ಎನ್ನುತ್ತಾನೆ.

ಆದರೆ ಈಗ ಆಗುತ್ತಿರುವುದಾದರೂ ಏನು? ಸುಬ್ಬಯ್ಯ ಅವರ ಹೋರಾಟ, ಯುಯುತ್ಸುವಿನ ಧರ್ಮಬದ್ಧತೆ, ಕರ್ಣನ ಧೀರ ನಿಷ್ಠೆ ಅದೆಷ್ಟು ರಾಜಕಾರಣಿಗಳಲ್ಲಿ  ಕಾಣುತ್ತಿದೆ? ಎಷ್ಟೆಂದರೂ ಇದು ಆಯಾರಾಂ ಗಯಾರಾಂ (1967ರಲ್ಲಿ ಹರಿಯಾಣದ ಗಯಾಲಾಲ್ ಎಂಬ ಶಾಸಕ ಕಾಂಗ್ರೆಸ್ ತ್ಯಜಿಸಿ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸೇರಿ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗಿ ಮತ್ತೆ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸೇರಿದ ನಂತರ ಈ ನುಡಿಗಟ್ಟು ಚಾಲನೆಗೆ ಬಂತು) ಸಂಸ್ಕೃತಿಗೆ ಮಣೆ ಹಾಕಿದ ದೇಶ.

ಕರ್ನಾಟಕ ಏನು ಕಡಿಮೆಯೇ? 2008ರಲ್ಲಿ ಪಕ್ಷೇತರರ ಬೆಂಬಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಕೆಲವು ವಿಪಕ್ಷ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ಎಂಬ ನಿರ್ಲಜ್ಜ ಪ್ರದರ್ಶನದ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಗೂ ಚಳ್ಳೆಹಣ್ಣು ತಿನ್ನಿಸಿದ ‘ಖ್ಯಾತಿ’ಯನ್ನೂ ಪಡೆಯಿತು.

ಅದೇನೇ ಇರಲಿ. ಬರುವ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು ಭರ್ಜರಿ ಬೇಟೆಗಾಗಿ ಖೆಡ್ಡ ತೋಡುವ ಜತೆ ಬಲೆ, ಬೋನು, ಜಾರುಕುಣಿಕೆ, ಗಾಳದಂಥ ಸಾಧನಗಳನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ. ಕೆಲವರು ಬಲೆಗೂ ಬಿದ್ದಿದ್ದಾರೆ.

ಇಂಥ ಸ್ವಾರ್ಥದ ಪಕ್ಷಾಂತರಕ್ಕೆ ಕಾರಣವಾದರೂ ಏನು? ಮುಂದಿನ ಚುನಾವಣೆಯಲ್ಲಿ ತಾವಿರುವ ಪಕ್ಷದಿಂದ ಟಿಕೆಟ್ ದೊರೆಯಲಾರದು ಎಂಬುದು ಖಾತರಿಯಾಗಿರಬಹುದು, ಆಡಳಿತಾರೂಢ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಾರದು ಎನ್ನುವ ಅನುಮಾನ ಅಲ್ಲಿರುವ ಕೆಲವರಿಗೆ ಅನ್ನಿಸಿರಬಹುದು, ಪ್ರಾಮಾಣಿಕರೂ ದಕ್ಷರೂ ಆಗಿರುವ ನಾಯಕರನ್ನು ಪಕ್ಷದ ವರಿಷ್ಠರು ಕಡೆಗಣಿಸಿರಬಹುದು, ತಮ್ಮ ರಿಯಲ್ ಎಸ್ಟೇಟ್ ವ್ಯವಹಾರ, ಶಿಕ್ಷಣ ವ್ಯಾಪಾರ, ಸಕ್ಕರೆ ಕಾರ್ಖಾನೆ, ಮದ್ಯದ ಉದ್ದಿಮೆ ಇವೆಲ್ಲವುಗಳನ್ನು ಕಾಪಾಡಿಕೊಳ್ಳಲು ಮುಂದೆ ಅಧಿಕಾರಕ್ಕೆ ಬರುವ ಸರ್ಕಾರದೊಂದಿಗೆ ಇರಬೇಕೆನ್ನುವ ವ್ಯಾವಹಾರಿಕ ಕಾರಣಗಳೂ ಇರಬಹುದು, ಮುಂದೆ ಇದೇ ಪಕ್ಷ ಅಧಿಕಾರಕ್ಕೆ ಬರಬಹುದೆಂಬ ನಿರೀಕ್ಷೆಯಿಂದ ಟಿಕೆಟ್ ಆಕಾಂಕ್ಷಿಗಳಾಗಿರಬಹುದು, ಸಚಿವರೋ ಇನ್ನೇನೋ ಆಗಬಹುದೆಂಬ ಆಸೆಯೂ ಇರಬಹುದು.

ಆದರೆ ತಾತ್ವಿಕ ಕಾರಣಕ್ಕೆ ಪಕ್ಷಾಂತರ ನಡೆಯುತ್ತಿರುವ ಒಂದೇ ಒಂದು ಉದಾಹರಣೆ ಸದ್ಯಕ್ಕೆ ಕಾಣುತ್ತಿದೆಯೇ? ಅಂಥ ಕಾರಣ ಹೇಳುವ ಎದೆಗಾರಿಕೆ ನಿರ್ಲಜ್ಜ ಜನಪ್ರತಿನಿಧಿಗಳಿಗೆ ಇದೆಯೇ? ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಪಕ್ಷಾಂತರ ಮಾಡುವವರಿಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಜೋಡಿ ‘ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಅರಿವಾಯಿತೇ?

ಕಾಂಗ್ರೆಸ್‌ನಿಂದ ಬಿಜೆಪಿಗೆ ತೆರಳುವವರಿಗೆ ನರೇಂದ್ರ ಮೋದಿ ಮಂತ್ರ ಪಠಣದಿಂದ ಪ್ರಸಾದ ದೊರೆಯುತ್ತದೆ ಎಂಬ ಖಾತರಿ ಹುಟ್ಟಿರುತ್ತದೆಯೇ? ಕಾಂಗ್ರೆಸ್‌ನಿಂದ ಬಿಜೆಪಿಯತ್ತ ವಾಲುವ ಮುಸ್ಲಿಮರು ಮತ್ತು ದಲಿತರಿಗೆ ಈ ಪಕ್ಷದಲ್ಲೇ ದುರ್ಬಲ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂಬ ಅರಿವು ಒಮ್ಮಿಂದೊಮ್ಮೆಗೇ ಮೂಡಿರುತ್ತದೆಯೇ?

ಬಿಜೆಪಿಯಿಂದ ಕಾಂಗ್ರೆಸ್ ಅಥವಾ ಜೆಡಿಎಸ್ ಕಡೆ ವಾಲುವವರಿಗೆ ‘ಕೋಮುವಾದದಿಂದ ದೇಶಕ್ಕೆ ಭವಿಷ್ಯವಿಲ್ಲ’ ಎಂದು ಜ್ಞಾನೋದಯವಾಗಿರುತ್ತದೆಯೇ? ಆದರೆ ಪಕ್ಷಾಂತರಕ್ಕೆ ಇಂಥ ಎಲ್ಲರೂ ನೀಡುವ ಒಂದೇ ಕಾರಣ, ‘ಉಸಿರುಗಟ್ಟುವ ವಾತಾವರಣ!’ ಇದೇ ಪಕ್ಷಾಂತರ ಪರ್ವದ ಮುನ್ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT