ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ– ಗ್ರಾಮ ಅಭಿವೃದ್ಧಿ ಸಮತೋಲನಕ್ಕೆ ಕಸರತ್ತು

Last Updated 15 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017–18ನೇ ಸಾಲಿನ ಬಜೆಟ್‌ನಲ್ಲಿ  ಸಹಜವಾಗಿಯೇ ಎಲ್ಲಾ ಜನ ವರ್ಗಗಳನ್ನೂ ಸಂತೃಪ್ತಿಪಡಿಸುವ ಪ್ರಯತ್ನ ಮಾಡಿದ್ದಾರೆ.

ಜೊತೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವ ಕಸರತ್ತು ಮಾಡಿರುವುದೂ ಕಂಡುಬರುತ್ತದೆ. ರಾಜ್ಯದಲ್ಲಿನ ಬರ ಪರಿಸ್ಥಿತಿ, ನೋಟು ರದ್ದತಿಯ ಪ್ರತಿಕೂಲ ಪರಿಣಾಮಗಳು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಬೊಕ್ಕಸಕ್ಕೆ ಹರಿದು ಬರಲಿರುವ ತೆರಿಗೆ ವರಮಾನ ಕುರಿತ ಅನಿಶ್ಚಿತತೆ ಜೊತೆಗೆ ವಿಧಾನಸಭೆ ಚುನಾವಣೆ ಎದುರಿಸಬೇಕಿರುವ ಸವಾಲುಗಳಿಂದಾಗಿ ಈ ಬಾರಿಯ ಬಜೆಟ್‌, ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮಹತ್ವದ್ದಾಗಿದೆ.

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌, ಅಪಘಾತದಲ್ಲಿ ಸತ್ತ ಹಸು– ಎತ್ತುಗಳಿಗೆ ಪರಿಹಾರ, ಉಪನ್ಯಾಸಕರ ನೇಮಕಾತಿಗೆ ಕ್ರಮ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದಂಥ ಕ್ರಮಗಳ ಮೂಲಕ ಎಲ್ಲಾ ಜನವರ್ಗದವರನ್ನು ಸೆಳೆಯಲು ಯತ್ನಿಸಲಾಗಿದೆ. 

ಎಲ್ಲಾ  ಗ್ರಾಮ ಪಂಚಾಯ್ತಿಗಳಲ್ಲಿ ವೈ–ಫೈ ಸೌಲಭ್ಯ ಹಾಗೂ ಕಿಂಡಿ ಅಣೆಕಟ್ಟು, ಚೆಕ್‌ಡ್ಯಾಂ ನಿರ್ಮಾಣ, 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಾಗರಿಕ ಸೇವೆಗಳ ‘ಕರ್ನಾಟಕ ಒನ್‌’ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗುವ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಸಮತೋಲನ ಸಾಧಿಸುವ ಪ್ರಯತ್ನವಿದೆ.

ಬರಗಾಲದಿಂದ ತತ್ತರಿಸಿರುವ ರೈತರ ಬವಣೆ ಕಡಿಮೆ ಮಾಡುವುದಕ್ಕಾಗಿ, ಕೃಷಿ ಸಾಲ ಮನ್ನಾ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಹೊಸ ತೆರಿಗೆ ಪ್ರಸ್ತಾಪ ಇಲ್ಲದಿರುವುದರಿಂದ  ಜನಸಾಮಾನ್ಯರ ಮೇಲೆ ಹೊಸ ತೆರಿಗೆ ಭಾರ ಬಿದ್ದಿಲ್ಲ.

‘ಅನಿಲಭಾಗ್ಯ’ ಹೊರತುಪಡಿಸಿ, ಹೊಸ ಭಾಗ್ಯಗಳ ಭಾರಕ್ಕೆ ಬಜೆಟ್‌ ಬಸವಳಿದಿಲ್ಲ. ಆದರೆ, ಹಳೆಯ ಭಾಗ್ಯಗಳ ಪ್ರಯೋಜನಗಳನ್ನು ಹೆಚ್ಚಿಸಲಾಗಿದೆ. ರಿಯಾಯಿತಿ ಬಡ್ಡಿಯ ಕೃಷಿ ಸಾಲ ಮುಂದುವರಿಕೆ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ವೃಕ್ಷ ಉದ್ಯಾನ, ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ,

ಬೆಂಗಳೂರಿನಲ್ಲಿ ಅಗ್ಗದ ದರದ ‘ನಮ್ಮ ಕ್ಯಾಂಟೀನ್‌’, ಜಿಲ್ಲೆಗಳಲ್ಲಿ ಸಂಚಾರಿ ಕ್ಯಾಂಟೀನ್‌ ‘ಸವಿರುಚಿ’, ಮೊರಾರ್ಜಿ ವಸತಿ ಶಾಲೆ ಮೇಲ್ದರ್ಜೆಗೆ, ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ₹ 2 ಲಕ್ಷ ಪ್ರೋತ್ಸಾಹಧನ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸೈನಿಕಶಾಲೆ,  ಪರಿಶಿಷ್ಟ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡಲು ‘ಆಶಾದೀಪ’ದಂಥ ಕ್ರಮಗಳನ್ನು ಪ್ರಕಟಿಸಲಾಗಿದೆ. 

ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರ ನಿವೃತ್ತಿ ವಯಸ್ಸನ್ನು  58ರಿಂದ 60ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಉದ್ದೇಶಿಸಿದ್ದಾರೆ. ಆದರೆ ಖಾಸಗಿ ಕಂಪೆನಿಗಳಲ್ಲಿ ಇಂದು ಪ್ರಚಲಿತವಿರುವ ಗುತ್ತಿಗೆ ಆಧಾರಿತ  ಉದ್ಯೋಗ ನೀತಿಗಳಿಂದಾಗಿ ಇದು ಹೆಚ್ಚಿನ ಪರಿಣಾಮವನ್ನೇನೂ  ಬೀರದು. 

ಬಜೆಟ್‌ ₹ 2 ಲಕ್ಷ ಕೋಟಿ ದಾಟಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ₹ 1.86 ಲಕ್ಷ ಕೋಟಿ ಮೊತ್ತದ ಬಜೆಟ್‌, ಹಿಂದಿನ ವರ್ಷದ ಬಜೆಟ್‌ಗಿಂತ (₹ 1.63 ಲಕ್ಷ ಕೋಟಿ) ಶೇ 14 ರಷ್ಟು ಹೆಚ್ಚಾಗಿದೆ.

ಕೃಷಿ, ಸಾಮಾಜಿಕ ವಲಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಗರಿಷ್ಠ ಮೊತ್ತ ನಿಗದಿಪಡಿಸಲಾಗಿದೆ. ಬೆಂಗಳೂರು ನಗರಾಭಿವೃದ್ಧಿಗೆ ಹೆಚ್ಚು ಮೊತ್ತ ನಿಗದಿಪಡಿಸಿದ್ದರೂ, ಜಿಲ್ಲಾ  ಕೇಂದ್ರ ಮತ್ತು ಗ್ರಾಮೀಣ ಪ್ರದೇಶಗಳೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹಿಂದೆ ಬೀಳದಿರುವಂತೆ ಎಚ್ಚರ ಪ್ರದರ್ಶಿಸಿದ್ದಾರೆ.

21 ಜಿಲ್ಲೆಗಳಲ್ಲಿ 49 ಹೊಸ ತಾಲ್ಲೂಕುಗಳ ರಚನೆ ಪ್ರಸ್ತಾವದ ಮೂಲಕ ಬಹಳ ದಿನಗಳ ಬೇಡಿಕೆಗೆ ಕಿವಿಗೊಡಲಾಗಿದೆ. 2 ಸ್ಟ್ರೋಕ್ ಆಟೊಗಳ ರದ್ದತಿ ಹಾಗೂ ಬೆಂಗಳೂರನ್ನು ವಿದ್ಯುತ್‌ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡಲು ಹೊರಟಿರುವುದು ಪರಿಸರಸ್ನೇಹಿ ಸ್ವಾಗತಾರ್ಹ  ಯೋಜನೆಗಳಾಗಿವೆ.

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನ 2015–16ರಲ್ಲಿದ್ದ  ಶೇ 7.3ರಿಂದ 2016–17ರಲ್ಲಿ ಶೇ 6.9ಕ್ಕೆ ಇಳಿಮುಖವಾಗಿದೆ. ಕೈಗಾರಿಕೆ ಹಾಗೂ ಸೇವಾ ವಲಯದಲ್ಲಿ ಬೆಳವಣಿಗೆ ಕುಂಠಿತಗೊಂಡಿರುವುದು ಇದಕ್ಕೆ ಕಾರಣ. ಇಂತಹ ಸಂದರ್ಭದಲ್ಲಿ ಸರ್ಕಾರದ ಸಾಲದ ಹೊರೆಯೂ ಹೆಚ್ಚುತ್ತಿರುವ ಕಾರಣಕ್ಕೆ ಹೆಚ್ಚಿನ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸದೆ ಆರ್ಥಿಕ ಶಿಸ್ತು ಪಾಲಿಸಿ, ವಿತ್ತೀಯ ವಿವೇಕ ಪ್ರದರ್ಶಿಸಿ ಉಳಿತಾಯ ಬಜೆಟ್‌ ಮಂಡಿಸಲಾಗಿದೆ. 

ಜುಲೈನಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಕಾರಣಕ್ಕೆ ಸಂಪನ್ಮೂಲ ಕ್ರೋಡೀಕರಣಕ್ಕೂ ಹೆಚ್ಚು ಆದ್ಯತೆ ನೀಡಿಲ್ಲ. ಹೀಗಾಗಿ ಮದ್ಯ, ದುಬಾರಿ ಬೆಲೆಯ ದ್ವಿಚಕ್ರ ವಾಹನ ಹೊರತುಪಡಿಸಿ ಇತರ ಸರಕು– ಸೇವೆಗಳ ಮೇಲೆ ಹೊಸ ತೆರಿಗೆಗಳ ಹೊರೆ ಕಂಡು ಬಂದಿಲ್ಲ. ‘ಕರ ಸಮಾಧಾನ ಯೋಜನೆ’ಯು ಜಿಎಸ್‌ಟಿ ಜಾರಿ ಹಾದಿಯಲ್ಲಿ ಅಡ್ಡಿಯಾಗಲಿದ್ದ ಮೊಕದ್ದಮೆಗಳ ಹೊರೆ ಕಡಿಮೆ ಮಾಡಲು ನೆರವಾಗಲಿದೆ.

ಹೀಗಾಗಿ ಜಿಎಸ್‌ಟಿ ಜಾರಿ ನಿಟ್ಟಿನಲ್ಲಿ ಸರ್ಕಾರ ಇನ್ನೊಂದು ದೃಢ ಹೆಜ್ಜೆ ಇರಿಸಿದಂತಾಗಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ಯೋಜನೆ ಮತ್ತು ಯೋಜನೇತರ ವೆಚ್ಚಗಳನ್ನು ಪ್ರತ್ಯೇಕವಾಗಿ ದಾಖಲಿಸುವುದನ್ನು ಕೈಬಿಟ್ಟಿರುವುದು ಸ್ವಾಗತಾರ್ಹ .

ತಮ್ಮದು ಸರ್ವರನ್ನೂ ಒಳಗೊಳ್ಳುವ ಮಾನವೀಯ ಮುಖವುಳ್ಳ ಸರ್ವೋದಯದ ಅಭಿವೃದ್ಧಿ ಮಾದರಿ ಎಂದು ಬಜೆಟ್ ಭಾಷಣದ ಆರಂಭದಲ್ಲೇ  ಹೇಳಿರುವ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ವಿರೋಧಿಸುವವರು ರಾಮರಾಜ್ಯ ನಿರ್ಮಿಸುವುದು ಸಾಧ್ಯವಿಲ್ಲ ಎಂದು ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಜನಪರ ಸರ್ಕಾರವೆಂದರೆ

ಅಭಿವೃದ್ಧಿ ವಿರೋಧಿ ಎಂಬಂಥ ಬಾಲಿಶ ಕಲ್ಪನೆ ವಿತ್ತೀಯ ವಲಯದಲ್ಲಿ ನುಸುಳಿಬಿಟ್ಟಿದೆ ಎಂದು ಆಕ್ಷೇಪ ವ್ಯಕ್ಯಪಡಿಸಿದ್ದಾರೆ. ಅಲ್ಲದೆ, ನೋಟು ರದ್ದತಿಯಿಂದ ಜನಸಾಮಾನ್ಯರು ಅಪಾರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳುವ ಮೂಲಕ ಚುನಾವಣೆಗೆ ಪೂರ್ವಭಾವಿಯಾಗಿ ರಾಜಕೀಯ ದಾಳಿಯನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT