ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಬೆಳಕು ಚೆಲ್ಲಲು ಸಾಕ್ಷ್ಯಚಿತ್ರ

Last Updated 16 ಮಾರ್ಚ್ 2017, 4:42 IST
ಅಕ್ಷರ ಗಾತ್ರ

ಮೈಸೂರು: ದೇಶ– ವಿದೇಶಗಳ ಪ್ರವಾಸಿಗರ ಆಕರ್ಷಣೀಯ ಕೇಂದ್ರ ಎನಿಸಿರುವ ಚಾಮರಾಜೇಂದ್ರ ಮೃಗಾಲಯದ 125ನೇ ವರ್ಷಾಚರಣೆಗೆ ಸಿದ್ಧತೆ ನಡೆದಿದ್ದು, ಮೃಗಾಲಯ ಕುರಿತು ಸದ್ಯದಲ್ಲೇ ಸಾಕ್ಷ್ಯಚಿತ್ರ ಹೊರಬರಲಿದೆ.

ವನ್ಯಜೀವಿ ಸಿನಿಮಾ ನಿರ್ಮಾಪಕ ಶೇಖರ್‌ ದತ್ತಾತ್ರಿ ಅವರು 20 ನಿಮಿಷಗಳ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಮೃಗಾಲಯದ ವಿವಿಧ ಮಜಲುಗಳು, ಸಾಧನೆಗಳ ಯಶೋಗಾಥೆಯನ್ನು ಇದು ಕಟ್ಟಿಕೊಡಲಿದೆ.

‘ಸಾಕ್ಷ್ಯಚಿತ್ರ ನಿರ್ಮಾಣ ಬಹುತೇಕ ಮುಗಿದಿದ್ದು, ಮೃಗಾಲಯ ಬದಲಾದ ರೀತಿ, ವಿವಿಧ ಪ್ರಭೇದಗಳ ಪ್ರಾಣಿ–ಪಕ್ಷಿಗಳು, ಅವುಗಳ ಆಹಾರ ಪದ್ಧತಿ, ಪ್ರಮುಖರ ಭೇಟಿ ವಿಷಯಗಳನ್ನು ಇದು ಒಳಗೊಂಡಿರಲಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಕಮಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲದೆ, ಪ್ರಾಣಿ ವಿನಿಮಯ ಯೋಜನೆಯಡಿ ಸಿಂಗಪುರ, ಮಲೇಷ್ಯಾ, ಶ್ರೀಲಂಕಾ, ಇಸ್ರೇಲ್‌, ಫಿಲಿಪ್ಪೀನ್ಸ್‌ನ ಮೃಗಾಲಯಗಳಿಂದ ವಿವಿಧ ಪ್ರಾಣಿಗಳನ್ನು ತರಲು ಯೋಜನೆ ರೂಪಿಸಲಾಗಿದೆ. ಒಂದೆರಡು ತಿಂಗಳಲ್ಲಿ ಜೀಬ್ರಾ, ಚಿಂಪಾಂಜಿ, ಖಡ್ಗಮೃಗ, ಚಿಂಪಾಂಜಿ, ಹಿಮಾಲಯನ್‌ ಕರಡಿ ಈ ಮೃಗಾಲಯ ಸೇರಲಿವೆ.

ಬಯಲು ರಂಗಮಂದಿರ: ಮೃಗಾಲಯದೊಳಗೆ ನಿರ್ಮಿಸಿರುವ ವಿಶೇಷ ವಿನ್ಯಾಸದ ಬಯಲು ರಂಗಮಂದಿರ (ಆ್ಯಂಪಿ ಥಿಯೇಟರ್‌) ಉದ್ಘಾಟನೆಗೆ ಸಜ್ಜಾಗಿದೆ.

ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಾಣಿ ರಕ್ಷಣೆ ಕುರಿತು ಅರಿವು ಮೂಡಿಸುವುದು ಸೇರಿದಂತೆ ವಿವಿಧ  ಕಾರ್ಯಕ್ರಮ ಹಮ್ಮಿಕೊಳ್ಳಲು ₹ 2.3 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. 1,100 ಚದರ ಮೀಟರ್‌ ವಿಸ್ತೀರ್ಣದ ರಂಗಮಂದಿರದಲ್ಲಿ 500 ಆಸನ ಸಾಮರ್ಥ್ಯವಿದೆ. ಗೋಡೆ ಮೇಲೆ ಪ್ರಾಣಿಗಳ ಚಿತ್ರ ಬಿಡಿಸಲಾಗಿದೆ.

***

ಮೃಗಾಲಯದ ಇತಿಹಾಸ
170 ಎಕರೆ ಪ್ರದೇಶದಲ್ಲಿರುವ ಚಾಮರಾಜೇಂದ್ರ ಮೃಗಾಲಯ ಪ್ರಾಚೀನ ಮೃಗಾಲಯಗಳಲ್ಲಿ ಒಂದು. ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜ ಒಡೆಯರ್‌ 1892ರಲ್ಲಿ ಸ್ಥಾಪಿಸಿದರು. ಇದರ ವಿನ್ಯಾಸ ರೂಪಿಸಿದ್ದು ತೋಟಗಾರಿಕಾ ತಜ್ಞ ಜರ್ಮನಿಯ ಜಿ.ಎಚ್.ಕ್ರಂಬಿಜೆಲ್‌.
1902ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು. 1972ರಲ್ಲಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಯಿತು. 1992ರಲ್ಲಿ ಮೃಗಾಲಯದ ಶತಮಾನೋತ್ಸವ ನಡೆಯಿತು. ಈ ಸಂದರ್ಭದಲ್ಲಿ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಶೇಖರ್‌ ದತ್ತಾತ್ರಿ ಕುರಿತು...
ಶೇಖರ್‌ ದತ್ತಾತ್ರಿ ಅವರು ವನ್ಯಜೀವಿ ಸಿನಿಮಾ ನಿರ್ಮಾಣದ ಮೂಲಕ ಗುರುತಿಸಿಕೊಂಡಿದ್ದಾರೆ. ರಾಷ್ಟ್ರಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಜಯಿಸಿರುವ ಇವರು ಡಿಸ್ಕವರಿ ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ. ‘ಸೀಡ್ಸ್‌ ಆಫ್‌ ಹೋಪ್‌’, ‘ನಾಗರಹೊಳೆ–ಟೇಲ್ಸ್‌ ಫ್ರಮ್‌ ಆ್ಯನ್‌ ಇಂಡಿಯನ್‌ ಜಂಗಲ್‌’, ‘ಮೈಂಡ್‌ಲೆಸ್‌ ಮೈನಿಂಗ್‌–ದಿ ಟ್ರಾಜೆಡಿ ಆಫ್‌ ಕುದುರೆಮುಖ’, ‘ದಿ ಟ್ರುಥ್‌ ಎಬೌಟ್‌ ಟೈಗರ್ಸ್‌’ ಸೇರಿದಂತೆ ಹಲವು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.  ಅವರು ಚೆನ್ನೈನಲ್ಲಿ ನೆಲೆಸಿದ್ದಾರೆ.

**

ಮೃಗಾಲಯದ 125ನೇ ವರ್ಷಾಚರಣೆಯನ್ನು ಸ್ಮರಣೀಯವಾಗಿಸಲು ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅದರಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಕೂಡ ಒಂದು
–ಕೆ.ಕಮಲಾ,
ಕಾರ್ಯನಿರ್ವಾಹಕ ಅಧಿಕಾರಿ, ಮೃಗಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT