ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ, ಜಲಾಶಯ ತಟದಲ್ಲೇ ಜಲಕ್ಷಾಮ

Last Updated 16 ಮಾರ್ಚ್ 2017, 5:23 IST
ಅಕ್ಷರ ಗಾತ್ರ

ಮೈಸೂರು: ಕೃಷ್ಣರಾಜಸಾಗರ, ಕಬಿನಿ, ನುಗು, ತಾರಕ ಜಲಾಶಯಗಳ ತಟದಲ್ಲೇ ಇದ್ದರೂ ‘ದೀಪದ ಬುಡ ಕತ್ತಲು’ ಎಂಬಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪುತ್ತಿಲ್ಲ. ಬರಗಾಲದ ಕುಣಿಕೆಗೆ ಸಿಲುಕಿ ತತ್ತರಿಸಿರುವ ಬಹುತೇಕ ಗ್ರಾಮಗಳಲ್ಲಿ ಈ ವರ್ಷವೂ ನೀರಿನ ಹಾಹಾಕಾರ ಆವರಿಸಿಕೊಂಡಿದೆ.

ಮುಂಗಾರು ಹಾಗೂ ಹಿಂಗಾರು ಎರಡೂ ಕೈಕೊಟ್ಟಿರುವುದರಿಂದ ಕೆರೆ, ಕಟ್ಟೆ, ಬಾವಿಗಳು ಬತ್ತಿ ಹೋಗಿವೆ. ಕಾವೇರಿ, ಲಕ್ಷ್ಮಣತೀರ್ಥ, ಕಪಿಲಾ, ಹಾರಂಗಿ ನದಿಗಳಲ್ಲಿ ಹರಿವು ಕಡಿಮೆ ಯಾಗುತ್ತಿದೆ. ಅಂತರ್ಜಲ ಆತಂಕಕಾರಿ ಮಟ್ಟಕ್ಕೆ ಕುಸಿದಿದ್ದು, ಕೊಳವೆಬಾವಿಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಇದರಿಂದ ದಿನೇದಿನೇ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಕೆಲ ಗ್ರಾಮಗಳಲ್ಲಿ ಎತ್ತಿನಗಾಡಿ, ಗೂಡ್ಸ್‌ ಆಟೊ, ಸೈಕಲ್‌, ಬೈಕ್‌ಗಳಲ್ಲಿ ಬಿಂದಿಗೆ ಇಟ್ಟುಕೊಂಡು ದೂರ ಪ್ರದೇಶದಿಂದ ನೀರು ತರುತ್ತಿ ದ್ದಾರೆ. ಸಾರ್ವಜನಿಕ ನಲ್ಲಿಗಳಲ್ಲಿ ಕೆಲವೆಡೆ ವಾರಕ್ಕೊಮ್ಮೆ ನೀರು ಬರುತ್ತಿದೆ. ವನ್ಯ ಜೀವಿಗಳು, ಜಾನುವಾರುಗಳು, ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ.

ಮೈಸೂರು ತಾಲ್ಲೂಕಿನ ಜಯಪುರ, ಇಲವಾಲ ಕಸಬಾ ಹೋಬಳಿ, ನಂಜನಗೂಡು ತಾಲ್ಲೂಕಿನ ಕಸಬಾ, ಕೌಲಂದೆ, ಹುಲ್ಲಹಳ್ಳಿ ಹಾಗೂ ಹುಣಸೂರು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಈಗಲೇ ನೀರಿಗೆ ತತ್ವಾರ ಉಂಟಾಗಿದೆ. ಈ ತಾಲ್ಲೂಕುಗಳ 48 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನಿತ್ಯ 128 ಟ್ರಿಪ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

‘ಪಕ್ಕದ ಬೀದಿಗೆ ಹೋಗುತ್ತಾರೆ. ಆದರೆ, ನಾವಿರುವ ಬೀದಿಯ ನಿವಾಸಿಗಳಿಗೆ ಟ್ಯಾಂಕರ್‌ ನೀರು ಕೊಡೋದಿಲ್ಲ. ಪಕ್ಕದ ರಸ್ತೆಗೆ ಹೋದರೆ ಒಂದೆರಡು ಬಿಂದಿಗೆ ತುಂಬಿಸಿಕೊಳ್ಳು­ ವಷ್ಟರಲ್ಲಿ ಮುಂದೆ ಹೋಗುತ್ತಾರೆ. ಯಾವುದೊ ಸಮಯದಲ್ಲಿ ಬರುತ್ತಾರೆ’ ಎಂದು ದೂರುತ್ತಾರೆ ಹಿನಕಲ್‌ನ ನನೇಶ್ವರ ಬಡಾವಣೆ ನಿವಾಸಿ ಸುಮಿತ್ರಾ.

ಮುಂದಿನ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸುವ ಸುಳಿವು ಲಭಿಸಿದ್ದು, 124 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಮೈಸೂರು ನಗರದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ತಲೆದೋರಿಲ್ಲ.

‘ಕುಡಿಯುವ ನೀರಿಗೆ ತುರ್ತು ಅನುದಾನದಡಿ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹ 1 ಕೋಟಿ ಅನುದಾನ ಲಭ್ಯವಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಇತರ ಯೋಜನೆಗಳಿಗೆ ₹ 97 ಕೋಟಿ ಅನುದಾನ ಬಂದಿದೆ. ಬರಗಾಲಕ್ಕೆಂದು ಕುಡಿಯುವ ನೀರಿಗೆ ಹಣ ಬಿಡುಗಡೆಯಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.


ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಬತ್ತಿಹೋಗಿದೆ. 600ರಿಂದ 700 ಅಡಿ ಕೊಳವೆಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಈ ತಾಲ್ಲೂಕಿನ 71 ಗ್ರಾಮಗಳಿಗೆ ₹ 2.3 ಕೋಟಿ ವೆಚ್ಚದಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ.

ಮೈಸೂರು - ಮಾನಂದವಾಡಿ ಹೆದ್ದಾರಿಯಲ್ಲಿರುವ ಎರೆಕೆರೆ ಮತ್ತು ಕೋಡಿಅರಳಿಮರ ಕೆರೆಗಳು ಸಂಪೂರ್ಣ ಬತ್ತಿದ್ದು, ಈ ಭಾಗದ ರೈತರು ಮತ್ತು ಜಾನುವಾರುಗಳಿಗೆ ತೊಂದರೆಯಾಗಿದೆ. ಈ ಕೆರೆಗಳು ಮಾದಾಪುರದಿಂದ ಹಂಪಾಪುರದವರೆಗಿನ ಸುಮಾರು 10ರಿಂದ 12 ಹಳ್ಳಿಗಳಿಗೆ ಪ್ರಮಖ ನೀರಿನ ಮೂಲಗಳಾಗಿವೆ. ನೀರಿಗಾಗಿ ಕೈಪಂಪ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯ ಉಂಟಾಗಿದೆ.


ಹಂಪಾಪುರ ಹೋಬಳಿಯ ಕೆಲ ಗ್ರಾಮಗಳಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಚಾಮಲಪುರ, ಕಣಿಯನಹುಂಡಿ, ಆಲನಹಳ್ಳಿಯಲ್ಲಿ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. 

‘ನದಿಮೂಲದಿಂದ 414 ಹಳ್ಳಿಗಳಿಗೆ ನೀರು ಒದಗಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 232 ಗ್ರಾಮಗಳಿಗೆ ಒದಗಿಸಲಾಗಿದೆ. ಒಟ್ಟು 9 ಯೋಜನೆಯಲ್ಲಿ 5 ಯೋಜನೆಗಳು ಪ್ರಗತಿಯಲ್ಲಿದ್ದು 4 ಯೋಜನೆಗಳ ಕಾಮಗಾರಿ ಪ್ರಾರಂಭವಾಗಬೇಕಿದೆ’ ಎಂದು ಹೇಳುತ್ತಾರೆ ಎಚ್‌.ಡಿ.ಕೋಟೆ ತಹಶೀಲ್ದಾರ್‌ ಎಂ.ನಂಜಯ್ಯ.
ಹುಣಸೂರು ತಾಲ್ಲೂಕಿನಲ್ಲಿ 217 ಕೆರೆಗಳಿದ್ದು, ಬಹುತೇಕ ಕೆರೆಗಳು ಹಾರಂಗಿ ಹಾಗೂ ಲಕ್ಷ್ಮಣತೀರ್ಥ ನದಿ ನಾಲೆಗಳ ಸಂಪರ್ಕ ಹೊಂದಿವೆ. 


ಬಿಳಿಕೆರೆ ಸಮೀಪದ ದೊಡ್ಡಕೆರೆ ಬತ್ತಿ ಹೋಗಿದೆ. ದೇವರಹಳ್ಳಿ, ಹುಲ್ಲೇನಹಳ್ಳಿ, ಯಲಸವಾಡಿ, ಬಿಳಿಕೆರೆ ಗ್ರಾಮದ ರೈತರು ಹಾಗೂ ಜಾನುವಾರುಗಳಿಗೆ ಈ ಕೆರೆಯೇ ಜಲಮೂಲ. ಏತ ನೀರಾವರಿ ಯೋಜನೆಯಡಿ ಲಕ್ಷ್ಮಣತೀರ್ಥ ನದಿಯಿಂದ ದೊಡ್ಡಕೆರೆ, ಹಳೇಬಿಡು ಕೆರೆಗೆ ನೀರು ಹರಿಸುವ ಕಾಮಗಾರಿ ಮುಗಿದಿದ್ದು ಮಳೆಗಾಲದಲ್ಲಿ ನದಿ ಹರಿವು ಹೆಚ್ಚಾದಾಗ ನೀರು ತುಂಬಿಸಲು ನಿರ್ಧರಿಸಲಾಗಿದೆ.
ನಂಜನಗೂಡು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹುರಾ ಹಾಗೂ ಇನ್ನಿತರ 28 ಕೆರೆಗಳಿಗೆ ನೀರು ತುಂಬಿ ಸುವ ಯೋಜನೆಯನ್ನು ಈಚೆಗಷ್ಟೇ ಮುಖ್ಯಮಂತ್ರಿ ಉದ್ಘಾಟಿಸಿದ್ದರು. ಕೆರೆ ಸಂಜೀವಿನಿ ಯೋಜನೆಯಡಿ ಜಿಲ್ಲೆಯ ವಿವಿಧೆಡೆ 60 ಕೆರೆಗಳ ಹೂಳೆತ್ತುವ ಕೆಲಸ ನಡೆಯತ್ತಿದೆ.
(ಪೂರಕ ಮಾಹಿತಿ ರವಿಕುಮಾರ್‌, ಬಿ.ಎನ್‌.ಸಂದೀಪ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT