ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಆಸೆಗೆ ಬಿಜೆಪಿ ಹೈಕಮಾಂಡ್‌ ತಣ್ಣೀರು!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಣೆ
Last Updated 16 ಮಾರ್ಚ್ 2017, 19:45 IST
ಅಕ್ಷರ ಗಾತ್ರ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜ್ಯ ವಿಧಾನಸಭೆ ಚುನಾವಣೆಯತ್ತ ದೃಷ್ಟಿ ನೆಟ್ಟಿರುವ ಬಿಜೆಪಿಯ ಕೆಲವು  ಸಂಸದರ ಆಸೆಗೆ ಹೈಕಮಾಂಡ್‌ ತಣ್ಣೀರೆರಚುವ ಸಾಧ್ಯತೆಗಳಿವೆ.

‘ಮುಂದಿನ ವರ್ಷ ರಾಜ್ಯ ವಿಧಾನಸಭೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಿ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳಬೇಕು’ ಎಂಬ ಹವಣಿಕೆಯಲ್ಲಿರುವ ಬಿಜೆಪಿ ಸಂಸದರ ಸಂಖ್ಯೆ 8ರಿಂದ 10ರಷ್ಟಿದೆ.

ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದವರಲ್ಲಿ ಶೋಭಾ ಕರಂದ್ಲಾಜೆ, ಬಿ.ಶ್ರೀರಾಮುಲು, ಪಿ.ಸಿ. ಮೋಹನ್‌, ಪ್ರತಾಪಸಿಂಹ, ಕರಡಿ ಸಂಗಣ್ಣ, ಸುರೇಶ ಅಂಗಡಿ, ಅನಂತಕುಮಾರ್‌ ಹೆಗಡೆ, ಪಿ.ಸಿ. ಸಿದ್ದೇಶ್ವರ ಮತ್ತಿತರರು ಸೇರಿದ್ದಾರೆ.

ಆದರೆ, 2019ರಲ್ಲಿ ಲೋಕಸಭೆಗೆ ನಡೆಯಲಿರುವ ಚುನಾವಣೆಗೆ ಮೊದಲು ಹೆಚ್ಚು ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಿಸುವುದನ್ನೂ ಪ್ರಧಾನಿ ಬಯಸದ್ದರಿಂದ ಆ ಆಸೆಗೆ ಹೈಕಮಾಂಡ್‌ ಒಪ್ಪಿಗೆ ಸೂಚಿಸದಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಅಂತೆಯೇ, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಮ್ಮತಿ  ದೊರೆಯಲಿದ್ದು, ಇತರರ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕಮಾಂಡ್‌ನಿಂದ ಸಂದೇಶ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಮಟ್ಟದಲ್ಲಿ ‘ಗುರುತಿಸಿಕೊಳ್ಳುವಲ್ಲಿ’ ಎದುರಾಗಿರುವ ಸಮಸ್ಯೆಯು  ವಿಧಾನಸಭೆಗೆ ಆಯ್ಕೆ ಬಯಸುತ್ತಿರುವ ಕೆಲವರಿಗೆ ಪ್ರಮುಖ ಕಾರಣವಾಗಿದ್ದರೆ, ‘ರಾಜ್ಯ ರಾಜಕಾರಣದ ಖದರೇ ಭಿನ್ನ’ ಎಂಬ ಅಭಿಪ್ರಾಯ ಇನ್ನು ಕೆಲವರಲ್ಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ಹೇಳಿದರು.

ರಾಜ್ಯ ಚುನಾವಣೆಯಲ್ಲಿ ಎದುರಾಗಬಹುದಾದ ಸೋಲು ಮತ್ತು ಗೆಲುವುಗಳ ಲೆಕ್ಕಾಚಾರ ಈಗಿನಿಂದಲೇ ಆರಂಭವಾಗಿದೆ. ಮೋದಿ ಅಲೆ ರಾಜ್ಯದಲ್ಲೂ ಕಂಡುಬರುವುದರಿಂದ ಈಗ ಎಲ್ಲರೂ ಗೆಲ್ಲುವ ಅಭ್ಯರ್ಥಿಗಳೆ. ‘ಬೇರೆಯವರು ನಿಂತರೆ ಸೋಲುತ್ತಾರೆ. ನಾನೇ ಸ್ಪರ್ಧಿಸಿ ಗೆಲ್ಲುವೆ’ ಎಂದು ಹೇಳಿಕೊಂಡು ಬರುವ ಸಂಸದರಿಗೆ ಮನ್ನಣೆ ದೊರೆಯುವುದಿಲ್ಲ ಎಂದು ಅವರು ತಿಳಿಸಿದರು.

ತಣ್ಣಗಾದ ಭಿನ್ನಮತ: ಮನ್ನಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಮುಖಂಡರಲ್ಲಿ ಕೆಲವು ತಿಂಗಳುಗಳಿಂದ ತಲೆದೋರಿದ್ದ ಭಿನ್ನಮತವೂ ಉತ್ತರ ಪ್ರದೇಶ, ಉತ್ತರಾಖಂಡ ವಿಧಾನಸಭೆಗಳ ಚುನಾವಣೆಯ ಭರ್ಜರಿ ಗೆಲುವಿನ ಫಲಿತಾಂಶದ ನಂತರ ತಣ್ಣಗಾಗಿದೆ.

ಕರ್ನಾಟಕದಲ್ಲಿ ಮತ್ತೆ ಸರ್ಕಾರ ರಚಿಸಿ, ದಕ್ಷಿಣ ಭಾರತದಲ್ಲಿ ಛಾಪು ಮೂಡಿಸಬೇಕು ಎಂಬ ಉದ್ದೇಶದೊಂದಿಗೆ ಕರ್ನಾಟಕದತ್ತ ದೃಷ್ಟಿ ಹರಿಸಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಉತ್ತರ ಪ್ರದೇಶ ಮಾದರಿಯಲ್ಲೇ ರಾಜ್ಯದ ಪ್ರತಿ ಕ್ಷೇತ್ರದ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವದಂತಿ ಈಗಾಗಲೇ ಪಕ್ಷದಲ್ಲಿ ಹರಿದಾಡುತ್ತಿದೆ.

‘ಷಾ ಅವರೇ ಟಿಕೆಟ್‌ ಅಂತಿಮಗೊಳಿಸಲಿ’ ಎಂದು ಬಯಸಿರುವ ಗುಂಪು ಖುಷಿಯಲ್ಲಿದ್ದರೆ, ಪಕ್ಷದಲ್ಲಿನ ರಾಜ್ಯದ ಮುಂಚೂಣಿ ಮುಖಂಡರಿಗೆ ಇದರಿಂದ ಇರಿಸುಮುರುಸು ಉಂಟಾಗಲಿದೆ ಎಂದೂ ಹೇಳಲಾಗುತ್ತಿದೆ.

‘ರಾಜ್ಯದಲ್ಲೂ ಮೋದಿ ಅಲೆ ಕೆಲಸ ಮಾಡುವುದು ಖಚಿತ. ಇಂಥ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಹೊರಗೆಡವುವ ಅಥವಾ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಪೇಚಿಗೆ, ವಿವಾದಕ್ಕೆ ಸಿಲುಕಿಸುವ ಕೆಲಸ ಮಾಡಬಾರದು’ ಎಂದು ಎರಡು ದಿನಗಳ ಹಿಂದಷ್ಟೇ ಇಲ್ಲಿ ನಡೆದ ಪಕ್ಷದ ರಾಜ್ಯ ಸಮನ್ವಯ ಸಮಿತಿ ಸಭೆಯಲ್ಲಿ ಮುಖಂಡರು ಚರ್ಚಿಸಿ ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್‌ ವಿಶಿಷ್ಟ ಕಾರ್ಯತಂತ್ರ

ನವದೆಹಲಿ: ರಾಜ್ಯ ವಿಧಾನಸಭೆಗೆ ಮುಂದಿನ ವರ್ಷದ ನಡೆಯಲಿರುವ  ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕಾಂಗ್ರೆಸ್‌ ಹೈಕಮಾಂಡ್‌ ಸಹ ವಿಶಿಷ್ಟ ರೀತಿಯ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

ಕೆಪಿಸಿಸಿ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಲ್ಲದೆ, ಯುವಕರಿಗೆ ಪಕ್ಷದಲ್ಲಿ ಆದ್ಯತೆ ನೀಡಲು ಆಸಕ್ತಿ ತಾಳಿದೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಸಂಸದ ಕೆ.ಎಚ್‌. ಮುನಿಯಪ್ಪ ಅವರು ‘ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊರಲು ಸಿದ್ಧ’ ಎಂದು ತಿಳಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ರಾಜ್ಯದಿಂದ ಕೇಳಿಬಂದಿದೆ. ಡಿ.ಕೆ. ಶಿವಕುಮಾರ್‌ ಅವರ ಹೆಸರೂ ಕೇಳಿಬರುತ್ತಿದೆ. ಉತ್ತರ ಕರ್ನಾಟಕ ಭಾಗವನ್ನು ಗಮನದಲ್ಲಿ ಇರಿಸಿಕೊಂಡೂ ಪಿಸಿಸಿ ಹೊಣೆಗಾರಿಕೆ ವಹಿಸುವತ್ತ ಹೈಕಮಾಂಡ್‌ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ದೃಷ್ಟಿಯಿಂದ ಬಜೆಟ್‌ ಮಂಡಿಸಿದ್ದು, ಕಾಂಗ್ರೆಸ್‌ ಜನಪ್ರಿಯತೆ ಮುಕ್ಕಾಗದಂತೆ ಎಲ್ಲ ಅಗತ್ಯ ಕಾರ್ಯತಂತ್ರ ರೂಪಿಸುವಲ್ಲಿ ಪಕ್ಷದ ವರಿಷ್ಠರು ಮುಂದಾಗಲಿದ್ದಾರೆ’ ಎಂಬ ನಂಬಿಕೆಯನ್ನು ಮುಖಂಡರು ಇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT