ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಾತಾವರಣಕ್ಕೆ ಸಾಕ್ಷಿಯಾದ ಲೋಕಸಭೆ

Last Updated 17 ಮಾರ್ಚ್ 2017, 4:04 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ಗುರುವಾರ ಕೃಷಿ ಇಲಾಖೆಯ ಬೇಡಿಕೆಗಳ ಮೇಲೆ ನಡೆದ ಚರ್ಚೆಯಲ್ಲಿ ಬೆಳಗಾವಿ ಸಂಸದ ಸುರೇಶ ಅಂಗಡಿ ಕನ್ನಡದಲ್ಲೇ ಮಾತನಾಡಿದರು. ಈ ಸಂದರ್ಭ ವಿರೋಧ ಪಕ್ಷದ ಸದಸ್ಯರೂ ಕನ್ನಡದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಲೋಕಸಭೆಯು 10ರಿಂದ 15 ನಿಮಿಷಗಳ ಕಾಲ ಕನ್ನಡದ ವಾತಾವರಣಕ್ಕೆ ಸಾಕ್ಷಿಯಾಯಿತು.

ತಾವು ತಯಾರಿಸುವ ಉತ್ಪನ್ನದ ಬೆಲೆಯನ್ನು ಖಾಸಗಿ ಕಂಪೆನಿಗಳು ತಾವೇ ನಿಗದಿ ಮಾಡುವ ಅಧಿಕಾರ ಹೊಂದಿವೆ. ಆದರೆ, ರೈತರು ಬೆಳೆಯುವ ಬೆಳೆಗೆ ಬೇರೆಯವರು ದರ ನಿಗದಿ ಮಾಡುತ್ತಿರುವುದರಿಂದ ತೀವ್ರ ನಷ್ಟ ಉಂಟಾಗುತ್ತಿದ್ದು, ಯುವಜನತೆ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ ಎಂದು ಅಂಗಡಿ ಆತಂಕ ವ್ಯಕ್ತಪಡಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮಗಳ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ರಾಜ್ಯಗಳು ಅವುಗಳ ಸಮರ್ಪಕ ಜಾರಿಗೆ ಆದ್ಯತೆ ನೀಡುವ ಅಗತ್ಯವಿದೆ’ ಎಂದು ಅವರು ಹೇಳುತ್ತಿದ್ದಂತೆಯೇ, ‘ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ. ಸರ್ಕಾರದ ಯೋಜನೆಗಳ ಬಗ್ಗೆ ವಿವರ ಬೇಡ’ ಎಂದು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಸದಸ್ಯರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ್‌, ಜಿ.ಎಂ. ಸಿದ್ದೇಶ್ವರ ಅವರು ಮಧ್ಯಪ್ರವೇಶಿಸಿ ಅಂಗಡಿ ಅವರ ಬೆಂಬಲಕ್ಕೆ ನಿಂತರು.

‘ಕರ್ನಾಟಕ ಸರ್ಕಾರವು ರೈತರ ಕಲ್ಯಾಣವನ್ನೇ ಮರೆತಿದೆ. ಸಿದ್ದರಾಮಯ್ಯ ಅವರು  ಮಂಗಳವಾರ ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ’ ಎಂದು ಅಂಗಡಿ ಅವರು ದೂರಿದರು. ಆಗ ಕಾಂಗ್ರೆಸ್‌ ಸದಸ್ಯರಾದ ಎಸ್‌.ಪಿ. ಮುದ್ದಹನುಮೇಗೌಡ, ಡಿ.ಕೆ. ಸುರೇಶ ಮತ್ತು ಪ್ರಕಾಶ ಹುಕ್ಕೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಮೊದಲು ಕೇಂದ್ರ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಲಿ’ ಎಂದು ಅವರು ಅಂಗಡಿ ಅವರ ಆರೋಪಕ್ಕೆ ಉತ್ತರ ನೀಡಿದರು.
ಈ ಸಂದರ್ಭ ಸ್ಪೀಕರ್‌ ಸ್ಥಾನದಲ್ಲಿದ್ದ ತಂಬಿದೊರೆ ಹಾಗೂ ಇತರ ರಾಜ್ಯಗಳ ಸದಸ್ಯರು ಮೂಕ ಪ್ರೇಕ್ಷಕರಂತೆ ಕುಳಿತಿದ್ದರಲ್ಲದೆ, ಇಲ್ಲಿ ಏನು ನಡೆಯುತ್ತಿದೆ ಎಂಬಂತೆ ಪರಸ್ಪರ ಮುಖ ನೋಡಿಕೊಂಡರು. ಕೆಲ ಕಾಲ ಇದೇನು ಲೋಕಸಭೆಯೋ ಅಥವಾ ಕರ್ನಾಟಕದ ವಿಧಾನಸಭೆಯೋ ಎಂಬಂತೆ ಭಾಸವಾಯಿತು.

‘ರೈತರಿಗೆ ಡಾಕ್ಟರೇಟ್‌ ನೀಡಲಿ’

ಕೃಷಿ ಕ್ಷೇತ್ರಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ವಿಶ್ವವಿದ್ಯಾಲಯಗಳು ರೈತರಿಗೂ ಗೌರವ ಡಾಕ್ಟರೇಟ್ ನೀಡಲು ಮುಂದಾಗಬೇಕು ಎಂದು ತುಮಕೂರು ಸಂಸದ ಎಸ್.ಪಿ. ಮುದ್ದಹನುಮೇಗೌಡ ಆಗ್ರಹಿಸಿದರು.

ಕೃಷಿ ಇಲಾಖೆಯ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ರೈತ ಸಮುದಾಯವನ್ನು ಸರ್ಕಾರಗಳು ಕಡೆಗಣಿಸುತ್ತಿದ್ದು, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ದೇಶದಾದ್ಯಂತ 6,000 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಐದು ವರ್ಷಗಳಿಂದ ಭೀಕರ ಬರ ಸ್ಥಿತಿ ತಲೆದೋರಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 1,000 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಸರ್ಕಾರ ವಿವಿಧ ಕೃಷಿ ಉತ್ಪನ್ನಗಳಿಗೆ ನೀಡುತ್ತಿರುವ ಬೆಂಬಲಬೆಲೆಯು ರೈತರ ಸಾಲ ಮರುಪಾವತಿಗೆ ಸಾಕಾಗುತ್ತಿಲ್ಲ. ಆದರೆ, ಸರ್ಕಾರವು ಆರ್ಥಿಕ ಶಿಸ್ತು ಕಾಪಾಡಲು ರೈತರ ಸಾಲ ಮನ್ನಾ ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ. ಕಾರ್ಪೊರೇಟ್ ವಲಯಕ್ಕೆ ವಾರ್ಷಿಕ ₹ 6 ಲಕ್ಷ ಕೋಟಿ ತೆರಿಗೆ ರಿಯಾಯಿತಿ ನೀಡುತ್ತಿರುವ ಸರ್ಕಾರ ರೈತರ ಹಿತಾಸಕ್ತಿ ಕಾಪಾಡುತ್ತಿಲ್ಲ ಎಂದರು. ಈ ಹಿಂದೆ ಯುಪಿಎ ಸರ್ಕಾರವು ದೇಶದ ರೈತರ

₹ 72,000 ಕೋಟಿ ಸಾಲ ಮನ್ನಾ ಮಾಡಿತ್ತು. ಅದೇ  ಮಾದರಿಯಲ್ಲಿ ಈಗಿನ ಸರ್ಕಾರವೂ ರೈತರ ಸಾಲ ಮನ್ನಾ ಮಾಡಲಿ ಎಂದು  ಆಗ್ರಹಿಸಿದರು.

ಕೊಬ್ಬರಿ ಮತ್ತು ಅಡಕೆಗೆ ನೀಡುತ್ತಿರುವ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕ್ವಿಂಟಲ್ ಕೊಬ್ಬರಿಗೆ ₹ 6,400 ಬೆಂಬಲ ಬೆಲೆ ದೊರೆಯುತ್ತಿದ್ದು, ರೈತರಿಗೆ ಉತ್ಪಾದನಾ ವೆಚ್ಚವೇ ದೊರೆಯುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT