ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಆದೇಶದಲ್ಲಿ ಮಧ್ಯ ಪ್ರವೇಶವಿಲ್ಲ: ಹೈಕೋರ್ಟ್‌

ಕಪ್ಪತಗುಡ್ಡ : ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ
Last Updated 16 ಮಾರ್ಚ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಗದಗ ಜಿಲ್ಲೆಯ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಿಸದಂತೆ ತಡೆಯಲು ನಿರ್ದೇಶಿಸಬೇಕು  ಎಂಬ  ವಿಷಯದಲ್ಲಿ  ಮಧ್ಯ ಪ್ರವೇಶಿಸಲು ಬಯಸುವುದಿಲ್ಲ’ ಎಂದು  ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಸಂಬಂಧ ‘ಕಪ್ಪತಗುಡ್ಡ ತಪ್ಪಲಿನಲ್ಲಿರುವ ರೈತರು ಹಾಗೂ ಕೃಷಿ ಕಾರ್ಮಿಕರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕ’ದ ಅಧ್ಯಕ್ಷ ವೆಂಕಟೇಶ ದಾಸರ ಹಾಗೂ ಬಸವಣ್ಣಯ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರ ವೆಂಕಟೇಶ ದಾಸರ ಹಾಗೂ ಬಸವಣ್ಣಯ್ಯ  ಪರ ಹಾಜರಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ‘ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ 2016ರ ಜನವರಿ 16ರಂದು ನಡೆದ ಸಾರ್ವಜನಿಕ ಸಮಾಲೋಚನಾ ಸಭೆ ಗದಗದ ತೋಂಟದಾರ್ಯ ಮಠದ ಪ್ರಾಯೋಜಿತ ಕಾರ್ಯಕ್ರಮ’ ಎಂದು ದೂರಿದರು.

‘ಈ ಸಭೆಯ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಇರಲಿಲ್ಲ. ಆಕ್ಷೇಪಣೆ ಸಲ್ಲಿಸಲೂ ಸಮಯಾವಕಾಶ ದೊರೆತಿರಲಿಲ್ಲ. ಆದ್ದರಿಂದ ಈ ಸಭೆಯಲ್ಲಿ ಮೂಡಿಬಂದ ಅಭಿಪ್ರಾಯದ ಅನುಸಾರ ಸರ್ಕಾರ ಕಪ್ಪತಗುಡ್ಡ ಅರಣ್ಯ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಿಸಿದಂತೆ ತಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು  ಕೋರಿದರು.

ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್‌ ಎಂ.ಆರ್.ನಾಯಕ್ ಅವರು, ‘ಈ ಪಿಐಎಲ್‌ ಹಿಂದೆ ಗಣಿಗಾರಿಕೆ ಕಂಪೆನಿಗಳ ಲಾಬಿ ಕೆಲಸ ಮಾಡಿದೆ. ಅರ್ಜಿ ದುರುದ್ದೇಶದಿಂದ ಕೂಡಿದೆ’ ಎಂದರು.

‘ಸರ್ಕಾರ ಈ ವಿಷಯದಲ್ಲಿ ಇನ್ನೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಸದ್ಯ ಈ ವಿಷಯ ರಾಜ್ಯ ವನ್ಯಜೀವಿ ಮಂಡಳಿ ಮುಂದಿದೆ. ಆದ್ದರಿಂದ ಇದನ್ನು ವಜಾ ಮಾಡಬೇಕು’ ಎಂದು ಮನವಿ ಮಾಡಿದರು.

ಹಿಂದೆ ಸರಿದ ಅರ್ಜಿದಾರರು: ಇದೇ ವೇಳೆ ಆರು ಜನ ಅರ್ಜಿದಾರರಲ್ಲಿ ನಾಲ್ವರು ಪ್ರಕರಣದಿಂದ ನಮ್ಮನ್ನು ಹೊರಗಿಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

ಪ್ರಮಾಣ ಪತ್ರ ಸಲ್ಲಿಸಿದ ಅರ್ಜಿದಾರರೆಂದರೆ, ಠಾಕೂರ್ ಸಿಂಗ್ ಎನ್‌.ಮಾಳಗಿಮನಿ, ಹನುಮಪ್ಪ ಹಮಾಲಪ್ಪ ಪೂಜಾರ, ಮಹಾಂತೇಶ ರೂಪಲಪ್ಪ ತುಳಸಿಮನಿ ಹಾಗೂ ಶ್ರೀನಿವಾಸ ಸಿಂಗ್ ಠಾಕೂರ್ ಮಾಳಗಿ ಮನಿ.

ಪ್ರಮಾಣ ಪತ್ರದ ವಿವರ: ‘ನಾವೆಲ್ಲಾ ಅನಕ್ಷರಸ್ಥರು. ಬಗರ್‌ಹುಕುಂ ಸಾಗುವಳಿದಾರರು. ನಮಗೆ ಈ ಅರ್ಜಿಯ ಬಗ್ಗೆ ಮಾಹಿತಿ ಇರಲಿಲ್ಲ. ನಮ್ಮ ಸಹಿಯನ್ನು ದುರುಪಯೋಗ ಮಾಡಿಕೊಂಡು ನಮಗೆ ತಿಳಿಯದಂತೆ ಈ ಅರ್ಜಿ ಸಲ್ಲಿಸಲಾಗಿದೆ. ಸಂವಿಧಾನದ 51 ಎ (ಜಿ) ವಿಧಿಯ ಅನುಸಾರ, ಸರ್ಕಾರ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಎಂದು ಘೋಷಿಸುವ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಆದ್ದರಿಂದ ನಾವು ಈ ಪಿಐಎಲ್‌ ವಾಪಸು ಪಡೆಯಲು ಅವಕಾಶ ನೀಡಬೇಕು’.

ತಡೆ ತೆರವು: ‘ಕಪ್ಪತುಗುಡ್ಡ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಿಸುವ ದಿಸೆಯಲ್ಲಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಬಾರದು’ ಎಂದು ಇದೇ ನ್ಯಾಯಪೀಠ ಈ ಮುನ್ನ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

‘ತಕ್ಷಣ ಸಂರಕ್ಷಿತ ಸ್ಥಾನಮಾನ ನೀಡಲಿ’

ಗದಗ: ಕಪ್ಪತಗುಡ್ಡದ ವಿಚಾರದಲ್ಲಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ, ಸರ್ಕಾರ ವಿಳಂಬ ಮಾಡದೆ ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಎಂದು ಮರು ಘೋಷಣೆ ಮಾಡಬೇಕುಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಆಗ್ರಹಪಡಿಸಿದ್ದಾರೆ.

‘ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಕೂಡಲೇ ಈ ಅಪರೂಪದ ಅರಣ್ಯ ಪ್ರದೇಶವನ್ನು ಉಳಿಸುವ ಸಲುವಾಗಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಮರು ಘೋಷಣೆ ಮಾಡಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಜಿಲ್ಲೆಯ ಶಾಸಕರು ಇದರತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದು ಅವರು ಪ್ರಕಟಣೆಯಲ್ಲಿ
ಒತ್ತಾಯಿಸಿದ್ದಾರೆ.

‘ ರಾಜ್ಯ ವನ್ಯಜೀವಿ ಮಂಡಳಿ ಸಭೆಯು ಈ ವಿಚಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಿದೆ. ಈ ವಿಷಯದಲ್ಲಿ ಬದ್ಧತೆ ತೋರಿಸಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT