ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್ ಮಾದರಿಯ ಕಮಾಂಡೊ ಕೇಂದ್ರ!

Last Updated 16 ಮಾರ್ಚ್ 2017, 20:08 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಲಂಡನ್ ಪೊಲೀಸ್ ನಿಯಂತ್ರಣ ಕೊಠಡಿ ಮಾದರಿಯಲ್ಲೇ ನಗರದಲ್ಲಿ ‘ಪೊಲೀಸ್ ಕಮಾಂಡೊ ಕೇಂದ್ರ’ ಸಜ್ಜುಗೊಳ್ಳುತ್ತಿದೆ.

ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ‘ಅಂತರರಾಷ್ಟ್ರೀಯ ಪೊಲೀಸ್ ವಿಚಾರ ಸಂಕಿರಣ’ದಲ್ಲಿ ಪಾಲ್ಗೊಂಡಿದ್ದ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಅಲ್ಲಿನ ಕಮಾಂಡೊ ಕೇಂದ್ರಕ್ಕೆ ಭೇಟಿ ನೀಡಿ ಬಂದಿದ್ದಾರೆ. ಇದೀಗ, ಅಲ್ಲಿನ ವ್ಯವಸ್ಥೆಯನ್ನೇ ನಗರದಲ್ಲೂ ಜಾರಿಗೆ ತರಲು ಮುಂದಾಗಿದ್ದಾರೆ.

ಈಗಿರುವ ನಿಯಂತ್ರಣ ಕೊಠಡಿಯನ್ನೇ ಮೇಲ್ದರ್ಜೆಗೇರಿಸಿ ಹೈ–ಟೆಕ್ ಕಮಾಂಡೊ ಕೇಂದ್ರ ಮಾಡಲಾಗುತ್ತಿದೆ. 20 ಅಡಿ ಉದ್ದ ಹಾಗೂ 20 ಅಡಿ ಅಗಲದ ವಿಡಿಯೊ ಪರದೆಯನ್ನು ಹಾಕಲಾಗುತ್ತಿದೆ. ದೂರುದಾರರು ನಿಯಂತ್ರಣ ಕೊಠಡಿಗೆ ಕರೆ ಮಾಡುತ್ತಿದ್ದಂತೆಯೇ, ಯಾವ ಲೊಕೇಷನ್‌ನಿಂದ ಕರೆ
ಬಂದಿದೆ ಎಂಬುದು ಜಿಪಿಎಸ್ ಮೂಲಕ ಪರದೆ ಮೇಲೆ ಗೋಚರವಾಗಲಿದೆ.

ಅಲ್ಲದೆ, ಸದ್ಯ ಆ ಸ್ಥಳಕ್ಕೆ ಹತ್ತಿರದಲ್ಲಿ ಯಾವ ಹೊಯ್ಸಳ ವಾಹನವಿದೆ ಎಂಬುದೂ ತಿಳಿಯಲಿದೆ. ಕೂಡಲೇ ಆ ಹೊಯ್ಸಳ ಸಿಬ್ಬಂದಿಗೆ ವಾಕಿಟಾಕಿ ಮೂಲಕ ಸಂದೇಶ ರವಾನೆಯಾಗುತ್ತದೆ. ಅವರು ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಜಾಲತಾಣಗಳಿಂದ ಸಂಪರ್ಕ: ಇಷ್ಟು ದಿನ ‘100’ಕ್ಕೆ ಕರೆ ಮಾಡಿ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸುತ್ತಿದ್ದ ನಾಗರಿಕರು, ಇನ್ನು ಮುಂದೆ ವಾಟ್ಸ್ ಆ್ಯಪ್, ಫೇಸ್‌ಬುಕ್ ಹಾಗೂ ಟ್ವಿಟರ್ ಮೂಲಕ ಕೂಡ ಸಂಪರ್ಕಿಸಬಹುದು.  ಜಾಲತಾಣಗಳ ನಿರ್ವಹಣೆಗಾಗಿಯೇ ಪ್ರತ್ಯೇಕ ಸಿಬ್ಬಂದಿ ಇರಲಿದ್ದಾರೆ.

‘ನಾಗರಿಕರ ಸಮಸ್ಯೆಗಳನ್ನು ಆಲಿಸಲು ನಿಯಂತ್ರಣ ಕೊಠಡಿಯಲ್ಲಿ ಸದ್ಯ 15 ದೂರವಾಣಿಗಳಿವೆ. ನಿರಂತರವಾಗಿ ದೂರುಗಳು ಬರುವ ಕಾರಣ ಅವು ಸದಾ ಕಾರ್ಯನಿರತವಾಗಿರುತ್ತವೆ. ಇದರಿಂದ ಎಲ್ಲರಿಗೂ ಸೇವೆ ಲಭ್ಯವಾಗುತ್ತಿಲ್ಲ. ಹೀಗಾಗಿ, ದೂರವಾಣಿಗಳ ಸಂಖ್ಯೆಯನ್ನು ನೂರಕ್ಕೆ ಹೆಚ್ಚಿಸಲಾಗುತ್ತಿದೆ.  ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು ಹಾಗೂ ತಮಿಳು ಭಾಷೆ ಬಲ್ಲ ಇಲಾಖೆಯ ಹೊರಗಿನವರನ್ನು ದೂರು ಆಲಿಸುವ ಕೆಲಸಗಳಿಗೆ ನೇಮಕ ಮಾಡಲಾಗುವುದು’  ಎಂದು ಪ್ರವೀಣ್ ಸೂದ್ ‘ಪ್ರಜಾವಾಣಿ’ಗೆ ತಿಳಿಸಿದರ

‘DIAL 100’ ಆ್ಯಪ್ ಶೀಘ್ರ ಬಳಕಗೆ
ನಗರ ಪೊಲೀಸರು ‘DIAL 100’ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು,  ಏಪ್ರಿಲ್‌ನಲ್ಲಿ ಅದು ಬಳಕೆಗೆ ಮುಕ್ತವಾಗಲಿದೆ. ಆ್ಯಾಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು.  ತುರ್ತು ಪರಿಸ್ಥಿತಿಗಳಲ್ಲಿ ಆ್ಯಪ್‌ಗೆ ಹೋಗಿ ಅಲರ್ಟ್ ಬಟನ್ ಒತ್ತಿದರೆ ಸಾಕು. ತಕ್ಷಣ ನಿಯಂತ್ರಣ ಕೊಠಡಿಗೆ ಕರೆ ಹೋಗುತ್ತದೆ ಹಾಗೂ ಅವರು ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಸಿಗುತ್ತದೆ.

*
ನಿಯಂತ್ರಣ ಕೊಠಡಿಗೆ ಕರೆ ಮಾಡುವವರಿಗೆ ಮೊದಲ ರಿಂಗ್‌ಗೆ  ಸಂಪರ್ಕ ಸಿಗಲಿದೆ. 30 ಸೆಕೆಂಡ್‌ಗಳ ಒಳಗಾಗಿ ಸಿಬ್ಬಂದಿ ದೂರುಗಳನ್ನು ಆಲಿಸಲಿದ್ದಾರೆ.
–ಪ್ರವೀಣ್ ಸೂದ್,
ನಗರ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT