ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಕೊಡದಿದ್ದಕ್ಕೆ ಕೊಂದು ಮೋರಿಗೆ ಎಸೆದರು!

ಮಧ್ಯರಾತ್ರಿ ಶವದ ಮೂಟೆಯನ್ನು ಸ್ಕೂಟರ್‌ನಲ್ಲಿ ಸಾಗಿಸಿದ್ದ ಹಂತಕರು * ಕೆಂಗೇರಿ ಮೋರಿಗೆ ಎಸೆದು ಪರಾರಿ
Last Updated 16 ಮಾರ್ಚ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕಂಠಪೂರ್ತಿ ಕುಡಿದು ಬಿಲ್ ಕೊಡದೆ ಗಲಾಟೆ ಮಾಡಿದನೆಂದು ಸುರೇಶ್ ಅಲಿಯಾಸ್ ಲೊಡ್ಡೆ (28) ಎಂಬಾತನನ್ನು ಹತ್ಯೆಗೈದಿದ್ದ ಬಾರ್ ನೌಕರರು, ಮೃತದೇಹವನ್ನು ಮೂಟೆ ಕಟ್ಟಿ ಕೆಂಗೇರಿ ಮೋರಿಗೆ ಎಸೆದಿದ್ದರು. ಇದೀಗ ಮೊಬೈಲ್ ಕರೆ ವಿವರ (ಸಿಡಿಆರ್) ನೀಡಿದ ಸುಳಿವು ಹಂತಕರಿಗೆ ಜೈಲಿನ ದಾರಿ ತೋರಿಸಿದೆ.

ಚಿಕ್ಕಲಸಂದ್ರದ ‘ಹಂಸ ಬಾರ್ ಅಂಡ್ ರೆಸ್ಟೋರೆಂಟ್’ ಕ್ಯಾಷಿಯರ್ ಸುರೇಶ ಅಲಿಯಾಸ್ ಸೂರಿ (28), ನೌಕರರಾದ ಶಿವಕುಮಾರ್ (24), ಅವಿನಾಶ್ (22), ಸೋಮಶೇಖರ್ (19), ಎನ್‌.ನಾಗರಾಜ್ (28) ಹಾಗೂ ಕೆಂಗೇರಿಯ ಮಾಂಸದ ಅಂಗಡಿ ಮಾಲೀಕ ಕನಕರಾಜ್ (24), ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಶವ ಸಾಗಿಸಲು ಬಳಸಿದ್ದ ಸ್ಕೂಟರ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಚ್ಚು ತೋರಿಸಿದ್ದ: ‘ಫೆ.28ರ ಸಂಜೆ ಗೆಳೆಯನ ಜತೆ ಬಾರ್‌ಗೆ ತೆರಳಿದ್ದ ಸುರೇಶ್, ರಾತ್ರಿ 10.30ರವರೆಗೂ ಮದ್ಯಪಾನ ಮಾಡಿದ್ದ. ನಂತರ ಬಿಲ್ ಕೊಡದೆ ಹೊರಟಿದ್ದ ಆತನನ್ನು ತಡೆದ ಕ್ಯಾಷಿಯರ್, ಹಣ ಕೊಡದೆ ಹೊರಗೆ ಬಿಡುವುದಿಲ್ಲ ಎಂದಿದ್ದ. ಈ ವೇಳೆ ಆತ ಮಚ್ಚು ತೋರಿಸಿ ಕ್ಯಾಷಿಯರ್‌ನನ್ನು ಬೆದರಿಸಿದ್ದ’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ಇದರಿಂದ ಸಿಟ್ಟಿಗೆದ್ದ ನೌಕರರು, ಆತನನ್ನು ಅಡುಗೆ ಕೋಣೆಗೆ ಎಳೆದೊಯ್ದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ನಂತರ ಕೇಬಲ್‌ ವೈರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿದ್ದರು. ಸಾವನ್ನಪ್ಪಿದ ಬಳಿಕ ಅದೇ ವೈರ್‌ನಿಂದ ಕೈಕಾಲುಗಳನ್ನು ಕಟ್ಟಿ, ಶವವನ್ನು ಮೂಟೆಗೆ ತುಂಬಿದ್ದರು’ ಎಂದು ಮಾಹಿತಿ ನೀಡಿದರು.

ಬೈಕ್‌ನಲ್ಲಿ ಸಾಗಾಟ: ರಾತ್ರಿ 12 ಗಂಟೆ ಸುಮಾರಿಗೆ ರೆಸ್ಟೋರೆಂಟ್ ಬಾಗಿಲು ಮುಚ್ಚಿದ ಆರೋಪಿಗಳು, ತಮ್ಮ ಪರಿಚಿತ ಕನಕರಾಜ್‌ಗೆ ಕರೆ ಮಾಡಿ ಹತ್ಯೆಯ ವಿಷಯ ತಿಳಿಸಿದ್ದರು. ಆಗ ಆತ, ‘ನನ್ನ ಮಾಂಸದ ಅಂಗಡಿಯ ಕಸವನ್ನು ಕೆಂಗೇರಿ ಮೋರಿಗೆ ಎಸೆಯುತ್ತೇನೆ. ಶವವನ್ನೂ ಅಲ್ಲೇ ಎಸೆದರೆ ಯಾರಿಗೂ ಗೊತ್ತಾಗುವುದಿಲ್ಲ’ ಎಂದಿದ್ದ.

ಅಂತೆಯೇ ಇಬ್ಬರು ಶವ ತೆಗೆದುಕೊಂಡು ಕೆಂಗೇರಿಗೆ ತೆರಳಿದ್ದರು. ಶಿವಕುಮಾರ್ ಸ್ಕೂಟರ್ ಚಲಾಯಿಸಿದರೆ, ಅವಿನಾಶ್ ತನ್ನ ತೊಡೆ ಮೇಲೆ ಮೂಟೆ ಇಟ್ಟುಕೊಂಡು ಹಿಂದೆ ಕುಳಿತಿದ್ದ. ರಾತ್ರಿ 1.30ರ ಸುಮಾರಿಗೆ ಮೈಲಸಂದ್ರ ಗೇಟ್ ಬಳಿ ತೆರಳಿ ಮೂಟೆಯನ್ನು ಕೆಂಗೇರಿ ಮೋರಿಗೆ ಎಸೆದು ಬಾರ್‌ಗೆ ಮರಳಿದ್ದರು. ಯಾವುದೇ ಅನುಮಾನ ಬಾರದಂತೆ ಮರುದಿನ  ಕೆಲಸ ಮುಂದುವರಿಸಿದ್ದರು.

‘ನೀರಿನಲ್ಲಿ ನೆಂದು ಮೂಟೆ ಕೊಳೆತು ಹೋಗಿದೆ. ಮೃತದೇಹ ಕೂಡ ಊದಿಕೊಂಡಿದೆ. ಇದರಿಂದ ಮೂಟೆ ಹರಿದು ಶವ ತೇಲಿದೆ. ಮಾರ್ಚ್‌ 2ರ ಮದ್ಯಾಹ್ನ ವಿದ್ಯಾಪೀಠ ರಸ್ತೆಯ ರಾಜಕಾಲುವೆಯಲ್ಲಿ ಸಿಕ್ಕಿಕೊಂಡಿದ್ದ ಮೃತದೇಹವನ್ನು ಕಂಡ ಸಮೀಪದ ತೋಟದ ಮಾಲೀಕ ಕೃಷ್ಣಪ್ಪ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಈ ಸಂಬಂಧ ಕೊಲೆ (ಐಪಿಸಿ 302) ಹಾಗೂ ಸಾಕ್ಷ್ಯ ನಾಶ (ಐಪಿಸಿ 201) ಆರೋಪಗಳಡಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’

‘ಮೃತನ ಪ್ಯಾಂಟಿನ ಜೇಬಿನಲ್ಲಿ ಮೊಬೈಲ್ ಸಿಕ್ಕಿತು. ಒಳಗೆ ನೀರು ಸೇರಿದ್ದರಿಂದ ಅದು ಚಾಲೂ ಆಗುತ್ತಿರಲಿಲ್ಲ. ಕೊನೆಗೆ ಅದರಲ್ಲಿದ್ದ ಸಿಮ್‌ ಕಾರ್ಡ್ ತೆಗೆದು, ಬೇರೊಂದು ಮೊಬೈಲ್‌ಗೆ ಹಾಕಿದೆವು. ಆಗ, ಮೃತನ ಸ್ನೇಹಿತರ ಮೊಬೈಲ್ ಸಂಖ್ಯೆಗಳು ಸಿಕ್ಕವು. ಅವರಿಗೆ ಕರೆ ಮಾಡಿ ವಿಚಾರಿಸಿದಾಗ ಸುರೇಶ್‌ನ ಗುರುತು ಪತ್ತೆಯಾಯಿತು’ ಎಂದು ತನಿಖಾಧಿಕಾರಿಗಳು ಹೇಳಿದರು.

ಕಳವು ಆರೋಪಿ: ಹದಿನೈದು ವರ್ಷಗಳಿಂದ ಪೋಷಕರಿಂದ ದೂರವಿರುವ ಸುರೇಶ್, ಚಿಕ್ಕಲಸಂದ್ರದಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ಬೆಳೆದ. ಕಳವು ಪ್ರಕರಣದ ಆರೋಪಿಯಾಗಿರುವ ಈತನ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್‌ ನೀಡಿದ ಸುಳಿವು

‘ಸುರೇಶ್‌ನ ಮೊಬೈಲ್‌ಗೆ ಬಂದು ಹೋಗಿದ್ದ ಕರೆಗಳ ವಿವರ ಪರಿಶೀಲಿಸಲಾಯಿತು. ಆಗ ಚಿಕ್ಕಲಸಂದ್ರ ವ್ಯಾಪ್ತಿಯಿಂದಲೇ ಕೊನೆ ಕರೆ ಹೋಗಿರುವುದು ಗೊತ್ತಾಯಿತು. ಅಲ್ಲದೆ, ಫೆ.28ರ ರಾತ್ರಿ 1 ಗಂಟೆಗೆ ಕೆಂಗೇರಿ ಬಳಿ ಆ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದೂ ತಿಳಿಯಿತು.’
‘ನಂತರ ಸ್ಥಳೀಯ ಯುವಕರನ್ನು ವಿಚಾರಣೆ ನಡೆಸಿದಾಗ ‘ಫೆ.28ರ ರಾತ್ರಿ ಸುರೇಶ್ ಹಾಗೂ ಬಾರ್‌ ನೌಕರರ ನಡುವೆ ಗಲಾಟೆಯಾಗಿತ್ತು. ಆ ನಂತರ ಆತ ಕಾಣಿಸಿಕೊಂಡಿರಲಿಲ್ಲ’ ಎಂದು ಹೇಳಿಕೆ ಕೊಟ್ಟರು. ಅನುಮಾನದ ಮೇಲೆ ಕ್ಯಾಷಿಯರ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿಗಳು ಹೇಳಿದರು.

‘ಕಾಟದಿಂದ ರೋಸಿ ಹೋಗಿದ್ದೆವು’:
‘ಸುರೇಶ್ ನಿತ್ಯ ಬಾರ್‌ಗೆ ಬಂದು ಮದ್ಯಪಾನ ಮಾಡುತ್ತಿದ್ದ. ಹಣ ಕೇಳಿದರೆ ಚಾಕು–ಮಚ್ಚು ತೋರಿಸಿ ಬೆದರಿಸುತ್ತಿದ್ದ. ಆತನ ಕಾಟದಿಂದ ರೋಸಿ ಹೋಗಿದ್ದೆವು.

ಫೆ.28ರಂದು ಹೆಚ್ಚಿನ ವಹಿವಾಟು ನಡೆದಿರಲಿಲ್ಲ. ಆ ದಿನ ಕೂಡ ಬಿಲ್ ಕೊಡದೆ ಗಲಾಟೆ ಮಾಡಿದ್ದರಿಂದ ಕೋಪ ಬಂದು ಕೊಂದು ಹಾಕಿದೆವು’ ಎಂದು ಕ್ಯಾಷಿಯರ್ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT