ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಸಿಟಿ ಅನುಷ್ಠಾನಕ್ಕೆ ಕ್ಷಣಗಣನೆ

Last Updated 17 ಮಾರ್ಚ್ 2017, 4:44 IST
ಅಕ್ಷರ ಗಾತ್ರ

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಮೊದಲ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತ ತಲುಪಿದ್ದು, ಯೋಜನೆ ಅನುಷ್ಠಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಯೋಜನೆ ಅನುಷ್ಠಾನ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅಧಿಕಾರಿಗಳಿಂದ ಯೋಜನೆಯ ರೂಪುರೇಷೆಗಳ ಸಮಗ್ರ ಮಾಹಿತಿ ಪಡೆದರು.

ನಗರದ ಮುಖ್ಯ ಬಸ್‌ನಿಲ್ದಾಣದ ಅಶೋಕ ವೃತ್ತದಿಂದ ಸಾಗರ ರಸ್ತೆಯ ಆಲ್ಕೊಳ ವೃತ್ತದವರೆಗಿನ 1.7 ಕಿ.ಮೀ ರಸ್ತೆಯನ್ನು 24 ಮೀಟರ್‌ ಚತುಷ್ಪದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ರಸ್ತೆ ಮಧ್ಯೆ ಹೂದೋಟ, ಹೈಟೆಕ್‌ ಬಸ್‌ ನಿಲ್ದಾಣಗಳು, ನಿಲ್ದಾಣಗಳಲ್ಲಿ ಬಸ್‌ ಆಗಮಿಸುವ, ಹೊರಡುವ ಸಮಯದ ಮಾಹಿತಿ, ಇ–ಶೌಚಾಲಯಗಳು ನಿರ್ಮಾಣವಾಗಲಿವೆ. ರಸ್ತೆಯ ಎರಡೂ ಬದಿ ಆಕರ್ಷಕ ಸೌರ ಬೀದಿದೀಪಗಳು ಜಗಮಗಿಸಲಿವೆ.

ಅಧಿಕಾರಿಗಳು ಸ್ಮಾರ್ಟ್ ಸಿಟಿ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಹೊಂದಿರಬೇಕು. ಯೋಜನೆ ಸಮರ್ಪಕ  ಅನುಷ್ಠಾನಗೊಳಿಸಲು ಶ್ರಮಿಸಬೇಕು. ಕನಿಷ್ಠ ನಗರದ ಮೂರ್ನಾಲ್ಕು ರಸ್ತೆಗಳಾದರೂ ವಿದೇಶದ ಅನುಭವ ನೀಡುವ ರೀತಿ ಸಿದ್ಧವಾಗಬೇಕು ಎಂದರು.

ಪಾದಚಾರಿ ಮೇಲ್ಸೇತುವೆ ಅನುಪಯುಕ್ತ: ಅಶೋಕ ವೃತ್ತದಲ್ಲಿ ಪಾದಚಾರಿ ಮೇಲು ಸೇತುವೆ ಯೋಜನೆ ಕೈಬಿಡುವುದು ಸೂಕ್ತ. ಬೆಂಗಳೂರಿನಂತಹ ನಗರಗಳಲ್ಲೇ ಅವು ಸದ್ಬಳಕೆಯಾಗಿಲ್ಲ. ವಿರಳ ಜನ ಸಂದಣಿ, ನಿರ್ವಹಣೆಯ ಕೊರತೆಯ ಕಾರಣ ಅವು ಭಿಕ್ಷುಕರ, ಅಪರಾಧ  ಹಿನ್ನೆಲೆಯ ವ್ಯಕ್ತಿಗಳ ತಾಣವಾಗಿವೆ. ಶಿವಮೊಗ್ಗದಲ್ಲಿ ಇಂತಹ ಯೋಜನೆಗಳು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಆಧುನಿಕ ಕಸಾಯಿಖಾನೆ: ₹ 10.15 ಕೋಟಿ ವೆಚ್ಚದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದೆ. ಆದರೆ, ಜಾಗದ ಕೊರತೆ ಇದೆ ಎಂದು ಪಾಲಿಕೆ ಎಂಜಿನಿಯರ್‌ ಗಣೇಶ್‌ ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಗರದ ಹೊರ ವಲಯದಲ್ಲಿ ಐದು ಎಕರೆ ಜಾಗ ನೀಡಲು ಉಪ ವಿಭಾಗಾಧಿಕಾರಿಗೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.

ಸ್ಮಾರ್ಟ್‌ಸಿಟಿ ಕಾಮಗಾರಿಗಳು ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿರಬೇಕು. ಬೇರೆ ಯೋಜನೆಗಳಂತೆ ಇದನ್ನೂ ಭಾವಿಸಬಾರದು. ಕಾರಾಗೃಹ  ಸ್ಥಳಾಂತರಿಸದ ನಂತರ ಆ ಜಾಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ ಮಾದರಿ ಉದ್ಯಾನ ಅಭಿವೃದ್ಧಿಪಡಿಸಲು ಈ ಯೋಜನೆ ಅಡಿ ಕ್ರಮ ಕೈಗೊಳ್ಳಬೇಕು. ಇಡೀ ನಗರದ ಸಮಗ್ರ ಅಭಿವೃದ್ಧಿಯನ್ನು ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳಿಸಬೇಕು ಎಂದರು.

ಬಸ್‌ನಿಲ್ದಾಣಗಳು ಸೇರಿದಂತೆ ನಗರದ 8 ಸ್ಥಳಗಳಲ್ಲಿ  ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸಿದ್ಧತೆ ನಡೆದಿದೆ. ಅದರಲ್ಲಿ ಮೂರು ಇ–ಶೌಚಾಲಯ ಕಡ್ಡಾಯವಾಗಿ ನಿರ್ಮಿಸಬೇಕು ಎಂದರು.

ರೈಲುನಿಲ್ದಾಣ ಅಭಿವೃದ್ಧಿ, ನಗರ ಎಲ್ಲ ಪ್ರಮುಖ ರಸ್ತೆಗಳಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಎಲ್ಲ ವೃತ್ತಗಳ ಅಭಿವೃದ್ಧಿ, ಹೈಟೆಕ್‌ ಬಸ್‌ನಿಲ್ದಾಣಗಳು, ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ, ಹಸಿರೀಕರಣ, ಉದ್ಯಾನಗಳ ಅಭಿವೃದ್ಧಿ, ಕಸ ವಿಲೇವಾರಿ, ಸಮರ್ಪಕ ಘನತ್ಯಾಜ್ಯ ನಿರ್ವಹಣೆ, 24 ಗಂಟೆಯೂ ನೀರು ಸರಬರಾಜು, ನೀರಿನ ಬಳಕೆಗೆ ಮೀಟರ್ ಅಳವಡಿಕೆಯ ವಿವರ ಪಡೆದರು.

ಸಬರಮತಿ ಮಾದರಿ ತುಂಗಾ ಅಭಿವೃದ್ಧಿ: ಗುಜರಾತಿನ ಸಬರಮತಿ ನದಿ ಮಾದರಿಯಲ್ಲಿ ನಗರದ ಒಳಗೆ ಹರಿಯುವ ತುಂಗಾನದಿಯನ್ನು ₹ 421.12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

**

5 ಕೊಳಚೆ ಪ್ರದೇಶ ಅಭಿವೃದ್ಧಿ
ಮೊದಲ ಹಂತದಲ್ಲಿ ನಗರದ ಐದು ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ.

ದೇವಕಾತಿ ಕೊಪ್ಪದ ಬಳಿ ಪ್ರತ್ಯೇಕ ಬಡಾವಣೆ ನಿರ್ಮಿಸಿ, ಅಲ್ಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳಾಂತರಿಸಲು ಸಾಧ್ಯವಾಗದಿದ್ದರೆ ಅದೇ ಸ್ಥಳದಲ್ಲಿ ಆಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT