ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಾಹಾರ ತ್ಯಜಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

Last Updated 17 ಮಾರ್ಚ್ 2017, 9:15 IST
ಅಕ್ಷರ ಗಾತ್ರ

ಕೋಲಾರ: ಗುಣಮಟ್ಟದ ಆಹಾರ ನೀಡಬೇಕು ಮತ್ತು ಮೂಲಸೌಕರ್ಯ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ನಗರದ ಬೋವಿ ಕಾಲೊನಿಯ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ ವಿದ್ಯಾರ್ಥಿನಿಯರು ಗುರುವಾರ ಬೆಳಿಗ್ಗೆ ಉಪಾಹಾರ ಸೇವಿಸದೆ ಪ್ರತಿಭಟನೆ ಮಾಡಿದರು.

ಹಾಸ್ಟೆಲ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಜತೆಗೆ ನೀರಿನ ಸಮಸ್ಯೆ ಗಂಭೀರವಾಗಿದೆ. ಶೌಚಾಲಯಗಳು ಶಿಥಿಲಗೊಂಡಿದ್ದು, ಸ್ವಚ್ಛತೆ ಇಲ್ಲವಾಗಿದೆ. ಈ ಬಗ್ಗೆ ವಾರ್ಡನ್‌ಗೆ ಹಲವು ಬಾರಿ ದೂರು ಕೊಟ್ಟಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.

ಹುಳು ಬಿದ್ದ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ. ಜತೆಗೆ ಅಡುಗೆಗೆ ಶುದ್ಧ ನೀರನ್ನು ಬಳಕೆ ಮಾಡುತ್ತಿಲ್ಲ. ಹಾಸ್ಟೆಲ್‌ಗೆ ಮಂಜೂರಾದ ಆಹಾರ ಪದಾರ್ಥಗಳನ್ನು ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಹಾಸ್ಟೆಲ್‌ನಿಂದ ಮನೆಗೆ ಕಳುಹಿಸುವುದಾಗಿ ಬೆದರಿಸುತ್ತಾರೆ ಎಂದು ಆರೋಪಿಸಿದರು.

ಹಾಸ್ಟೆಲ್‌ನಲ್ಲಿ 54 ಮಂದಿ ವಿದ್ಯಾರ್ಥಿನಿಯರಿದ್ದೇವೆ. ಸಿಬ್ಬಂದಿ ಅಕ್ಕಪಕ್ಕದ ಕೊಳವೆ ಬಾವಿಗಳಿಂದ ನೀರು ತರುವಂತೆ ಹೇಳುತ್ತಾರೆ. ಅವರ ಸೂಚನೆಯಂತೆ ಪ್ರತಿನಿತ್ಯ ಹೊರಗಡೆಯಿಂದ ನೀರು ತರುತ್ತಿದ್ದೇವೆ. ನೀರಿಲ್ಲದ ಕಾರಣ ವಾರಕ್ಕೊಮ್ಮೆ ಸ್ನಾನ ಮಾಡುವಂತಾಗಿದೆ. ಹಳೆಯ ಸ್ನಾನದ ಕೊಠಡಿಗಳ ಬಾಗಿಲು ಮುರಿದಿವೆ. ಹೊಸದಾಗಿ ಸ್ನಾನದ ಕೊಠಡಿಗಳನ್ನು ನಿರ್ಮಿಸಿದ್ದರೂ ಅವುಗಳನ್ನು ಬಳಸಲು ಅವಕಾಶ ಕೊಡುತ್ತಿಲ್ಲ. ಹಾಸ್ಟೆಲ್‌ ವಾರ್ಡನ್‌ ಮತ್ತು ಸಿಬ್ಬಂದಿಯ ಶೋಷಣೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಹಾಸ್ಟೆಲ್‌ನ ಜನರೇಟರ್‌ ಕೆಟ್ಟಿದ್ದು, ಅದನ್ನು ರಿಪೇರಿ ಮಾಡಿಸಿಲ್ಲ. ಈಗ ಪರೀಕ್ಷಾ ಸಮಯವಾಗಿದ್ದು, ವಿದ್ಯುತ್‌ ಕಡಿತಗೊಂಡಾಗ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಆಹಾರ ಪದಾರ್ಥಗಳಲ್ಲಿ ಹುಳುಗಳು ಇರುತ್ತೇವೆ. ಇದನ್ನು ವಾರ್ಡನ್‌ ನಾರಾಯಣಮ್ಮ ಅವರ ಗಮನಕ್ಕೆ ತಂದು ಗುಣಮಟ್ಟದ ಆಹಾರ ಕೊಡುವಂತೆ ಕೇಳಿದ್ದೇವೆ. ಇದರಿಂದ ಕೋಪಗೊಂಡ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಳಲು ತೋಡಿಕೊಂಡರು.

ಪರಿಶೀಲನೆ: ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಾಜಿ ವಿದ್ಯಾರ್ಥಿನಿಲಯದಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ಸ್ನಾನಕ್ಕೆ ಸೋಪು ಕೊಡುತ್ತಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿನಿಯರು ಹಾಸ್ಟೆಲ್‌ನ ದಾಸ್ತಾನು ಕೊಠಡಿಯಲ್ಲಿದ್ದ ಸೋಪಿನ ಪೆಟ್ಟಿಗೆಗಳನ್ನು ಅಧಿಕಾರಿಗಳಿಗೆ ತೋರಿಸಿದರು.

ಅಧಿಕಾರಿಗಳ ಪರಿಶೀಲನೆ ವೇಳೆ ಅಡುಗೆಗೆ ಕೊಳೆತ ತರಕಾರಿಗಳನ್ನು ಬಳಸುತ್ತಿರುವುದು ಮತ್ತು ಬೆಳಗಿನ ಉಪಾಹಾರಕ್ಕೆ ವಿದ್ಯಾರ್ಥಿನಿಯರಿಗೆ ಕೊಟ್ಟಿದ್ದ ಚಪಾತಿ ಮತ್ತು ಬೇಳೆ ಸಾಂಬರಿನಲ್ಲಿ ಹುಳುಗಳು ಇದ್ದುದು ಕಂಡುಬಂತು. ಅಲ್ಲದೇ, ವಿದ್ಯಾರ್ಥಿನಿಲಯದ ಕೊಠಡಿಯೊಂದರಲ್ಲಿ ನಿರುಪಯುಕ್ತ ವಸ್ತುಗಳು ಕಸದಂತೆ ರಾಶಿಯಾಗಿ ಬಿದ್ದಿರುವುದು ಕಂಡುಬಂತು.

ಭಾರತ ವಿದ್ಯಾರ್ಥಿ ಒಕ್ಕೂಟದ ಸದಸ್ಯರಾದ ಪಿ.ಎ.ಗಾಯಿತ್ರಿ, ವಿಜಯಕುಮಾರಿ, ವೈ.ಗಂಗಾ, ರೇಖಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**

ವಿದ್ಯಾರ್ಥಿನಿಲಯದಲ್ಲಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುತ್ತೇವೆ. ಹಾಸ್ಟೆಲ್‌ ಅವ್ಯವಸ್ಥೆಗೆ ಕಾರಣವಾಗಿರುವ ವಾರ್ಡನ್‌ ನಾರಾಯಣಮ್ಮ ಅವರನ್ನು ಅಮಾನತು ಮಾಡಲಾಗುತ್ತದೆ.
–ಜಯಣ್ಣ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT