ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಮಾ.18ರಂದು ಪ್ರತಿಭಟನೆ

Last Updated 17 ಮಾರ್ಚ್ 2017, 9:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಶಾಸಕರ ಜನವಿರೋಧಿ ನೀತಿ, ಮಿತಿ ಮೀರಿದ ಭ್ರಷ್ಟಾಚಾರ, ಸರ್ವಾಧಿಕಾರಿ ಆಡಳಿತದ ವಿರುದ್ಧ ಮಾರ್ಚ್‌ 18 ರಂದು ಜೆಡಿಎಸ್‌ ವತಿಯಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸಂಪೂರ್ಣವಾಗಿ ಆಡಳಿತ ಯಂತ್ರ ಕುಸಿದು ಹೋಗಿದೆ. ಅಧಿಕಾರಿಗಳು ವರ್ಗಾವಣೆ ಭಯದಿಂದ ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಬಗರ್‌ ಹುಕುಂ ಸಾಗುವಳಿ ಯೋಜನೆಯಡಿ ಭೂ ಮಂಜೂರಾತಿ ಮಾಡಿಲ್ಲ’ ಎಂದು ತಿಳಿಸಿದರು.

‘ಶಾಸಕರು ಗಣಿ, ಜಲ್ಲಿ ಕ್ರಷರ್‌ ಮತ್ತು ಟಿಪ್ಪರ್‌ನವರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮೂರು ಹಂತಗಳಲ್ಲಿ ಲಂಚ ಪಡೆಯುತ್ತಿದ್ದಾರೆ. ಇಂತಹ ಆರೋಪಗಳಿಂದ ಶಾಸಕರು ಹತಾಶರಾಗಿ ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರ ದುರಾಡಳಿತಕ್ಕೆ ಕೊನೆ ಹಾಡಬೇಕಿದೆ’ ಎಂದರು.

‘ಬೆಸ್ಕಾಂನವರು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಬುಧವಾರ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವಿದ್ಯುತ್‌ ಕಡಿತಗೊಳಿಸುತ್ತಿದ್ದಾರೆ. ರೈತರು ಸೇರಿದಂತೆ ಜನಸಾಮಾನ್ಯರು ತೊಂದರೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅಡಚಣೆಯಾಗುತ್ತಿದೆ. ಬೆಸ್ಕಾಂ ಈ ರಜೆಯನ್ನು ಕೂಡಲೇ ರದ್ದುಪಡಿಸಿ ಹಗಲು 3 ಮತ್ತು ರಾತ್ರಿ 4 ಗಂಟೆ ತ್ರೀಫೇಸ್ ವಿದ್ಯುತ್‌ ನೀಡಬೇಕು’ ಎಂದು ಒತ್ತಾಯಿಸಿದರು.

‘ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್‌ ವತಿಯಿಂದ ನಡೆಸುವ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೇ ಖರ್ಚು ಮಾಡಲಾಗಿದೆ. ಆದ್ದರಿಂದ ಶಾಸಕರ ಆದಾಯದ ಮೂಲದ ಬಗ್ಗೆ ತನಿಖೆ ನಡೆಸಬೇಕು. ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಉದ್ಘಾಟನೆಗೊಂಡರೂ ಬಳಕೆಯಾಗದ ನೂತನ ಜಿಲ್ಲಾಸ್ಪತ್ರೆ ಮತ್ತು ನಗರಸಭೆ ಖಾಸಗಿ ಬಸ್‌ ನಿಲ್ದಾಣವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು’ ಎಂದು ಹೇಳಿದರು.

‘ಮಹಿಳಾ ಕಾಲೇಜು ಕಟ್ಟಡದ ಕಾಮಗಾರಿ ಶೀಘ್ರ ಮುಗಿಸಬೇಕು. ತಾಲ್ಲೂಕಿನಲ್ಲಿ ಶಾಸಕರ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಣೆ ದಂಧೆ ನಡೆಯುತ್ತಿದೆ. ಅದನ್ನು ತಡೆಯಬೇಕು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಜತೆಗೆ ಅದನ್ನು ಪುನಃ ನಗರಕ್ಕೆ ಸ್ಥಳಾಂತರಿಸಬೇಕು. ನಗರಸಭೆಯಲ್ಲಿ ಖಾತೆಗಳಿಗೆ ಪರವಾನಗಿ ನೀಡದೆ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು’ ಎಂದರು.

ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಂದಿ ಆಂಜನಪ್ಪ ಮಾತನಾಡಿ, ‘ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಸುಧಾಕರ್ ಅವರ ವಿರುದ್ಧ ಹಂಚಲಾಗಿದೆ ಎನ್ನುವ ಕರಪತ್ರಗಳಲ್ಲಿರುವ ಆರೋಪಗಳೆಲ್ಲವೂ ನೂರಕ್ಕೆ ನೂರು ಸತ್ಯವಾಗಿವೆ. ಅದಕ್ಕಾಗಿಯೇ ಸುಧಾಕರ್ ಅವರು ಹುಚ್ಚರಂತೆ ಆಡುತ್ತಿದ್ದಾ. ಇನ್ನು ಮುಂದೆ ನನ್ನ ಸ್ವಂತ ಹಣದಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚುತ್ತೇನೆ. ಅದಕ್ಕೆ ಶಾಸಕರು ಉತ್ತರಿಸಲಿ’ ಎಂದು ತಿಳಿಸಿದರು.

‘ಪ್ರತಿಯೊಬ್ಬ ಗುತ್ತಿಗೆದಾರನಿಂದ ಪ್ರತಿ ಕಾಮಗಾರಿಯಲ್ಲಿ ಶೇ20 ರಷ್ಟು ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ ಅವರು ವ್ಯಕ್ತಿಯೊಬ್ಬರ ಎದುರು ಪೆರಿಟಾಲ ರವಿ ಮಾದರಿ ರಾಜಕೀಯ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇವರು ಎಷ್ಟು ಕೊಲೆ ಮಾಡುತ್ತಾರೋ ನಾವು ನೋಡುತ್ತೇವೆ’ ಎಂದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್‌ ಮಾತನಾಡಿ, ‘ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಶಾಸಕರು ಒಂದು ವರ್ಷದೊಳಗೆ ಹೆಬ್ಬಾಳ ಕೆರೆ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದ್ದರು. ಇಂತಹ ಸುಳ್ಳು ಭರವಸೆಗಳಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಶಾಸಕರು ಸದಾ ಎತ್ತಿನಹೊಳೆ ಜಪ ಮಾಡುತ್ತಾರೆ. ಆದರೆ ಆ ಯೋಜನೆಗಾಗಿ ಈವರೆಗೆ ಒಂದಂಗುಲ ಭೂಮಿಯನ್ನು ಕೂಡ ಸ್ವಾಧೀನಪಡಿಸಿಕೊಂಡಿಲ್ಲ. ಯೋಜನೆಗಾಗಿ ಪೈಪ್‌ ಖರೀದಿಸುವ ವ್ಯವಹಾರದಲ್ಲಿ ಈ ಭಾಗದ ಜನಪ್ರತಿನಿಧಿಗಳು ಕಮಿಷನ್‌ ನೀಡಲಾಗಿದೆ. ಅಭಿವೃದ್ಧಿ ನೆಪದಲ್ಲಿ ಕಾನೂನು ಬಾಹಿರ ಕೆಲಸಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಶಾಸಕರೇ ಪೊಲೀಸರನ್ನು ನಿಭಾಯಿಸುತ್ತಿದ್ದಾರೆ’ ಎಂದು ದೂರಿದರು. ಜೆಡಿಎಸ್‌ ಮುಖಂಡರಾದ ಕೆ.ಸಿ.ರಾಜಾಕಾಂತ್, ಮುನಿರಾಜು, ಪಕ್ಷದ ಕಾರ್ಯಕರ್ತರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

**

ಸುಧಾಕರ್‌ ಬಗ್ಗೆ ಮುಖ್ಯಮಂತ್ರಿ ಅವರಿಗೆ ವರದಿ ಕೊಟ್ಟಿದ್ದೇನೆ. ಆದ್ದರಿಂದ ಸಿದ್ದರಾಮಯ್ಯ ಅವರು ಸುಧಾಕರ್‌ ಅವರನ್ನು ದೂರವಿಟ್ಟಿದ್ದಾರೆ. ಹೀಗಾಗಿ ಅವರು ಜೆಡಿಎಸ್ ವಿರುದ್ಧ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ.
-ನಂದಿ ಆಂಜನಪ್ಪ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT