ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಧನ ಹೆಚ್ಚಳದಲ್ಲಿ ಅನ್ಯಾಯ: ಆರೋಪ

Last Updated 17 ಮಾರ್ಚ್ 2017, 9:32 IST
ಅಕ್ಷರ ಗಾತ್ರ

ಕೋಲಾರ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳದಲ್ಲಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ಸದಸ್ಯರು ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಗುರುವಾರ ದಿಢೀರ್‌ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನದಲ್ಲಿ ₹ 4,500 ಹೆಚ್ಚಳ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನದಲ್ಲಿ ಕ್ರಮವಾಗಿ ₹ 1,000 ಹಾಗೂ ₹ 500 ಹೆಚ್ಚಳ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮುನಿರಾಜಮ್ಮ ಮಾತನಾಡಿ, ‘ಜಿಲ್ಲೆಯಲ್ಲಿ 2,331 ಅಂಗನವಾಡಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ 2,322 ಕಾರ್ಯಕರ್ತೆಯರು ಮತ್ತು 1,900 ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 6 ಸಾವಿರ ಮತ್ತು ಸಹಾಯಕಿಯರಿಗೆ ₹ 3 ಸಾವಿರ ಗೌರವಧನ ಕೊಡಲಾಗುತ್ತಿದೆ. ಗೌರವಧನದ ಪ್ರಮಾಣ ಕಡಿಮೆ ಇರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ’ ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇದಕ್ಕೆ ಅನುಗುಣವಾಗಿ ಜೀವನ ನಿರ್ವಹಣಾ ವೆಚ್ಚ ಹೆಚ್ಚಿದೆ. ಈ ಕಾರಣಕ್ಕಾಗಿ ಗೌರವಧನ ಹೆಚ್ಚಿಸುವಂತೆ ಹಲವು ಬಾರಿ ಪ್ರತಿಭಟನೆ ಮಾಡಿ ಸಚಿವರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಬೇಡಿಕೆಯಂತೆ ಬಜೆಟ್‌ನಲ್ಲಿ ಗೌರವಧನ ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಬಜೆಟ್‌ನಲ್ಲಿ ಬೇಡಿಕೆ ತಕ್ಕಂತೆ ಗೌರವಧನ ಹೆಚ್ಚಿಸಿಲ್ಲ ಎಂದು ದೂರಿರು.

ನ್ಯಾಯಯುತವಲ್ಲ: ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನದ ಪ್ರಮಾಣ ಕಡಿಮೆ ಇದೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಬಜೆಟ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಗೌರವಧನ ಹೆಚ್ಚಳ ಮಾಡಿದೆ. ಸರ್ಕಾರದ ಈ ಕ್ರಮ ನ್ಯಾಯಯುತವಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರ ಗೌರವಧನ ಪ್ರಮಾಣವನ್ನು ಪರಿಷ್ಕರಣೆ ಮಾಡಬೇಕು. ಅಂಗನವಾಡಿ ನೌರರಿಗೆ ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸಬೇಕು. ಗೌರವಧನದ ನೇರ ವರ್ಗಾವಣೆ ಮಾಡಬಾರದು. ಸಣ್ಣಪುಟ್ಟ ಕಾರಣಕ್ಕೆ ನೌಕರರನ್ನು ಸೇವೆಯಿಂದ ವಜಾಗೊಳಿಸಬಾರದು. ಕನಿಷ್ಠ ವೇತನ ನಿಗದಿಪಡಿಸಿ ಕನಿಷ್ಠ ಕೂಲಿ ಕಾಯ್ದೆ ವ್ಯಾಪ್ತಿಗೆ ತರಬೇಕು. ಇಲ್ಲದಿದ್ದರೆ ಮಾ.20ರಿಂದ ಕರ್ತವ್ಯ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ. ಜತೆಗೆ ವಿಧಾನಸೌಧ ಚಲೋ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ರಾಜಮ್ಮ, ಅನಸೂಯಮ್ಮ, ಸದಸ್ಯ ಉಮಾದೇವಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

**

ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 10,500 ಹಾಗೂ ಸಹಾಯಕಿಯರಿಗೆ ₹ 7,500 ಗೌರವಧನ ಕೊಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಕಡಿಮೆ ಇದೆ.
–ವೆಂಕಟಲಕ್ಷ್ಮಮ್ಮ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT