ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರಾನೇರ ಮಾತನಾಡುವಾಗಲೂ ಎಚ್ಚರಿಕೆ ಇರಲಿ!

ಏನಾದ್ರೂ ಕೇಳ್ಬೋದು
Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
- ನನ್ನನ್ನು ಎಲ್ರೂ ತಪ್ಪಾಗಿ ಅರ್ಥ ಮಾಡ್ಕೋತಾರೆ. ಬೇರೆಯವರಾಗಿದ್ರೆ ಪರವಾಗಿಲ್ಲ. ನಮ್ಮವರೇ ಹೀಗೆ ಮಾಡ್ತಾ ಇದ್ದಾರೆ. ಇದರಿಂದ ತುಂಬಾ ನೊಂದುಕೊಂಡಿದ್ದೇನೆ. ನನಗೆ ತಪ್ಪು ಅನ್ನಿಸಿದ್ದನ್ನು ನೇರವಾಗೇ ಹೇಳಿ ಬಿಡ್ತೀನಿ. ಅದೇ ನನಗೆ ಪ್ರಾಬ್ಲಮ್‌ ಆಗಿರೋದು. ಅದಕ್ಕೇನೇ ಎಲ್ಲರೂ ಒಂಥರಾ ನನ್ನನ್ನು ನೋಡ್ತಾರೆ. ಮನೆಯಲ್ಲಿ ಇರೋಕೂ ನನಗೆ ಇಷ್ಟ ಆಗ್ತಾ ಇಲ್ಲ. ಬೇರೆ ಮನೆ ಅಥವಾ ಪಿ.ಜಿನಲ್ಲಿ ಇರೋ ಮನಸ್ಸು ಮಾಡಿದ್ದೇನೆ. ದಯವಿಟ್ಟು ನನಗೆ ಗೈಡ್‌ ಮಾಡಿ.-ಮನೋಜ್‌, ಕೋರಮಂಗಲ
 
ಇನ್ನೊಬ್ಬರ ಜೊತೆ ಸಂವಹನ ಮಾಡುವುದು ಕೂಡ ಒಂದು ಕಲೆ. ಕೆಲವರಿಗೆ ಇದು ಹುಟ್ಟುತ್ತಲೇ ಬಂದರೆ, ಹಲವರು ಇದನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಿಮ್ಮ ಮನಸಿನಲ್ಲಿ ಏನೇ ಇದ್ದರೂ ಅದನ್ನು ಹೇಗೆ ಹೇಳಬೇಕು ಎನ್ನುವುದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಇದ್ದದ್ದನ್ನು ಇದ್ದಹಾಗೆಯೇ ನೇರವಾಗಿ ಹೇಳುವುದು ಕೆಲವರ ರೂಢಿ. ಅದೇನೂ ತಪ್ಪಲ್ಲ. ಆದರೆ ಅದು ಬೇರೆಯವರನ್ನು ನೋಯಿಸದಂತೆ ಹೇಳುವುದನ್ನು ಕರಗತ ಮಾಡಿಕೊಳ್ಳಬೇಕು.

ನೇರಾನೇರ ಹೇಳುವುದು ಎಂದರೆ ಅದು ಬೇರೆಯವರನ್ನು ನೋಯಿಸುವುದು ಎಂದೋ ಅಥವಾ ಕಡ್ಡಿಮುರಿದಂತೆ ಹೇಳುವುದೋ ಎಂಬ ಅರ್ಥವಲ್ಲ. ನೀವು ಕೊಡುವ ಉತ್ತರ ಕೇಳುವವರ ವಿರುದ್ಧವಾಗಿದ್ದರೂ ಅಂದರೆ ಅದು ಕಹಿಸತ್ಯವಾಗಿದ್ದರೂ ನೀವು ಅದನ್ನು ಹೇಳುವ ಬಗೆ ಇಲ್ಲಿ ಮುಖ್ಯವಾಗುತ್ತದೆ. ಸಿಟ್ಟಿನಿಂದ ಮುಖಕ್ಕೆ ಹೊಡೆದ ಹಾಗೆ ಹೇಳಿದರೆ ಆ ಮಾತನ್ನು ಹಿಂದಕ್ಕೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗೆ ಮಾಡಿಬಿಟ್ಟರೆ ನಿಮ್ಮ ಸಂಬಂಧ ಹದಗೆಡುವುದು ಬಿಟ್ಟರೆ ಮತ್ತೇನೂ ಆಗುವುದಿಲ್ಲ. 
 
ಹಲವು ಬಾರಿ ನಮ್ಮ ಸುತ್ತಲೂ ನಡೆಯುವ ಘಟನೆಗಳು ನಿಮಗೆ ಸಹ್ಯವಾಗದೇ ಹೋಗಬಹುದು. ಆದರೆ ಕೂಡಲೇ ಅದಕ್ಕೆ ಪ್ರತಿಕ್ರಿಯಿಸಲು ಹೋಗಬಾರದು. ಎಷ್ಟೋ ವೇಳೆ ಅದನ್ನು ಕಂಡೂ ಕಾಣದಂತೆ ಸುಮ್ಮನಿದ್ದು ಬಿಟ್ಟರೆ ಎಲ್ಲವೂ ಸರಿಯಾಗಿ ಇರುತ್ತದೆ. ಆದ್ದರಿಂದ ಅದನ್ನು ನೀವು ರೂಢಿಸಿಕೊಳ್ಳಿ. ನೆಮ್ಮದಿಯಿಂದ ಬದುಕಬಹುದು.
 
- ನನ್ನ ಚಿಕ್ಕಮ್ಮನ ಮಗ ಏಳನೇ ಕ್ಲಾಸ್‌. ಅವನಿಗಿಂತ ನಾನು 10ವರ್ಷ ದೊಡ್ಡವನು. ಅವನಿಗೆ ನಾನು ಏನು ಹೇಳಿದರೂ ಅರ್ಥ ಮಾಡಿಕೊಳ್ಳೋ ಬುದ್ಧಿ ಇಲ್ಲ. ನನಗೆ ಸಿಟ್ಟು ಬಂದಾಗ ಬೈತೇನೆ. ಇದನ್ನು ಅರ್ಥ ಮಾಡಿಕೊಳ್ಳದೇ ನನ್ನ ಮನೆಯಲ್ಲಿ ನನಗೇ ಬೈತಾರೆ. ನಾನು ಹೇಗೆ ಇರಲಿ ಹೇಳಿ? -ವೆಂಕಟ್, ನೆಲಮಂಗಲ
 
ಸಹೋದರ, ಸಹೋದರಿಯರಲ್ಲಿ ಈ ರೀತಿ ಜಗಳ ಏನೂ ಹೊಸತಲ್ಲ. ಅದು ದೊಡ್ಡವರ ಬಳಿ ಹೋದಾಗ ತಪ್ಪು ಯಾರದ್ದೇ ಇದ್ದರೂ ಬೈಸಿಕೊಳ್ಳುವುದು ದೊಡ್ಡವರೇ. ಇದು ಮಾಮೂಲು. 
 
ನಿಮ್ಮ ವಿಷಯದಲ್ಲಿ ನೀವು ತಮ್ಮನಿಗಿಂತ ತುಂಬಾ ದೊಡ್ಡವರು. ಆದ್ದರಿಂದ ನಿಮಗೇ ಬಯ್ಯುತ್ತಾರೆ ಎಂಬ ಬಗ್ಗೆ ಬೇಸರ, ಸಿಟ್ಟು ಮಾಡಿಕೊಳ್ಳದೇ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ. ಆ ತಾಕತ್ತು ನಿಮ್ಮಲ್ಲಿ ಇದೆ. ಅವನಿನ್ನೂ ಚಿಕ್ಕಹುಡುಗ. ಈ ವಯಸ್ಸಿನಲ್ಲಿ ಹುಡುಗಾಟ ಸಹಜ.

ಆದ್ದರಿಂದ ಅವನಿಗೆ ಏನು ಬೇಕು ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ. ಅವನ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡಿ. ಅವನನ್ನು ಪದೇ ಪದೇ ಬಯ್ಯುವ ಬದಲು ಅವನಿಗೆ ತಾಳ್ಮೆಯಿಂದ ತಿಳಿಹೇಳಿ. ಸಹೋದರಪ್ರೇಮ ತುಂಬಾ ಸೂಕ್ಷ್ಮ ಹಾಗೂ ಅದ್ಭುತವಾದದ್ದು. ಅದನ್ನು ಹಾಳು ಮಾಡಿಕೊಳ್ಳಬೇಡಿ. 
 
- ಓದಿದ್ದು ನೆನಪೇ ಇರುವುದಿಲ್ಲ. ದಯವಿಟ್ಟು ಸಹಾಯ ಮಾಡಿ.–ತಿಮ್ಮೇಶ್‌, ರಾಜಾಜಿನಗರ
ಓದಿದ್ದನ್ನು ಒಮ್ಮೆ ಬರೆದರೆ ಅದು 10ಸಲ ಓದಿರುವುದಕ್ಕೆ ಸಮಾನ ಎಂಬ ಮಾತು ಬಹಳ ಹಿಂದಿನಿಂದಲೂ ಇದೆ. ಇದರ ಅರ್ಥ ಇಷ್ಟೇ. ನೀವು ಓದಿದ್ದನ್ನು ಬರೆಯುವ ರೂಢಿ ಮಾಡಿಕೊಳ್ಳಬೇಕು. ಅದರಿಂದ ತುಂಬಾ ಸಹಾಯವಾಗುತ್ತದೆ. ಬರೆಯುತ್ತಾ ಬನ್ನಿ, ನೋಡಿ ಸ್ವಲ್ಪ ದಿನದಲ್ಲಿಯೇ ಇದರ ವ್ಯತ್ಯಾಸ ತಿಳಿಯುತ್ತದೆ. ಹಾಗೆನೇ ಬಾಯಿಪಾಠ ಮಾಡಿ ಓದುವುದು ಸರಿಯಲ್ಲ. ಏನು ಓದುತ್ತಿರುವಿರೋ ಅದನ್ನು ಅರ್ಥಮಾಡಿಕೊಂಡು ಓದಿ. ಆ ವಿಷಯ ಒಮ್ಮೆ ಮನದಟ್ಟಾಗಿಬಿಟ್ಟರೆ ಯಾವುದೂ ಕಷ್ಟವಲ್ಲ. 
 
- ನಾನು ಎಂಜಿನಿಯರಿಂಗ್‌ ಪದವೀಧರೆ. ಒಂದು ಹುಡುಗನನ್ನು ಲವ್‌ ಮಾಡ್ತಾ ಇದ್ದೆ.  ಅದು ಮನೆಯಲ್ಲಿ ಗೊತ್ತಾಗಿ ಸಿಕ್ಕಾಪಟ್ಟೆ ಗಲಾಟೆಯಾಯಿತು.  ಆ ಹುಡುಗ ಬೇರೆ ಮದುವೆಯಾಗಿಬಿಟ್ಟ. ನನ್ನ ಅಪ್ಪ–ಅಮ್ಮ ನನ್ನನ್ನು ಕಷ್ಟಪಟ್ಟು ಓದಿಸಿದ್ದಾರೆ. ಆದ್ದರಿಂದ ಅವರನ್ನು ಯಾವುದೇ ಕಾರಣಕ್ಕೂ ಬೇಜಾರು ಮಾಡುವುದು ನನಗೆ ಇಷ್ಟ ಆಗಲ್ಲ. ಆದ್ದರಿಂದ ಇನ್ನು ಮುಂದೆ ಯಾರನ್ನೂ ಲವ್‌ ಮಾಡಬಾರದು ಎಂದು ಡಿಸೈಡ್‌ ಮಾಡಿದ್ದೆ.

ಆದರೆ ಈಗ ಇನ್ನೊಬ್ಬ ಹುಡುಗನನ್ನು ಲವ್‌ ಮಾಡೋಕೆ ಶುರು ಮಾಡಿದ್ದೇನೆ. ಅವನು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಾನೆ ಎನ್ನೋ ಭರವಸೆ ಇದೆ. ಆದರೆ ನನ್ನ ಅಪ್ಪ–ಅಮ್ಮನಿಗೆ ಹೇಗೆ ಹೇಳುವುದು ತಿಳೀತಾ ಇಲ್ಲ. ಮತ್ತೆ ಮೊದಲಿನ ಹಾಗೇ ಗಲಾಟೆ ಆಗಿಬಿಟ್ಟರೆ ಎನ್ನೋ ಭಯ. ಅದೇ ವೇಳೆ ಅಪ್ಪ–ಅಮ್ಮ ಮತ್ತು ಆ ಹುಡುಗ ಯಾರನ್ನೂ ನೋಯಿಸೊ ಮನಸು ನನಗಿಲ್ಲ. ಏನು ಮಾಡಲಿ? –ಪ್ರೇಮಾ, ಹೆಬ್ಬಾಳ
 
ಅನೇಕ ಕುಟುಂಬಗಳಲ್ಲಿ ಈಗಲೂ ಪ್ರೇಮ ವಿವಾಹವನ್ನು ಸುಲಭದಲ್ಲಿ ಒಪ್ಪುವುದಿಲ್ಲ. ಇದಕ್ಕೆ ಕಾರಣ ಬೇರೆ ಬೇರೆ ಇರಬಹುದು. ಪೋಷಕರೇ ನೋಡಿ ಮದುವೆ ಮಾಡುವುದು ಒಂದು ಮಟ್ಟಿಗೆ ಒಳ್ಳೆಯದೇ. ಆದರೆ ಹಲವು ಬಾರಿ ಮಕ್ಕಳು ಪ್ರೇಮಕ್ಕೆ ಬಿದ್ದಾಗ ಅಪ್ಪ–ಅಮ್ಮ ರಾಜಿ ಆಗಬೇಕಾಗುತ್ತದೆ. ನಾನು ಹೇಳುವುದು ಇಷ್ಟೇ.

ಹೇಗೋ ಎಂಜಿನಿಯರಿಂಗ್‌ ಓದಿ ಕೆಲಸಕ್ಕೆ ಹುಡುಕಾಟ ನಡೆಸುತ್ತಿರುವಿರಿ. ಮೊದಲು ಒಳ್ಳೆಯ ಕೆಲಸ ಹುಡುಕಿಕೊಳ್ಳಿ. ಸ್ವತಂತ್ರ ಆಗಿ. ಅಲ್ಲಿಯವರೆಗೆ ನೀವು ಪ್ರೀತಿಸುತ್ತಿರುವ ಹುಡುಗನನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.  

ಆಗಲೂ ಈ ಹುಡುಗನೇ ನಿಮಗೆ ಒಳ್ಳೆಯ ವರ ಎಂದು ಎನಿಸಿದರೆ, ಇಬ್ಬರೂ ಮನೆಯವರ ಜೊತೆ ಮಾತನಾಡಿ. ಎರಡೂ ಕಡೆಯವರಿಗೆ ಇದು ಉತ್ತಮ ಜೋಡಿ ಎನಿಸುವ ಹಾಗೆ ಅವರ ಮನವೊಲಿಸಿ. ಪ್ರೀತಿ–ಪ್ರೇಮದ ವಿಷಯದಲ್ಲಿ ತರಾತುರಿ ಬೇಡ. ಸಾಕಷ್ಟು ಸಮಯ ಪಡೆದು ಚಿಂತನೆ ಮಾಡಿ ಮುಂದಿನ ಹೆಜ್ಜೆ ಇಡಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT