ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಯಾಳಿ ಹುಡುಗಿಯ ಮನದ ಮಾತು

Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಕೇರಳ ಮೂಲದ ನಟಿ  ಪಾರ್ವತಿ ಓಮನ್​ಕುಟ್ಟನ್ ಅವರು ಮಾಡೆಲಿಂಗ್‌ನಿಂದ ಬೆಳ್ಳಿತೆರೆಗೆ ಪ್ರವೇಶ ಮಾಡಿದವರು. 2008ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ಹಾಗೂ ಅದೇ ವರ್ಷ ಮಿಸ್‌ ವರ್ಲ್ಡ್‌ ರನ್ನರ್‌ ಅಪ್‌ ಆಗಿಯೂ ಮಿಂಚಿದವರು. 
 
ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದ ನಂತರ ಪಾರ್ವತಿ ಅವರು, ‘ಯುನೈಟೆಡ್‌ ಸಿಕ್ಸ್’, ‘ಬಿಲ್ಲಾ 2’, ‘ಕೆ.ಕ್ಯೂ’, ‘ಪಿಜ್ಜಾ’ ಹಾಗೂ ‘ನಂಬಿಯಾರ್‌’   ಚಿತ್ರಗಳಲ್ಲಿ ಅಭಿನಯಿಸಿದರು.
54ನೇ ಫೆಮಿನಾ ಮಿಸ್‌ ಇಂಡಿಯಾ ಅಂತಿಮ ಸುತ್ತಿಗೆ ದಕ್ಷಿಣ ಭಾರತ ರೂಪದರ್ಶಿಯರ ಆಯ್ಕೆ ಮಾಡಲು ಬೆಂಗಳೂರಿನಲ್ಲಿ ಈಚೆಗೆ ಆಯೋಜಿಸಿದ್ದ ಫ್ಯಾಷನ್‌ ಷೋಗೆ ತೀರ್ಪುಗಾರರಾಗಿ ಪಾರ್ವತಿ ಬಂದಿದ್ದರು. ತಮ್ಮ ವೃತ್ತಿಬದುಕಿನ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
 
-ಫೆಮಿನಾ ಮಿಸ್‌ ಇಂಡಿಯಾ ವಿಜೇತರಾದ ಮೇಲೆ  ನಿಮ್ಮ ಬದುಕಿನಲ್ಲಿ ಏನೆಲ್ಲಾ ಬದಲಾವಣೆ ಆಯಿತು?
ಬಹಳಷ್ಟು ಬದಲಾವಣೆ ಆಯಿತು. ಮಾಡೆಲಿಂಗ್‌, ಸಿನಿಮಾ ಅಷ್ಟೇ ಅಲ್ಲದೆ  ಜಾಹೀರಾತು, ರಿಯಾಲಿಟಿ ಷೋ...ಹೀಗೆ ಹಲವು ಕ್ಷೇತ್ರಗಳಿಂದ ಅವಕಾಶಗಳು ಹುಡುಕಿಕೊಂಡು ಬಂದವು. ವಿವಿಧ ದೇಶಗಳ ಮಂದಿ ಪರಿಚಯವಾದರು. ಜಗತ್ತನ್ನು ಸುತ್ತಲು ಆರಂಭಿಸಿದೆ, ಸಾಮಾನ್ಯ ಜ್ಞಾನ ಹೆಚ್ಚಾಯಿತು. ವಿಭಿನ್ನ ಸಂಸ್ಕೃತಿ, ಭಾಷೆ ಕಲಿಯಲು ನೆರವಾಯಿತು.
 
-ಕನ್ನಡ ಸಿನಿಮಾಗಳಲ್ಲಿ ಅವಕಾಶ ಬಂದಿದೆಯಾ?
ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕರೆ ಖಂಡಿತಾ ಮಾಡುತ್ತೇನೆ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ.
 
- ನಿಮ್ಮ ಸೌಂದರ್ಯದ ಗುಟ್ಟೇನು?
ಆರೋಗ್ಯಯುತ ಆಹಾರ. ಬೆಳಿಗ್ಗೆ ಯೋಗ ಮಾಡಿ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೇನೆ.
 
- ನಿಮ್ಮ ಪ್ರಕಾರ ಫ್ಯಾಷನ್‌ ಅಂದ್ರೆ?
ಕಂಫರ್ಟ್‌ ಆಗಿರಬೇಕು, ನಮಗೆ ಯಾವುದು ಚಂದ ಕಾಣುತ್ತದೆ ಎಂಬುದೂ ಮುಖ್ಯವಾಗುತ್ತದೆ. ಅನ್ಯರ ಬಗ್ಗೆ ಚಿಂತಿಸಬಾರದು, ನಮಗೆ ಸೂಕ್ತವೆನಿಸುವ ಉಡುಪನ್ನೇ ಆಯ್ಕೆಮಾಡಿಕೊಳ್ಳಬೇಕು. 
 
- ನಿಮ್ಮ ನೆಚ್ಚಿನ ವಿನ್ಯಾಸಕಾರರು?
ಬಹಳಷ್ಟು ಮಂದಿ ವಿನ್ಯಾಸಕರು ಇಷ್ಟವಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಫ್ರಾನ್ಸ್‌ನ ವಿನ್ಯಾಸಕಿ ಕೊಕೊ ಶಣೇಲ್‌ ಅವರ ದೊಡ್ಡ ಅಭಿಮಾನಿ ನಾನು, ಇವರು ನನಗೆ ಮಾಡೆಲಿಂಗ್‌ನಲ್ಲಿಯೂ ಸ್ಫೂರ್ತಿ.
 
-ಫ್ಯಾಷನ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ?
ಮೊದಲನೆಯದಾಗಿ ಫ್ಯಾಷನ್‌ ಅಂದ್ರೆ ನಂಗಿಷ್ಟ. ವಿವಿಧ ಕ್ಷೇತ್ರಗಳಿಂದ ಅವಕಾಶಗಳು ಸಿಕ್ಕಿವೆ. ಪ್ರವಾಸ ಅಂದ್ರೆ ನಂಗಿಷ್ಟ. ಈ ಕ್ಷೇತ್ರಕ್ಕೆ ಬಂದರೆ ವಿವಿಧ ಪ್ರದೇಶಗಳನ್ನು ನೋಡಬಹುದು ಎಂಬ ಉದ್ದೇಶದಿಂದ ಬಂದೆ. 
 
-ಬೆಂಗಳೂರು ಬಗ್ಗೆ ಹೇಳುವುದಾದರೆ?
ಈ ನಗರವನ್ನು ತುಂಬಾ ಇಷ್ಟಪಡುತ್ತೇನೆ, ಬಹಳ ಮಂದಿ ಸ್ನೇಹಿತರಿದ್ದಾರೆ. ಬಹಳಷ್ಟು ಫ್ಯಾಷನ್‌ ಷೋಗಳು ನಡೆಯುತ್ತಿರುತ್ತವೆ. ಜಗತ್ತಿನ ವಿವಿಧ ಪ್ರದೇಶಗಳ ಜನ ಇಲ್ಲಿ ಬಂದು, ಬದುಕು ಕಂಡು ಕೊಂಡಿದ್ದಾರೆ.  ಹಾಗಾಗಿ ನನಗೆ ಹೆಚ್ಚು ಅಚ್ಚು ಮೆಚ್ಚಿನ ನಗರವಾಗಿದೆ.
 
-ಮಾಡೆಲಿಂಗ್‌ ಆಯ್ಕೆ ಮಾಡಿಕೊಳ್ಳುವವರಿಗೆ ನಿಮ್ಮ ಕಿವಿಮಾತು?
ನಾನು ಗಮನಿಸಿದಂತೆ ಬಹಳಷ್ಟು ಯುವತಿಯರು ಮಾಡೆಲಿಂಗ್‌ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ನಾನು 8 ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದವಳು. ಅದರಲ್ಲೂ ಮಧ್ಯಮ ವರ್ಗದ ಮಲಯಾಳಿ ಕುಟುಂಬದಿಂದ ಬಂದೆ. ಮುಖ್ಯ ಸಮಸ್ಯೆ ಎದುರಾಗಿದ್ದು, ಪೋಷಕರನ್ನು ಒಪ್ಪಿಸುವುದು.

ನಂತರ ಅವರಿಗೆ ಸಿನಿಮಾ ಮತ್ತು ಮಾಡೆಲಿಂಗ್‌ ಕೆಟ್ಟ ಇಂಡಸ್ಟ್ರಿಯಲ್ಲ ಎಂಬುದು ಮನವರಿಕೆ ಆಯಿತು. ಆದರೆ ಇಂದು ಬಹಳಷ್ಟು ಪೋಷಕರೇ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಷಯ. ಅಲ್ಲದೇ ಪ್ರತಿಭಾವಂತರೂ ಬೆಳಕಿಗೆ ಬರುತ್ತಿದ್ದಾರೆ. 
 
- ಕರ್ನಾಟಕದ ಯಾವ ಆಹಾರ ನಿಮಗೆ ಇಷ್ಟವಾಗುತ್ತದೆ?
ಎಲ್ಲಾ ಆಹಾರ ಇಷ್ಟವಾಗುತ್ತವೆ, ಅದರಲ್ಲೂ ಮಾಂಸಾಹಾರ ತಿನಿಸುಗಳು ಅಂದ್ರೆ ಪಂಚಪ್ರಾಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT