ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಗದೇವರ ಜಾತ್ರೆಯ ಸಡಗರ

ಪೇಢೆ, ಸಕ್ಕರೆ ನೈವೇದ್ಯ ಮಾಡಿ ಉಪ್ಪು ಏರಿಸಿದ ಭಕ್ತರು
Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉರಿ ಬಿಸಿಲಿನಲ್ಲೂ ಹತ್ತಾರು ಮೀಟರ್ ದೂರ ಪಾಳಿಯಲ್ಲಿ ನಿಂತ ಭಕ್ತರು. ಪದೇ ಪದೇ ಕೇಳಿ ಬಂದ ‘ಚಾಂಗದೇವ ಮಹಾರಾಜ್ ಕಿ ಜೈ’ ಘೋಷಣೆ. ಲೋಬಾನದ ಹೊಗೆಯ ನಡುವೆ ಉಪ್ಪು ಏರಿಸಿ ಹರಕೆ ತೀರಿಸಿದ ಜನರು...

ನಗರದ ಚಾಂಗದೇವರ ಗುಡಿಯಲ್ಲಿ ಶುಕ್ರವಾರ ನಡೆದ ಚಾಂಗದೇವರ ಜಾತ್ರೆಯ ಸಂದರ್ಭದಲ್ಲಿ ಕಂಡ ಸಂಭ್ರಮವಿದು.

ಪ್ರತಿವರ್ಷ ರಂಗಪಂಚಮಿಯ ಮರುದಿನ ನಡೆಯುವ ಜಾತ್ರೆಗೆ ಹುಬ್ಬಳ್ಳಿ–ಧಾರವಾಡ ಮಾತ್ರವಲ್ಲದೆ ಪರ ಊರುಗಳಿಂದಲೂ ಭಕ್ತರು ಬರುತ್ತಾರೆ.

ಬೆಳಿಗ್ಗೆಯಿಂದಲೇ ಆರಂಭಗೊಂಡ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಜನರು ಪಾಳಿ ಹಚ್ಚಿದ್ದರು. ಹತ್ತಾರು ಮೀಟರ್‌ ದೂರದ ವರೆಗೆ ಪಾಳಿಯಲ್ಲಿ ಕಾದು ನಿಂತವರು ಗುಡಿಯ ಆವರಣಕ್ಕೆ ತಲುಪುತ್ತಿದ್ದಂತೆ ‘ಚಾಂಗದೇವ ಮಹಾರಾಜ್ ಕಿ ಜೈ’ ಎಂಬ ಘೋಷಣೆಗಳನ್ನು ಕೂಗುತ್ತ ಭಾವಪರವಶರಾದರು.

ಮನೆಯಿಂದ ತೆಗೆದುಕೊಂಡು ಬಂದ ಮಾದಲಿಯನ್ನು ಚಾಂಗದೇವರ ಗೋರಿಗೆ ಅರ್ಪಿಸಿದರು. ಪೇಢೆ ಮತ್ತು ಸಕ್ಕರೆಯನ್ನು ಕೂಡ ನೈವೇದ್ಯದ ರೂಪದಲ್ಲಿ ಸಲ್ಲಿಸಿದರು. ಉದ್ಯಮಿಗಳು, ವ್ಯಾಪಾರಿಗಳು ಮತ್ತು ಕೆಲವು ಮನೆತನದವರು ಭಕ್ತರಿಗೆ ಪೇಢೆ, ಶರಬತ್ತು ಮತ್ತು ಶಿರಾ ಹಂಚಿ ಸಂಭ್ರಮಿಸಿದರು.

ಹಿಂದೂ ಮತ್ತು ಮುಸ್ಲಿಂ ಭಕ್ತರು ಪಾಲ್ಗೊಳ್ಳುವ ಈ ಜಾತ್ರೆಯಲ್ಲಿ ಚಾಂಗದೇವರ ಗೋರಿಗೆ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರು ಹರಕೆ ಹೊತ್ತು ಗುಡಿಯ ಬಾಗಿಲಿಗೆ ಬೀಗ ಕಟ್ಟಿ ಹೋಗುತ್ತಾರೆ. ಇಷ್ಟಾರ್ಥ ಪೂರೈಸಿದ ನಂತರ ಬಂದು ಅದನ್ನು ತೆಗೆದು ಸಮೀಪದಲ್ಲೇ ರಾಶಿ ಹಾಕಿರುವ ಉಪ್ಪು ತೆಗೆದು ಮೈಗೆ ಹಚ್ಚಿ ಹೋಗುತ್ತಾರೆ. ಹೀಗೆ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತವೆ ಎಂಬುದು ಭಕ್ತರ ನಂಬಿಕೆ.

ಹುಬ್ಬಳ್ಳಿಯಲ್ಲಿ ನೆಲೆಯಾದ ಚಾಂಗದೇವ: ನವಲಗುಂದ ತಾಲ್ಲೂಕಿನ ಯಮನೂರು ಚಾಂಗದೇವರ ಉತ್ಸವಕ್ಕೆ ಪ್ರಸಿದ್ಧ. ಮಹಾರಾಷ್ಟ್ರ ಮೂಲದವರು ಎನ್ನಲಾಗುವ ಚಾಂಗದೇವರಿಗೆ ಎಲ್ಲ ಕ್ರೂರ ಪ್ರಾಣಿಗಳು ವಶವಾಗಿದ್ದವು ಎಂಬ ಪ್ರತೀತಿ ಇದೆ. ಜನಿಸಿದ ಊರನ್ನು ತೊರೆದು ಅಲೆದಾಡಿದ ಅವರು ಹುಬ್ಬಳ್ಳಿಯಲ್ಲಿ ಕೆಲ ಕಾಲ ನೆಲೆಸಿದ್ದರು. ನಂತರ ಮುಂದೆ ಸಾಗಿ ಯಮನೂರಿನಲ್ಲಿ ಪ್ರಾಣಬಿಟ್ಟರು ಎಂಬ ನಂಬಿಕೆ ಭಕ್ತರದು. ಈ ಕಾರಣದಿಂದ ಹುಬ್ಬಳ್ಳಿ ಮತ್ತು ಯಮನೂರಿನಲ್ಲಿ ಅವರ ಸಮಾಧಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT