ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮಸ್‌ಗೆ ರಾಜ್ಯದ ಉಸ್ತುವಾರಿ?

ದಿಗ್ವಿಜಯ್‌ ಬದಲಾವಣೆಗೆ ಕರ್ನಾಟಕದ ಕಾಂಗ್ರೆಸ್‌ ನಾಯಕರ ಒತ್ತಾಯ
Last Updated 17 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿಗ್ವಿಜಯ್ ಸಿಂಗ್ ಅವರನ್ನು ಬದಲಿಸಲು ಪಕ್ಷ ಸಿದ್ಧತೆ ನಡೆಸಿದೆ. ಪಕ್ಷದ ಎರ್ನಾಕುಲಂ ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಕೆ.ವಿ.ಥಾಮಸ್ ಅವರಿಗೆ ರಾಜ್ಯದ ಉಸ್ತುವಾರಿಯನ್ನು ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಗೋವಾದಲ್ಲಿ ಕಾಂಗ್ರೆಸ್‌, ಸರ್ಕಾರ ರಚಿಸಲು ವಿಫಲವಾದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

‘ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಜತೆಯಲ್ಲಿರುವ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಭಾರತಕ್ಕೆ ವಾಪಸ್‌ ಆದ ನಂತರ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಮುಂದಿನ ವರ್ಷದ ಆರಂಭದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಪಕ್ಷ ಸೋತಿದೆ. ಕರ್ನಾಟಕ, ಈಗ ಪಕ್ಷ ಅಧಿಕಾರದಲ್ಲಿರುವ ಪ್ರಮುಖ ರಾಜ್ಯ. ಹೀಗಾಗಿ ಅಲ್ಲಿ ಹೆಚ್ಚು ಗಮನ ಹರಿಸುವ ಅವಶ್ಯಕತೆ ಪಕ್ಷಕ್ಕಿದೆ’ ಎಂದು ಮೂಲಗಳು ಹೇಳಿವೆ.

‘ರಾಜ್ಯದಲ್ಲಿ, ಪಕ್ಷದ ಸಂಘಟನೆಯಲ್ಲಿನ ಸಮಸ್ಯೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರನ್ನು ಉಸ್ತುವಾರಿಯಾಗಿ ನೇಮಿಸಿ ಎಂದು ಕರ್ನಾಟಕದ ನಾಯಕರೂ ಒತ್ತಡ ತರುತ್ತಿದ್ದಾರೆ. ರಾಜ್ಯಸಭಾ ಚುನಾವಣೆ ವೇಳೆ ಥಾಮಸ್‌ ಅವರಿಗೆ ರಾಜ್ಯದ ವೀಕ್ಷಕರ ಜವಾಬ್ದಾರಿ ನೀಡಲಾಗಿತ್ತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು. ಹೀಗಾಗಿ ಅವರನ್ನೇ ನೂತನ ಉಸ್ತುವಾರಿಯಾಗಿ ನೇಮಕ ಮಾಡುವ ಸಾಧ್ಯತೆ ಇದೆ’ ಎಂದು ಮೂಲಗಳು ವಿವರಿಸಿವೆ.

ದಿಗ್ವಿಜಯ್‌ ಸಿಂಗ್

ಸದ್ಯ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ  (ಪಿಎಸಿ) ಮುಖ್ಯಸ್ಥರಾಗಿರುವ ಥಾಮಸ್‌ ಅವರ ಅವಧಿ ಮೇ 1ಕ್ಕೆ ಕೊನೆಗೊಳ್ಳಲಿದೆ. ಥಾಮಸ್‌ ಅವಧಿ ಮುಗಿದ ನಂತರ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಿಎಸಿಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವ ದಿಗ್ವಿಜಯ್‌ ಸಿಂಗ್, ಕರ್ನಾಟಕ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಉಸ್ತುವಾರಿಯನ್ನೂ ಹೊಂದಿದ್ದಾರೆ. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರಹೊಮ್ಮಿದರೂ, ಅಲ್ಲಿ ಸರ್ಕಾರ ರಚಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿತ್ತು. ಇದಕ್ಕೆ ಗೋವಾ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೇ ಕಾರಣ ಎಂದು ಅಲ್ಲಿನ ಕಾಂಗ್ರೆಸ್‌ ಶಾಸಕರು ಆರೋಪಿಸಿದ್ದರು. ಹೀಗಾಗಿ ದಿಗ್ವಿಜಯ್ ಅವರ ಬದಲಾವಣೆಗೆ ಈ ರಾಜ್ಯಗಳ ನಾಯಕರು ಒತ್ತಾಯಿಸುತ್ತಿದ್ದಾರೆ.

ಮುಖ್ಯಾಂಶಗಳು 
* ಮುಂಬರುವ ವಿಧಾನಸಭಾ ಚುನಾವಣೆ ಸಲುವಾಗಿ ಕ್ರಮ

* ಸೋನಿಯಾ, ರಾಹುಲ್ ಮರಳಿದ ನಂತರ ಅಂತಿಮ ನಿರ್ಧಾರ
* ರಾಜ್ಯದಲ್ಲಿ ಪಕ್ಷದ ಸಮಸ್ಯೆ ಅರ್ಥಮಾಡಿಕೊಳ್ಳುವವರ ನೇಮಕಕ್ಕೆ ಒತ್ತಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT