ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ದುಪ್ಪಟ್ಟು ಬೆಲೆಯ ವ್ಯಾಪಾರ: ತಪ್ಪಿತಸ್ಥ ಮಾರಾಟಗಾರರಿಗೆ ಬೀಳಲಿದೆ ಭಾರಿ ದಂಡ

Last Updated 18 ಮಾರ್ಚ್ 2017, 5:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಹೆಚ್ಚುತ್ತಿದ್ದು, ಹಲವು ದೂರು ಬರುತ್ತಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ, ನೈರುತ್ಯ ರೈಲ್ವೆಯು ‘ಕೆಟರಿಂಗ್‌ ನೀತಿ– 2017’ ಅನ್ನು ಜಾರಿಗೊಳಿಸುತ್ತಿದ್ದು, ನಿಗದಿಗಿಂತ ಹೆಚ್ಚಿನ ಬೆಲೆಗೆ ನೀರು, ಉಪಾಹಾರ ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸಲು ಹಾಗೂ ದಂಡ ಪಾವತಿಸದವರನ್ನು ಜೈಲಿಗೆ ಕಳುಹಿಸಲು ನಿರ್ಧರಿಸಿದ್ದಾರೆ.

ಟೆಂಡರ್‌ನಲ್ಲಿ ಪಾರದರ್ಶಕತೆ: ಕೇಟ­ರಿಂಗ್‌ ಸ್ಟಾಲ್‌ಗಳಿಗೆ ಹಾಗೂ ವ್ಯಾಪಾರಿ­ಗಳಿಗೆ ಟೆಂಡರ್‌ ನೀಡುವ ನಿಯಮವನ್ನು ಬಿಗಿಗೊಳಿಸಲಾಗಿದೆ. ಟೆಂಡರ್‌ ಹಾಕಲು ಬಯಸುವವರು ಭಾರತೀಯ ಪ್ರಜೆಯಾಗಿರಬೇಕು, ಕಂಪೆನಿಯು ಆರ್ಥಿಕ ಸ್ಥಿರತೆ ಹೊಂದಿರಬೇಕು, ಲೆಕ್ಕ ಪರಿಶೋಧಕರು ಪ್ರಮಾಣೀಕರಿಸಿದ ಮೂರು ವರ್ಷಗಳ ವ್ಯವಹಾರದ ಲೆಕ್ಕ–ಪತ್ರ ದಾಖಲೆ ಹೊಂದಿರಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ.

ಶೀಘ್ರ ಸ್ಪಂದನೆ: ಕೇಟರಿಂಗ್‌ಗೆ ಸಂಬಂಧಪಟ್ಟ ದೂರುಗಳಿಗೆ ಸ್ಪಂದಿಸುವುದಕ್ಕಾಗಿ ರೈಲ್ವೆ ಮಂಡಳಿ ಸ್ಥಾಪಿಸಿರುವ ಕೇಟರಿಂಗ್‌ ಸೇವೆಗಳ ನಿರ್ವಹಣಾ ಘಟಕ (ಸಿ.ಎಸ್‌.ಎಂ.ಸಿ) ಉಚಿತ ಕರೆ ಸಂಖ್ಯೆ 18001–11321 ಹಾಗೂ 138 ಸಂಖ್ಯೆಯನ್ನು ಸಾರ್ವಜ­ನಿಕರಿಗೆ ನೀಡಿದೆ. ಸಾರ್ವಜನಿಕರು ಇವು­ಗಳಿಗೆ ದೂರು ಸಲ್ಲಿಸಬಹುದಾಗಿದೆ. ವಿಶೇಷವಾಗಿ, ಹುಬ್ಬಳ್ಳಿ ವಿಭಾಗದಲ್ಲಿ 70220– 29814 ಮೊಬೈಲ್‌ ಸಂಖ್ಯೆ­ಯಲ್ಲಿ­ರುವ ಸ್ಟಿಕ್ಕರ್‌ಗಳನ್ನು ಸ್ಟಾಲ್‌ಗಳ ಎದುರು ಹಾಕಲಾಗಿದೆ. ನೀರಿನ ಬಾಟಲಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ, ಪ್ರಯಾಣಿಕರು ಈ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು.

ದೂರು ಸ್ಪಷ್ಟವಾಗಿರಲಿ: ‘ಕರೆ ಮಾಡುವ ಪ್ರಯಾಣಿಕರು ಸ್ಪಷ್ವವಾದ ಮಾಹಿತಿ ನೀಡುವುದಿಲ್ಲ. ರೈಲು ಸಂಖ್ಯೆ, ನಿಲ್ದಾಣದ ಹೆಸರು, ಸ್ಟಾಲ್‌ಗಳ ಸಂಖ್ಯೆಯನ್ನು ಹೇಳಿದರೆ, ಅವರ ವಿರುದ್ಧ ಕ್ರಮ ತೆಗೆದು­ಕೊಳ್ಳಲು ಸಾಧ್ಯವಾಗುತ್ತದೆ. ದೂರು ಸಮರ್ಪಕವಾಗಿದ್ದರೆ ಮತ್ತು ಸತ್ಯವಾಗಿ­ದ್ದರೆ, ಗರಿಷ್ಠ ಐದು ಸಾವಿರವರೆಗೆ ದಂಡ ವಿಧಿಸುವ ಅವಕಾಶವಿದೆ. ದಂಡ ಪಾವತಿಸದ­ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ರೈಲ್ವೆ ಅಧಿಕಾರಿ ತಿಳಿಸಿದರು.

ಸಮವಸ್ತ್ರವಿರದಿದ್ದರೂ ಕ್ರಮ: ರೈಲಿನಲ್ಲಿ ಉತ್ಪನ್ನಗಳನ್ನು ಮಾರುವ ವ್ಯಾಪಾರಿಗಳು ಸಮವಸ್ತ್ರವನ್ನು ಧರಿಸಿರಬೇಕು. ಟೆಂಡರ್‌ ಪಡೆದ ಕಂಪೆನಿಯು ಸಮವಸ್ತ್ರದ ಬಣ್ಣಗಳ ಬಗ್ಗೆ ನೈರುತ್ಯ ರೈಲ್ವೆಗೆ ಮಾಹಿತಿ ನೀಡಿರುತ್ತದೆ. ಸಮವಸ್ತ್ರ ಧರಿಸದವರನ್ನು ಅನಧಿಕೃತ ವ್ಯಾಪಾರಿಗಳೆಂದು ಪರಿಗಣಿಸಿ ದಂಡ ವಿಧಿಸಲಾಗುವುದು.

**

ಹೆಚ್ಚಿನ ಬೆಲೆಗೆ ಪತ್ರಿಕೆ ಮಾರುವಂತಿಲ್ಲ

‘ಹುಬ್ಬಳ್ಳಿ–ಬೆಂಗಳೂರು ಮಾರ್ಗವಾಗಿ ಬೆಳಿಗ್ಗೆ ಸಂಚರಿಸುವ ರೈಲುಗಳಲ್ಲಿ ದಿನಪತ್ರಿಕೆಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುತ್ತಾರೆ. ಅದರಲ್ಲಿಯೂ ನಮಗೆ ಬೇಕಾದ ಪತ್ರಿಕೆಗಳು ಸಿಗುವುದೇ ಇಲ್ಲ’ ಎಂದು ಪ್ರಯಾಣಿಕ ಸಂಜಯ್‌ ಹೊಸಳ್ಳಿ ದೂರುತ್ತಾರೆ.

‘ರೈಲು ನಿಲ್ದಾಣದಲ್ಲಿರುವ ನಿಗದಿತ ಸ್ಟಾಲ್‌ಗಳಲ್ಲಿ ಮಾತ್ರ ದಿನಪತ್ರಿಕೆಗಳನ್ನು ಮಾರಾಟ ಮಾಡಬೇಕು. ರೈಲಿನ ಒಳಗೆ ಪತ್ರಿಕೆಗಳನ್ನು ಮಾರಾಟ ಮಾಡಲು ಅವಕಾಶವಿಲ್ಲ. ಹೀಗೆ, ರೈಲಿನಲ್ಲಿ ಪತ್ರಿಕೆ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕರೆನ್ಸಿ ಹಾಕಿಸಿ !

‘ಸರ್‌, ನನ್ನ ಮೊಬೈಲ್‌ನಲ್ಲಿ ಕರೆನ್ಸಿ ಖಾಲಿ ಆಗಿದೆ.. ಪ್ಲೀಸ್‌ ರಿಚಾರ್ಜ್‌ ಮಾಡಿಸಿ..’ ದೂರು ನೀಡಲು ಕೊಟ್ಟಿರುವ ಟೋಲ್‌ ಫ್ರೀ ಸಂಖ್ಯೆಗೆ ಪ್ರಯಾಣಿಕರೊಬ್ಬರು ವಿನಂತಿ ಮಾಡಿಕೊಂಡಿರುವ ಪರಿ ಇದು. ಸ್ವಚ್ಛತೆ ಬಗ್ಗೆ, ವೈದ್ಯಕೀಯ ನೆರವು ಬೇಡಿ ಹಲವು ಕರೆಗಳು ಬಂದಿವೆ. ಅವುಗಳಿಗೆ ಶೀಘ್ರವಾಗಿ ಸ್ಪಂದಿಸಲಾಗಿದೆ. ಕೆಲವರು ರಿಚಾರ್ಜ್‌ ಮಾಡಿಸಿ, ರೈಲುಗಳಲ್ಲಿ ಚಾರ್ಜರ್‌ ಅಳವಡಿಸಿ ಎಂಬ ಬೇಡಿಕೆಗಳನ್ನೂ ಇಟ್ಟಿದ್ದಾರೆ ಎಂದು ಕಂಟ್ರೋಲ್‌ ರೂಂನ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT