ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ನೀಡಿಕೆ: ವಿಳಂಬವಾದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

Last Updated 18 ಮಾರ್ಚ್ 2017, 6:07 IST
ಅಕ್ಷರ ಗಾತ್ರ

ಶಿರಸಿ: ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ವಿತರಿಸುವಲ್ಲಿ ಜಿಲ್ಲಾಡಳಿತ ಮೊಂಡುತನ ಮುಂದುವರಿಸಿದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹಿಂದೇಟು ಹಾಕುವುದಿಲ್ಲ ಎಂದು ಜಿಲ್ಲಾ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಬನವಾಸಿಯಿಂದ ಯಲ್ಲಾಪುರದವರೆಗೆ ಶುಕ್ರವಾರದಿಂದ ಪ್ರಾರಂಭಿಸಿರುವ ಪಾದಯಾತ್ರೆಯ ನೇತೃತ್ವವಹಿಸಿ ಅವರು ಮಾತನಾಡಿದರು. ಅತಿಕ್ರಮಣದಾರರು ಈವರೆಗೆ 15 ಬಾರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹಕ್ಕುಪತ್ರ ನೀಡುವದಾಗಿ ಹೇಳುತ್ತಲೇ ಸರ್ಕಾರ ಕಾಲಕಳೆಯುತ್ತಿದೆ. 88 ಸಾವಿರ ಅತಿಕ್ರಮಣದಾರರ ಕುಟುಂಬಗಳಲ್ಲಿ ಕೇವಲ 3 ಸಾವಿರ ಕುಟುಂಬಕ್ಕೆ ಮಾತ್ರ ಹಕ್ಕುಪತ್ರ ನೀಡಲಾಗಿದೆ ಎಂದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಯೇ ಏಕೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಕೆಲ ರಾಜಕೀಯ ಹಿತಾಸಕ್ತಿಗಳಿಂದ ಟೀಕೆ ವ್ಯಕ್ತವಾಗುತ್ತಿದೆ. ಅತಿಕ್ರಮಣದಾರರ ಸಮಸ್ಯೆ ಬಗೆಹರಿಯದಿದ್ದರೆ ಯಲ್ಲಾಪುರ ಮಾತ್ರವಲ್ಲ, ಜೊಯಿಡಾದಿಂದ ಕಾರವಾರ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಜಿಲ್ಲಾಡಳಿತ ಕದ್ದುಮುಚ್ಚಿ ಅತಿಕ್ರಮಣದಾರರ ಅರ್ಜಿ ತಿರಸ್ಕರಿ ಸುತ್ತಿದೆ. ಆದರೆ ಜನಪ್ರತಿನಿಧಿ ಗಳು ಗಮನ ಹರಿಸುತ್ತಿಲ್ಲ. ಮಲಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳನ್ನು ಎಚ್ಚರಿಸಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟ ನಿರಂತರವಾಗಿದ್ದು, ಸಂಘರ್ಷ ಎದುರಾ ದರೂ ಮುಂದಿಟ್ಟ ಹೆಜ್ಜೆ ಹಿಂದಿಡು ವುದಿಲ್ಲ ಎಂದರು. ಈ ಪಾದಯಾತ್ರೆಯು ಇದೇ 19ರಂದು ಯಲ್ಲಾಪುರದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.

‘ನನ್ನ ಕುಟುಂಬದಲ್ಲಿ ಯಾರದ್ದೂ ಅತಿಕ್ರಮಣ ಜಮೀನಿಲ್ಲ. ವೈಯಕ್ತಿಕ ಹಿತಾಸಕ್ತಿ ಕಿಂಚಿತ್ತೂ ಇಲ್ಲ. ಅತಿಕ್ರಮಣದಾರರಿಗೆ ನೀಡುವ ಹಕ್ಕು ಪತ್ರ ಭಿಕ್ಷೆ ರೀತಿಯಲ್ಲಿ ಕೊಡಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರ ಮೂಲಭೂತ ಹಕ್ಕು ಇದಾಗಿದ್ದು ಸರ್ಕಾರ ಈ ದಿಸೆಯಲ್ಲಿ ಕರ್ತವ್ಯ ನಿಭಾಯಿಸಬೇಕು ಎಂದು ಆಗ್ರಹಿಸಿದರು. ಬನವಾಸಿ ಮಧುಕೇಶ್ವರ ದೇವಾಲಯದ ಎದುರು ಜಾಗಟೆ ಬಾರಿಸುವ ಮೂಲಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಗೌಡ ಪಾದಯಾತ್ರೆಗೆ ಚಾಲನೆ ನೀಡಿದರು. ‘ದಶಕಗಳಿಂದ ಅರಣ್ಯ ಅತಿಕ್ರಮಣದಾರರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ. ಈ ಹೋರಾಟಕ್ಕೆ ಎಲ್ಲರೂ ಸಂಪೂರ್ಣ ಬೆಂಬಲ ನೀಡಬೇಕು. ಸಂಘಟಿತರಾಗಿ ಹೋರಾಟ ನಡೆಸಿ ನಮ್ಮ ಭೂಮಿಯನ್ನು ನಾವು ಪಡೆಯಬೇಕು’ ಎಂದರು.

ಸಾಮಾಜಿಕ ಕಾರ್ಯಕರ್ತೆ ಸರೋ ಜಿನಿ ಭಟ್ಟ, ಇಬ್ರಾಹಿಂ ಸಾಬ್, ಭೀಮ್ಸಿ ವಾಲ್ಮೀಕಿ, ರಾಜಶೇಖರ ಗೌಡ, ಹನು ಮಂತ ನಾಗಪ್ಪ ಇದ್ದರು. ಬನವಾಸಿ, ಕಿರ ವತ್ತಿ, ಅಂಡಗಿ, ಮಳಗಿ, ಪಾಳಾ ಭಾಗದ ಅತಿಕ್ರಮಣ ದಾರರು ಭಾಗವಹಿಸಿದ್ದರು.

**

ಅರಣ್ಯ ಭೂಮಿ ಅತಿಕ್ರಮಿಸಿಕೊಂಡು ಅನೇಕ ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿರುವ ಅತಿಕ್ರಮಣದಾರರ ಬಗ್ಗೆ ಸರ್ಕಾರ ಕಣ್ತೆರೆದು ನೋಡಬೇಕು.
–ಸುಕ್ರಿ ಬೊಮ್ಮ ಗೌಡ,
ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT