ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಬರಿದಾಗುತ್ತಿದೆ ಮಲಪ್ರಭೆ ಒಡಿಲು

Last Updated 18 ಮಾರ್ಚ್ 2017, 6:08 IST
ಅಕ್ಷರ ಗಾತ್ರ

ಸವದತ್ತಿ: ಈ ಭಾಗದ ಜನರ ಜೀವನದಿ ಮಲಪ್ರಭೆಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಪಟ್ಟಣ ಹಾಗೂ ಸುತ್ತಲಿನ ನಗರಕ್ಕೆ ಕುಡಿಯುವ ನೀರಿಗೆ ತೊಂದರೆ ಎದುರಾಗುವ ಲಕ್ಷಣಗಳು ಹೆಚ್ಚುತ್ತಿವೆ.

ನೀರಿನ ಮಟ್ಟ: ‘ರೇಣುಕಾ ಸಾಗರದಲ್ಲಿನ ನೀರಿನ(ಶುಕ್ರವಾರ ತನಕದ ಲೆಕ್ಕಾಚಾರ) ಮಟ್ಟ 2039.65 ಅಡಿ ಇದೆ. ಅಂದ್ರೆ ಒಟ್ಟು ಉಳಿದ ನೀರಲ್ಲಿ 2.15 ಟಿ.ಎಂ.ಸಿ ನೀರು ಉಪಯುಕ್ತ, 3.385 ಟಿ.ಎಂ.ಸಿ ಡೇಡ್ಡ್ ಸ್ಟೋರೇಜ್‌ ಇದೆ. ಒಳ ಹರಿವು ಇಲ್ಲಾ. ಆದರೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹಡಗಲಿಯ ಬ್ಯಾರೇಜ್‌ಗೆ ನಿತ್ಯ 534 ಕ್ಯೂಸೆಕ್ಸ್‌ ನೀರು ಹರಿಸಲಾಗುತ್ತಿದೆ’ ಎಂದು ನವಿಲುತೀರ್ಥದ ಅಣೆಕಟ್ಟಿನ ಸಹಾಯಕ ಎಂಜಿನಿಯರ್‌ ವಿ.ಕೆ ಮುದಿಗೌಡರ ಮಾಹಿತಿ ನೀಡಿದರು.

ಆತಂಕ ಬೇಡ: ಆದರೆ, ಕುಡಿಯುವ ನೀರು ಪೂರೈಕೆಗೆ ನೀರಿನ ಕೊರತೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

‘ಜಲಾಶಯದಲ್ಲಿ ನೀರಿನ ಪ್ರಮಾಣ ಕಳೆದ ವರ್ಷಕ್ಕಿಂತಲೂ ಸುಸ್ಥಿಯಲ್ಲಿದೆ’ ಎನ್ನುತ್ತಾರೆ ತಹಶೀಲ್ದಾರ್ ಬಸವರಾಜ ಮೆಳವಂಕಿ.

‘ಕಳೆದ ವರ್ಷ ಒಂದು ಒಡ್ಡು ಹಾಕಿದ್ದರಿಂದ ಮುಂದಿನ ಮೂರು ತಿಂಗಳು ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆ ಆಗಲಾರದು. ಈಗಾಗಲೇ ಅದಕ್ಕಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಐ ನಾಗನೂರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹೂಳೇ ಸಮಸ್ಯೆ: ‘ನದಿಯಲ್ಲಿನ ನೀರಿನ ಸಂಗ್ರಹ ಕಡಿಮೆಯಾಗಲು ಹೂಳೇ ಕಾರಣ. ಹೂಳು ತುಂಬಿಕೊಂಡ ಬಗ್ಗೆ ಸರಿಯಾದ ಮಾಹಿತಿ ನೀಡುವ ಗುರುತರ ಜವಾಬ್ದಾರಿ ತಾಲ್ಲೂಕಿನ ಅಧಿಕಾರಿಗಳ ಕೈಯಲ್ಲಿದೆ. ಇವರೆಲ್ಲರೂ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ’ ಎಂಬುದು ರೈತ ಸೇನೆ ರಾಜ್ಯ ಘಟಕದ ಸಂಚಾಲಕ ಜಯಶಂಕರ ಮನ್ನೂರ ಆಕ್ರೋಶ.

‘ಕೃಷಿಗೆ ನೀರು ಕೊಡದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹದಗೆಟ್ಟ ಕಾಲುವೆಗಳಿಗೆ ಬೇಕಾಬಿಟ್ಟಿ ನೀರು ಹರಿಸಿದರು. ಮಧ್ಯದಲ್ಲಿ ಕಾಲುವೆ ಒಡೆದು ನೀರು ರೈತರ ಭೂಮಿಗೆ ಹರಿಯಿತು.ಇಷ್ಟೆಲ್ಲ ಆಗಿದ್ದರಿಂದ ನೀರಿನ ಮಟ್ಟ ತಗ್ಗಿದೆ’ ಎಂಬುದು ಸ್ಥಳೀಯರ ಆರೋಪ.

'ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಕುಡಿಯುವ ನೀರು ಪೂರೈಸುವ ಮೋಟಾರ್‌ಗಳು ಹಾಗೇ ತಿರುಗಿ ಸುಡುತ್ತಿವೆ. 14 ಹಳ್ಳಿಗೆ ನೀರು ಪೂರೈಸುವ ಮೋಟಾರ್‌ ಸುಟ್ಟಿದ್ದರಿಂದ ಇಲ್ಲಿನ ಮುರಾರ್ಜಿ ವಸತಿ ಶಾಲೆಗೆ ಪುರಸಭೆ ಟ್ಯಾಂಕರ ಮೂಲಕ ನೀರು ಪೂರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ತೊಂದರೆಯಾಗಲಿದೆ ಎಂದರು ಸ್ಥಳೀಯರಾದ ಲಕ್ಷ್ಮಣರಾವ್ ಕುಲಕರ್ಣಿ.

‘ಕುಡಿಯಲು ನೀರು ಬಿಡಲು ನಮ್ಮದೇನು ತಕರಾರು ಇಲ್ಲ. ಆದ್ರೆ, ಯಾರೋ ಕೇಳಿದ್ರು, ಇವರು ನೀರು ಬಿಟ್ರು. ಕೇಳಿದ್ರೆ, ಡಿ.ಸಿ ಅವರ ಆದೇಶದಂತೆ ನೀರು ಬಿಟ್ಟೇವಿ ಎನ್ನುತ್ತಾರೆ. ಇದು ಸರಿಯಲ್ಲ. ಜಿಲ್ಲಾಧಿಕಾರಿಗಳು ಇಲ್ಲಿನ ಸ್ಥಿತಿಗತಿ ಅರಿತು ಕ್ರಮಕೈಗೊಳ್ಳಬೇಕು’ ಎಂಬುದು ಸ್ಥಳೀಯರಾದ ಬಿ.ಎನ್‌ ಪ್ರಭುನವರ ಒತ್ತಾಯ.

**

ಮಲಪ್ರಭೆಯ ನೀರು ಉಳಿಸಲು ಸಂಬಂಧ ಪಟ್ಟ ಇಲಾಖೆಗಳಾದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳ ಸಭೆ ನಡೆಸುವ ಅಗತ್ಯವಿದೆ
-ಕೆ.ಐ ನಾಗನೂರ,
ಮುಖ್ಯಾಧಿಕಾರಿಗಳು ಪುರಸಭೆ ಸವದತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT