ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಜ ಬ್ಯಾಂಕ್ ವಹಿವಾಟು ವಿರುದ್ಧ ನಿಗಾ

Last Updated 18 ಮಾರ್ಚ್ 2017, 9:15 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ನಿಗಾವಹಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಅಸಹಜ ಹಾಗೂ ಅನುಮಾನಾಸ್ಪದವಾಗಿ ವಹಿವಾಟು ನಡೆಸುವವರ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಮಾಹಿತಿ ನೀಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರೀಕೃತ, ಖಾಸಗಿ ಹಾಗೂ ಸಹಕಾರ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು.

ಉಪ ಚುನಾವಣೆಗೆ ಅಕ್ರಮವಾಗಿ ಹಣ ಬಳಕೆ ಮಾಡುವವರ ವಿರುದ್ಧ ನಿಗಾವಹಿಸಬೇಕಿದೆ. ಅಕ್ರಮ ಚಟುವಟಿಕೆಗೆ ಆಸ್ಪದ ನೀಡಬಾರದು. ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರತಿದಿನ ಅಸಹಜ ಹಾಗೂ ಅನುಮಾನಕ್ಕೆ ಎಡೆ ಮಾಡಿಕೊಡುವ ನಗದು ವಹಿವಾಟು ನಡೆಸುವವರ ಬಗ್ಗೆ ಗಮನಹರಿಸಬೇಕಿದೆ ಎಂದು ನಿರ್ದೇಶನ ನೀಡಿದರು.

ಚುನಾವಣಾ ಅವಧಿಯಲ್ಲಿ ಈ ಹಿಂದಿನ ಅವಧಿಗಿಂತ ಹೆಚ್ಚಿನ ಹಣದ ವಹಿವಾಟು ನಡೆದರೆ ಅದು ಯಾವ ಉದ್ದೇಶಕ್ಕೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿಯಬೇಕು ಎಂದರು.

ಅಸಹಜ ವಹಿವಾಟು ಚುನಾವಣಾ ಅಕ್ರಮಗಳಿಗೆ ಬಳಕೆಯಾಗಲಿದೆಯೇ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅಕ್ರಮಕ್ಕೆ ಅವಕಾಶವಾಗದಂತೆ ಮುಂಜಾಗ್ರತೆ ವಹಿಸಬೇಕು. ದಿನನಿತ್ಯದ ಹಣ ವರ್ಗಾವಣೆ, ಜಮೆ, ಹಿಂಪಡೆಯುವಿಕೆ ಮೇಲೆ ನಿಗಾವಹಿಸಬೇಕು ಎಂದು ತಿಳಿಸಿದರು.

ಬ್ಯಾಂಕ್‌ಗಳಿಂದ ಪ್ರತಿದಿನ ₹ 50 ಸಾವಿರಕ್ಕಿಂತ ಹೆಚ್ಚು ನಗದು ಹಿಂಪಡೆಯುವ ಮತ್ತು ವರ್ಗಾವಣೆ ಮಾಡುವವರ ವಹಿವಾಟಿನ ಮಾಹಿತಿ ನೀಡಬೇಕು. ಬ್ಯಾಂಕ್‌ಗಳಿಂದ ಮಂಜೂರಾಗಿರುವ ಸಾಲ, ಫಲಾನುಭವಿಗಳಿಗೆ ಮಂಜೂರಾಗಿರುವ ಹಣದ ಮಾಹಿತಿಯ ಅಗತ್ಯವಿಲ್ಲ ಎಂದು ಹೇಳಿದರು.

ಒಬ್ಬನೇ ಗ್ರಾಹಕ ನಿರ್ದಿಷ್ಟ ಕಾರಣ ಹಾಗೂ ಸೂಕ್ತ ದಾಖಲೆ ನೀಡದೆ ಪ್ರತಿದಿನ ಹೆಚ್ಚು ಹಣ ಪಡೆಯುವುದು, ವರ್ಗಾವಣೆ ಮಾಡುವುದು ಅಥವಾ ಜಮೆ ಮಾಡುವ ಪ್ರಕ್ರಿಯೆ ಕಂಡುಬಂದರೆ ಪರಿಶೀಲಿಸಬೇಕು. ಚುನಾವಣೆಗೆ ನೇಮಕವಾಗಿರುವ ಅಧಿಕಾರಿಗಳು ಸಹ ಹೆಚ್ಚು ಹಣದ ವಹಿವಾಟಿನ ಬಗ್ಗೆ ಪರಿಶೀಲಿಸಿ ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಬಗ್ಗೆ ತಿಳಿಯಲಿದ್ದಾರೆ ಎಂದು ತಿಳಿಸಿದರು.

ಹೆಚ್ಚು ಹಣ ವಹಿವಾಟು ನಡೆಸುವ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ವಹಿವಾಟು ನಡೆದ ಸಂಜೆಯೊಳಗೆ ಲಿಖಿತವಾಗಿ ತಿಳಿಸಬೇಕು ಎಂದು ನಿರ್ದೇಶನ ನೀಡಿದರು.

ಜಿ. ಪಂ. ಮುಖ್ಯ ನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಅಕ್ರಮಕ್ಕೆ ಆಸ್ಪದ ನೀಡದೆ ಇರುವ ಉದ್ದೇಶದಿಂದ ಹಣ ವಹಿವಾಟು, ವಾಹನಗಳ ತಪಾಸಣೆ ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಬ್ಯಾಂಕ್ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಬೇಕು ಎಂದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿದ್ದರಾಜು, ಡಿವೈಎಸ್‌ಪಿ ಎಸ್‌.ಇ. ಗಂಗಾಧರಸ್ವಾಮಿ ಹಾಜರಿದ್ದರು.

**

4ನೇ ದಿನವೂ ನಾಮಪತ್ರ   ಸಲ್ಲಿಕೆ ಇಲ್ಲ
ಚಾಮರಾಜನಗರ: 
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು 4ನೇ ದಿನವಾದ ಗುರುವಾರ ಕೂಡ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

**

ಚುನಾವಣಾ ಉದ್ದೇಶಕ್ಕಾಗಿ ಮಾಹಿತಿ ಪಡೆಯುತ್ತಿರುವ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ವಹಿವಾಟಿನ ಹೆಸರಿನಲ್ಲಿ  ತೊಂದರೆ ನೀಡುವ ಉದ್ದೇಶ ಇಲ್ಲ
–ಬಿ.ರಾಮು, ಜಿಲ್ಲಾಧಿಕಾರಿ

**

ಅಬಕಾರಿ ಅಧಿಕಾರಿಗಳ ನಿಯೋಜನೆ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ದಾಸ್ತಾನು, ತಯಾರಿಕೆ, ಸಾಗಾಣಿಕೆ ತಡೆಯುವ ಉದ್ದೇಶದಿಂದ ಗಸ್ತು ಕಾರ್ಯ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಅಬಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಎಂ.ಡಿ. ಮೋಹನ್‌ಕುಮಾರ್ (ಮೊ: 94495 97187), ಕೃಷ್ಣಮೂರ್ತಿ, ಜಿ. ನಾಗೇಶ್, ಜೆ. ಪ್ರಭು, ಎಂ.ಯು. ಉಮಾಶಂಕರ್ (ಮೊ: 98807 54839), ಸಿದ್ದರಾಜು, ಬಿ. ಶಿವಕುಮಾರ್, ಎಂ. ಮಂಜುನಾಥ, ಸುನಂದಾ (ಮೊ: 81233 52572), ಭಾಸ್ಕರ್, ಶಿವು ನಿಯೋಜನೆಗೊಂಡಿದ್ದಾರೆ.

ಚಾಮರಾಜನಗರ ತಾಲ್ಲೂಕು ಹರವೆ ಹೋಬಳಿಗೆ ಚೆಲುವರಾಜು, ಮಂಜುನಾಥ, ಎನ್. ನಾಗರಾಜು, ಸಿ. ನಾಗೇಂದ್ರ, ವಾಣಿ (ಮೊ: 97417 25921), ರಾಜು (ಮುನಿಸಿಪಲ್ ಪ್ರದೇಶ ವ್ಯಾಪ್ತಿ), ರೇವಣ್ಣ (ಮೊ: 99803 58515), ಜಯಪ್ರಕಾಶ್ (ಗುಂಡ್ಲುಪೇಟೆ ಕಸಬಾ ಹೋಬಳಿ), ತನ್ವೀರ್(ಮೊ:97392 39586), ಪ್ರದೀಪ್ (ತೆರಕಣಾಂಬಿ ಹೋಬಳಿ), ಶಿವಮಲ್ಲಪ್ಪ (ಮೊ: 98448 84129), ಸುಂದರಪ್ಪ, ಶಿವನಂಜಾಚಾರಿ (ಮೊ: 98457 98122), ರಾಜೇಶ್(ಹರವೆ ಹೋಬಳಿ). ಎನ್. ದೀಪು (ಮೊ: 83106 75068),  ರಾಜು(ಬೇಗೂರು ಹೋಬಳಿ) ನಿಯೋಜನೆಗೊಂಡಿದ್ದಾರೆ.

ಅಬಕಾರಿ ಇಲಾಖೆ ಪರವಾಗಿ ಚುನಾವಣಾ ಸಂಬಂಧ ನೋಡೆಲ್ ಅಧಿಕಾರಿಯಾಗಿ ಅಬಕಾರಿ ಉಪಾಧೀಕ್ಷಕ ಗಂಗಾಧರ ಮುದೇಣ್ಣನವರ್ ಅವರನ್ನು ನೇಮಿಸಲಾಗಿದೆ. ಅವರೊಂದಿಗೆ ಅಬಕಾರಿ ರಕ್ಷಕರಾದ ರವಿ, ಬಾಸಿನ್, ಗೃಹ ರಕ್ಷಕರಾದ ಶ್ರೀನಿವಾಸ್ ಕಾರ್ಯ ನಿರ್ವಹಿಸಲಿದ್ದಾರೆ.  ಇಲಾಖೆಯ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡಬೇಕು ಎಂದು ಅಬಕಾರಿ ಉಪ ಆಯುಕ್ತ ಕೆ.ಎನ್. ನಾಗೇಶ್ ಕೋರಿದ್ದಾರೆ.

**

ನೋಡೆಲ್ ಅಧಿಕಾರಿ ನೇಮಕ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿಸಂಹಿತೆ ಅನುಷ್ಠಾನ, ಕಾನೂನು ಸುವ್ಯವಸ್ಥೆ, ಅಂಚೆ ಮತಪತ್ರ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡಲು ಜಂಟಿ ಕೃಷಿ ನಿರ್ದೇಶಕ ಎಂ. ತಿರುಮಲೇಶ (ಮೊ: 82779 30760) ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಆದೇಶ ಹೊರಡಿಸಿದ್ದಾರೆ.

**

ಗಡಿಯಲ್ಲಿ ಚೆಕ್‌ಪೋಸ್ಟ್‌ ; ತಪಾಸಣೆ

ಗುಂಡ್ಲುಪೇಟೆ:  ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್, ಕಂದಾಯ ಮತ್ತು ಅಬಕಾರಿ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ತೆರಕಣಾಂಬಿಹುಂಡಿ, ಬೊಮ್ಮನಹಳ್ಳಿ, ಮದ್ದೂರು, ಬಂಡೀಪುರ, ಹಿರೀಕಾಟಿ, ಕುರುಬರಹುಂಡಿ, ನಂಜೇದೇವನಪುರ ಸೇರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಈ ಮಾರ್ಗದಲ್ಲಿ ಬರುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಹೊರಗಿನ ವ್ಯಕ್ತಿಗಳ ಬಗ್ಗೆ ನಿಗಾ ಇಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT