ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಕ್ಕೆ ನಲುಗಿದ ಹುಣಸೂರು

Last Updated 18 ಮಾರ್ಚ್ 2017, 9:25 IST
ಅಕ್ಷರ ಗಾತ್ರ

ಹುಣಸೂರು: ಎರಡು ವರ್ಷಗಳಿಂದ ಮಳೆ ಇಲ್ಲದೆ ತಾಲ್ಲೂಕು ಭೀಕರ ಬರಗಾಲದಿಂದ ನಲುಗಿದೆ. ಈ ಭಾಗದ ಕೃಷಿ ಚಟುವಟಿಕೆಗೆ ಮೂಲ ಆಧಾರ ವಾಗಿದ್ದ ಹಿಂಗಾರು ಮತ್ತು ಮುಂಗಾರು ಮಳೆ ಸತತವಾಗಿ ಕೈಕೊಡುತ್ತಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ವಾರ್ಷಿಕ ವಾಡಿಕೆ ಮಳೆ ಸರಾಸರಿ 784 ಮಿ.ಮೀ. ಆದರೆ, ಈ ಸಾಲಿನಲ್ಲಿ ಕೇವಲ 431 ಮಿ.ಮೀ ಮಳೆಯಾಗಿದೆ. ಶೇ 45ರಷ್ಟು ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆ ಸ್ತಬ್ಧಗೊಂಡಿದ್ದು, ವಾಣಿಜ್ಯ ವಹಿವಾಟಿಗೆ ಪೆಟ್ಟುಬಿದ್ದಿದೆ.

ಕೃಷಿ ಚಟುವಟಿಕೆ: ತಾಲ್ಲೂಕಿನಲ್ಲಿ 71,952 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದ್ದು, ಈ ಪೈಕಿ ಮುಸುಕಿನ ಜೋಳ 16 ಸಾವಿರ ಹೆಕ್ಟೇರ್‌, ಭತ್ತ 7,625 ಹೆಕ್ಟೇರ್‌, ರಾಗಿ 2,900 ಹೆಕ್ಟೇರ್‌, ದ್ವಿದಳ ಧಾನ್ಯಗಳು 13 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಮಳೆ ಕೈ ಕೊಟ್ಟಕಾರಣ ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯದೆ ರೈತರು ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಗೆಸೊಪ್ಪು: ಕ್ಷೇತ್ರದ ವಾಣಿಜ್ಯ ಬೆಳೆ ಯಲ್ಲಿ ಪ್ರಮುಖವಾದ ಹೊಗೆಸೊಪ್ಪು ಬೇಸಾಯ ಮಾಡಿದ್ದ ರೈತರು ಅಲ್ಪ ಪ್ರಮಾಣದಲ್ಲಿ ಲಾಭ ಪಡೆದುಕೊಂಡಿ ದ್ದಾರೆ. ಮಳೆ ಹೆಚ್ಚಾಗಿ ಬೇಡವಾದ ತಂಬಾಕನ್ನು 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಮಾಡಿದ್ದು, ರೈತರು ತೃಪ್ತರಾಗಿದ್ದಾರೆ.

ನಷ್ಟ: 2016–17ನೇ ಸಾಲಿನಲ್ಲಿ ಮಳೆ ವೈಫಲ್ಯದಿಂದ ಎದುರಾದ ಕೃಷಿ ನಷ್ಟ ವನ್ನು ಜಂಟಿ ಸಮಿತಿ ಸಮೀಕ್ಷೆ ನಡೆಸಿದೆ. ಕ್ಷೇತ್ರದಲ್ಲಿ 16,598 ಹೆಕ್ಟೇರ್‌ ಪ್ರದೇಶ ದಲ್ಲಿ ಬೆಳೆ ನಷ್ಟವಾಗಿದ್ದು, ಇದರ ಅಂದಾಜು ಮೌಲ್ಯ ₹ 16.63 ಕೋಟಿ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟೇಶ್‌ ವರದಿ ಸಲ್ಲಿಸಿದ್ದಾರೆ.

ಕುಡಿಯುವ ನೀರು: ಕ್ಷೇತ್ರದಲ್ಲಿ 212 ಗ್ರಾಮಗಳಿದ್ದು, ಈ ಪೈಕಿ ಬಹುಗ್ರಾಮಗಳ ಕುಡಿಯುವ ನೀರು ಯೋಜನೆಯಲ್ಲಿ 25 ಗ್ರಾಮಗಳಿಗೆ ಕಾವೇರಿ ನದಿ ಮೂಲದ ಕುಡಿಯುವ ನೀರಿನ ಸೌಲಭ್ಯವಿದೆ. ಉಳಿ ದಂತೆ ಕೊಳವೆ ಬಾವಿ 1,300, ಕಿರು ಕುಡಿಯುವ ನೀರು ಯೋಜನೆ 300, ಪೈಪ್‌ಲೈನ್‌ ಯೋಜನೆ 190 ಇವೆ. ನೀರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿ ದ್ದೇವೆ ಎನ್ನುತ್ತಾರೆ ತಾ.ಪಂ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಕುಮಾರ್‌.

ಜಲಕ್ಷಾಮ ಎದುರಿಸುತ್ತಿರುವ ಹನಗೋಡು ಮತ್ತು ಗಾವಡಗೆರೆ ಹೋಬಳಿಯ 7 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಇದಲ್ಲದೆ ಕಾವೇರಿ ನದಿಯ ಪಾತ್ರದಿಂದಲೂ ಹುಣಸೂರು ನಗರ ಮತ್ತು ಬಿಳಿಕೆರೆ ಹೋಬಳಿ ಭಾಗಕ್ಕೆ ಕುಡಿಯುವ ನೀರು ಸಂಪರ್ಕ ಕಲ್ಪಿಸಲಾಗಿದೆ. 

ಕುಸಿದ ಸೆಲೆ: ನೀರಿನ ಸೆಲೆ ಪ್ರಪಾತಕ್ಕೆ ಇಳಿದಿದೆ. 2015–16ರಲ್ಲಿ 200 ಅಡಿ ಕೊರೆದರೆ ಕೊಳವೆಬಾವಿಯಲ್ಲಿ ನೀರು ಬರುತ್ತಿತ್ತು. 2016–17ನೇ ಸಾಲಿನಲ್ಲಿ ಕನಿಷ್ಠ 350 ಅಡಿ ಕೊರೆಯಬೇಕಾದ ಪರಿಸ್ಥಿತಿ ತಲೆದೋರಿದೆ.  ಟಾಸ್ಕ್ ಫೋರ್ಸ್, ಕ್ಷಾಮ ಯೋಜನೆ ಅಡಿಯಲ್ಲಿ ಕ್ಷೇತ್ರದಲ್ಲಿ 121 ಕೊಳವೆ ಬಾವಿ ಕೊರೆ ದಿದ್ದು, ಈ ಪೈಕಿ 16 ಬತ್ತಿ ಹೋಗಿವೆ. 

ತಾಲ್ಲೂಕಿನಲ್ಲಿ 85ರಿಂದ 90 ಸಾವಿರ ಜಾನುವಾರುಗಳಿದ್ದು, ಮೇವಿನ ಕೊರತೆ ನೀಗಿಸಲು ಬಿಳಿಕರೆ ಮತ್ತು ಚೆಲ್ಲಹಳ್ಳಿ ಗ್ರಾಮದಲ್ಲಿ ಮೇವು ಖರೀದಿ ಕೇಂದ್ರ ತೆರೆ ಯಲು ಯೋಜನೆ ರೂಪಿಸಲಾಗುತ್ತಿದೆ.

ಕೊಳವೆ ಬಾವಿ ನೀರಿನ ವ್ಯವಸ್ಥೆ ಹೊಂದಿರುವ ರೈತರಿಗೆ ಉಚಿತವಾಗಿ ಮೇವು ಬಿತ್ತನೆಬೀಜ ನೀಡಿ, ಮೇವು ಖರೀದಿಸಿ ರೈತರಿಗೆ ನೀಡುವ ವ್ಯವಸ್ಥೆ ತಾಲ್ಲೂಕಿನ ಕೆಲವು ಭಾಗದಲ್ಲಿ ನಡೆಸ ಲಾಗಿದೆ. ಆದರೆ, ಬಿಳಿಕೆರೆ ಭಾಗದಲ್ಲಿ ಮೇವಿನ ಕೊರತೆ ಹಾಗೆಯೇ ಇದೆ.

‘ಮೇವಿಲ್ಲದೆ ಜಾನುವಾರು ಸಾಕಣೆ ಕಷ್ಟವೆಂದು ಸಿಂಗರಮಾರನಹಳ್ಳಿ, ಅಸ್ವಾಳು, ಗುರುಪುರ ಭಾಗದಲ್ಲಿ ಜಾನು ವಾರುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಸ್ವಾಳು ಶಂಕರೇಗೌಡ.

ನೀರಿನ ತೊಟ್ಟಿ: ತಾ.ಪಂ ವತಿಯಿಂದ ಕ್ಷೇತ್ರದ 41 ಗ್ರಾಮ ಪಂಚಾಯಿತಿಗಳಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ₹ * 0 ಸಾವಿರ ಹಾಗೂ ₹ 25 ಸಾವಿರ ವೆಚ್ಚದಲ್ಲಿ ಎರಡು ಮಾದರಿಯ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಈವರೆಗೆ ಕ್ಷೇತ್ರದಲ್ಲಿ 417 ನೀರಿನ ತೊಟ್ಟಿ ನಿರ್ಮಿಸಲಾಗಿದೆ.

**

ಹುಣಸೂರು ತಾಲ್ಲೂಕಿನ ಅಂಕಿ ಅಂಶ

* ಬಿದ್ದ ಒಟ್ಟು ಮಳೆ: 431.6 ಮೀ.ಮಿ

* ಬಹುಗ್ರಾಮ ಕುಡಿಯುವ ನೀರಿನ ಯೋಜನೆ: 1

* ಟ್ಯಾಂಕರ್‌ ಮೂಲಕ ನೀರು: 10ಗ್ರಾಮ, 10 ಟ್ಯಾಂಕರ್‌, 20 ಟ್ರಿಪ್‌ (ನಿತ್ಯ)

* ಲಭ್ಯ ಮೇವು: 26,160 ಟನ್‌ (8 ವಾರಕ್ಕೆ ಸಾಕಾಗುವಷ್ಟು)

* ಮೇವು ಬ್ಯಾಂಕ್‌: 2 (ಬಿಳಿಕೆರೆ, ಕಸಬಾ)

* ಬಿತ್ತನೆ ಪ್ರದೇಶ: 73,757 ಹೆಕ್ಟೇರ್‌ (ಮುಂಗಾರು ಹಂಗಾಮು)

* ಬೆಳೆ ಹಾನಿಯಾದ ಪ್ರದೇಶ: 15,778 ಹೆಕ್ಟೇರ್‌

* ಅವಶ್ಯವಿರುವ ಇನ್‌ಪುಟ್‌ ಸಬ್ಸಿಡಿ: ₹ 11.76 ಕೋಟಿ

**

ಟಾಸ್ಕ್ ಫೋರ್ಸ್ ಹಾಗೂ ಕ್ಷಾಮ ಯೋಜನೆಗಳಲ್ಲಿ ತಾಲ್ಲೂಕಿಗೆ ₹ 1.5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ₹ 1ಕೋಟಿ ಅನುದಾನ ಬೇಕಿದೆ
–ಕೃಷ್ಣಕುಮಾರ್‌, ಇ.ಒ ತಾಲ್ಲೂಕು ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT