ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು–ಕಣಿವೆ ಹಾಗೂ ಬುದ್ಧ–ಮೌನ

ಸಿಕ್ಕಿಂ ಪ್ರವಾಸ
Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಈಶಾನ್ಯ ಭಾರತದ ಕೆಲವು ಪ್ರದೇಶಗಳಿಂದ ಬರುವ ಕಾರ್ಮಿಕರು ನಮ್ಮ ಕಾಫಿತೋಟದಲ್ಲಿ ಕೆಲಸ ಮಾಡುತ್ತಾರೆ. ರಜೆಯಲ್ಲಿ ಊರಿಗೆ ಹೋದಾಗ, ಅವರು ಆಗಾಗ ಫೋನ್ ಮಾಡುವುದು ರೂಢಿ. ನಾವಿಲ್ಲಿ ಬೆಳಿಗ್ಗೆಯ ಸಿಹಿನಿದ್ರೆಯಲ್ಲಿರುವ ಬೆಳಗಿನ ನಾಲ್ಕೂವರೆ ಐದಕ್ಕೆಲ್ಲ ಫೋನ್‌ ರಿಂಗಣ. ಅವರ ಕರೆ ಕಿರಿಕಿರಿ ಉಂಟು ಮಾಡುತ್ತಿತ್ತು. 

ಆದರೆ ಇತ್ತೀಚೆಗೆ ಈಶಾನ್ಯ ಭಾರತ ಪ್ರವಾಸಕ್ಕೆಂದು ಸಿಕ್ಕಿಂಗೆ ಹೋದಾಗ, ಮುಂಜಾನೆಯೇ ಫೋನ್‌ ಮಾಡುವುದರಲ್ಲಿ ಅವರ ತಪ್ಪೇನೂ ಇಲ್ಲ ಅನ್ನಿಸಿತು. ಏಕೆಂದರೆ, ಅಲ್ಲಿ ನಸುಕಿನ ನಾಲ್ಕೂವರೆಗೆಲ್ಲ ಸೂರ್ಯ ಹುಟ್ಟಿ ಬೆಳ್ಳಂಬೆಳಗು ಆಗಿರುತ್ತದೆ.
 
ಸಿಕ್ಕಿಂ ವ್ಯವಿದ್ಯಮಯ ಸಂಸ್ಕೃತಿಗಳ ರಾಜ್ಯ. ನೇಪಾಲಿಗಳು, ಟಿಬೆಟ್ ಮೂಲದ ಭುಟಿಯಾಗಳು, ಮೂಲನಿವಾಸಿ ಲೆಪ್ಚಾಗಳು, ಭಾರತೀಯ ಮೂಲದ ಬಂಗಾಳಿಗಳು, ಹಿಂದಿ ಭಾಷಿಕರು – ಹೀಗೆ ಅನೇಕ ಸಂಸ್ಕೃತಿಯ ಹಿನ್ನೆಲೆಯ ಜನ ಸೇರಿ ಸಿಕ್ಕಿಂನಲ್ಲಿ ಸೌಹಾರ್ದತೆಯ ಅನನ್ಯ ವಾತವರಣವೊಂದು ರೂಪುಗೊಂಡಿದೆ.

ಇಲ್ಲಿನ ಜನ ಫ್ಯಾಶನ್‌ಪ್ರಿಯರು. ಚಂದ ಚಂದದ ಕೇಶ ವಿನ್ಯಾಸ, ಆಕರ್ಷಕ ಬಟ್ಟೆಗಳಿಂದ ಆಕರ್ಷಿಸುತ್ತಾರೆ. ಸಂಜೆ ಇಲ್ಲಿಯ ‘ಎಮ್.ಜಿ. ಮಾರ್ಗ’ಕ್ಕೆ ಹೋದರೆ ಮೈಸೂರಿನ ಸಯ್ಯಾಜಿ ರಾವ್ ರಸ್ತೆಯ ನೆನಪಾಗುತ್ತದೆ. ಆದರಿಲ್ಲಿ ವಾಹನಗಳು ನಿಷಿದ್ಧ.
 
ಇಡೀ ಸಿಕ್ಕಿಂ ರಾಜ್ಯ ಹಿಮಾಲಯದ ದುರ್ಗಮ ಶಿಖರಗಳು ಮತ್ತು ಅರಣ್ಯಾವೃತ ಕಣಿವೆಗಳಿಂದ ತುಂಬಿಹೋಗಿದೆ. ಬಯಲು ಜಾಗವೇ ವಿರಳ. ಕಿತ್ತಲೆ, ಚಹಾ, ಕಪ್ಪು ಏಲಕ್ಕಿ, ಸ್ಪಲ್ಪ ಪ್ರಮಾಣದಲ್ಲಿ ಭತ್ತ, ಮೆಕ್ಕೆ ಜೋಳ, ಶುಂಠಿ, ಹೂಗಳು, ಅರಿಸಿನ ಮತ್ತು ವಿವಿಧ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ.
 
ಇಲ್ಲಿನ ರೈತರಿಗೆ ತೆರಿಗೆಯಿಲ್ಲ ಮತ್ತು ಎಲ್ಲರಿಗೂ ಉಚಿತ ವಿದ್ಯುತ್ ಸೌಲಭ್ಯವಿದೆಯೆಂದು ನಮ್ಮ ಸಕಲೇಶಪುರದ ಸಾಂಬಾರ ಮಂಡಳಿಯಿಂದ ವರ್ಗವಾಗಿ ಅಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಭಟ್ ನಮಗೆ ವಿವರಿಸಿದರು. ಪ್ರವಾಸೋದ್ಯಮವೇ ರಾಜ್ಯದ ಪ್ರಮುಖ ಆದಾಯದ ಮೂಲ. 
 
ಮಿಲಿಟರಿ ದೃಷ್ಟಿಯಿಂದ ಸಿಕ್ಕಿಂ ಬಹಳ ನಾಜೂಕಾದ ಆಯಕಟ್ಟಿನ ಪ್ರದೇಶದಲ್ಲಿದೆ. ಭಾರತದ ಅತೀ ಎತ್ತರದ ದುರ್ಗಮ ಶಿಖರ ಕಾಂಚನ ಜುಂಗಾ ಇಲ್ಲೇ ಇರುವುದು. ಬಗೆಬಗೆಯ ಅಪರೂಪದ ಆರ್ಕಿಡ್‌ಗಳಿಗೆ ಸಿಕ್ಕಿಂ ವಿಶ್ವಪ್ರಸಿದ್ಧ. ಸಸ್ಯ ಹಾಗೂ ಪ್ರಾಣಿವೈವಿಧ್ಯ ಇಲ್ಲಿ ಸಮೃದ್ಧಿಯಾಗಿದೆ. 
 
ಸಿಕ್ಕಿಂಗೆ ಕಾಲಿಟ್ಟಾ ಕ್ಷಣ ನಮ್ಮ ಮಲೆನಾಡಿನ ಮೂಲೆಯ ಹಳ್ಳಿಯೊಂದಕ್ಕೆ ಬಂದಂತೆನಿಸುತ್ತದೆ. ಅಲ್ಲಿನ ಜನ ಕಷ್ಟ ಸಹಿಷ್ಣುಗಳು. ಅವರದು ಧಾವಂತವಿಲ್ಲದ ಬದುಕು. ಇಲ್ಲಿನ ಟ್ಯಾಕ್ಸಿ ಚಾಲಕರು ನಿಗದಿತ ದರಕ್ಕಿಂತ ಒಂದು ಪೈಸೆಯನ್ನು ಹೆಚ್ಚು ಒತ್ತಾಯಿಸುವುದಿಲ್ಲ. ಅವರು ವಿನಮ್ರರೂ ಹೌದು. 
 
ನಮ್ಮ ಮಾರ್ಗದರ್ಶಿ ಹೇಳಿದಂತೆ ಇಲ್ಲಿ ಅಪರಾಧಗಳ ಸಂಖ್ಯೆ ಅಪರೂಪವಂತೆ. ಹಾಗಾಗಿ ಜೈಲುಗಳು ಕೈದಿಗಳಿಲ್ಲದೆ ಬಿಕೋ ಎನ್ನುತ್ತಿರುತ್ತವೆ. ಪದೆ ಪದೇ ಭೂಕುಸಿತ ಇಲ್ಲಿ ಸರ್ವೇ ಸಾಮಾನ್ಯ. ಭೂಕಂಪಗಳೂ ಅಷ್ಟೆ. 
 

 
ಸಿಕ್ಕಿಂನಲ್ಲಿ ಹಿಮಾಲಯದಷ್ಟೇ ಮನಸೆಳೆಯುವುದು ಬೌದ್ಧ ವಿಹಾರಗಳು. 200ಕ್ಕೂ ಹೆಚ್ಚು ವಿಹಾರಗಳು ಇಲ್ಲಿವೆ. ಇವು ವಿಶಿಷ್ಟ ವಾಸ್ತುಶಿಲ್ಪ ಮತ್ತು ರಂಗುರಂಗಿನ ಚಿತ್ರಕಲೆಗಳಿಂದ ಕಂಗೊಳಿಸುತ್ತವೆ. ಟಿಬೆಟಿಯನ್ ಶ್ಯೆಲಿಯ ಅನೂಹ್ಯ ವಿನ್ಯಾಸಗಳ ಬೆರಗಿನ ಲೋಕವಿದು. 
 
ಸಿಕ್ಕಿಂಗೆ ಹೋದವರೆಲ್ಲರೂ ಅಲ್ಲಿನ ಅತಿ ಹಳೆಯ ‘ರುಮ್‌ಟೆಕ್ ಬೌದ್ಧ ಚಕ್ರ ವಿಹಾರ’ಕ್ಕೆ ತಪ್ಪದೆ ಭೇಟಿ ಕೊಡುತ್ತಾರೆ. ಇದು ಭಾರತದ ಬೌದ್ಧ ವಿಹಾರಗಳಲ್ಲೇ ಅತಿ ಶ್ರೀಮಂತವಾದದ್ದು. ನಮ್ಮ ಮಾರ್ಗದರ್ಶಿ ಹೇಳಿದಂತೆ, ಇದು ತಿರುಪತಿ ದೇವಾಲಯವಿದ್ದಂತೆ – ಸದಾ ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತದೆ.

ಇಲ್ಲಿನ ಪ್ರಾಂಗಣ ಮತ್ತು ಕಿರುಜಗಲಿಯನ್ನು ಹೊರತುಪಡಿಸಿ ಉಳಿದ ಕಡೆ ಛಾಯಾಗ್ರಹಣ ನಿಷಿದ್ಧ. ಇಲ್ಲಿಂದ ಅರ್ಧ ಗಂಟೆಯ ಪ್ರಯಾಣದಲ್ಲಿ ಏಲಕ್ಕಿ ತೋಟಗಳನ್ನು ಹಾದು ನಂತರ ‘ರಂಕಾ ವಿಹಾರ’ವನ್ನು ತಲುಪಬಹುದು. ಇಲಿನ ಏಲಕ್ಕಿ ಗಾತ್ರದಲ್ಲಿ ದೊಡ್ಡದು, ಭಾರತಲ್ಲೇ ದೊಡ್ಡ ಗಾತ್ರದ ಏಲಕ್ಕಿಯ ಪ್ರಭೇದವಿದು.
 
‘ರಂಕಾ ವಿಹಾರ’ ಪರಿಸರದಲ್ಲಿ ಪ್ರವಾಸಿಗರು ವಿರಳ. ಓಕ್, ಪೈನ್ ಮರಗಳ ನಡುವೆ ಪ್ರಶಾಂತವಾಗಿರುವ ವಾತವರಣದಲ್ಲಿ ಮೌನದ್ದೇ ಸಾಮ್ರಾಜ್ಯ. ಪಗೋಡ ಶ್ಯೆಲಿಯ ವಾಸ್ತುಶಿಲ್ಪ ಟಿಬೇಟ್‌ನಲ್ಲಿರುವ ಆವನೆ ಮೂಡಿಸುತ್ತದೆ. ಹಿಮಾಲಯದ ನಿಸರ್ಗಸೌಂದರ್ಯ, ಬುದ್ಧ, ಪ್ರಾಣಿ ಪಕ್ಷಿಗಳು, ಕಾವ್ಯಚಿತ್ರಗಳುಮ ಕಂಬ, ತೊಲೆ, ಛಾವಣಿ ಎಲ್ಲೆಲ್ಲೂ ಒಂದಂಗುಲವೂ ಬಿಡದಂತೆ ಚಿತ್ರಮಯ. ಒಟ್ಟಾರೆ ಇಲ್ಲಿನ ಬೌದ್ಧವಿಹಾರಗಳು ಭಿಕ್ಕುಗಳ ಸೂಕ್ಷ್ಮಕಲೆಗಾರಿಕೆಗೆ ಸಾಕ್ಷಿಯಾಗಿವೆ.
 
ಇಲ್ಲಿನ ಭಿಕ್ಕುಗಳು ‘ಕಾಗ್ಯೂ’ ಎಂಬ ಟಿಬೆಟ್ ಪಂಥದ ಅನುಯಾಯಿಗಳು. ಒಂದು ಸಾವಿರ ವರ್ಷದ ಹಿಂದೆ ಮಾರ್ಪ, ಮಿಲರೇಪ ಎಂಬ ಧರ್ಮಗುರುಗಳಿಂದ ಜನಪ್ರಿಯವಾದ ಪಂಥವಿದು. ರಂಕಾ ವಿಹಾರದಲ್ಲಿ ಮುನ್ನೂರು ಭಿಕ್ಕುಗಳಿಗೆ ಅಧ್ಯಯನ ನಡೆಯುತ್ತಿತ್ತು. ಭೂತಾನ್, ನೇಪಾಳ, ಭಾರತ, ಟಿಬೆಟ್‌ಗಳಿಂದ ಬಂದ ಭಿಕ್ಕುಗಳು ಇಲ್ಲಿದ್ದಾರೆ. ರಂಕಾ ವಿಹಾರ ಸಿಕ್ಕಿಂನ ಪ್ರಮುಖ ನಗರ ಗ್ಯಾಂಗ್‌ಟಾಕ್‌ನಿಂದ 25 ಕಿಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT